October 23, 2026

Hampi times

Kannada News Portal from Vijayanagara

ಸಕ್ಕರೆ ಕಾರ್ಖಾನೆ ಸ್ಥಾಪಿಸಿದರೆ ರೈತರ ಮನೆಯಲ್ಲಿ ನಿಮ್ಮ ಫೋಟೋ ಹಾಕ್ತಾರೆ: ಶಾಸಕ ಎಚ್.ಆರ್.ಗವಿಯಪ್ಪ ಮನೆ ಎದುರು ರೈತರ ನುಡಿ

ಹೊಸಪೇಟೆ: ಚುನಾವಣೆ ವೇಳೆ ಕೊಟ್ಟ ಮಾತನ್ನು ಯಾವುದೇ ಕಾರಣಕ್ಕೂ ಹುಸಿಯಾಗಿಸಬೇಡಿ. ಕ್ಷೇತ್ರದ ಒಟ್ಟು ಮತದಾರರಲ್ಲಿ ಅರ್ಧದಷ್ಟು ಮಂದಿ ರೈತರೇ ಇದ್ದಾರೆ. ಆಡಿದ ಮಾತಿನಂತೆ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದರೆ, ಈ ಭಾಗದ ಪ್ರತಿಯೊಬ್ಬ ರೈತನೂ ತನ್ನ ಮನೆಯಲ್ಲಿ ನಿಮ್ಮ ಫೋಟೋ ಹಾಕುತ್ತಾರೆ. ನಿಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ರೈತರ ನಂಬಿಕೆಯನ್ನು ಹುಸಿ ಮಾಡಬೇಡಿ ಎಂದು ರೈತರು ನುಡಿದರು.

ವಿಜಯನಗರ ಕ್ಷೇತ್ರದ ಶಾಸಕ ಎಚ್.ಆರ್. ಗವಿಯಪ್ಪ ಅವರ ಮನೆ ಎದುರು ಭಾನುವಾರ ಧರಣಿ ಕುಳಿತಿದ್ದ ವಿವಿಧ ಸಂಘಟನೆಗಳ ರೈತ ಮುಖಂಡರು ಅತ್ಯಂತ ಗದ್ಗದಿತ ಹಾಗೂ ಆಕ್ರೋಶಭರಿತ ಧ್ವನಿಯಲ್ಲಿ ಮನವಿ ಮಾಡಿದರು. ಹೊಸಪೇಟೆಯಲ್ಲಿ ನೂತನ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಆಗ್ರಹಿಸಿ ‘ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನಾ ಹೋರಾಟ ಸಮಿತಿ’ ನೇತೃತ್ವದಲ್ಲಿ ನಡೆದ ಬೃಹತ್ ಉಪವಾಸ ಸತ್ಯಾಗ್ರಹದಲ್ಲಿ ಮುಖಂಡರ ಈ ಮಾತುಗಳು ಇಡೀ ಸಭಿಕರ ಗಮನ ಸೆಳೆದವು.

ಕಾರ್ಖಾನೆ ಮುಚ್ಚಿದ್ದರಿಂದ ಸಂಕಷ್ಟಗಳ ಸರಮಾಲೆ: ರೈತರ ತೀವ್ರ ಆತಂಕ

ಪ್ರತಿಭಟನೆಯಲ್ಲಿ ಧ್ವನಿ ಎತ್ತಿದ ಮುಖಂಡರು, ಸಕ್ಕರೆ ಕಾರ್ಖಾನೆ ಇಲ್ಲದಿರುವುದರಿಂದ ಈ ಭಾಗದ ಗ್ರಾಮೀಣ ಬದುಕು ಸಂಪೂರ್ಣ ಹಳಿ ತಪ್ಪಿದೆ ಎಂದು ಎಚ್ಚರಿಸಿದರು. “ಕಾರ್ಖಾನೆ ಸ್ಥಗಿತಗೊಂಡ ನಂತರ ಯುವಕರಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಜನ ಗುಳೆ ಹೋಗುವುದು ಹೆಚ್ಚಾಗಿದ್ದು, ದನಕರುಗಳಿಗೆ ಮೇವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬೇಸತ್ತು ಅನೇಕ ರೈತ ಕುಟುಂಬಗಳು ಕೃಷಿಯಿಂದಲೇ ವಿಮುಖವಾಗುತ್ತಿವೆ. ಅನ್ನದಾತನೇ ಕೃಷಿ ಕೈಬಿಟ್ಟರೆ ಭವಿಷ್ಯದಲ್ಲಿ ಇಡೀ ಸಮಾಜವೇ ಅನ್ನಕ್ಕೂ ಪರದಾಡುವ ದುಸ್ಥಿತಿ ಬರಲಿದೆ. ಅಷ್ಟೇ ಅಲ್ಲದೆ, ಕೆಲಸ ಹುಡುಕಿಕೊಂಡು ಬೇರೆಡೆ ಹೋಗುವ ಮಹಿಳಾ ಕೂಲಿ ಕಾರ್ಮಿಕರ ಮೇಲೂ ದೌರ್ಜನ್ಯಗಳು ನಡೆಯುತ್ತಿವೆ. ಹೊಸಪೇಟೆಯಲ್ಲಿ ಮತ್ತೆ ಸಕ್ಕರೆ ಕಾರ್ಖಾನೆ ಆರಂಭವಾದರೆ ಸಾವಿರಾರು ಜನರಿಗೆ ನೇರ ಹಾಗೂ ಪರೋಕ್ಷವಾಗಿ ಉದ್ಯೋಗ ದೊರೆತು, ಗ್ರಾಮೀಣ ಆರ್ಥಿಕತೆಗೆ ಮರುಜೀವ ಸಿಗಲಿದೆ” ಎಂದು ವಸ್ತುಸ್ಥಿತಿಯನ್ನು ತೆರೆದಿಟ್ಟರು.

82 ವರ್ಷಗಳ ಇತಿಹಾಸವಿರುವ ಕಾರ್ಖಾನೆ:

ಬ್ರಿಟಿಷರ ಆಡಳಿತಾವಧಿಯಲ್ಲಿ, ತುಂಗಭದ್ರಾ ಜಲಾಶಯ ನಿರ್ಮಾಣಕ್ಕೂ ಮುನ್ನವೇ 1934ರಲ್ಲಿ ಕೈಗಾರಿಕೋದ್ಯಮಿ ತಾಂಡವ ಮೊದಲಿಯಾರ್ ಅವರಿಂದ ಆರಂಭಗೊಂಡು, ಬಳಿಕ 1945ರಲ್ಲಿ ಮೊರಾರ್ಕಾ ವಂಶಸ್ಥರ ಒಡೆತನದ ‘ಐ.ಎಸ್.ಆರ್. ಲಿಮಿಟೆಡ್’ ಹೆಸರಿನಲ್ಲಿ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ತಲೆಎತ್ತಿತ್ತು. ಹೊಸಪೇಟೆ, ಹರಪನಹಳ್ಳಿ, ಕೂಡ್ಲಿಗಿ, ಹಡಗಲಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಸೇರಿದಂತೆ ನಾನಾ ತಾಲೂಕುಗಳ ಕಬ್ಬು ಬೆಳೆಗಾರರು ಈ ಕಾರ್ಖಾನೆಯನ್ನೇ ಅವಲಂಬಿಸಿದ್ದರು. 1934-35ರಲ್ಲಿ ಪ್ರತಿ ಟನ್‌ಗೆ ₹12 ನಿಗದಿಯಾಗಿ 4,699 ಟನ್ ಕಬ್ಬು ಸರಬರಾಜಾಗಿದ್ದರೆ, 2015-16ರ ವೇಳೆಗೆ ರೈತರು ಬರೋಬ್ಬರಿ 5 ಲಕ್ಷ ಟನ್ ಕಬ್ಬು ಪೂರೈಕೆ ಮಾಡಿದ್ದರು. ಆದರೆ ದರ ನಿಗದಿ ಹಾಗೂ ಬಾಕಿ ಪಾವತಿ ವಿವಾದ ಬಗೆಹರಿಯದೆ 82 ವರ್ಷಗಳ ಸುದೀರ್ಘ ಇತಿಹಾಸವಿದ್ದ ಈ ಕಾರ್ಖಾನೆ 2016-17ರಲ್ಲಿ ಬಾಗಿಲು ಮುಚ್ಚಿತು.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರದಿಂದಲೇ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಎಚ್.ಆರ್. ಗವಿಯಪ್ಪ ಅವರು ಮತದಾರರಿಗೆ ಭರವಸೆ ನೀಡಿದ್ದರು. ಆದರೆ ವರ್ಷಗಳು ಕಳೆದರೂ ಕಾರ್ಖಾನೆ ಆರಂಭವಾಗದ ಹಿನ್ನೆಲೆಯಲ್ಲಿ, ಸುಮಾರು 52ಕ್ಕೂ ಹೆಚ್ಚು ಸಂಘಟನೆಗಳು ಒಗ್ಗೂಡಿ ಶಾಸಕರ ಮನೆ ಎದುರು ಧರಣಿ ಕುಳಿತು ನ್ಯಾಯಯುತ ಬೇಡಿಕೆ ಈಡೇರಿಕೆಗೆ ಪಟ್ಟುಹಿಡಿದವು.

ಶಾಸಕರ ಭರವಸೆ, ಸತ್ಯಾಗ್ರಹ ಅಂತ್ಯ:

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತ ಮುಖಂಡರಿಂದ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಚ್.ಆರ್. ಗವಿಯಪ್ಪ ಅವರು, “ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈಗ ಯಾವುದೇ ಹೊಸ ಭರವಸೆಯನ್ನು ಅಧಿಕೃತವಾಗಿ ಪ್ರಕಟಿಸಲು ಸಾಧ್ಯವಿಲ್ಲ. ನವೆಂಬರ್ 10 ರಂದು ರೈತರೊಂದಿಗೆ ಮಹತ್ವದ ಸಭೆ ನಡೆಸಿ, ಸಕ್ಕರೆ ಕಾರ್ಖಾನೆ ಸ್ಥಾಪನೆ ಸಂಬಂಧ ಸರ್ಕಾರ ಹಾಗೂ ಜನಪ್ರತಿನಿಧಿಗಳ ಮಟ್ಟದಲ್ಲಿ ಇದುವರೆಗೆ ನಡೆದಿರುವ ಎಲ್ಲಾ ಪ್ರಯತ್ನಗಳನ್ನು ರೈತರ ಮುಂದಿಡಲಾಗುವುದು. ರೈತರ ಅಭಿಪ್ರಾಯ ಪಡೆದೇ ಮುಂದಿನ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು. ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗುವುದು ಖಚಿತವಾಗಿದ್ದು, ರೈತರು ತಾಳ್ಮೆಯಿಂದ ಇರಬೇಕು” ಎಂದು ಮನವಿ ಮಾಡಿದರು.

ಶಾಸಕರು ನೀಡಿದ ಈ ಭರವಸೆಯ ಮೇರೆಗೆ ಮುಖಂಡರು ಸಮಾಧಾನಗೊಂಡು ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಕೈಬಿಟ್ಟರು. ನವೆಂಬರ್ 10 ರ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಸಿದರು.

ಈ ಉಪವಾಸ ಸತ್ಯಾಗ್ರಹ ಹೋರಾಟದಲ್ಲಿ  ನಗರಸಭೆ ಸದಸ್ಯ ಎಲ್.ಎಸ್.ಆನಂದ, ಕರ್ನಾಟಕ ಪ್ರಾಂತ ರೈತ ಸಂಘದ ಎನ್. ಯಲ್ಲಾಲಿಂಗ, ಕರ್ನಾಟಕ ರಾಜ್ಯ ರೈತಸಂಘದ ಎಸ್. ರುದ್ರಪ್ಪ, ಟಿ. ನಾಗರಾಜ್ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿ. ಕರೆಹನುಮಂತ, ಮುಖಂಡರಾದ ಖಾಜಾ ಹುಸೇನ್ ನಿಯಾಜಿ, ದಲಿತ ಹಕ್ಕುಗಳ ಸಮಿತಿಯ ಎಮ್. ಜಂಬಯ್ಯನಾಯಕ, ಸಿಪಿಐಎಂನ ಆಲ್ ಭಾಸ್ಕರ್ ರೆಡ್ಡಿ, ಅಂಬೇಡ್ಕರ್ ಸಂಘ ಭೀಮಾ ಮಾರ್ಗದ ರಾಮಚಂದ್ರಬಾಬು, ಜಾಗೃತ ನಾಯಕ ಬಳಗದ ದುರುಗಪ್ಪ ಪುಜಾರ್, ಕೆ. ಶ್ರೀನಿವಾಸ, ಸಿಐಟಿಯುನ ಕೆ.ಎಮ್. ಸಂತೋಷ್ ಕುಮಾರ್, ಕಟ್ಟಡ ಕಾರ್ಮಿಕ ಸಂಘಟನೆಯ ಎಮ್. ಗೋಪಾಲ, ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ದೇವರಮನಿ ಶ್ರೀನಿವಾಸ, ಕಿನ್ನಾಳ ಹನುಮಂತ, ಎಸ್.ಎಸ್. ಚಂದ್ರಶೇಖರ್, ಕುರುಬ ಸಮಾಜದ ಕೋಟ್ರೇಶ್, ಗಂಗಾಮಾತ ಸಮಾಜದ ಗಾಳೆಪ್ಪ, ಭೋವಿ ಸಮಾಜದ ವಿ. ಬಾಬು, ಡಿವೈಎಫ್ಐ ಸಂಘಟನೆಯ ತಿರುಕಪ್ಪ, ಈ. ಮಂಜುನಾಥ, ಎಸ್ಎಫ್ಐ ಸಂಘಟನೆಯ ಶಿವಾರೆಡ್ಡಿ, ಪವನ್ ಕುಮಾರ್ ಸೇರಿದಂತೆ ನೂರಾರು ರೈತರು ಹಾಗೂ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

Please follow and like us: