
ಹೊಸಪೇಟೆ: ಅಂತರರಾಷ್ಟ್ರೀಯ ಸುರಕ್ಷಿತ ಗರ್ಭಪಾತ ಸೇವಾ ದಿನದ ಅಂಗವಾಗಿ ಸುರಕ್ಷಿತ ಗರ್ಭಪಾತದ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಶನಿವಾರ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಸುರಕ್ಷಿತ ಗರ್ಭಪಾತ ಸೇವಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅನಧಿಕೃತ ವ್ಯಕ್ತಿಗಳಿಂದ, ನಕಲಿ ಗಿಡಮೂಲಿಕೆಗಳು ಹಾಗೂ ಮಾತ್ರೆಗಳ ಮೂಲಕ ಗರ್ಭಪಾತ ಮಾಡಿಸಿಕೊಳ್ಳುವುದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೆ, ಕೆಲ ಸಂದರ್ಭಗಳಲ್ಲಿ ಜೀವಕ್ಕೂ ಅಪಾಯವನ್ನುಂಟುಮಾಡಬಹುದು ಎಂದು ಎಚ್ಚರಿಸಿದರು. ಅನಪೇಕ್ಷಿತ ಗರ್ಭಧಾರಣೆ, ತಾಯಿಯ ಅಥವಾ ಭ್ರೂಣದ ಆರೋಗ್ಯಕ್ಕೆ ಅಪಾಯವಿರುವ ಸಂದರ್ಭಗಳಲ್ಲಿ ಹಾಗೂ ಅತ್ಯಾಚಾರದಂತಹ ಪ್ರಕರಣಗಳಲ್ಲಿ ಕಾನೂನುಬದ್ಧವಾಗಿ ಸುರಕ್ಷಿತವಾಗಿ ಗರ್ಭಪಾತ ಸೇವೆ ಪಡೆಯಲು ಅವಕಾಶವಿದೆ. ಆದರೆ ವೈದ್ಯರ ಸಲಹೆ ಅಥವಾ ಮೇಲ್ವಿಚಾರಣೆಯಿಲ್ಲದೆ ಔಷಧ ಅಂಗಡಿಗಳಿಂದ (ಮೆಡಿಕಲ್ ಶಾಪ್) ಮಾತ್ರೆಗಳನ್ನು ಪಡೆದು ಸೇವಿಸುವುದು ಅತ್ಯಂತ ಅಪಾಯಕಾರಿ ಎಂದು ತಿಳಿಸಿದರು.

ಹೆಣ್ಣು ಭ್ರೂಣಹತ್ಯೆ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಲಿಂಗ ಆಯ್ಕೆಗಾಗಿ ಗರ್ಭಪಾತ ಮಾಡಿಸುವುದು ಕಾನೂನುಬಾಹಿರವಾಗಿದೆ. ಸುರಕ್ಷಿತ ಗರ್ಭಪಾತ ಸೇವೆಗಳು ಮಹಿಳೆಯ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾನೂನಿನ ಚೌಕಟ್ಟಿನಲ್ಲಿ ಲಭ್ಯವಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ. ವಿನಯ್ ವಹಿಸಿದ್ದರು.
ನೂರು ಹಾಸಿಗೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಂಗಾಧರ ಮೇಟಿ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ, ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿಗಳು ಉಪಸ್ಥಿತರಿದ್ದರು.


More Stories
ಸಿನಿಮಾಗಳ ಮೂಲಕ ಸಾಮಾಜಿಕ ವಾಸ್ತವಗಳ ಅನಾವರಣ: ಡಾ. ವೆಂಕಟಗಿರಿ ದಳವಾಯಿ
ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆಯ ಪಿ.ಎಂ. ಶ್ರೀವರ್ಧನ್ ರೆಡ್ಡಿಗೆ ಪ್ರಥಮ ಸ್ಥಾನ
ಕ್ರೀಡೆಗಳು ಬಂದಿಗಳಲ್ಲಿ ಮಾನಸಿಕ ಉಲ್ಲಾಸ, ಸಕಾರಾತ್ಮಕ ಬದಲಾವಣೆ ತರಲು ಸಹಕಾರಿ: ಮಧುಸೂದನ್