October 11, 2025

Hampi times

Kannada News Portal from Vijayanagara

ಜಗದ್ಗುರು ಬಸವಲಿಂಗ ಶ್ರೀಗಳಿಗೆ 32ನೇ ವರ್ಷದ ಜನ್ಮದಿನೋತ್ಸವದ ಸಂಭ್ರಮ

https://youtu.be/NHc6OMSu0K4?si=SI_K4goOPEgwo6h2

 

ಪೂಜ್ಯಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು 
ಕನ್ನಡ ನಾಡಿನ ಚರಿತ್ರೆಯಲ್ಲಿ ಸಮಾಜೋಧಾರ್ಮಿಕ ಕಾರ್ಯಗಳ ಮೂಲಕ ಇತಿಹಾಸದಲ್ಲಿ ಮಹತ್ವದ ಸ್ಥಾನಪಡೆದ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಇಪ್ಪತ್ತನೇ ಜಗದ್ಗುರುಗಳಾಗಿ ಮಠಾಧಿಕಾರ ಹೊಂದಿದ ಪೂಜ್ಯಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳವರು ಕೇವಲ ಮೂರುವರೇ ವರುಷಗಳ ಅಧಿಕಾರಾವಧಿಯಲ್ಲಿ ತಮ್ಮ ವಯಸ್ಸಿಗೂ ಮಿಕ್ಕ ಸಾಧನೆಯನ್ನು ಮಾಡಿದ ಶರಣ ಪರಂಪರೆಯ ವಾರಸುದಾರರು. ಅವರ ನಡೆ, ಕ್ರಿಯಾಶೀಲತೆ, ಸಂಘಟನಾ ಚತುರತೆ, ದೂರದೃಷ್ಟಿತ್ವದ ಆಲೋಚನೆಗಳು ಇತರೇ ಯುವಸ್ವಾಮಿಗಳವರಿಗೆ ಆದರ್ಶವಾಗಿವೆ. ಹೊಸಪೇಟೆ-ಬಳ್ಳಾರಿ ಮತ್ತು ಹಾಲಕೆರೆ ಮುಖ್ಯಮಠಗಳ ಜೊತೆಗೆ ಎಲ್ಲ ಶಾಖಾಮಠಗಳನ್ನೂ ವಿದ್ಯಾಸಂಸ್ಥೆಗಳನ್ನು ಯಾವುದೇ ಚ್ಯುತಿ ಬಾರದಂತೆ ಮುನ್ನೆಡೆಸುತ್ತಿರುವುದು ಅವರ ಕರ್ತೃತ್ವಶಕ್ತಿಯ ಪ್ರತೀಕವಾಗಿದೆ. ಹಳ್ಳಿಗೆ ಏಕ ರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ಶ್ರಿಗಳು ನಿತ್ಯವೂ ಸಂಚಾರ ಮೂರ್ತಿಗಳಾಗಿ ಪ್ರತಿದಿನ ಒಂದಿಲ್ಲೊಂದು ಸಭೆ, ಸಮಾರಂಭ, ಜಾತ್ರೆ, ಉತ್ಸವಗಳನ್ನು ಆಚರಿಸುತ್ತ ಭಕ್ತರ ನೋವೇ ಅದು ಲಿಂಗದ ನೋವು ಎಂದು ತಿಳಿದು ಭಕ್ತರ ಕಲ್ಯಾಣಕ್ಕೆ ಹಗಲಿರುಳು ಶ್ರಮಿಸುತ್ತಲಿರುವರು. ಪೂಜ್ಯರಿಗೆ ಇಂದು 32ನೇ ವರ್ಷದ ಜನ್ಮದಿನೋತ್ಸವದ ಸಂಭ್ರಮ. ಆ ಕಾರಣಕ್ಕಾಗಿ ಪೂಜ್ಯರ ಸಾಧನಾಯಾಣದ ಕಿರು ಪರಿಚಯ ಮಾಡಿಕೊಡುವುದೇ ಈ ನನ್ನ ಲೇಖನದ ಉದ್ದೇಶ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದ ಶರಣ ದಂಪತಿಗಳಾದ ಶ್ರೀ ವಿರೇಶ ಬೆಳ್ಳೇರಿಮಠ ಹಾಗೂ ಶ್ರೀಮತಿ ನೇತ್ರಾವತಿ ಬೆಳ್ಳೇರಿಮಠ ಅವರ ಸುಪುತ್ರನಾಗಿ 1993 ಅಕ್ಟೋಬರ್ 6 ರಂದು ಜನ್ಮತಾಳಿದ ವಿಜಯಕುಮಾರ ದೇವರ ಮೇಲೆ ಅಜ್ಜ ಚನ್ನವೀರಯ್ಯಸ್ವಾಮಿಗಳ ಆಧ್ಯಾತ್ಮಿಕ ಪ್ರಭೆಯು ಪರಿಣಾಮಬೀರಿ, ಒಬ್ಬನೇ ಗಂಡು ಮಗುವಾಗಿದ್ದರೂ ಬಾಲ್ಯದಲ್ಲಿಯೇ ಸ್ವಾಮಿಯಾಗಬೇಕೆಂದು ದೃಢನಿರ್ಧಾರ ಮಾಡುತ್ತಾರೆ. ಅದರಂತೆ ಶಿವಯೋಗಮಂದಿರ ಸಂಸ್ಥೆಗೆ ವಟುವಾಗಿ ಪ್ರವೇಶ ಹೊಂದಿ, ತಪೋವನ ಸದೃಶ ಶಿವಯೋಗಮಂದಿರದ ಆ ನಿಸರ್ಗ ಸುಂದರ ಪರಿಸರ, ಹಲವಾರು ಪೂಜ್ಯರ, ಶಿವಯೋಗಿಗಳ ಸಂಪರ್ಕ ಸನ್ನಿಧಾನಗಳ ಪರಿಣಾಮವಾಗಿ ಉತ್ತಮ ಸ್ವಾಮಿಗಳಾಗಿ ರೂಪಗೊಂಡಿರುವರು.
ಸರ‍್ಯನು ಮೇಘದ ಮುಸುಕನ್ನು ತೆರೆದು ರಾಜಿಸುವಂತೆ, ಬೆಂಕಿಯು ಮೇಲಣ ಬೂದಿಯನ್ನು ಕಳೆದು ಪ್ರಜ್ವಲಿಸುವಂತೆ ಶಿವಯೋಗ ಸಾಧನೆಯಲ್ಲಿ ಪರಿಪಕ್ವವಾದ ಇವರ ನಡೆ-ನುಡಿ, ಆಚಾರ, ಶೀಲ, ಕಾಯಕ-ದಾಸೋಹ ಮತ್ತು ಲಿಂಗನಿಷ್ಠೆಗಳನ್ನು ಮೆಚ್ಚಿಕೊಂಡಿದ್ದ ಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು ತಮ್ಮ ಹೊಸಪೇಟೆ ಮತ್ತು ಹಾಲಕೆರೆ ಮಠಗಳಿಗೆ ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳುತ್ತಾರೆ. ಶ್ರೀ ಜಗದ್ಗುರು ಡಾ. ಸಂಗನಬಸವ ಸ್ವಾಮಿಗಳವರ ಆರೋಗ್ಯದಲ್ಲಿ ತೊಂದರೆ ಉಂಟಾದಾಗ ಇವರು ಮಾಡಿದ ಗುರುಸೇವೆಯಂತೂ ಗಮನೀಯವಾಗಿದೆ. ‘ಒಬ್ಬ ಶಿಷ್ಯ, ತನ್ನ ಗುರುವಿಗೆ ಹೇಗೆ ಸೇವೆ ಮಾಡಬೇಕೆಂಬುದಕ್ಕೆ’ ನಿದರ್ಶನವಾಗಿದೆ. 2021 ನವೆಂಬರ್ 10 ರಂದು ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಅಧಿಕಾರವನ್ನೂ, 2022 ಮಾರ್ಚ್ 24ರಂದು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಮಠಾಧಿಕಾರವನ್ನು ಹೊಂದಿ ಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಎಂಬ ನೂತನ ಅಭಿದಾನ ಹೊಂದಿದ್ದಾರೆ.
ಗುರುಗಳ ಪಟ್ಟಾಧಿಕಾರ ಸುವರ್ಣ ಮಹೋತ್ಸವ ಆಚರಣೆ :
ಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು ಹೊಸಪೇಟೆ ಪ್ರಾಚೀನ ಮಠವನ್ನೇ ತಮ್ಮ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡು ಅದೇ ಹಳೆಯ ಮಠದಲ್ಲಿಯೇ ಜೀವನವನ್ನು ಕಳೆದವರು. ತಮ್ಮ ಕೊನೆಯ ದಿನಗಳಲ್ಲಿ ಈ ಮಠವನ್ನೂ ಕಾಲದ ಬೇಡಿಕೆಗೆ ಅನುಗುಣವಾಗಿ ಸಿದ್ಧಗೊಳಿಸುವ ಯೋಜನೆಯಿಂದ 2021 ಸೆಪ್ಟೆಂಬರ್ 25 ರಂದು ಹಳೆಯ ಮಠವನ್ನು ಕೆಡವಿ ನೂತನ ಶಿಲಾಮಠದ ಕಾಮಗಾರಿಗೆ ಭೂಮಿ ಪೂಜೆಯನ್ನು ಮಾಡಿದ್ದರು. ಮಠದ ಕಟ್ಟಡ ಕಾಮಗಾರಿ ಅರ್ಧಕ್ಕೆ ಬಂದಾಗ ಅವರು ಲಿಂಗೈಕ್ಯರಾದರು. ತರುವಾಯ ಮಠದ ಅಧಿಕಾರ ಹೊಂದಿದ ಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಶ್ರೀಗಳು ಶಿಲಾಮಠದ ಕಾರ್ಯಕ್ಕೆ ವೇಗವನ್ನು ನೀಡಿ, ಮುರ್ಡೇಶ್ವರದಿಂದ ಶಿಲ್ಪಿಗಳನ್ನು ಕರೆಯಿಸಿ ಪೂಜ್ಯ ಗುರುಗಳ ಆಶಯದಂತೆ ಅದನ್ನೊಂದು ಸುಂದರ ಮಠವನ್ನಾಗಿ ರೂಪಗೊಳಿಸಿರುವರು. ಇವುಗಳ ಜೊತೆಗೆ ಶ್ರೀ ಪ್ರೌಢ ದೇವರಾಯ ವಸತಿ ನಿಲಯ ಹಾಗೂ ಶ್ರೀ ಕಪ್ಪಿನ ಚೆನ್ನಬಸವೇಶ್ವರ ಅತಿಥಿ ಗೃಹ ಕಟ್ಟಡ ಕಾಮಗಾರಿಯನ್ನು ಪೂರ್ಣಮಾಡಿದರು.  ಗುರುಗಳು ಮಠಕ್ಕೆ ಮಠಾಧಿಕಾರ ಹೊಂದಿ ಐವತ್ತು ವರ್ಷಗಳು ಕಳೆದ ಸವಿನೆನಪಿಗೆ ಪಟ್ಟಾಧಿಕಾರ ಸುವರ್ಣ ಮಹೋತ್ಸವ ಆಚರಿಸುವ ಯೋಜನೆಯನ್ನು ಕೈಕೊಂಡು 2023 ನವೆಂಬರ್ 20,21ಮತ್ತು 23 ರ ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಶ್ರೀ ಜಗದ್ಗುರು ಡಾ. ಸಂಗನಬಸವ ಸ್ವಾಮಿಗಳ ಪಟ್ಟಾಧಿಕಾರ ಸುವರ್ಣಮಹೋತ್ಸವ ಸಮಾರಂಭವನ್ನು ಐತಿಹಾಸಿಕವಾಗಿಸಿದ್ದಾರೆ.
ಬಸವಪುರಾಣಗಳಿಗೆ ಚಾಲನೆ 
‘ಜ್ಯೋತಿ ಮುಟ್ಟಿದ ಬತ್ತಿಗಳೆಲ್ಲಾ ಜ್ಯೋತಿಯಪ್ಪುದಯ್ಯಾ’ ಎಂಬಂತೆ ಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಸಹ ಗುರುಗಳಂತೆ ಸಾದ್ಯವಾದಷ್ಟು ಬಸವಪುರಾಣಗಳನ್ನು ವಿವಿಧ ಭಾಗದಲ್ಲಿ ಹಮ್ಮಿಕೊಂಡು ಬಸವಾದಿ ಶರಣರ ಜೀವನ ಮೌಲ್ಯಗಳನ್ನು, ಕಾಯಕ-ದಾಸೋಹ ಸಿದ್ಧಾಂತಗಳನ್ನು ಜನಮಾನಸಕ್ಕೆ ಕೊಂಡೊಯ್ಯುವ ಯೋಜನೆ ಆರಂಭಿಸಿದ್ದಾರೆ. ತಾವು ಮಠದ ಅಧಿಕಾರ ಹೊಂದಿದ ಕೆಲವೇ ತಿಂಗಳಲ್ಲಿ ಗದಗ ಮಹಾನಗರದ ಶ್ರೀ ಆನಂದಾಶ್ರಮದಲ್ಲಿ ಬಸವಪುರಾಣ ಹಮ್ಮಿಕೊಂಡು ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಪ್ರತಿದಿನ ಹತ್ತು ಸಾವಿರಕ್ಕೂ ಅಧಿಕ ಕೇಳುಗರು ಜಿಲ್ಲೆಯ ಮೂಲೆಮೂಲೆಗಳಿಂದ ಬಂದು ಬಸವಪುರಾಣದ ಸವಿಯನ್ನು ಉಂಡಿದ್ದು ಬಸವ ಮಹಿಮೆಯಾಗಿದೆ. ನಂತರ  ಗಜೇಂದ್ರಗಡ ಪಟ್ಟಣದಲ್ಲಿ 25.11.2024 ರಿಂದ 26.12.2024ರವರೆಗೆ ಬಸವಪುರಾಣ ಜರುಗಿಸಿ ಅಭೂತಪೂರ್ವಗೊಳಿಸಿದ್ದಾರೆ. ಬಸವಪುರಾಣದ ಮಹಿಮೆಯೇ ಹಾಗೆ ಕೇಳುಗರನ್ನು ತನ್ನತ್ತ ಬಹುಬೇಗ ಸೆಳೆದುಬಿಡುತ್ತದೆ. ಅಖಂಡ 31 ದಿನಗಳ ಕಾಲ ನಡೆದ ಪ್ರವಚನದಲ್ಲಿ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಬಸವಾಭಿಮಾನಿಗಳು, ಸುಶಿಕ್ಷಿತ-ಸುಸಂಸ್ಕೃತ ಭಕ್ತರು, ಅಕ್ಕನಬಳಗದ ತಾಯಂದಿರು ಹಾಗೂ ಗಜೇಂದ್ರಗಡದ ಸುತ್ತಮುತ್ತಣ ಹತ್ತಾರು ಗ್ರಾಮಗಳ ಸದ್ಭಕ್ತರು ಪ್ರತಿದಿನ ಅಪಾರ ಸಂಖ್ಯೆಯಲ್ಲಿ ಆಗಮಿಸಿ ಬಸವಪುರಾಣದ ಪ್ರವಚನದ ವಚನಾಮೃತವನ್ನು ಸವಿದು ಪುನೀತರಾಗಿರುವರು. ಪ್ರವಚನದಲ್ಲಿ ನಿತ್ಯ ಒಂದೊಂದು ಗ್ರಾಮದ ಭಕ್ತರು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಬಸವಬುತ್ತಿಯನ್ನು ಉತ್ಸವದ ಮೂಲಕ ತಂದು ಪ್ರಸಾದ ಮಾಡಿಸುತ್ತಿದ್ದ ಪ್ರಸಂಗವಂತೂ ಭಕ್ತಿಯ ಪರಾಕಾಷ್ಟೆಯನ್ನು ಮತ್ತೊಮ್ಮೆ ನಾಡಿಗೆ ತೋರ್ಪಡಿಸಿದ ಸಂದರ್ಭದಂತಿದೆ.
ಶಾಖಾಮಠಗಳ ಜೀಣೋದ್ಧಾರ ಮತ್ತು ಉತ್ತರಾಧಿಕಾರಿಗಳಿ ಮಠಾಧಿಕಾರ 
ಹೊಸಪೇಟೆ ಮಠದಂತೆ ಕುರುಗೋಡು, ಬೂದಗುಂಪ, ಶ್ರೀಧರಗಡ್ಡೆ, ಸೋಮಸಮುದ್ರ ಹಾಗೂ ದರೂರು ಶಾಖಾಮಠಗಳನ್ನು ಸುಂದರವಾಗಿ ನವೀಕರಿಸಿ ಎಲ್ಲ ಮಠಗಳನ್ನು ಅಭಿವೃದ್ದಿಪಡಿಸಿದ್ದಾರೆ. ಹಾಗೂ ಗುರುಗಳಿಂದ ಶಾಖಾಮಠಗಳಿಗೆ ನಿಯೋಜಿತವಾಗಿದ್ದ ದರೂರು, ಗರಗ ನಾಗಲಾಪುರ-ಕುರುಗೋಡು, ಬೂದಗುಂಪ, ಸೋಮಸಮುದ್ರ ಶಾಖಾಮಠಗಳ ಉತ್ತರಾಧಿಕಾರಿಗಳಿಗೆ ಹಂತಹಂತವಾಗಿ ಪಟ್ಟಾಧಿಕಾರವನ್ನು ಜರುಗಿಸಿ, ಆಯಾ ಶಾಖಾ ಮಠಗಳ ಸಂಪೂರ್ಣ ಜವಾಬ್ದಾರಿಯನ್ನು ನೀಡಿ, ಎಲ್ಲ ಮಠಗಳಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ದಾಸೋಹ ಕಾರ್ಯಕಲಾಪಗಳು ಜರುಗುವಂತೆ ವ್ಯವಸ್ಥೆಯನ್ನು ಮಾಡಿದ್ದಾರೆ. ಕೊನೆಯವರಾಗಿ ಉಳಿದುಕೊಂಡ ಶ್ರೀಧರಗಡ್ಡೆ ಶಾಖಾಮಠದ ಉತ್ತರಾಧಿಕಾರಿಗಳಿಗೂ ಪಟ್ಟಾಧಿಕಾರ ನೆರವೇರಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ಧಾರ್ಮಿಕ ಕಾರ್ಯಗಳು
ಹೊಸಪೇಟೆ ಶ್ರೀಮಠದ ಸರ್ವಧರ್ಮ ಸಮನ್ವಯ ರಥೋತ್ಸವ, ಹಾಲಕೆರೆ ಬೆಳ್ಳಿ ರಥೋತ್ಸವ-ಜಾತ್ರಾಮಹೋತ್ಸವ, ಪುಣ್ಯಸ್ಮರಣೋತ್ಸವ ಹಾಗೂ ಎಲ್ಲ ಶಾಖಾಮಠಗಳಲ್ಲಿ ಪ್ರತಿ ವರುಷ ನಡೆಯುವ ಜಾತ್ರೆ, ಸಭೆ ಸಮಾರಂಭ, ಮುತ್ತೈದೆಯರಿಗೆ ಉಡಿ ತುಂಬುವ ಸಮಾರಂಭ, ಹಿರಿಯ ಸಾಧಕರ ಸನ್ಮಾನ ಕಾರ್ಯಕ್ರಮ, ವಿಚಾರಗೋಷ್ಠಿಗಳು, ಶಿವಾನುಭವ ಸಂಪದ, ಬಸವ ಜಯಂತಿ ಆಚರಣೆ ಮತ್ತು ಉಚಿತ ಸಾಮೂಹಿಕ ವಿವಾಹಗಳು, ಹಂಪಿ ಜಾತ್ರಾಕಾಲದಲ್ಲಿ ಪ್ರಸಾದ ವಿತರಣೆ, ಶ್ರೀ ಹಾನಗಲ್ಲ ಕುಮಾರೇಶ್ವರ ಜಯಂತಿ ಸಮಾರಂಭ ಮುಂತಾದ ಧಾರ್ಮಿಕ ಕಾರ್ಯಗಳನ್ನು ಮೂಲ ಮಠ ಮತ್ತು ಎಲ್ಲ ಶಾಖಾ ಮಠಗಳಲ್ಲಿ ಯಶಸ್ವಿಯಾಗಿ ಆಯೋಜಿಸುತ್ತ ಬಂದಿದ್ದಾರೆ. ಹಾಲಕೆರೆ ಜಾತ್ರಾ ಮಹೋತ್ಸವಕ್ಕೆ ಅಕ್ಷರಜಾತ್ರೆ ಎಂಬ ಹೊಸ ರೂಪವನ್ನು ನೀಡಿ ಜಾತ್ರೆಯನ್ನು ಕೇವಲ ಅದ್ಯಾತ್ಮಿಕ ಚಿಂತನೆಗಷ್ಟೆ ಸೀಮಿತಗೊಳಿಸದೇ ವಿದ್ಯಾರ್ಥಿಕೇಂದ್ರಿತಗೊಳಿಸಿದ್ದಾರೆ.
ಹೇಮಕೂಟ ತ್ರೈಮಾಸಿಕ ಪತ್ರಿಕೆ ಪುನಶ್ಚೇತನ
1975ರಲ್ಲಿ ಪ್ರಾರಂಭಗೊಂಡ ಶ್ರೀಮಠದ ಹೇಮಕೂಟ ನಿಯತಕಾಲಿಕೆ ಕಾರಣಾಂತರಗಳಿಂದ ತನ್ನ ಸಾಧನಾಯಾಣವನ್ನು ನಿಲ್ಲಿಸಿತ್ತು. ಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಅಧಿಕಾರ ಹೊಂದಿದ ಮರುವರ್ಷವೇ ಅದನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ 2024 ಮೇ 10ರ ಬಸವಜಯಂತಿಯ ಶುಭದಿನದಂದು ತ್ರೈಮಾಸಿಕ ರೂಪದಲ್ಲಿ ಹೊರತಂದಿದ್ದಾರೆ. ಈ ಪತ್ರಿಕೆ ಮುನ್ನಿನಂತೆ ತನ್ನ ಅಲ್ಪಸಮಯದಲ್ಲಿಯೇ ನಾಡಿನ ಓದುಗರ, ಸಹೃದಯರ, ಮಠಾಧಿಪತಿಗಳ ಗಮನಸೆಳೆದು ಉತ್ತಮ ಸಂಶೋಧನಾತ್ಮಕ ಲೇಖನಗಳನ್ನೊಳಗೊಂಡು ತನ್ನ ಆಶಯವನ್ನು ಮುಂದುವರೆಸಿದೆ. ಇದರ ಜೊತೆಗೆ ಕನ್ನಡ ಸಾಹಿತ್ಯದ ಹಲವಾರು ಉತ್ತಮ ಗ್ರಂಥಗಳನ್ನು ಪ್ರಕಾಶಿಸುವ ಮೂಲಕ ಸಾಹಿತ್ಯಿಕ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.
ಶೈಕ್ಷಣಿಕ ಕಾರ್ಯಗಳು-ಪ್ರಸಾದ ನಿಲಯಗಳು
ಶ್ರೀ ಕೊಟ್ಟೂರುಸ್ವಾಮಿ ಕಲ್ಯಾಣ ಕೇಂದ್ರದ ಅಡಿಯಲ್ಲಿ ನಡೆಯುತ್ತಿರುವ ಹದಿನೈದು ವಿವಿಧ ಶಾಲಾ ಕಾಲೇಜುಗಳನ್ನು, ವಸತಿ ಮತ್ತು ಪ್ರಸಾದ ನಿಲಯಗಳನ್ನು ಹಾಗೂ ಶ್ರೀ ಅನ್ನದಾನ ವಿಜಯಯ ವಿದ್ಯಾಪ್ರಸಾರಕ ಸಮಿತಿ ನರೇಗಲ್ಲದ ಇಪ್ಪತ್ತಕ್ಕೂ ಹೆಚ್ಚಿನ ವಿದ್ಯಾಸಂಸ್ಥೆಗಳನ್ನು ವಸತಿ ಮತ್ತು ಪ್ರಸಾದ ನಿಲಯಗಳನ್ನು ಮುತುವರ್ಜಿಯಿಂದ ಮುನ್ನೆಡೆಸುತ್ತ ಬಂದಿದ್ದಾರೆ. ಶಾಲಾ ಕಾಲೇಜುಗಳಿಗೆ ಮತ್ತು ಬಡ ಮಕ್ಕಳ ಪ್ರಸಾದ ನಿಲಯಗಳಿಗೆ ಆರ್ಥಿಕ ತೊಂದರೆ ಉಂಟಾದಾಗ ತಮ್ಮ ಪಾದ ಕಾಣಿಯ ಮೂಲಕ ಅವುಗಳನ್ನು ಮುನ್ನಡೆಸುತ್ತಿರುವುದು ಶ್ರೀಗಳ ಶೈಕ್ಷಣಿಕ ಮತ್ತು ಸಾಮಾಜಿಕ ಕಳಕಳಿಯನ್ನು ತೋರ್ಪಡಿಸುತ್ತದೆ.
ಹೀಗೆ ಪೂಜ್ಯ ಗುರುಗಳು ಪ್ರಾರಂಭಿಸಿ ಬೆಳೆಸಿದ ವಿದ್ಯಾಸಂಸ್ಥೆಗಳ ಜೊತೆಗೆ ಪ್ರಸ್ತುತ ಕಾಲದ ಬೇಡಿಕೆಗೆ ತಕ್ಕಂತ ಕೋರ್ಸ್ಗಳನ್ನು ಪ್ರಾರಂಭಿಸುವ ತವಕದಲ್ಲಿದ್ದಾರೆ. ಚಿಕ್ಕಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರಯುತ ಶಿಕ್ಷಣ ನೀಡುವ ಕಾರಣಕ್ಕೆ ಹೊಸಪೇಟೆ ಮಠದ ಆವರಣದಲ್ಲಿ 2024ರಲ್ಲಿ ಹೇಮಕೂಟ ಕಿಂಡರ್ ಶಾಲೆಯನ್ನು ಆರಂಭಿಸಿರುವರು. ನರೇಗಲ್ಲದಲ್ಲಿ ಅಧ್ಯಯನ ಮಾಡುವ ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ವಸತಿ ನಿಲಯಗಳ ಸಮುಚ್ಚಯಗಳನ್ನು ನಿರ್ಮಿಸಿದ್ದಾರೆ. ಮೊನ್ನೆ ಗದಗ ಮಹಾನಗರದಲ್ಲಿ ಸುಸಜ್ಜಿತ ಮೂಲ ಸೌಲಭ್ಯಗಳನ್ನು ಒಳಗೊಂಡ ಪದವಿಪೂರ್ವ ಮಹಾವಿದ್ಯಾಲಯ ಕಟ್ಟಡವನ್ನು ನಿರ್ಮಿಸಿ ಉದ್ಘಾಟಿಸಿದ್ದಾರೆ. ಧಾರ್ಮಿಕ ಸಾಮಾಜಿಕ ಕಾರ್ಯಗಳ ಜೊತೆಗೆ ಶೈಕ್ಷಣಿಕ ಕಾರ್ಯವೂ ಒಂದು ಮಠದ ಅವಿಭಾಜ್ಯ ಅಂಗವೆಂದು ಹಗಲಿರಳು ಕಾರ್ಯವೆಸಗುತ್ತಿದ್ದಾರೆ. ಹೊಸಪೇಟೆ ಮತ್ತು ಬಳ್ಳಾರಿ ಉಚಿತ ವಸತಿ ನಿಲಯಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ಮತ್ತು ವಸತಿಯನ್ನು ನೀಡಿ ಬಡ ಮಕ್ಕಳ ಜ್ಞಾನಾರ್ಜನೆಗೆ ಕಾರಣರಾಗಿದ್ದಾರೆ. ಹೊಸಪೇಟೆ ನಗರದಲ್ಲಿ ಬಡ ಮತ್ತು ಪ್ರತಿಭಾ ಸಂಪನ್ನ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕತೆ ಬೆಳೆಸುವಂತ ಉತ್ತಮದ ಕಾಲೇಜ್‌ನ್ನು ಸ್ಥಾಪಿಸಬೇಕೆಂಬ ಕನಸು ಕಂಡಿದ್ದಾರೆ. ಅದು ಕೂಡ ಆದಷ್ಟು ಶೀಘ್ರವಾಗಿ ಈಡೇರಿದರೆ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಬಳ್ಳಾರಿ ಶ್ರೀಮಠದಲ್ಲಿ ನೂತನ ರಥ ನಿರ್ಮಾಣ ಮತ್ತು ಶಿವಾನುಭವ ಆರಂಭ
ಶ್ರೀ ಹಾನಗಲ್ಲ ಕುಮಾರೇಶ್ವರ ಜಯಂತಿಯನ್ನು ಬಳ್ಳಾರಿ ಮಠದಲ್ಲಿ ಪ್ರತಿವರ್ಷವೂ ವಿಧಾಯಕವಾಗಿ ಆಚರಿಸುತ್ತ ಬಂದಿರುವರು. ಈ ಮಠಕ್ಕೂ ಒಂದು ರಥ ಸಿದ್ಧಪಡಿಸಿ ಹಾಲಕೆರೆ ಮಠದಂತೆ ಇಲ್ಲೂ ಮಹಿಳೆಯರಿಂದ ರಥ ಎಳೆದು ಮಹಿಳೆಗೆ ಪ್ರಾಧಾನ್ಯತೆ ನೀಡುವ ಮಹಾತ್ವಾಕಾಂಕ್ಷೆಯಿಂದ ನೂತನ ರಥ ನಿರ್ಮಿಸಿ 2024 ಸೆಪ್ಟೆಂಬರ್ 29ರ ಸಾಯಂಕಾಲ 5.30 ಕ್ಕೆ ಲೋಕಾರ್ಪಣೆಗೊಳಿಸಿದ್ದಾರೆ. ರಥದಲ್ಲಿ ಶ್ರೀ ಹಾನಗಲ್ಲ ಕುಮಾರೇಶ್ವರ ಭಾವಚಿತ್ರ ಸ್ಥಾಪಿಸಿ ರಥೋತ್ಸವ ಮಾಡುವುದು ವಿಶೇಷವಾಗಿದೆ.ಬಳ್ಳಾರಿ ಮಠದಲ್ಲೂ ಆಧ್ಯಾತ್ಮಿಕ ಕಾರ್ಯಕಲಾಪಗಳನ್ನು ನಿರಂತರಗೊಳಿಸುವ ಕಾರಣದಿಂದ 2025 ಜನವರಿ ತಿಂಗಳ 22ನೇ ತಾರೀಖಿನಂದು ಶಿವಾನುಭವ ಸಂಪದಕ್ಕೆ ಚಾಲನೆ ನೀಡಿದ್ದಾರೆ. ಇದು ಪ್ರತಿ ತಿಂಗಳು 17 ರಂದು ನೆರವೇರುತ್ತದೆ.
ಶರಣ ಸಂಸ್ಕೃತಿ-ಸಂಸ್ಕಾರ ಶಿಬಿರ ಆಯೋಜನೆ
ಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಮಠದ ಜವಾಬ್ದಾರಿ ಹೊಂದಿದಾಗಿನಿಂದ ಒಂದಿಲ್ಲೊಂದು ಸಮಾಜಪರ ಯೋಜನೆಗಳನ್ನು ಆಯೋಜಿಸುತ್ತ ಶರಣ ಪರಂಪರೆಯನ್ನು ನಾಡವರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಲಿರುವುದು ಎಲ್ಲರಿಗೂ ತಿಳಿದ ವಿಷಯ. ಇದರ ಮುಂದುವರೆದ ಭಾಗವಾಗಿ ಮಕ್ಕಳಿಗೆ ಬಾಲ್ಯದಲ್ಲಿಯೇ ಬಸವಾದಿ ಶರಣರು ನಿರೂಪಿಸಿದ ಕಾಯಕ, ದಾಸೋಹ ಹಾಗೂ ಪ್ರಸಾದದ ಮಹತ್ವ, ವಚನ ಸಾಹಿತ್ಯದ ಪರಿಚಯ ಮಾಡಿಸುವುದು ಅಗತ್ಯವಾಗಿದೆ. ಮಕ್ಕಳು ಶಾಲಾ ರಜೆಯ ಅವಧಿಯಲ್ಲಿ ಕಾಲಹರಣ ಮಾಡುವ ಬದಲಾಗಿ ನಮ್ಮ ಪರಂಪರೆಯ ಬಗೆಗೆ ತಿಳಿದುಕೊಳ್ಳಬೇಕೆಂದು ಹೊಸಪೇಟೆ ಶ್ರೀಮಠದಲ್ಲಿ ಶರಣ ಸಂಸ್ಕೃತಿ-ಸಂಸ್ಕಾರ ಶಿಬಿರವನ್ನು 2025 ಏಪ್ರಿಲ್ 13 ರಿಂದ 22ರವರೆಗೆ ಹಮ್ಮಿಕೊಂಡಿದ್ದರು. ಶಿಬಿರವು ಪ್ರತಿದಿನ ಇಷ್ಟಲಿಂಗ ಪೂಜೆ ಮತ್ತು ವಚನ ಪಠಣದೊಂದಿಗೆ ಆರಂಭವಾಗುತ್ತಿತ್ತು. ನೂರು ವಿದ್ಯಾರ್ಥಿಗಳಿಗೆಂದು ಆರಂಭಿಸಿದ್ದ ಶಿಬಿರದಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಜಿಲ್ಲೆಗಳಿಂದ ಆಗಮಿಸಿ ಇದರ ಪ್ರಯೋಜನ ಪಡೆದಿದ್ದು ಸಂಸ್ಕಾರ ಶಿಬಿರದ ಹಿರಿಮೆಯಾಗಿದೆ.
ಹೀಗೆ ಪೂಜ್ಯಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಮಠಾಧಿಕಾರದ ಅಲ್ಪ ಸಮಯದಲ್ಲಿ ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತ ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಸ್ಥಾಪಿಸುವ ಮತ್ತು ಪ್ರಜ್ಞಾಪೂರ್ವಕ ಬದುಕನ್ನು ರಚಿಸುವ ನಿಟ್ಟಿನಲ್ಲಿ ಜಾತ್ಯತೀತ ಬದುಕಿನ ಮಹತ್ವವನ್ನು ನಾಡಿಗೆ ಅರುಹುತ್ತಿದ್ದಾರೆ. ಬಸವಾದಿ ಶರಣರ ಕಾಯಕ-ದಾಸೋಹ ತತ್ವಗಳನ್ನು ನಿಜಾಚರಣೆಗೆ ತಂದು, ಜನರು ಸತ್ಯಶುದ್ಧ ಕಾಯಕದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ. ಇನ್ನೂ ಹಲವಾರು ಸಮಾಜಪರ ಯೋಜನೆಗಳ ಕನಸು ಕಂಡಿದ್ದಾರೆ. ಎಲ್ಲವೂ ಸಾಕಾರವಾಗಿ ಸಮಾಜ ಅಭಿವೃದ್ಧಿಯಾಗಲೆಂದು ಪೂಜ್ಯರ ಜನ್ಮದಿನದ ಸಂದರ್ಭದಲ್ಲಿ ಪ್ರಾರ್ಥಿಸುವೆ.
• ಶರಣಯ್ಯ ಎಸ್. ಚರೇದ , ಲೇಖಕರು, ಹೊಸಪೇಟೆ

 

ಜಾಹೀರಾತು
error: Content is protected !!