December 15, 2025

Hampi times

Kannada News Portal from Vijayanagara

ವ್ಯಾಜ್ಯ ಇತ್ಯರ್ಥಕ್ಕೆ ಸಾರ್ವಜನಿಕರಿಗೆ ಕರೆ, ದಂಡ ಮೊತ್ತದಲ್ಲಿ ಶೇ.50 ರಿಯಾಯಿತಿ : ನ್ಯಾಯಾಧೀಶೆ ಕೆ.ಜಿ.ಶಾಂತಿ

https://youtu.be/NHc6OMSu0K4?si=SI_K4goOPEgwo6h2

 

ಲೋಕ್ ಅದಾಲತ್: ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸುವರ್ಣಾವಕಾಶ

ಬಳ್ಳಾರಿ: ರಾಷ್ಟ್ರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ, ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಈ ವರ್ಷದ ಕೊನೆಯ ರಾಷ್ಟ್ರೀಯ ಲೋಕ್ ಅದಾಲತ್‌ ಅನ್ನು ಇದೇ ಡಿಸೆಂಬರ್ 13 ರಂದು ಆಯೋಜಿಸಿದೆ. ಸಾರ್ವಜನಿಕರು ಬಾಕಿ ಇರುವ ಮತ್ತು ರಾಜಿಯಾಗಬಹುದಾದಂತಹ ತಮ್ಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ಕರೆ ನೀಡಿದ್ದಾರೆ.

ಬುಧವಾರ (ಡಿ.10) ನಗರದ ತಾಳೂರು ರಸ್ತೆಯ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮೊದಲನೇ ಮಹಡಿಯ ವಿಡೀಯೋ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

 

  • ರಾಷ್ಟ್ರೀಯ ಲೋಕ್ ಅದಾಲತ್ ನ್ಯಾಯಾಂಗದ ಒಂದು ಭಾಗವಾಗಿದ್ದು, ಉಭಯ ಕಕ್ಷಿದಾರರ ಪರಸ್ಪರ ಹೊಂದಾಣಿಕೆ ಮತ್ತು ತ್ವರಿತ ನ್ಯಾಯಕ್ಕಾಗಿ ಸಹಕಾರಿಯಾಗಿದೆ.
  • ಅದಾಲತ್ ದಿನದಂದು ಬಳ್ಳಾರಿ ಜಿಲ್ಲೆಯಲ್ಲಿ 15 ಬೆಂಚ್‌ಗಳಲ್ಲಿ ಅದಾಲತ್ ನಡೆಯಲಿದ್ದು, ಬಗೆಹರಿಸಬಹುದಾದ ವಿವಿಧ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು. ಇತ್ಯರ್ಥವಾದ ಪ್ರಕರಣಗಳಲ್ಲಿ ನ್ಯಾಯಾಲಯದ ಶುಲ್ಕವನ್ನು ಮರು ಪಾವತಿಸಲಾಗುತ್ತದೆ.
  • ಇತ್ಯರ್ಥಪಡಿಸಬಹುದಾದ ಪ್ರಕರಣಗಳು: ವೈವಾಹಿಕ, ಕೌಟುಂಬಿಕ, ಮೋಟಾರು ಅಪಘಾತ, ಚೆಕ್ ಅಮಾನ್ಯದ, ವಾಣಿಜ್ಯ, ಸೇವಾ ಪ್ರಕರಣಗಳು ಮತ್ತು ರಾಜೀಯಾಗಬಲ್ಲ, ಗ್ರಾಹಕ ವ್ಯಾಜ್ಯ, ಡಿಆರ್ ಟಿ, ಪಾಲುದಾರಿಕೆ, ಸಾರಿಗೆ ಹಾಗೂ ಇತರೇ ಸಿವಿಲ್ ಪ್ರಕರಣಗಳು ಸೇರಿದಂತೆ ಎಲ್ಲಾ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ.
  • ಲೋಕ್ ಅದಾಲತ್ ಮೂಲಕ ಜನರಿಗೆ ಸುಲಭವಾಗಿ, ವೇಗವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ನ್ಯಾಯ ಒದಗಿಸಲಾಗುತ್ತದೆ.
  • ಬಳ್ಳಾರಿ ಜಿಲ್ಲೆಯಲ್ಲಿನ ಒಟ್ಟು 35,533 ಬಾಕಿ ಪ್ರಕರಣಗಳಲ್ಲಿ ಡಿ.13 ರಂದು ನಡೆಯಲಿರುವ ಲೋಕ್ ಅದಾಲತ್‌ಗೆ 8,961 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಗುರುತಿಸಲಾಗಿದ್ದು, ಈಗಾಗಲೇ 4,178 ಪ್ರಕರಣಗಳ ಉಭಯ ಕಕ್ಷಿದಾರರು ಇತ್ಯರ್ಥಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಕೆ.ಜಿ.ಶಾಂತಿ ಅವರು ಮಾಹಿತಿ ನೀಡಿದರು.

ದಂಡ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ

ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ಗಳಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ 1991-92 ರಿಂದ 2019-20 ರ ಅವಧಿಯಲ್ಲಿ ದಾಖಲಾಗಿ ಪಾವತಿಗೆ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿದ್ದು, ಡಿ.12 ರ ವರೆಗೆ ಈ ಸೌಲಭ್ಯವು ಇರಲಿದೆ. ಲೋಕ್ ಅದಾಲತ್ ಪ್ರಯುಕ್ತ ಈ ರಿಯಾಯಿತಿ ನೀಡಲಾಗಿದ್ದು, ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಸೇರಿದಂತೆ ಜಿಲ್ಲಾ ನ್ಯಾಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

 

 

 

 

 

 

 

ಜಾಹೀರಾತು
error: Content is protected !!