February 9, 2026

Hampi times

Kannada News Portal from Vijayanagara

ಹೊಸಗಾಲದ ವಿಸ್ಮಯ, ಸಮನ್ವಯಕವಿ: ಜಿ.ಎಸ್.ಶಿವರುದ್ರಪ್ಪ

https://youtu.be/NHc6OMSu0K4?si=SI_K4goOPEgwo6h2

 

ಬೇಂದ್ರೆಯವರು “ಕೋಟಿ ಕಾರ್ತಿಕೋತ್ಸವದಲ್ಲಿ ಮಿನುಗುತಿಹ ಜ್ಯೋತಿ ನಾನು…” ಎಂದಂತೆ ಜಿಎಸ್‌ಎಸ್‌ರವರ ಅಪಾರ ಶಿಷ್ಯಸಾಗರದಲ್ಲಿ ನಾನೊಂದು ಹನಿ. ಕೊನೆಕೊನೆಯ ಬ್ಯಾಚಿನ ವಿದ್ಯಾರ್ಥಿಯಾದ ಭಾಗ್ಯಶಾಲಿ. ಎಂಬತ್ತರ ದಶಕದಲ್ಲಿ ಡಾ.ಜಿಎಸ್‌ಎಸ್ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದಾಗ ನಾನು ಎಂ.ಎ. ವಿದ್ಯಾರ್ಥಿಯಾಗಿದ್ದೆ. ಜಿಎಸ್‌ಎಸ್ ಎಂದೇ ಅಪಾರ ವಿದ್ಯಾರ್ಥಿವಲಯದಲ್ಲಿ ಹಾಗೂ ನಾಡಿನಾದ್ಯಂತ ಚಿರಪರಿಚಿತರಾದ ಡಾ.ಜಿ.ಎಸ್.ಶಿವರುದ್ರಪ್ಪ(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ)ಕನ್ನಡದ ರಾಷ್ಟ್ರಕವಿಗಳು.

ಹಿರಿಯ ಕವಿಗಳಾದ ಎಂ.ಗೋವಿಂದ ಪೈ ಮತ್ತು ಶ್ರೀಕುವೆಂಪು ಅವರ ತರುವಾಯ ಕನ್ನಡಕ್ಕೆ ಮೂರನೆಯ ರಾಷ್ಟçಕವಿಪ್ರಶಸ್ತಿ(2006)ಯನ್ನು ತಂದುಕೊಟ್ಟ ದಟ್ಟಜೀವನಪ್ರೀತಿಯ, ಮಹತ್ವದ ಕವಿ, ವಿಮರ್ಶಕ, ಮೀಮಾಂಸಕ, ಪ್ರಾಧ್ಯಾಪಕ ಹಾಗೂ ದಕ್ಷ ಆಡಳಿತಗಾರರು. ಜಿಎಸ್‌ಎಸ್ ಅವರ 2026 ಜನ್ಮಶತಮಾನೋತ್ಸವ ವರ್ಷದ ಸಂಭ್ರಮ.

ಜಿಎಸ್‌ಎಸ್. ಹುಟ್ಟಿದ್ದು ಫೆಬ್ರವರಿ 7ನೆಯ ತಾರೀಖು 1926ರಲ್ಲಿ. ದಾವಣಗೆರೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ. ತಂದೆ:ಶಾಂತವೀರಪ್ಪ, ಮಾಧ್ಯಮಿಕ ಶಾಲಾ ಶಿಕ್ಷಕರು. ತಾಯಿ: ವೀರಮ್ಮ. ಜಿ.ಎಸ್.ಎಸ್. ಕುವೆಂಪು ಅವರ ಶಿಷ್ಯರಾಗಿ ಕುವೆಂಪುಮಾರ್ಗದಲ್ಲಿ ನಡೆದವರು.

ಜಿಎಸ್‌ಎಸ್‌ರವರು ಕನ್ನಡ ಅಧ್ಯಯನ ಕೇಂದ್ರವನ್ನು ವಿಭಿನ್ನವಾಗಿ ರೂಪಿಸಿದರು. ನವೋದಯ, ನವ್ಯ, ನವ್ಯೋತ್ತರ-ಎಲ್ಲ ಪಂಥಗಳಿಗೆ ಸೇರಿದ ಹಲವು ಚಿಂತನಾಕ್ರಮಗಳ ಅಧ್ಯಾಪಕರನ್ನು ಒಂದೆಡೆ ಸೇರಿಸುವ ಮೂಲಕ ವಿಮರ್ಶೆಯ ಕೇಂದ್ರವನ್ನಾಗಿಸಿದರು. ಪರಂಪರೆ ಮತ್ತು ಸಮಕಾಲೀನಪ್ರಜ್ಞೆಗಳ ಮೇಳೈಕೆಯಿಂದ ಆಯೋಜಿಸಿದ ಹಲವು ವಿಚಾರಸಂಕಿರಣಗಳು, ಪ್ರಕಟಿಸಿದ ಸಾಹಿತ್ಯಚರಿತ್ರೆಗಳು, ಸಾಹಿತ್ಯವಾರ್ಷಿಕ, ವಿಚಾರಸಾಹಿತ್ಯ ಮೊದಲಾದ ವಿಚಾರಪರಿಪ್ಲುತ ಗ್ರಂಥಗಳು, ಹಸ್ತಪ್ರತಿ ವಿಭಾಗ- ಇದಕ್ಕೆ ಸಾಕ್ಷಿಯಾಗಿವೆ.

ಕನ್ನಡ ಅಧ್ಯಯನ ಕೇಂದ್ರಕ್ಕೆ ಸಾಂಸ್ಕೃತಿಕ ಪ್ರಜಾಪ್ರಭುತ್ವದ ನೆಲೆಗಟ್ಟನ್ನು ಪ್ರಾಪ್ತವಾಗಿಸಿದರಲ್ಲದೆ, ‘ಭಿನ್ನವಿದ್ದೂ ಬೆರೆಯಹುದೆಂಬುದ’ನ್ನು ಸಾಕ್ಷೀಕರಿಸಿದರು. ಕನ್ನಡ ರಂಗಭೂಮಿಗೆ ಹೊಸ ಚೈತನ್ಯವನ್ನು ತುಂಬಿದ್ದು ಅವಧಿಯಲ್ಲಿಯೇ ಎಂಬುದನ್ನು ನೆನೆಯಬೇಕು. ಜಿಎಸ್‌ಎಸ್ ಕಾವ್ಯ, ಸಾಹಿತ್ಯವಿಮರ್ಶೆ, ಕಾವ್ಯಮೀಮಾಂಸೆ, ಸಂಶೋಧನೆ, ಕಾದಂಬರಿ, ಜೀವನಚರಿತ್ರೆ ಮೊದಲಾದ ಪ್ರಕಾರಗಳಲ್ಲಿ ರಚಿಸಿರುವ ಕೃತಿಗಳು ಮೌಲಿಕವಾದುವು.

ವಾರಾನ್ನದಿಂದ ರಾಷ್ಟ್ರಕವಿಯವರೆಗೆ: ಬೆಲಗೂರಿನಲ್ಲಿದ್ದಾಗ ನೇಕಾರನ ಮಗ್ಗ ಹಾಗೂ ಕುಂಬಾರನ ತಿಗರಿಯನ್ನು ಬೆರಗಿನಿಂದ ನೋಡುತ್ತಲೇ ಕವಿತೆ ಹುಟ್ಟುವುದರ ಬಗ್ಗೆ ಚಿಂತನೆಗೈಯ್ದರು. ಜಿಎಸ್‌ಎಸ್ ಬೆಳೆದದ್ದು ವಾರಾನ್ನದಲ್ಲಿ. ಒಮ್ಮೆ ಗುರುಗಳಾಗಿದ್ದ ತ.ಸು.ಶಾಮರಾಯರು ಶಿವರುದ್ರಪ್ಪನವರನ್ನು ಮನೆಗೆ ಕರೆದುಕೊಂಡು ಹೋಗಿ ಎಲೆ ಹಾಕಿ ಊಟ ಬಡಿಸಿದಾಗ ‘ನಾಚಿಕೋಬೇಡ, ಈಟ್ ಷೇಮ್‌ಲೆಸ್ಸ್ಲಿ…’ಎಂದ ಅವರ ಶಿಷ್ಯವಾತ್ಸಲ್ಯ ಪ್ರಸಂಗವನ್ನು ಸ್ಮರಿಸಿದ್ದಾರೆ.

ತ.ಸು.ಶಾಮರಾಯರ ಅಕ್ಕರೆಯಲ್ಲಿ ರೂಪುಗೊಳ್ಳುತ್ತಿದ್ದ ಕವಿತೆಗಳು ಕುವೆಂಪುರವರ ಕಣ್ಣಿಗೆ ಬಿದ್ದದ್ದು ಒಂದು ಆಕಸ್ಮಿಕ ಎಂದಿದ್ದಾರೆ. ಬಿ.ಎ.ಆನರ್ಸ್ ಓದುತ್ತಿದ್ದ ದಿನಗಳಲ್ಲಿ ತಾವು ಬರೆದದ್ದನ್ನು ಅವರಿಗೆ ಹೇಗೆ ತೋರಿಸುವುದೆಂಬ ಅಳುಕಿನಿಂದ ಸುಮ್ಮನಿದ್ದರಂತೆ. ‘ಕುವೆಂಪು ಅವರನ್ನು ನೋಡುವುದು, ಅವರ ಮಾತುಗಳನ್ನು ಕೇಳುವುದು, ಬರೆದರೆ ಅವರ ಹಾಗೆ ಬರೆಯುವುದು ಇತ್ಯಾದಿ ಸಾರ್ಥಕ ಕೆಲಸಗಳಾಗಿದ್ದವು ತಮ್ಮ ಪಾಲಿಗೆ’ ಎಂದಿದ್ದಾರೆ.

1970ರಲ್ಲಿ ಕುವೆಂಪು ಅವರು ಬರೆದ ಒಂದು ಪತ್ರ ಹೀಗಿದೆ: “ಶ್ರೀ ಜಿಎಸ್ ಶಿವರುದ್ರಪ್ಪನವರನ್ನು 22 ವರ್ಷಗಳಿಂದ ಬಲ್ಲೆ. ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯಸೃಷ್ಟಿಯಲ್ಲಿ, ಸಾಹಿತ್ಯವಿಮರ್ಶೆಯಲ್ಲಿ ತೀವ್ರವಾದ ಆಸಕ್ತಿ ಅವರಿಗೆ. ಸಾಮಗಾನ, ಚೆಲುವು-ಒಲವು, ದೀಪದಹೆಜ್ಜೆ, ದೇವಶಿಲ್ಪ, ಅನಾವರಣ-ಈ ಕವನ ಸಂಕಲನಗಳಿAದ ಪ್ರತಿಭಾವಂತ ಕವಿ ಎಂದು ಪ್ರಖ್ಯಾತರಾಗಿದ್ದಾರೆ.

ಕನ್ನಡದ ಉನ್ನತಮಟ್ಟದ ವಿಮರ್ಶಕರ ಪಂಕ್ತಿಯಲ್ಲಿ ನಿಂತಿದ್ದಾರೆ ಶ್ರೀ ಶಿವರುದ್ರಪ್ಪನವರು. ಅವರ ಡಾಕ್ಟರೇಟ್ ಪ್ರಬಂಧವಾದ ‘ಸೌಂದರ್ಯಸಮೀಕ್ಷೆ’ ಅವರ ವಿದ್ವತ್ತಿಗೂ, ತೀಕ್ಷಷ್ಣವಾದ ವಿಮರ್ಶಾಶಕ್ತಿಗೂ ಸಾಕ್ಷಿಯಾಗಿದೆ. ವಿಮರ್ಶೆಯ ಪೂರ್ವ-ಪಶ್ಚಿಮ, ಗತಿಬಿಂಬ, ಎರಡು ಅವರ ವಿಮರ್ಶಾ ಕ್ಷೇತ್ರಕ್ಕೆ ನೀಡಿರುವ ಅಪೂರ್ವ ಕಾಣಿಕೆಗಳಾಗಿವೆ. ಬೋಧನೆ ಮತ್ತು ಸಂಶೋಧನೆ ಎರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಈ ತಲೆಮಾರಿನ ಪ್ರಥಮಶ್ರೇಣಿಯ ಪ್ರತಿಭಾವಂತರಾಗಿ ಶಿವರುದ್ರಪ್ಪನವರು ಒಬ್ಬರೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.” ಎಂಬ ಮಾತುಗಳು ಜಿಎಸ್‌ಎಸ್‌ರವರ ಬೆಳೆಯುವ ಎತ್ತರ-ಬಿತ್ತರಗಳ ನಾಂದಿನುಡಿಗಳಾಗಿವೆ.

ನಾನು ಬಿಎ ಓದುತ್ತಿದ್ದಾಗ ತುಮಕೂರಿನ ನಗರ ಕೇಂದ್ರ ಗ್ರಂಥಾಲಯಕ್ಕೆ ನಿಯತವಾಗಿ ಹೋಗುತ್ತಿದ್ದೆ. ಅಲ್ಲಿ ಕವಿತೆಗಳನ್ನು ಓದುವಾಗ ಪುಸ್ತಕವೊಂದರ ಹಿಂಬದಿಯಲ್ಲಿ ಚಿನ್ನದ ಕಟ್ಟಿನ ಕನ್ನಡಕ ತೊಟ್ಟ ಹಿರಿಯ ಕವಿಯ ಫೋಟೋ ನೋಡಿ ಅಚ್ಚರಿ ಮತ್ತು ಖುಷಿಯಾಯಿತು. ಪುಟಗಳನ್ನು ತಿರುವಿ ಹಾಕಿದಾಗ ಅದು ಜಿ.ಎಸ್.ಶಿವರುದ್ರಪ್ಪನವರ ಕವನಸಂಕಲನವೆಂದು ತಿಳಿಯಿತು. ಜಡೆ, ಸ್ತ್ರೀ, ಮುಂಬೈ ಜಾತಕ, ಎದೆ ತುಂಬಿ ಹಾಡಿದೆನು…ಮೊದಲಾದ ಕವಿತೆಗಳನ್ನು ಓದುತ್ತಿದ್ದಂತೆ ಅವರನ್ನು ನೋಡಬೇಕೆಂಬ ಹಂಬಲ ತೀವ್ರವಾಯಿತು. ಅಲ್ಲಿ ಮೊಳಕೆಯೊಡೆದ ಬಯಕೆ ಫಲ ಕೊಟ್ಟಿದ್ದು ಕನ್ನಡ ಎಂಎ.ಗೆ ಜ್ಞಾನಭಾರತಿಗೆ ಸೇರಿದಾಗಲೇ.

 

ಪ್ರೋತ್ಸಾಹಕ ಗುಣ: ಬಿಎ ಓದುತ್ತಿದ್ದಾಗ ನಾನು ಇಂಗ್ಲಿಷ್‌ನ ರಾಬಟ್‌ಹೆರಿಕ್ ಕವಿಯ ‘ಟು ಬ್ಲಾಸಂಸ್ ಮತ್ತು ‘ಟು ಡೆಫೋಡಿಲ್ಸ್’ ಎಂಬೆರಡು ಕವಿತೆಗಳನ್ನು “ಹೂಗಳಿಗೆ” ಎಂಬ ಒಂದೇ ಕವಿತೆಯನ್ನಾಗಿ ಭಾವಾನುವಾದ ಮಾಡಿದ್ದೆ. ಇದಕ್ಕೆ ನನಗೆ ಬಿಎಂಶ್ರೀಯವರೇ ಪ್ರೇರಣೆ. “ಮಧುರ ಮೋಹಕ ಭಾವದೀಪಕ | ಮದನ ರೂಪದ ಹೂಗಳೇ, | ಇನಿತು ಮುಂಚೆಯೇ ನಡೆದಿರೇತಕೆ? | ಇಂಥ ಕಾತುರ ತಕ್ಕುದೆ? | ಇನ್ನು ತುಸು ಹೊತ್ತಿರಲೇಬೇಕಿತ್ತಿಲ್ಲಿಯೇ | ನೀವಿರಲೆಬೇಕಿತ್ತಿಲ್ಲಿಯೇ” ಎಂದು ವಿಭಾಗದ ‘ಕಾವ್ಯಕುತೂಹಲ’ದಲ್ಲಿ ಓದಿದಾಗ ಕೇಳಿದ ಜಿ.ಎಸ್.ಎಸ್. ಅವರು ಮಾರನೆಯ ದಿನ ತಮ್ಮ ಚೇಂಬರಿಗೆ ಬರುವಂತೆ ಕರೆದಾಗ ನನಗೆ ಅಲ್ಲಿಗೆ ಹೋಗಲು ಭಯವಾದರೂ ಹೋದೆ.

ಜಿಎಸ್‌ಎಸ್ ಅವರು “ನೆನ್ನೆ ಓದಿದ ಕವಿತೆ ಚೆನ್ನಾಗಿದೆ. ಬರೆಯುವುದನ್ನು ಮುಂದುವರಿಸಿ” ಎಂದರಲ್ಲದೆ ಮುಂದೊAದು ಕಾರ್ಯಕ್ರಮದಲ್ಲಿ ಕವಿತೆಗೆ ವಿಶೇಷ ಬಹುಮಾನದ ಪ್ರಶಸ್ತಿಪತ್ರವನ್ನೂ ನೀಡಿದರು. ಅವರ ಪ್ರೋತ್ಸಾಹ, ಮೆಚ್ಚುಗೆ ನಾನು ಬರೆವಣಿಗೆಯನ್ನು ಮುಂದುವರೆಸಲು ಪ್ರೇರಣೆಯಾದವು.

ಪಾಠದ ವೈಖರಿ: ಜಿಎಸ್‌ಎಸ್‌ರವರ ಶಿಸ್ತು, ಸಮಯಪಾಲನೆ ಎಂಥವರನ್ನೂ ಚಕಿತಗೊಳಿಸುತ್ತಿದ್ದವು. ಧರಿಸುತ್ತಿದ್ದ ಶುಭ್ರಉಡುಪು, ನಡೆಯುತ್ತಿದ್ದ ಠೀವಿ-ಗಾಂಭೀರ್ಯ ಎಲ್ಲರಲ್ಲೂ ಗೌರವಭಾವನೆಯನ್ನು ತರುತ್ತಿದ್ದವು. ಅವರ ತರಗತಿಗಳೆಂದರೆ ಒಂದನ್ನೂ ತಪ್ಪಿಸಿಕೊಳ್ಳುವಂತಿರಲಿಲ್ಲ. ಅಂತಹ ಉದ್ಬೋಧಕವಾದ ಉಪನ್ಯಾಸದ ಮಹಾತೊರೆ. ಅವರ “ಕಾವ್ಯಮೀಮಾಂಸೆ”ಯ ಒಂದು ಗಂಟೆಯ ಪಾಠವನ್ನೇನಾದರೂ ತಪ್ಪಿಸಿಕೊಂಡರೆ ಪಾಠದ ಗ್ರಹಿಕೆಯ ನಡುವೆ ದೊಡ್ಡ ಕಂದಕವೇರ್ಪಡುತ್ತಿತ್ತು.

ಸ್ವಲ್ಪವೂ ಬೇಸರವಾಗದಂತಹ ಅವರ ಉಪನ್ಯಾಸದ ಶೈಲಿ. “ಭಾರತೀಯ ಕಾವ್ಯ ಪರಂಪರೆಯನ್ನು ಕಾವ್ಯಮೀಮಾಂಸಾಶಾಸ್ತçವನ್ನು ಕೂಡ ಸೃಜನಶೀಲವಾಗಿ ಮಾಡಿದ್ದರು”ಎಂಬ ಹಿರಿಯ ಸಾಹಿತಿ ಡಾ.ಪ್ರಭುಶಂಕರರ ನುಡಿಗಳು ಸಮಂಜಸವಾದುವು. ಮೈಸೂರಿನ ಸೈಯಾಜಿರಾವ್ ರಸ್ತೆಯಲ್ಲಿದ್ದ(ಇಂದಿಲ್ಲ) ಇಂದ್ರಭವನ್ ಹೋಟೆಲಿಗೆ ಹೋದಾಗ “ಇಂದ್ರಭವನದಲ್ಲಿ ಚಂದ್ರ ಮೂಡಿತೊ, ದೋಸೆ ಹೆಂಚಿನಲ್ಲಿ,

ಮೂಡಿತೆಂಬೆಯೋ ಮತ್ತೆ ಮುಳುಗಿತು ಉದರಗಗನದಲ್ಲಿ” ಎಂದು ಹೊಳೆದ ಸರಳಗವಿತೆ, ಸಾಮಾನ್ಯ ಸಂಗತಿಯನ್ನೂ ಎಷ್ಟು ಸೊಗಸಾಗಿ ನಿರೂಪಿಸಬಹುದೆಂಬುದಕ್ಕೆ ಒಂದು ನಿದರ್ಶನವಾಗಿದೆ. ಜಿಎಸ್‌ಎಸ್ ‘ದಿಬ್ಬಯ್ಯ’ ಎಂಬ ಹೆಸರಿನಲ್ಲೂ ಬರೆಯುತ್ತಿದ್ದರಂತೆ. ಅವರ ಉಪನ್ಯಾಸ ವೈಖರಿ ತುಂಬಾ ಕುತೂಹಲಕಾರಿ ಮತ್ತು ರಸೋಜ್ಞವಾಗಿರುತ್ತಿತ್ತು. ಕಾವ್ಯಮೀಮಾಂಸೆಯನ್ನೇ ಪಾಠ ಮಾಡಿದರೂ ಎಂದಿಗೂ ಮರೆಯದಂತೆ ನೆನಪಿನಲ್ಲಿ ಅಚ್ಚೊತ್ತಿದಂತಿರುತ್ತಿತ್ತು.

‘ಹಳ್ಳಿಯ ಹೆಣ್ಣುಮಕ್ಕಳು ಹಾಗೂ ನಗರದ ಹೆಣ್ಣುಮಕ್ಕಳಿಗೂ ಇರುವ ವ್ಯತ್ಯಾಸವನ್ನು ‘ದೊಡ್ಡ ಕೊಡೆ ಮತ್ತು ಮಡಿಚುವ ಛತ್ರಿ’ ಎಂದು ಹೇಳಿದ ಹೋಲಿಕೆಗಳ ಸರಮಾಲೆ ಅವರ ಪ್ರತಿಭಾ ಮೂಸೆಯಿಂದ ಮೂಡಿದವುಗಳಾಗಿರುತ್ತಿದ್ದವು. ಜಿಎಸ್‌ಎಸ್‌ರವರ ಮಾತು-ಬರಹಗಳ ಶೈಲಿ ಎರಡೂ ಅಭಿನ್ನ, ಅವರ ತರಗತಿಗಳನ್ನು ಉಪನ್ಯಾಸಗಳನ್ನು ಕೇಳಿದ ನನ್ನಂಥವರಿಗೆ ಇಂದಿಗೂ ಅವರ ಬರಹಗಳನ್ನು ಓದುತ್ತಿದ್ದರೆ ಅವರೇ ಮಾತನಾಡುತ್ತಿದ್ದಾರೇನೋ ಎನಿಸುತ್ತದೆ.

ಬೇಂದ್ರೆ-ಜಿಎಸ್‌ಎಸ್ ಪುನರ್ಜನ್ಮದ ಅಪೂರ್ವ ಪ್ರಸಂಗಗಳು ಬೇಂದ್ರೆಯವರ ಅವ್ವ(ಅಂಬವ್ವ) ಜಿಎಸ್‌ಎಸ್ ಅವರ ತಾಯಿ(ವೀರಮ್ಮ) ಬೇಂದ್ರೆ ಮತ್ತು ಜಿಎಸ್‌ಎಸ್ ಇವರಿಬ್ಬರ ಬದುಕಿನಲ್ಲಿ ವಹಿಸಿದ ಪಾತ್ರ ಮಹತ್ವವಾದುವು. ಬಾಲ್ಯದಲ್ಲಿ ಕೆರೆಯ ನೀರಿನಲ್ಲಿ ಮುಳುಗಿದ್ದ ದತ್ತನನ್ನು(ಬೇಂದ್ರೆ) ಅಂಬವ್ವ, ತಾನೇ ಕೆರೆಯಲ್ಲಿ ಧುಮುಕಿ ಮಗುವನ್ನು ಎತ್ತಿಕೊಂಡು ದಡಕ್ಕೆ ಬಂದದ್ದನ್ನು ಹಾಗೂ ಗುಡಿಸಲಿನ ಮನೆಯ ತೊಟ್ಟಿಲಲ್ಲಿ ಮಲಗಿದ್ದ ಕೂಸನ್ನು(ಶಿವರುದ್ರಪ್ಪ)ಬಿಟ್ಟು ಬೇಗ ನೀರು ತಂದರಾಯಿತೆಂದು ಬಾವಿಗೆ ಹೋಗಿದ್ದ ತಾಯಿ ವೀರಮ್ಮ ಗುಡಿಸಲಿನ ಮನೆಗೆ ಆವರಿಸಿದ್ದ ಬೆಂಕಿಯನ್ನು ಲಕ್ಷಿಸದೆ ಒಳನುಗ್ಗಿ ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಬಂದು ರಕ್ಷಿಸಿದ ಪ್ರಸಂಗಳು ತಾಯ್ತನದ ಅದಮ್ಯ ಚೇತನ ಕನ್ನಡಕ್ಕೆ ಇಬ್ಬರು ಕವಿಶ್ರೇಷ್ಠರನ್ನು ನೀಡಿದ ಉಜ್ವಲ ಘಟನೆಗಳಾಗಿವೆ.

ಕುವೆಂಪು ಅವರನ್ನು ಕುರಿತು ಜಿಎಸ್‌ಎಸ್ ಅಭಿಮಾನದಿಂದ ಹೇಳುತ್ತಿದ್ದ ಮಾತು: “ನಮ್ಮನ್ನು ಕೇವಲ ಲೇಖಕರಾಗಿ ಮಾತ್ರ ರೂಪಿಸಲಿಲ್ಲ; ಮನುಷ್ಯರಾಗಿ ಬದುಕುವುದನ್ನು ಕಲಿಸಿದರು. ಇದರಿಂದ ಬರವಣಿಗೆಯ ತುಡಿತ ಜೀವಂತವಾಗಿರಲು ಸಾಧ್ಯವಾಯಿತೇನೋ” ಎಂಬ ಮಾತು ಅವರ ಗುಣಾತ್ಮಕ ಸಂಗತಿಯಾಗಿದೆ.

ಜಿಎಸ್‌ಎಸ್‌ರವರ ‘ಸಮಗ್ರಕಾವ್ಯ’ವನ್ನು ವಿಶ್ಲೇಷಿಸಿರುವ ಜಿಎಸ್.ಆಮೂರರು “ಜೆಎಸ್‌ಎಸ್ ಅವರಲ್ಲಿ ಸೂಕ್ಷ್ಮಗ್ರಾಹಿಯಾದ ಪರಿಸರಪ್ರಜ್ಞೆ ಇರುವುದರಿಂದಲೇ ತನ್ನ ಜೀವಂತ ಅನುಭವಗಳನ್ನು ಸ್ವೀಕರಿಸುವ ಮತ್ತು ಬೆಲೆಕಟ್ಟುವ ಸಾಮರ್ಥ್ಯ ಮತ್ತು ಯಾವುದೇ ಸಿದ್ಧಾಂತಕ್ಕೆ ಕಟ್ಟಬೀಳದೆ ತನ್ನ ಅನುಭವಕ್ಕೆ ಪ್ರಾಮಾಣಿಕ ಅಭಿವ್ಯಕ್ತಿ ಕೊಡಬಲ್ಲ ಭಾಷೆ, ಆಕಾರಗಳನ್ನು ಸೃಷ್ಟಿಸುವ ಅಥವಾ ಹುಡುಕಿಕೊಳ್ಳುವ ಪ್ರತಿಭೆ ಈ ಗುಣಗಳು ಧಾರಾಳವಾಗಿರುವುದರಿಂದಲೇ ಅವರು ನಮ್ಮ ಮಹತ್ವದ ಕವಿಗಳಲ್ಲಿ ಒಬ್ಬರಾಗಿದ್ದಾರೆ.”-ಎಂಬ ಮಾತುಗಳು ಅವರ ಕಾವ್ಯವನ್ನು ಸಮರ್ಥವಾಗಿ ಅರ್ಥೈಸಿವೆ.

ಗುರು-ಶಿಷ್ಯರಿಬ್ಬರೂ ರಾಷ್ಟ್ರಕವಿಗಳಾದುದು ಕನ್ನಡದ ಹೆಮ್ಮೆ. ತೆಂಗಿನಂತೆ ಎತ್ತರೆತ್ತರ ಬೆಳೆದರೂ ನೆಲದ ಕಡೆಗೇ ಅದರ ಗರಿಗಳು ಬಾಗುವಂತೆ ಜಿಎಸ್‌ಎಸ್‌ರವರ ಅಪ್ಪಟ ಜೀವನಪ್ರೀತಿ ಮತ್ತು ಉದಾತ್ತ ವ್ಯಕ್ತಿತ್ವ. ತಾವು ಬೆಳೆಯುವುದರೊಂದಿಗೆ ಇತರರನ್ನೂ ಬೆಳೆಸಿದರು. ‘ಆಭರಣವೆಂಬುದದು ಬರಿದೆಯಾಗದು ಕಣಾ | ತಾಯ್ತಂದೆ ಗುರುವಕ್ಕಸಾಲಿಗರು | ಬದುಕಿನಗ್ಗಿಷ್ಠಿಯಲ್ಲಿ ಅನುಭವದ ಮೂಸೆಯಲಿ | ಕಾಸಿ, ಕರಗಿಸಿ, ಬಡಿದು | ಕಂಬಚ್ಚಿನಲಿ ಬೇಕಾದ ಸರಿಗೆ ತೆಗೆದು | ಮಾಡಿದರೆ ಕುಸುರಿಗೆಲಸವ ಆಭರಣ ಸೊಗಸಹುದು | ಒಪ್ಪುವುದು ಸಕಲರಿಗೆ | ಆಭರಣ ಬರಿದೆಯಾಗದು |

ಡಾ.ಬಿ.ಜಿ.ಕನಕೇಶಮೂರ್ತಿ ವಿಶ್ರಾಂತ ಪ್ರಾಧ್ಯಾಪಕರು

Please follow and like us:

 

 

 

 

 

 

Translate »
[t4b-ticker]
error: Content is protected !!