https://youtu.be/NHc6OMSu0K4?si=SI_K4goOPEgwo6h2

ಬಳ್ಳಾರಿ: ಶಿಕ್ಷಣ ಎನ್ನುವುದು ಅಮೂಲ್ಯ ಸಂಪತ್ತು ಮತ್ತು ನಿರಂತರ ಯಾತ್ರೆಯಾಗಿದೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ಜ್ಞಾನವಂತರಾಗಿ ಸುಭಿಕ್ಷ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಅವರು ಕರೆ ನೀಡಿದರು.
ಬಳ್ಳಾರಿ-ಸಿರುಗುಪ್ಪ ರಸ್ತೆ ಮಾರ್ಗದ ಮೌಂಟ್ ವ್ಯೂ ಕ್ಯಾಂಪಸ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಿಷ್ಕಿಂದ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯುವ ಸಮೂಹವು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಸ್ವಾಮಿ ವಿವೇಕಾನಂದರ ತತ್ವಗಳಿಂದ ಸ್ಫೂರ್ತಿ ಪಡೆದು ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು. ಕಿಷ್ಕಿಂದೆಯಂತಹ ಪವಿತ್ರ ಮಣ್ಣಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿತವಾಗಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗೆ ಒತ್ತು ನೀಡುವುದು ಇಂದಿನ ಅಗತ್ಯವಾಗಿದೆ. ವಿಶೇಷವಾಗಿ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು ಎಂದರು.

ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ತಮ್ಮದೇ ನೆಲದಲ್ಲಿ ಉನ್ನತ ಶಿಕ್ಷಣ ದೊರೆಯುತ್ತಿರುವುದು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಸುವರ್ಣಗಿರಿ ವಿರಕ್ತ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಈ ವೇಳೆ ವಿವಿ ಕುಲಾಧಿಪತಿ ಡಾ. ಯಶವಂತ್ ಭೂಪಲ್, ಸಚಿವ ಎಂ.ಸಿ. ಸುಧಾಕರ್, ಸಂಸದ ಜಗದೀಶ್ ಶೆಟ್ಟರ್, ಶಾಸಕ ಬಿ.ಎಂ. ನಾಗರಾಜ, ಶಾಸಕ ಬಾದರ್ಲಿ ಹಂಪನಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.





More Stories
ಫೆ.13 ರಿಂದ 3ದಿನ ‘ಹಂಪಿ ಉತ್ಸವ-2026ಕ್ಕೆ ಸಿಎಂ ಚಾಲನೆ : ಸಚಿವ ಜಮೀರ್ ಖಾನ್
ಫೆಬ್ರವರಿಯಲ್ಲಿ ಶ್ರೀ ವಾಲ್ಮೀಕಿ ಜಾತ್ರೋತ್ಸವ
ಯಾರೂ ನಿರ್ಲಕ್ಷ್ಯವಹಿಸಬಾರದು: ಡಿ.ವೈ.ಎಸ್.ಪಿ ಸಂತೋಷ್ ಚೌಹಾಣ್