
ಹೊಸಪೇಟೆ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ಪ್ರತ್ಯಕ್ಷವಾಗಿ ಪರಿಶೀಲಿಸಲು ಕೇಂದ್ರ ಬರ ಅಧ್ಯಯನ ತಂಡವು ಸೋಮವಾರ ಹರಪನಹಳ್ಳಿ ಮತ್ತು ಹೂವಿನಹಡಗಲಿ ತಾಲ್ಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರು ಹಾಗೂ ಕೂಲಿಕಾರ್ಮಿಕರಿಂದ ಮಾಹಿತಿ ಸಂಗ್ರಹಿಸಿತು.
ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ ಅಜಿತ್ ಕುಮಾರ್ ಸಾವು ನೇತೃತ್ವದ ಈ ತಂಡದಲ್ಲಿ ಕರ್ನಲ್ ಅಮರೇಂದ್ರ ಸಿಂಗ್, ಚೇತ್ ರಾಮ್ ಮೀನಾ ಹಾಗೂ ಡಾ. ಜೆ. ಹರ್ಷ ಇದ್ದರು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಜಿಲ್ಲೆಯಲ್ಲಿನ ಮಳೆ ಕೊರತೆ, ಬೆಳೆ ಹಾನಿಯ ಪ್ರಮಾಣ, ಕುಡಿಯುವ ನೀರಿನ ಕೊರತೆ ಮತ್ತು ಗ್ರಾಮೀಣ ಉದ್ಯೋಗಾವಕಾಶಗಳ ವಸ್ತುಸ್ಥಿತಿಯನ್ನು ಕೇಂದ್ರ ತಂಡಕ್ಕೆ ವಿವರಿಸಿದರು.

ನೀಲಗುಂದ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿದ ತಂಡ, ಅಲ್ಲಿ ದುಡಿಯುತ್ತಿದ್ದ 416 ಕಾರ್ಮಿಕರೊಂದಿಗೆ ಸಂವಾದ ನಡೆಸಿತು. ಪ್ರತಿದಿನ ₹382 ಕೂಲಿ ನೀಡಲಾಗುತ್ತಿದ್ದು, ಕೂಲಿ ಪಾವತಿಯಲ್ಲಿ ವಿಳಂಬವಾಗುತ್ತಿದೆ ಹಾಗೂ ಉದ್ಯೋಗ ಲಭ್ಯವಿಲ್ಲದಾಗ ಕಾಫಿ ಎಸ್ಟೇಟ್‌ಗಳಿಗೆ ವಲಸೆ ಹೋಗಬೇಕಾಗುತ್ತದೆ ಎಂದು ಕಾರ್ಮಿಕರು ಸಮಸ್ಯೆಗಳನ್ನು ಹಂಚಿಕೊಂಡರು. ನಂತರ ಮೈದೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಕೊಳವೆಬಾವಿಗಳ ಸ್ಥಿತಿಯನ್ನು ಪರಿಶೀಲಿಸಲಾಯಿತು.
ಹೂವಿನಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ರೈತ ರುದ್ರಪ್ಪ ಬಳಿಗಾರ ಅವರ ಒಣಗಿದ ಮೆಕ್ಕೆಜೋಳ ಬೆಳೆಯನ್ನು ಅಧಿಕಾರಿಗಳು ವೀಕ್ಷಿಸಿದರು. 3.82 ಎಕರೆಯಲ್ಲಿ ₹60 ಸಾವಿರ ವೆಚ್ಚ ಮಾಡಿ ಬೆಳೆದ ಬೆಳೆ ಸಂಪೂರ್ಣ ಹಾನಿಯಾಗಿದ್ದು, ಪ್ರಸ್ತುತ ನೀಡಲಾಗುತ್ತಿರುವ ಎಕರೆಗೆ ₹2,500 ಪರಿಹಾರ ಯಾವುದಕ್ಕೂ ಸಾಲದು, ವೈಜ್ಞಾನಿಕವಾಗಿ ಲೆಕ್ಕ ಹಾಕಿ ಎಕರೆಗೆ ₹60 ಸಾವಿರ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದರು. ಇದೇ ಗ್ರಾಮದಲ್ಲಿ ಸಾಕಮ್ಮ ಅವರ 5 ಎಕರೆ ಈರುಳ್ಳಿ ಬೆಳೆ ಹಾಗೂ ಮೈದೂರು ಗ್ರಾಮದಲ್ಲಿ ರೈತ ಕೊಟ್ರೇಶ್ ಅವರ ಈರುಳ್ಳಿ ಮತ್ತು ಸೂರ್ಯಕಾಂತಿ ಬೆಳೆ ಹಾನಿಯನ್ನು ತಂಡ ಖುದ್ದು ಪರಿಶೀಲಿಸಿತು. ಈ ವೇಳೆ ಅಧಿಕಾರಿಗಳು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸೌಲಭ್ಯ ಹಾಗೂ ಬಡ್ಡಿ ಸಬ್ಸಿಡಿ ಸಾಲಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಮಾರ್ಗಮಧ್ಯೆ ಶೃಂಗಾರ ತೋಟ ಹಾಗೂ ಕಣವಿಹಳ್ಳಿ ಗ್ರಾಮಗಳಲ್ಲಿ ರಸ್ತೆಬದಿಯ ಮೆಕ್ಕೆಜೋಳ, ರಾಗಿ ಬೆಳೆಗಳನ್ನು ಪರಿಶೀಲಿಸಿದ ತಂಡ, ಒಕ್ಕಣೆ ಮಾಡುತ್ತಿದ್ದ ವೃದ್ಧೆಯೊಬ್ಬರೊಂದಿಗೆ ಸಮಾಲೋಚಿಸಿ ಕೃಷಿ ಸಂಕಷ್ಟವನ್ನು ಆಲಿಸಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪನ್ವಾರ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಹಾಗೂ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಭುರಾಜ್ ಹಾಜರಿದ್ದರು.


More Stories
ಮೈಸೂರು ಚಾಮುಂಡೇಶ್ವರಿ ಕ್ಷೇತ್ರವು ಶಕ್ತಿಯ ಕೇಂದ್ರ: ಕೊಪ್ಪಳ ಗವಿಶ್ರೀಗಳು
ಕೆಲಸದವಳು “ಅಮ್ಮಾ ನಾಳೆ ಬರಲ್ಲ”: ಒಂದೇ ಮಾತಿಗೆ ತಲೆಕೆಳಗಾಯ್ತು ಇಡೀ ಸಂಸಾರ! : ನಂದಿನಿ ಸನಬಾಳ
ದಕ್ಷಿಣದಲ್ಲಿ ಮೂರೇ ಚಿತ್ರ: ನಾನಾ ಪಟೇಕರ್