https://youtu.be/NHc6OMSu0K4?si=SI_K4goOPEgwo6h2

ಅಮ್ಮ ನಿಮ್ಮ ಕಾಲದ ಜನರು ಅದೆಷ್ಟು ಅನ್ ರೋಮ್ಯಾಂಟಿಕ್ ಅಲ್ಲವೇ ? ತಬ್ಬಿಕೊಳ್ಳುವುದು ದೂರ ಬಿಡು..ಐ ಲವ್ ಯು ಅಂತ ಹೇಳಿ ಪ್ರೀತಿಯನ್ನು ಅಭಿವ್ಯಕ್ತ ಪಡಿಸುವುದು ಅವರಿಗೆ ಗೊತ್ತೇ ಇಲ್ಲ ಎಂದು ಮಗಳು ಕೇಳಿದಾಗ ತಾಯಿ ಮೆಲ್ಲನೆ ನಸುನಕ್ಕು ಸುಮ್ಮನಾದಳು.
ಇದನ್ನೂ ಓದಿ:
ಕಣ್ಣರಿಯದ ಮಾತನ್ನು ಕರುಳರಿಯುತ್ತದೆ ಎಂದು ಹೇಳುತ್ತಾರೆ ಅಲ್ಲವೇ… ಹಾಗೆಯೇ ಮಾತುಗಳಲ್ಲಿ ಹೇಳಲಾಗದ ನೂರೆಂಟು ಭಾವಗಳನ್ನು ತಮ್ಮ ವರ್ತನೆಯಲ್ಲಿ ತೋರುವ ಮೂಲಕ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಸುವುದು ನಮ್ಮ ಹಿರಿಯರಿಗೆ ಸಿದ್ಧಿಸಿದ ಕಲೆ. ಅಲ್ಲಿ ಯಾವುದೇ ನಾಟಕೀಯ ಪ್ರದರ್ಶನವಿಲ್ಲ ನೈಜತೆಯೇ ಎಲ್ಲ.
ಮನೆಯ ಹಿರಿಯರಲ್ಲಿ ನಸು ಮುನಿಸಿನ ಜಗಳಗಳನ್ನು ನೋಡಿದಾಗ ಈ ಕುರಿತು ನಮಗೆ ಅರಿವಾಗುತ್ತದೆ. ಊಟದ ಸಮಯಕ್ಕೆ ಸರಿಯಾಗಿ ಅಜ್ಜ ಊಟ ಮಾಡದೆ ಹೋದಾಗ ಮುನಿಯುವ ಅಜ್ಜಿಯ ಮನಸ್ಸಿನಲ್ಲಿ ತನ್ನ ಪತಿ ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಯ್ದುಕೊಳ್ಳಲಿ ಎಂಬ ಆಶಯವಿರುತ್ತದೆ. ಆದರೆ ಅದೇ ಅಜ್ಜ ದಿನವಿಡೀ ಕೆಲಸ ಮಾಡಿದ್ದೀಯ! ಕೊಂಚ ಹೊತ್ತು ಕುಳಿತು ವಿಶ್ರಾಂತಿ ಮಾಡಲಿ.
ತನ್ನ ವಯಸ್ಸಿನವರ ಜೊತೆ ಮನೆಯ ಕಟ್ಟೆಯ ಮೇಲೆ ಕುಳಿತು ಇಲ್ಲವೇ ದೇವಸ್ಥಾನದ ಆವರಣದಲ್ಲಿ ಕುಳಿತು ಹರಟೆ ಹೊಡೆದು ದಣಿವಾರಿಸಿಕೊಳ್ಳಲಿ ಎಂಬ ಕಾರಣಕ್ಕೆ ಆಕೆಯನ್ನು ದೂರದರ್ಶನದಲ್ಲಿ ಬರುವ ಯಾವುದೋ ಕಾರ್ಯಕ್ರಮವನ್ನು ನೋಡಲು ಕರೆಯುತ್ತಾರೆ ಇಲ್ಲವೇ ಸಾಯಂಕಾಲದ ಸಮಯದಲ್ಲಿ ಒಂದಷ್ಟು ವಾಕಿಂಗ್ ಮಾಡಿ ಬರೋಣ ಬಾ ಎಂದು ಕರೆದುಕೊಂಡು ಹೋಗಿ ಊರ ಹೊರಗಿನ ದೇವಸ್ಥಾನದ ಬಳಿಯೋ ರಸ್ತೆ ಬದಿಯ ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ಮಾತನಾಡಿ ವಾಪಸ್ ಕರೆ ತರುತ್ತಾರೆ… ಇದೆಲ್ಲದರ ಹಿಂದೆ ಇರುವುದು ಅವರ ಅನನ್ಯವಾದ ಕಾಳಜಿ. ಇಲ್ಲಿ ಅವರಿಬ್ಬರೂ ಪರಸ್ಪರರ ಕಾಳಜಿ ಮಾಡುವುದರ ಹಿಂದೆ ಇರುವುದು ಅವರ ಅವ್ಯಕ್ತ ಪ್ರೀತಿಯ ವ್ಯಕ್ತ ರೂಪ.
ಇನ್ನು ತನ್ನ ಪತ್ನಿಯ ಇಷ್ಟದ ಬಣ್ಣದ ಉಡುಪನ್ನು, ಸೀರೆಯನ್ನು ಆಗಾಗ ಪತಿ ತರುತ್ತಾನೆ. ಹೂವನ್ನು, ಸಿಹಿತಿಂಡಿಯನ್ನು ತಂದುಕೊಡುವ ಪತಿ ಮನೆಗೆ ಬಂದ ಕೂಡಲೇ ಅದನ್ನು ಆಕೆಯ ಕೈಗಿಟ್ಟು ಬೇಗ ತಟ್ಟೆಯಲ್ಲಿ ಹಾಕಿ ತಗೊಂಡು ಬಾ ನಾವೆಲ್ಲರೂ ಸೇರಿ ತಿನ್ನೋಣ ಎನ್ನುವ ಮೂಲಕ ಆಕೆಯ ಕುರಿತು ಕಾಳಜಿ ವಹಿಸುತ್ತಾನೆ. ಹೊರಗಿನಿಂದ ದುಡಿದು ದಣಿದು ಬರುವ ಪತಿ ತನ್ನಿಷ್ಟದ ತಿಂಡಿ ತಿನಿಸುಗಳನ್ನು ತಂದು ಕೊಟ್ಟಾಗ ಪತ್ನಿ ಆತನ ಅವಸರದ ಕರೆಗೆ ಓಗೊಟ್ಟು ಗಂಡ ಮಕ್ಕಳೊಡನೆ ತಾನೂ ಕುಳಿತು ತಿಂದು ನಂತರ ಕಾಫಿ ಮಾಡಿಕೊಡುತ್ತಾಳೆ.
ಇದು ಕೂಡ ಪ್ರೀತಿಯೇ ಅಲ್ಲವೇ?. ನಾಲ್ಕು ಜನರ ನಡುವೆ ಹೊರಗೆ ಓಡಾಡುವ ತನ್ನ ಪತಿ ಯಾವಾಗಲೂ ಇಸ್ತ್ರಿಯಾದ ಗರಿ ಗರಿ ಬಟ್ಟೆಗಳನ್ನು ಧರಿಸಿ ಲವಲವಿಕೆಯಿಂದ ಓಡಾಡಲಿ ಎಂದು ಪತ್ನಿ ಆಶಿಸಿದರೆ, ತನ್ನ ಇಡೀ ಕುಟುಂಬದ ನಿರ್ವಹಣೆ ಮಾಡುವ ಪತ್ನಿ ಚೆನ್ನಾಗಿ ತಿಂದುಂಡು ಆರೋಗ್ಯವಾಗಿರಲಿ ಎಂದು ಪತಿ ಆಶಿಸುತ್ತಾನೆ.

ಹರೆಯದಲ್ಲಿ ಪತಿಯ ಹಿಂದೆ ಮುಂದೆ ಓಡಾಡಿ ಆತನ ಕೆಲಸಗಳನ್ನು ಮಾಡಿಕೊಡುವ ಪತ್ನಿಗೆ ಮಧ್ಯ ವಯಸ್ಸಿನಲ್ಲಿ ವಯೋ ಸಹಜವಾಗಿ ಉಂಟಾಗುವ ತಲೆನೋವು, ಸೊಂಟ ನೋವುಗಳಿಗೆ ಝಂಡು ಬಾಮ್ ಹಚ್ಚಿ ಮಾಲೀಶು ಮಾಡುವ ಪತಿಗಳನ್ನು ನಾವು ಕಾಣಬಹುದು… ಮತ್ತೆ ಕೆಲವರು ಅಷ್ಟೆಲ್ಲವನ್ನು ಮಾಡದೆ ಹೋದರೂ ತಮ್ಮದೇ ಧೋರಣೆಯ ದಾಟಿಯಲ್ಲಿ `ವಿಶ್ರಾಂತಿ ತೆಗೆದುಕೊಳ್ಳದೆ ಮಾಡಿದರೆ ಇನ್ನೇನಾದೀತು ಊಟ ಮಾಡಿ ಮಾತ್ರೆ ನುಂಗಿ ಮಲಗಿಕೋ ‘ಎಂದು ಹೇಳುವ ಮೂಲಕ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ.
ಋಣಾನು ಬಂಧ ರೂಪೇಣ, ಪಶು ಪತ್ನಿ ಸುತಾಲಯ’ ಎಂದು ನಮ್ಮ ಹಿರಿಯರು ಹೇಳಿರುವುದು ಬಹುಶಃ ಇದೇ ಕಾರಣಕ್ಕೆ ಇರಬಹುದು. ಯಾವುದೇ ರೀತಿಯ ರಕ್ತ ಸಂಬಂಧವಲ್ಲದ ಆದರೂ ಕೂಡ ಋಣ ಮತ್ತು ಅನುಬಂಧದ ಕಾರಣದಿಂದಾಗಿ ಸತಿಪತಿಗಳಾಗಿ ಬದುಕುವ ಅವರಿಬ್ಬರೂ ತಾರುಣ್ಯದಲ್ಲಿ ವಯೋಸಹಜ ಪ್ರೇಮ ಕಾಮಗಳಲ್ಲಿ ಒಂದಾದರೂ ಮಧ್ಯ ವಯಸ್ಸಿಗೆ ಬಂದಾಗಲೂ ಕೂಡ ಮಕ್ಕಳ ಪಾಲನೆ ಪೋಷಣೆಯನ್ನು ಜೊತೆಯಾಗಿ ಮಾಡುವ ಮೂಲಕ ಕೌಟುಂಬಿಕ ಜವಾಬ್ದಾರಿಯನ್ನು ಹಂಚಿಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಆಸರೆಯಾಗುತ್ತಾರೆ.
ಇನ್ನು ವೃದ್ಧಾಪ್ಯದಲ್ಲಂತೂ ಕೇಳಲೇಬೇಡಿ ಅದುವರೆಗೂ ಅತ್ಯಂತ ಕಠಿಣ ವ್ಯಕ್ತಿ ಎಂದು ಎನಿಸಿಕೊಂಡಿರುವಾತ ಕೂಡ ತನ್ನ ಕುಟುಂಬದ ಮೂಲ ಸೆಲೆಯಾದ ತನ್ನ ಪತ್ನಿಯನ್ನು ಕಾಳಜಿ ಮಾಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಈ ಹಿಂದೆ ಕೇಳಿದರೂ ತಂದುಕೊಡದ ತಾರುಣ್ಯದ ಮೈಮರೆವನ್ನು ಹೊತ್ತು ಮೆರೆಯುತ್ತಿದ್ದ ಆತ ಇದೀಗ ಆಕೆ ಕೇಳದೆಯೂ ಆಕೆಯ ಮನದ ಎಲ್ಲಾ ಆಸೆಗಳನ್ನು ಈಡೇರಿಸುತ್ತಾನೆ. ಇನ್ನು ಆಕೆ ಏನು ಕಡಿಮೆಯೇ! ಆಕೆ ಕೂಡ ಆತನ ಆರೋಗ್ಯದ ಕಾಳಜಿಯನ್ನು ಮಾಡುತ್ತಾ ಆತನ ಒಳಿತು ಕೆಡುಕುಗಳಿಗೆ ತನ್ನನ್ನು ತಾನು ಜವಾಬ್ದಾರಿಯನ್ನಾಗಿಸಿಕೊಂಡು ಎಲ್ಲ ರೀತಿಯಲ್ಲಿಯೂ ಆತನ ಕಾಳಜಿ ಮಾಡುತ್ತಾಳೆ.
ಇದೀಗ ಕೇವಲ ಆಕೆ ಆತನ ಪ್ರೇಮದ ಕಾಮದ ಸಿಟ್ಟು ಸೆಡವನ್ನು ಹೊರುವ ಪತ್ನಿ ಮಾತ್ರವಲ್ಲ ಬದಲಾಗಿ ಆತನ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮಹಾಮಾತೆ. ಆತನ ಪಾಲಕರನ್ನು ಆದರಿಸಿ ಸತ್ಕರಿಸುವ ಅವರ ಬೇಕು ಬೇಡಗಳನ್ನು ನೋಡಿಕೊಳ್ಳುವ ಮನೆ ಯಜಮಾನಿ. ಆತನ ಮಕ್ಕಳನ್ನು ಅತ್ಯುತ್ತಮ ಶಿಕ್ಷೆ ಮತ್ತು ರಕ್ಷೆಗಳ ಜೊತೆಯಲ್ಲಿ ಉತ್ತಮ ನಾಗರಿಕರನ್ನಾಗಿಸಿ ಬೆಳೆಸುವ ಮಮತಾಮಯಿ. ಹೀಗೆ ಅವರು ಪರಸ್ಪರರನ್ನು ದೂರುವ ಮೂಲಕ ಕಾಳಜಿ ಮಾಡಿಕೊಳ್ಳಲು ಹೇಳುವ ಮೂಲಕ ಖುದ್ದು ತಾವೇ ಕಾಳಜಿ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಮಧ್ಯ ವಯಸ್ಸಿನಲ್ಲಿ ಮಕ್ಕಳ ಮುಂದೆ ಅವರ ಸಂಗಾತಿಯನ್ನು ತುಸು ದೂರುವುದು ಹೆಚ್ಚೇ ಆದರೂ ಅದು ಅವರ ಅವ್ಯಕ್ತ ಪ್ರೀತಿಯ ವ್ಯಕ್ತ ಸ್ವರೂಪ. ಮಕ್ಕಳ ಮುಂದೆ ಪರಸ್ಪರರನ್ನು ದೂರಿದರು ಕೂಡ ಒಂದೊಮ್ಮೆ ಮಕ್ಕಳು ಅವರನ್ನು ತಮಾಷೆಯಾಗಿ ಅಂದು ಆಡಿದರೂ ಕೂಡ ಅದನ್ನು ಸಹಿಸದೆ ತಮ್ಮ ಸಂಗಾತಿಯನ್ನು ವಹಿಸಿಕೊಂಡು ಬರುವುದು ಹಾಗೂ ಅದಕ್ಕೂ ಮಿಗಿಲಾಗಿ ಮಕ್ಕಳು ತಮಾಷೆ ಮಾಡಿದರೆ ಅವರಿಬ್ಬರೂ ಒಂದು ಗುಂಪಾಗಿ ನಸು ಕೋಪವು ಉಗ್ರ ಕೋಪವಾಗಿ ಮಕ್ಕಳ ಮೇಲೆ ಹರಿಹಾಯುವುದು ಕೂಡ ಅವರ ಪ್ರೀತಿಯ ಮತ್ತೊಂದು ಸ್ವರೂಪ. ಆಗ ಮಕ್ಕಳು ಅಯ್ಯೋ! ಇವರಿಬ್ಬರ ಮಧ್ಯದಲ್ಲಿ ನಾವು ಸಿಲುಕಿ ಕೊಳ್ಳುವುದು ಬೇಡ ಎಂದು ತಮಾಷೆ ಮಾಡಿ ಹಿಂದೆ ಸರಿಯುವುದೂ ಉಂಟು.
ಎಷ್ಟೋ ಬಾರಿ ದಂಪತಿಗಳು ಮದುವೆಯಾದ ಕೆಲ ವರ್ಷಗಳ ನಂತರ ಪರಸ್ಪರ ವಿಭಿನ್ನ ವ್ಯಕ್ತಿತ್ವಗಳು ಎಂಬಂತೆ ಕಂಡರೂ ಮುಂದಿನ ಕೆಲ ದಶಕಗಳ ಬದುಕಿನಲ್ಲಿ ಇವರಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇನೋ ಎಂಬಂತೆ ಒಂದೇ ರೀತಿಯ ಮಾತುಕತೆ, ರೀತಿ ನೀತಿಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ….. ಅವರಿಬ್ಬರೂ ಒಬ್ಬರಾಗುವ ಈ ಪ್ರಕ್ರಿಯೆಗೆ ಕಾರಣ ಹಲವಾರು ವರ್ಷಗಳ ಜೊತೆಯಾಗಿರುವಿಕೆ. ದೇಹವೆರಡು ಪ್ರಾಣ ಒಂದು, ಕಣ್ಣೆರಡು ನೋಟ ಒಂದು ಎಂಬಂತಿರುವ ಅವರ ಬದುಕು.
ಇದಕ್ಕೆ ವ್ಯತಿರಿಕ್ತವಾಗಿಯೂ ಸಾಕಷ್ಟು ಜನ ಬದುಕಬಹುದು. ತಮ್ಮ ತಮ್ಮ ವೈಯುಕ್ತಿಕ ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಬಹುದು. ಪರಸ್ಪರ ಗೌರವದಿಂದ ದೂರ ಸರಿದಿರಬಹುದು. ಅಂತಹ ದೂರ ಸರಿದಿರುವ ದಂಪತಿಗಳು ಕೂಡ ತಮ್ಮ ಸಂಗಾತಿಯ ಮೇಲಿನ ನಿಜವಾದ ಪ್ರೀತಿ, ನಂಬಿಕೆ, ವಿಶ್ವಾಸದಿಂದ ಹಾಗೂ ತಾವು ಆ ರೀತಿ ದೂರವಾದರೂ ಕೂಡ ಒಂದೊಳ್ಳೆಯ ಭಾವನಾತ್ಮಕ ಸಂಬಂಧವನ್ನು ಉಳಿಸಿಕೊಳ್ಳುವ ಮೂಲಕ ಪರಸ್ಪರರನ್ನು ಗೌರವಿಸುತ್ತಾರೆ. ಇದು ಕೂಡ ಹೇಳದೆ ಉಳಿದಿಹ ಮಾತುಗಳಲ್ಲಿ ಒಂದಾಗಬಹುದು.
ಇದಕ್ಕೆ ಉದಾಹರಣೆಯಾಗಿ ಕಿರಣ್ ಬೇಡಿ ಮತ್ತು ಆಕೆಯ ಪ್ರತಿ ಹಸ್ತ ಕಲೆಗಳ ಜನಕರು ಎಂದೆ ಹೆಸರಾದ ಕಮಲಾದೇವಿ ಚಟ್ಟೋಪಾಧ್ಯಾಯ ಹಾಗೂ ಆಕೆಯ ಪತಿ ಹರೀಂದ್ರನಾಥ ಚಟ್ಟೋಪಾಧ್ಯಾಯ, ಬಾಲಿವುಡ್ ಚಲನಚಿತ್ರರಂಗದ ಅಶೀಶ್ ವಿದ್ಯಾರ್ಥಿ ಮತ್ತು ಅವರ ಪತ್ನಿ, ಖ್ಯಾತ ಹಿಂದಿ ಚಲನಚಿತ್ರ ತಾರೆ ಅಮೀರ್ ಖಾನ್ ಮತ್ತು ಅವರ ಪತ್ನಿ ರೀನಾ, ಹೃತಿಕ್ ರೋಷನ್ ಹಾಗೂ ಅವರ ಪತ್ನಿ ಸುಸಾನೆ ಹೀಗೆ ಹತ್ತು ಹಲವು ಜನರನ್ನು ನಾವು ಉದಾಹರಿಸಬಹುದು….. ಆದರೆ ಇಂಥವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು. ಪ್ರತಿ ಮಾತಿಗೂ ಐ ಲವ್ ಯು ಎಂದು ಹೇಳುವ, ತಬ್ಬಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸುವ ಭಾವ ಮಾತ್ರ ಪ್ರೀತಿಯಲ್ಲ ಬದಲಾಗಿ ಮಾತುಗಳಲ್ಲಿ ಹೇಳದೆ ಹೋದರು ತಮ್ಮ ಕೃತಿಯಲ್ಲಿ ವ್ಯಕ್ತಪಡಿಸುವ, ವರ್ತನೆಯ ಮೂಲಕ ಅರಿವು ಮೂಡಿಸುವ ಪ್ರೀತಿ ಎಷ್ಟೋ ಮೇಲು ಅಲ್ಲವೇ? 



More Stories
ಮಧ್ಯಪ್ರಾಚ್ಯ ದೇಶಗಳಲ್ಲಿನ ಬಿಕ್ಕಟ್ಟು – ವಿಜಯನಗರ ಜಿಲ್ಲೆಯ ಪ್ರಯಾಣಿಕರ ನೆರವಿಗಾಗಿ ಸಹಾಯವಾಣಿ ಸ್ಥಾಪನೆ.
ಮಾ. 6ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್ವ್ಯೂವ್
ಹೊಸಪೇಟೆಯಲ್ಲಿ ಫೆ. ೨೭ಕ್ಕೆ ‘ಸರ್ವಧರ್ಮ ಸಮನ್ವಯ’ ಮಹಾರಥೋತ್ಸವದ ವೈಭವ!