
ದೇಶದ ಅಭಿವೃದ್ಧಿಯನ್ನು ಅಳೆಯುವುದು ಎತ್ತರದ ಕಟ್ಟಡಗಳಿಂದಲೋ, ತಂತ್ರಜ್ಞಾನದ ಬೆಳವಣಿಗೆಯಿಂದಲೋ, ರಾಜಕೀಯ ಘೋಷಣೆಗಳಿಂದಲೋ ಮಾತ್ರ ಸಾಧ್ಯವಿಲ್ಲ. ಹಸಿದ ಹೊಟ್ಟೆಗೆ ಅನ್ನ, ಮಕ್ಕಳಿಗೆ ಪೌಷ್ಟಿಕ ಆಹಾರ, ರೈತನಿಗೆ ನ್ಯಾಯಯುತ ಬೆಲೆ ಹಾಗೂ ಬಡ ಕುಟುಂಬಗಳಿಗೆ ನೆಮ್ಮದಿಯ ಬದುಕು ದೊರೆತಾಗಲೇ ಅಭಿವೃದ್ಧಿಗೆ ನಿಜವಾದ ಅರ್ಥ ಬರುತ್ತದೆ. ಆದರೆ ಜಾಗತಿಕ ಹಸಿವು ಸೂಚ್ಯಂಕದ ಅಂಕಿ-ಅಂಶಗಳು ನಮ್ಮ ಅಭಿವೃದ್ಧಿಯ ಹಾದಿಯಲ್ಲಿರುವ ಗಂಭೀರ ಸವಾಲುಗಳನ್ನು ನೆನಪಿಸುತ್ತವೆ.
ಜಾಗತಿಕ ಹಸಿವು ಸೂಚ್ಯಂಕ–2026ರ ಅಧಿಕೃತ ವರದಿಯ ಪ್ರಕಾರ, 122 ದೇಶಗಳ ಪೈಕಿ ಭಾರತ 100ನೇ ಸ್ಥಾನದಲ್ಲಿದೆ; ಭಾರತದ ಹಸಿವು ಸೂಚ್ಯಂಕದ ಅಂಕ 24.1 ಆಗಿದ್ದು, ‘ಗಂಭೀರ’ ವರ್ಗದಲ್ಲಿದೆ. ದೇಶದ ಜನಸಂಖ್ಯೆಯಲ್ಲಿ ಶೇ. 9.8ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ. 29.3ರಷ್ಟು ಮಕ್ಕಳು ವಯಸ್ಸಿಗೆ ತಕ್ಕ ಎತ್ತರ ಹೊಂದಿಲ್ಲ; ಶೇ. 19ರಷ್ಟು ಮಕ್ಕಳು ಎತ್ತರಕ್ಕೆ ತಕ್ಕ ತೂಕ ಹೊಂದಿಲ್ಲ. ಇದೇ ವಯೋಮಾನದ ಮಕ್ಕಳಲ್ಲಿ ಶೇ. 2.7ರಷ್ಟು ಮಕ್ಕಳು ಐದು ವರ್ಷ ತುಂಬುವ ಮೊದಲೇ ಸಾವನ್ನಪ್ಪುತ್ತಾರೆ. ಇವು ಕೇವಲ ಅಂಕಿ-ಅಂಶಗಳಲ್ಲ; ಆಹಾರ, ಆರೋಗ್ಯ ಮತ್ತು ಪೌಷ್ಟಿಕತೆಯ ಕೊರತೆಯಿಂದ ಸಂಕಷ್ಟ ಎದುರಿಸುವ ಕುಟುಂಬಗಳ ಬದುಕಿನ ವಾಸ್ತವವನ್ನು ಪ್ರತಿಬಿಂಬಿಸುವ ಸೂಚಕಗಳು. .
ಒಂದು ಕಡೆ ಆರ್ಥಿಕ ಪ್ರಗತಿಯ ಮಾತುಗಳು ಮೊಳಗುತ್ತಿದ್ದರೆ, ಮತ್ತೊಂದು ಕಡೆ ಹಸಿವು ಮತ್ತು ಅಪೌಷ್ಟಿಕತೆಯ ಸವಾಲು ಮುಂದುವರಿದಿದೆ. ಈ ಅಂತರವನ್ನು ಪ್ರಶ್ನಿಸುವುದು ದೇಶವಿರೋಧವಲ್ಲ; ಬದಲಾಗಿ ದೇಶದ ಜನರ ಬದುಕಿನ ಬಗ್ಗೆ ಇರುವ ಕಾಳಜಿ. ಅಂಕಿ-ಅಂಶಗಳನ್ನು ನಿರಾಕರಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಅವು ತೋರಿಸುವ ಸವಾಲುಗಳನ್ನು ಒಪ್ಪಿಕೊಂಡು, ಪರಿಹಾರಕ್ಕಾಗಿ ಪರಿಣಾಮಕಾರಿ ನೀತಿಗಳನ್ನು ರೂಪಿಸುವುದೇ ಜವಾಬ್ದಾರಿಯುತ ಆಡಳಿತದ ಲಕ್ಷಣ. ಆದರೆ ಇಂದು ರಾಜಕೀಯ ಚರ್ಚೆಗಳಲ್ಲಿ ಚುನಾವಣಾ ವಿವಾದಗಳು, ಎಸ್ಐಆರ್ (SIR) ಪ್ರಕ್ರಿಯೆ, ಭ್ರಷ್ಟಾಚಾರದ ಆರೋಪಗಳು, ಹಗರಣಗಳು ಮತ್ತು ರಾಜಕೀಯ ಪಕ್ಷಗಳ ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ. ಇಂತಹ ವಿಷಯಗಳ ಬಗ್ಗೆ ಚರ್ಚೆ ನಡೆಯುವುದು ಪ್ರಜಾಪ್ರಭುತ್ವದ ಭಾಗವೇ ಸರಿ. ಆದರೆ ಇವುಗಳ ನಡುವೆ ರೈತನ ಸಂಕಷ್ಟ, ದಿನಗೂಲಿ ಕಾರ್ಮಿಕನ ಬದುಕು, ಬೆಲೆ ಏರಿಕೆ ಮತ್ತು ಬಡವರ ಆಹಾರ ಭದ್ರತೆಯ ಪ್ರಶ್ನೆಗಳು ಮರೆಯಾಗಬಾರದು. ರಾಜಕೀಯದ ಗದ್ದಲದಲ್ಲಿ ಹಸಿದವನ ನೋವು ಕೇಳಿಸದಿದ್ದರೆ, ಆ ರಾಜಕೀಯ ಜನಸೇವೆಯ ಮೂಲ ಉದ್ದೇಶದಿಂದ ದೂರ ಸರಿದಂತೆಯೇ.
ದೇಶದ ಆಹಾರ ಭದ್ರತೆಯ ಕೇಂದ್ರಬಿಂದು ರೈತ. ಬಿಸಿಲು, ಬರ, ಅತಿವೃಷ್ಟಿ ಮತ್ತು ಬೆಳೆನಷ್ಟದ ನಡುವೆಯೂ ಅನ್ನ ಬೆಳೆಯುವ ರೈತನಿಗೆ ತನ್ನ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ಸಿಗದಿದ್ದರೆ, ಕೃಷಿ ವೆಚ್ಚ ಹೆಚ್ಚಾದರೆ, ಪರಿಹಾರ ಮತ್ತು ಬೆಳೆ ವಿಮೆ ಸಕಾಲಕ್ಕೆ ತಲುಪದಿದ್ದರೆ ಅದರ ಪರಿಣಾಮ ಕೃಷಿ ಕುಟುಂಬಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಆಹಾರ ಉತ್ಪಾದನೆ ಮತ್ತು ಪೂರೈಕೆಯ ಮೇಲೆಯೂ ಪರಿಣಾಮ ಬೀರುತ್ತದೆ. ರೈತನ ಬದುಕು ಸುಧಾರಿಸುವುದು ಕೇವಲ ಕೃಷಿ ನೀತಿಯ ಪ್ರಶ್ನೆಯಲ್ಲ; ದೇಶದ ಹಸಿವು ಕಡಿಮೆ ಮಾಡುವ ಕಾರ್ಯತಂತ್ರದ ಅವಿಭಾಜ್ಯ ಭಾಗವಾಗಿದೆ.
ಇನ್ನೊಂದೆಡೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಕುಟುಂಬಗಳ ಬಜೆಟ್ನ್ನು ಕಂಗೆಡಿಸುತ್ತಿದೆ. ದುಡಿದ ಹಣದಲ್ಲಿ ಮನೆ ಬಾಡಿಗೆ, ವಿದ್ಯಾಭ್ಯಾಸ, ಔಷಧಿ ಮತ್ತು ಸಾರಿಗೆ ವೆಚ್ಚಗಳನ್ನು ನಿಭಾಯಿಸಿದ ಬಳಿಕ ಪೌಷ್ಟಿಕ ಆಹಾರಕ್ಕೆ ಸಾಕಷ್ಟು ಹಣ ಉಳಿಯದ ಕುಟುಂಬಗಳಿವೆ. ಹೊಟ್ಟೆ ತುಂಬಿಸುವುದೇ ಸವಾಲಾದಾಗ ಪೌಷ್ಟಿಕ ಆಹಾರವನ್ನು ಆಯ್ಕೆಮಾಡುವುದು ಇನ್ನಷ್ಟು ಕಷ್ಟವಾಗುತ್ತದೆ. ಮಕ್ಕಳ ಬೆಳವಣಿಗೆ, ಮಹಿಳೆಯರ ಆರೋಗ್ಯ ಮತ್ತು ಕುಟುಂಬದ ಒಟ್ಟಾರೆ ಜೀವನಮಟ್ಟದ ಮೇಲೆ ಇದರ ಪರಿಣಾಮ ಬೀರುತ್ತದೆ. ಹೀಗಾಗಿ ಹಸಿವಿನ ಸಮಸ್ಯೆಯನ್ನು ಆಹಾರದ ಲಭ್ಯತೆಯೊಂದರಲ್ಲೇ ನೋಡದೆ, ಜನರ ಖರೀದಿ ಸಾಮರ್ಥ್ಯ, ಉದ್ಯೋಗ, ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಆರೋಗ್ಯ ಸೇವೆಗಳೊಂದಿಗೆ ಜೋಡಿಸಿ ನೋಡಬೇಕು.

ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅಭಿವೃದ್ಧಿಯ ಕನಸು ಬಡತನ ನಿರ್ಮೂಲನೆ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ವಿಜ್ಞಾನ-ತಂತ್ರಜ್ಞಾನದ ಜನಪರ ಬಳಕೆಯನ್ನು ಒಳಗೊಂಡಿತ್ತು. ತಂತ್ರಜ್ಞಾನವು ಜನರ ಬದುಕನ್ನು ಸುಧಾರಿಸಲು ನೆರವಾಗಬೇಕು; ಅದು ಹಸಿವಿನ ಸಮಸ್ಯೆಯನ್ನು ಮುಚ್ಚಿಡುವ ಪರದೆಯಾಗಬಾರದು. ಡಿಜಿಟಲ್ ಸಾಧನೆಗಳು ಎಷ್ಟೇ ದೊಡ್ಡದಾಗಿದ್ದರೂ, ಅವುಗಳ ಪ್ರಯೋಜನ ಹಸಿದ ಕುಟುಂಬದ ತಟ್ಟೆಗೆ ತಲುಪದಿದ್ದರೆ ಅಭಿವೃದ್ಧಿಯ ಗುರಿ ಅಪೂರ್ಣವಾಗಿಯೇ ಉಳಿಯುತ್ತದೆ.
ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ಮಾತು ಇಲ್ಲಿ ಪ್ರಸ್ತುತವಾಗುತ್ತದೆ: “ಲಕ್ಷ ದೀಪಗಳನ್ನು ಹಚ್ಚುವುದಕ್ಕಿಂತ ‘ವೃಕ್ಷ ದೀಪ’ ಹಚ್ಚಿ ಮಣ್ಣು, ನೀರು ಹಾಗೂ ಗಾಳಿಯನ್ನು ಕಲುಷಿತಗೊಳಿಸಬೇಡಿ. ತಂತ್ರಜ್ಞಾನ ಎಷ್ಟೇ ಬೆಳೆದರೂ ಗೂಗಲ್ನಿಂದ ರೊಟ್ಟಿ ಅಥವಾ ಅನ್ನ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ.” ಈ ಮಾತು ಪರಿಸರ ಸಂರಕ್ಷಣೆ ಮತ್ತು ಆಹಾರ ಉತ್ಪಾದನೆಯ ನಡುವಿನ ಸಂಬಂಧವನ್ನು ಮನಗಾಣಿಸುತ್ತದೆ. ಮಣ್ಣು ಫಲವತ್ತಾಗಿರಬೇಕು, ನೀರು ಉಳಿಯಬೇಕು, ಗಾಳಿ ಶುದ್ಧವಾಗಿರಬೇಕು; ಕೃಷಿ ಉಳಿದಾಗಲೇ ಆಹಾರದ ಭದ್ರತೆ ಬಲವಾಗುತ್ತದೆ. ಪ್ರಕೃತಿಯನ್ನು ಹಾಳುಮಾಡಿಕೊಂಡು ಅಭಿವೃದ್ಧಿಯ ಹೆಮ್ಮೆಪಡುವುದು ಭವಿಷ್ಯದ ಆಹಾರ ಭದ್ರತೆಯನ್ನೇ ಅಪಾಯಕ್ಕೆ ತಳ್ಳಿದಂತಾಗುತ್ತದೆ.
ಹಸಿವು ಕಡಿಮೆ ಮಾಡಲು ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಜನರನ್ನು ತಲುಪಬೇಕು. ಮಕ್ಕಳ ಪೌಷ್ಟಿಕ ಆಹಾರ, ಗರ್ಭಿಣಿ ಮತ್ತು ಬಾಣಂತಿಯರ ಪೌಷ್ಟಿಕತೆ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಗ್ರಾಮೀಣ ಉದ್ಯೋಗ, ರೈತರಿಗೆ ನ್ಯಾಯಯುತ ಬೆಲೆ, ಬೆಳೆ ವಿಮೆ ಮತ್ತು ನೀರಾವರಿ ಸೌಲಭ್ಯಗಳಿಗೆ ಆದ್ಯತೆ ನೀಡಬೇಕು. ಯೋಜನೆಗಳ ಘೋಷಣೆಗಿಂತ ಅವುಗಳ ಅನುಷ್ಠಾನ, ವೆಚ್ಚಕ್ಕಿಂತ ಫಲಿತಾಂಶ ಮತ್ತು ಪ್ರಚಾರಕ್ಕಿಂತ ಜನರ ಬದುಕಿನಲ್ಲಿ ಉಂಟಾಗುವ ಬದಲಾವಣೆ ಮುಖ್ಯವಾಗಬೇಕು.
ದೇಶದ ಪ್ರಗತಿಯನ್ನು ಕೇವಲ ಅಂಕಿ-ಅಂಶಗಳಲ್ಲಾಗಲಿ, ರಾಜಕೀಯ ಭಾಷಣಗಳಲ್ಲಾಗಲಿ ಹುಡುಕಬಾರದು. ಹಸಿವಿನಿಂದ ಬಳಲುವವರ ಸಂಖ್ಯೆ ಕಡಿಮೆಯಾಗಿದೆಯೇ? ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿದೆಯೇ? ರೈತನ ಆದಾಯ ಮತ್ತು ಬದುಕಿನ ಭದ್ರತೆ ಸುಧಾರಿಸುತ್ತಿದೆಯೇ? ಬಡ ಕುಟುಂಬಗಳಿಗೆ ಗೌರವಯುತ ಜೀವನ ನಡೆಸಲು ಸಾಧ್ಯವಾಗುತ್ತಿದೆಯೇ? ಇಂತಹ ಪ್ರಶ್ನೆಗಳೇ ಅಭಿವೃದ್ಧಿಯ ನಿಜವಾದ ಪರೀಕ್ಷೆಯಾಗಬೇಕು.
ರೈತನ ಕಣ್ಣೀರು ಒರೆಸಲಾಗದ ರಾಜಕೀಯಕ್ಕೆ ಜನಸೇವೆಯ ಹೆಮ್ಮೆ ಏಕೆ? ಬಡವನ ಹಸಿವು ನೀಗಿಸಲಾಗದ ಅಭಿವೃದ್ಧಿಗೆ ಯಶಸ್ಸಿನ ಕಿರೀಟವೇಕೆ? ದೇಶದ ಪ್ರಗತಿಯ ನಿಜವಾದ ಅರ್ಥ ಪ್ರತಿಯೊಬ್ಬರಿಗೂ ಗೌರವಯುತ ಬದುಕು ಮತ್ತು ಪೌಷ್ಟಿಕ ಆಹಾರ ದೊರೆಯುವುದರಲ್ಲಿ ಅಡಗಿದೆ. ಹಸಿದವನ ತಟ್ಟೆಯಲ್ಲಿ ಅನ್ನವಿಲ್ಲದಿದ್ದರೆ ಅಭಿವೃದ್ಧಿಯ ಭಾಷಣ ಅಪೂರ್ಣ; ಅನ್ನದಾತನ ಬದುಕಿನಲ್ಲಿ ನೆಮ್ಮದಿಯಿಲ್ಲದಿದ್ದರೆ ದೇಶದ ಪ್ರಗತಿಯ ಹೆಮ್ಮೆ ಅಪೂರ್ಣ!
ಡಾ. ಲೋಕೇಶ ಎಸ್.ಕೆ 


More Stories
ದುರ್ಗಾಷ್ಟಮಿ….ಒಂದು ಕಥೆ
ಪಾಳು ಬಂಗಲೆಯ ನಿಗೂಢ ರಹಸ್ಯ
ವಿಧಿ ಬರಹ