https://youtu.be/NHc6OMSu0K4?si=SI_K4goOPEgwo6h2

ಸುಡುಗಾಡು ಸಿದ್ದ ಕಲೆಗೆ ಗೌರವ. | ಓಬಳಾಪುರ ಪ್ರತಿಭೆಗೆ ರಾಜ್ಯ ಸನ್ಮಾನ
ಹಗರಿಬೊಮ್ಮನಹಳ್ಳಿ: ತಾಲೂಕಿನ ಹೆಚ್. ಓಬಳಾಪುರ ಗ್ರಾಮದ ಹಿರಿಯ ಸುಡುಗಾಡು ಸಿದ್ದ ಜಾನಪದ ಕಲಾವಿದ ಕಿಂಡ್ರಿ ಲಕ್ಷ್ಮಿಪತಿಯವರು ಕರ್ನಾಟಕ ಸರ್ಕಾರದ ಜಾನಪದ ಅಕಾಡೆಮಿಯ 2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಜ್ಯಮಟ್ಟದ ಹಿರಿಯ ಕಲಾವಿದರಾದ ಇವರು ತಮ್ಮ ತಂದೆ ಸಿದ್ದರ ಹೋಸ್ಕೆರಪ್ಪ ಮತ್ತು ಸೋದರಮಾವ ರಾಜಪ್ಪ ಅವರಿಂದ ಬಾಲ್ಯದಲ್ಲೇ ಈ ಪಾರಂಪರಿಕ ಕಲೆಯನ್ನು ಮೈಗೂಡಿಸಿಕೊಂಡಿದ್ದರು. 1970ರಿಂದ ಸುದೀರ್ಘ 55 ವರ್ಷಗಳ ಕಾಲ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಲಕ್ಷ್ಮಿಪತಿಯವರು, ಅಲೆಮಾರಿ ಸುಡುಗಾಡು ಸಿದ್ದ ಜಾನಪದ ಕೈಚಳಕದ ಮೂಲಕ ನಾಡಿನಾದ್ಯಂತ ಪರಿಚಿತರಾಗಿದ್ದಾರೆ.
ಜೋಳಗಿಯ ಮಂತ್ರ-ತಂತ್ರಗಳ ವಿಭಿನ್ನ ಕೈಚಳಕದ ಮೂಲಕ ಶಿವಲಿಂಗ, ರುದ್ರಾಕ್ಷಿ, ಹನುಮಂತನ ವಿಗ್ರಹಗಳನ್ನು ಸೃಷ್ಟಿಸಿ ಜನರನ್ನು ರಂಜಿಸುವುದರ ಜೊತೆಗೆ, ಬುದ್ಧ, ಬಸವ ಹಾಗೂ ಶರಣರ ಕಾಯಕ ತತ್ವಗಳನ್ನು ಬೋಧಿಸುತ್ತಾ ಬಂದಿದ್ದಾರೆ. ಸಮಾಜದಲ್ಲಿನ ಮೌಢ್ಯ ತೊಲಗಿಸಿ ಜ್ಞಾನದ ಸಿಂಚನ ಮೂಡಿಸುತ್ತಿರುವ ಇವರು, ಪಾರಂಪರಿಕ ನಾಟಿ ಔಷಧೀಯ ಪಂಡಿತರೂ ಹೌದು. ವಿಜಯನಗರ ಜಿಲ್ಲೆಯ ಸುಮಾರು 350ಕ್ಕೂ ಹೆಚ್ಚು ಶಾಲೆಗಳಲ್ಲಿ ಪ್ರದರ್ಶನ ನೀಡಿ ವಿದ್ಯಾರ್ಥಿಗಳಲ್ಲಿನ ಭಯ ಹೋಗಲಾಡಿಸಿ ಸುಜ್ಞಾನದ ದೀಪ ಬೆಳಗಿದ್ದಾರೆ.
ಹಂಪಿ ಉತ್ಸವ, ಮೈಸೂರು ದಸರಾ, ಆಳ್ವಾಸ್ ನುಡಿಸಿರಿ ಸೇರಿದಂತೆ ದೇಶದ ವಿವಿಧೆಡೆ ಕಲಾ ಸೇವೆ ಸಲ್ಲಿಸಿರುವ 68 ವರ್ಷದ ಈ ಹಿರಿಯ ಪ್ರತಿಭೆಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ಅಕಾಡೆಮಿಯ ಸ್ಥಾಯಿ ಸಮಿತಿ ಸದಸ್ಯರಾದ ಮೆಹಬೂಬ್ ಕಿಲ್ಲೆದಾರ್ ಅವರು ಲಕ್ಷ್ಮಿಪತಿಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಕಲಾವಿದ ನಾಗರಾಜ್ ಗಂಟಿ ಮಾಹಿತಿ ನೀಡಿದ್ದಾರೆ.





More Stories
ಫೆ.13 ರಿಂದ 3ದಿನ ‘ಹಂಪಿ ಉತ್ಸವ-2026ಕ್ಕೆ ಸಿಎಂ ಚಾಲನೆ : ಸಚಿವ ಜಮೀರ್ ಖಾನ್
ಫೆಬ್ರವರಿಯಲ್ಲಿ ಶ್ರೀ ವಾಲ್ಮೀಕಿ ಜಾತ್ರೋತ್ಸವ
ಯಾರೂ ನಿರ್ಲಕ್ಷ್ಯವಹಿಸಬಾರದು: ಡಿ.ವೈ.ಎಸ್.ಪಿ ಸಂತೋಷ್ ಚೌಹಾಣ್