https://youtu.be/NHc6OMSu0K4?si=SI_K4goOPEgwo6h2

ಹಗರಿಬೊಮ್ಮನಹಳ್ಳಿ : ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೆರೆಸಬಾರದು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಸ್ಪಷ್ಟ ಸಂದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ರೈಲ್ವೆ ಯೋಜನೆಗಳಿಗಾಗಿ 12,900 ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದರು.
ಭಾನುವಾರ ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಲೆವೆಲ್ ಕ್ರಾಸಿಂಗ್ 35ರ ಮೇಲ್ಸೇತುವೆ ಕಾಮಗಾರಿಯ ಭೂಮಿ ಪೂಜೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿಂದೆ ಕರ್ನಾಟಕಕ್ಕೆ ರೈಲ್ವೆ ಇಲಾಖೆಯಿಂದ ವಾರ್ಷಿಕವಾಗಿ ಕೇವಲ ರೂ.882 ಕೋಟಿ ಅನುದಾನ ಬರುತ್ತಿತ್ತು. ಆದರೆ ಮೋದಿ ಸರ್ಕಾರ ಬಂದ ನಂತರ ಅದನ್ನು ರೂ.7,500 ರಿಂದ ರೂ.8,000 ಕೋಟಿ ರೂ.ಗಳಿಗೆ ಏರಿಸಲಾಗಿದೆ ಎಂದು ಅವರು ಅಂಕಿಅಂಶಗಳ ಸಮೇತ ವಿವರಿಸಿದರು.
ಪ್ರಮುಖ ಯೋಜನೆಗಳ ವಿವರ: ಬಳ್ಳಾರಿ ಮತ್ತು ಚಿತ್ರದುರ್ಗದ ಗಣಿಗಾರಿಕೆ ಹಾಗೂ ಮಂಗಳೂರು-ಹೈದರಾಬಾದ್ ಸಂಪರ್ಕಕ್ಕೆ ಮಹತ್ವವಾಗಿರುವ ಬಳ್ಳಾರಿ-ಚಿಕ್ಕಜಾಜೂರು ಜೋಡಿ ಮಾರ್ಗ ಯೋಜನೆಗೆ ರೂ.3,400 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಇದಕ್ಕೆ ಈಗಾಗಲೇ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಹಗರಿಬೊಮ್ಮನಹಳ್ಳಿಯ ಎಲ್.ಸಿ 35 ಮೇಲ್ಸೇತುವೆ ಕಾಮಗಾರಿ ರೂ.38.7 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಇದರೊಂದಿಗೆ ಟಿ.ಬಿ ಡ್ಯಾಂ ಬಳಿ ಹೊಸ ಮೇಲ್ಸೇತುವೆ ಹಾಗೂ ಹೊಸಪೇಟೆ-ಹಂಪಿ ರಸ್ತೆ ಕಾಮಗಾರಿಯನ್ನು ಜೂನ್ ಒಳಗಾಗಿ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ. ಅಮೃತ್ ಭಾರತ್ ಯೋಜನೆಯಡಿ ಹೊಸಪೇಟೆ ರೈಲ್ವೆ ನಿಲ್ದಾಣವನ್ನು ರೂ.15.17 ಕೋಟಿ ವೆಚ್ಚದಲ್ಲಿ ಆಧುನೀಕರಿಸಲಾಗುತ್ತಿದ್ದು, ಶೇ. 80ರಷ್ಟು ಕೆಲಸ ಮುಕ್ತಾಯವಾಗಿದೆ.

ಇದೇ ಸಂದರ್ಭದಲ್ಲಿ ಹಂಪಾಪಟ್ಟಣ ಮತ್ತು ಹಗರಿಬೊಮ್ಮನಹಳ್ಳಿ ಸಂಪರ್ಕಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ವೇದಿಕೆಯಲ್ಲೇ ಸಚಿವರು ಸೂಚನೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸದ ಇ. ತುಕಾರಾಂ ಅವರು ಮಾತನಾಡಿ, ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳು ಗಣಿಗಾರಿಕೆ ಹಾಗೂ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿವೆ. ಆದ್ದರಿಂದ ಇಲ್ಲಿನ ರೈಲ್ವೆ ವಿದ್ಯುದ್ದೀಕರಣ ಮತ್ತು ಮೇಲ್ಸೇತುವೆ ಕಾಮಗಾರಿಗಳಿಗೆ ಆದ್ಯತೆ ನೀಡಬೇಕೆಂದು ಸಚಿವರಿಗೆ ಮನವಿ ಮಾಡಿದರು. ಸಂಸದರ ಈ ಕಳಕಳಿಯನ್ನು ಸಚಿವ ಸೋಮಣ್ಣ ಮುಕ್ತ ಕಂಠದಿಂದ ಶ್ಲಾಘಿಸಿದರು.
ಈ ಸಮಾರಂಭದಲ್ಲಿ ಶಾಸಕ ನೇಮಿರಾಜ್ ನಾಯಕ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಪೊಲೀಸ್ ಅಧೀಕ್ಷಕಿ ಎಸ್. ಜಹ್ನಾವಿ, ಮಾಜಿ ಶಾಸಕ ಚಂದ್ರಾ ನಾಯ್ಕ್, ವಿವಿಧ ಮಠಾಧೀಶರುಗಳಾದ ಮರಿಯಮ್ಮನಹಳ್ಳಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಡಾ: ಮಹೇಶ್ವರ ಸ್ವಾಮೀಜಿ, ಹೆಚ್.ಬಿ. ಹಳ್ಳಿ ಹಾಲಸಿದ್ದೇಶ್ವರ ಸ್ವಾಮೀಜಿ ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳಾದ ಅಜೆಯ ಶರ್ಮ ಮತ್ತು ವಿಷ್ಣುಭೂಷಣ್ ಇತರರು ಉಪಸ್ಥಿತರಿದ್ದರು.





More Stories
ಫೆ.13 ರಿಂದ 3ದಿನ ‘ಹಂಪಿ ಉತ್ಸವ-2026ಕ್ಕೆ ಸಿಎಂ ಚಾಲನೆ : ಸಚಿವ ಜಮೀರ್ ಖಾನ್
ಫೆಬ್ರವರಿಯಲ್ಲಿ ಶ್ರೀ ವಾಲ್ಮೀಕಿ ಜಾತ್ರೋತ್ಸವ
ಯಾರೂ ನಿರ್ಲಕ್ಷ್ಯವಹಿಸಬಾರದು: ಡಿ.ವೈ.ಎಸ್.ಪಿ ಸಂತೋಷ್ ಚೌಹಾಣ್