September 2, 2026

Hampi times

Kannada News Portal from Vijayanagara

ಕತ್ತಲೆಯ ಕಾರಾಗೃಹದಲ್ಲಿ ಹುಟ್ಟಿದ ಬೆಳಕು

https://youtu.be/NHc6OMSu0K4?si=SI_K4goOPEgwo6h2

 

ಕೃಷ್ಣ ಕಥಾವಳಿ – ೧:
ಮಥುರೆಯ ಅರಮನೆಯಲ್ಲಿ ರಾಜ ಉಗ್ರಸೇನನ ಪುತ್ರಿ ದೇವಕಿ ಹಾಗೂ ವಸುದೇವನ ವಿವಾಹವು ಮಹಾಸಂಭ್ರಮದಿಂದ ಜರುಗಿತು. ಇಡೀ ನಗರಿಯು ಮದುವೆಯ ಖುಷಿಯಲ್ಲಿ ತೇಲಾಡುತ್ತಿತ್ತು. ತಂಗಿಯ ಮೇಲಿನ ಪ್ರೀತಿಯಿಂದ ಕಂಸನೇ ಸ್ವತಃ ರಥದ ಸಾರಥಿಯಾಗಿ ವಸುದೇವ-ದೇವಕಿಯರನ್ನು ಬೀಳ್ಕೊಡಲು ಹೊರಟಿದ್ದನು. ಆದರೆ, ಅಷ್ಟರಲ್ಲಿ ಆಕಾಶವಾಣಿಯು “ದೇವಕಿಯ ಎಂಟನೆಯ ಮಗನು ನಿನ್ನನ್ನು ಸಂಹರಿಸುವನು” ಎಂದು ಗರ್ಜಿಸಿತು. ಈ ಮಾತು ಕೇಳಿದ ಕೂಡಲೇ ಕಂಸನ ಪ್ರೀತಿಯು ಭಯ ಹಾಗೂ ಕ್ರೌರ್ಯವಾಗಿ ಬದಲಾಯಿತು. ತಕ್ಷಣ ದೇವಕಿಯನ್ನು ಕೊಲ್ಲಲು ಮುಂದಾದ ಕಂಸನನ್ನು ವಸುದೇವನು ತಡೆದು, ಹುಟ್ಟುವ ಪ್ರತಿಯೊಂದು ಮಗುವನ್ನು ಒಪ್ಪಿಸುವುದಾಗಿ ವಚನವಿತ್ತನು. ಆದರೂ ಕಂಸನು ದೇವಕಿ-ವಸುದೇವರನ್ನು ಕತ್ತಲೆಯ ಕಾರಾಗೃಹಕ್ಕೆ ತಳ್ಳಿದನು.

ಕಾಲ ಕಳೆದಂತೆ ದೇವಕಿಗೆ ಒಂದೊಂದಾಗಿ ಏಳು ಮಕ್ಕಳು ಹುಟ್ಟಿದರು. ಕ್ರೂರಿ ಕಂಸನು ಆ ಮುಗ್ಧ ಶಿಶುಗಳನ್ನೆಲ್ಲ ನಿರ್ದಯವಾಗಿ ಹತ್ಯೆಗೈದನು. ತಾಯಿಯ ಕಣ್ಣೆದುರೇ ಮಕ್ಕಳನ್ನು ಕಳೆದುಕೊಂಡ ಆ ದಂಪತಿಗಳ ನೋವು ಅಪಾರವಾಗಿದ್ದರೂ, “ಭಗವಂತನು ನಮ್ಮನ್ನು ಕೈಬಿಡುವುದಿಲ್ಲ” ಎಂಬ ಅವರ ದೃಢ ನಂಬಿಕೆ ಮಾತ್ರ ಸತ್ತಿರಲಿಲ್ಲ. ಕೊನೆಗೆ ಬಂದ ಆ ಭಾದ್ರಪದ ಮಾಸದ ಕೃಷ್ಣಪಕ್ಷದ ಅಷ್ಟಮಿಯ ಕತ್ತಲೆಯ ರಾತ್ರಿ ದೇವಕಿಗೆ ಪ್ರಸವ ವೇದನೆ ಆರಂಭವಾಯಿತು. ಕಾರಾಗೃಹದೊಳಗೆ ದಿವ್ಯ ರೂಪದಲ್ಲಿ ಶಂಖ, ಚಕ್ರ, ಗದಾ, ಪದ್ಮಧಾರಿ ಶ್ರೀಹರಿಯು ಪ್ರತ್ಯಕ್ಷನಾಗಿ ದೇವಕಿ-ವಸುದೇವರಿಗೆ ಧೈರ್ಯತುಂಬಿದನು. ಅಲ್ಲದೆ, ತನನ್ನು ಗೋಕುಲದ ನಂದ-ಯಶೋದೆಯರ ಬಳಿ ಇರುವ ನವಜಾತ ಹೆಣ್ಣುಮಗುವಿನೊಂದಿಗೆ ಬದಲಾಯಿಸಿ ತರುವಂತೆ ಸೂಚಿಸಿದನು.

ಭಗವಂತನ ಕೃಪೆಯಿಂದ ಕಾರಾಗೃಹದ ಬಾಗಿಲುಗಳು ತಾವಾಗಿಯೇ ತೆರೆದುಕೊಂಡವು, ಕಾವಲುಗಾರರು ಗಾಢ ನಿದ್ರೆಗೆ ಜಾರಿದರು ಮತ್ತು ವಸುದೇವನ ಸರಪಳಿಗಳು ಕಳಚಿಬíøದವು. ವಸುದೇವನು ದಿವ್ಯ ಶಿಶುವನ್ನು ಬುಟ್ಟಿಯಲ್ಲಿಟ್ಟುಕೊಂಡು ಹೊರಟಾಗ, ಧಾರಾಕಾರ ಮಳೆ ಹಾಗೂ ಉಕ್ಕಿ ಹರಿಯುತ್ತಿದ್ದ ಯಮುನಾ ನದಿ ಎದುರಾಯಿತು. ಆದರೆ, ಆದಿಶೇಷನು ಹೆಡೆಯಾಂಡು ಮಗುವಿಗೆ ಛತ್ರಿಯಂತೆ ರಕ್ಷಣೆ ನೀಡಿದನು. ಯಮುನೆಯು ದಾರಿ ಮಾಡಿಕೊಟ್ಟಳು. ವಸುದೇವನು ಗೋಕುಲಕ್ಕೆ ತಲುಪಿ ಯಶೋದೆ ಪಕ್ಕದಲ್ಲಿದ್ದ ಹೆಣ್ಣುಮಗುವಿನೊಂದಿಗೆ ಕೃಷ್ಣನನ್ನು ಬದಲಾಯಿಸಿ ಮಥುರೆಗೆ ಮರಳಿದನು.

ಮಗುವಿನ ಅಳು ಕೇಳಿ ಬಂದ ಕಾವಲುಗಾರರು ಕಂಸನಿಗೆ ಸುದ್ದಿ ಮುಟ್ಟಿಸಿದರು. ಕಂಸನು ಆ ಹೆಣ್ಣುಮಗುವನ್ನು ಕಲ್ಲಿಗೆ ಅಪ್ಪಳಿಸಿ ಕೊಲ್ಲಲು ಪ್ರಯತ್ನಿಸಿದಾಗ, ಆ ದಿವ್ಯಶಕ್ತಿಯು ಆಕಾಶಕ್ಕೆ ಹಾರಿ, “ನಿನ್ನನ್ನು ಸಂಹರಿಸುವವನು ಈಗಾಗಲೇ ಬೇರೆಡೆ ಜನಿಸಿದ್ದಾನೆ” ಎಂದು ಎಚ್ಚರಿಸಿ ಅಂತರಧಾನವಾಯಿತು. ಇತ್ತ ಗೋಕುಲದಲ್ಲಿ ನಂದನ ಮನೆಗೆ ಗಂಡುಮಗು ಜನಿಸಿದ ಸಂಭ್ರಮ ಮನೆಮಾಡಿತು. ಯಶೋದೆ ಕಂದನನ್ನು ಮಡಿಲಿಗೆತ್ತಿಕೊಂಡು ಆನಂದಾಶ್ರು ಸುರಿಸಿದಳು.

 

ಈ ರೋಚಕ ಕಥೆಯು ನಮ್ಮ ಜೀವನದ ಕತ್ತಲೆಯ ಸಂದರ್ಭಗಳಲ್ಲೂ ಭರವಸೆಯನ್ನು ಕಳೆದುಕೊಳ್ಳಬಾರದು ಎಂಬ ದೊಡ್ಡ ಸಂದೇಶವನ್ನು ನೀಡುತ್ತದೆ. ಕತ್ತಲೆ ಎಷ್ಟೇ ಗಾಢವಾಗಿದ್ದರೂ ಬೆಳಕು ಹುಟ್ಟುವುದನ್ನು ತಡೆಯಲು ಸಾಧ್ಯವಿಲ್ಲ. ಗೋಕುಲದ ಈ ಪುಟ್ಟ ಬಾಲಕನು ಮುಂದೆ ಬೆಣ್ಣೆ ಕದಿಯುವ ಗೋಪಾಲನಾಗಿ, ಕಾಳಿಂಗನನ್ನು ಮಣಿಸಿ, ಗೋವರ್ಧನಗಿರಿಯನ್ನು ಎತ್ತಿ, ಕುರುಕ್ಷೇತ್ರದಲ್ಲಿ ಭಗವದ್ಗೀತೆಯ ಅಮರ ಸಂದೇಶವನ್ನು ಸಾರಲಿದ್ದಾನೆ. ಮುಂದಿನ ಭಾಗದಲ್ಲಿ ಬಾಲಕ ಕೃಷ್ಣನ ಬಾಲ್ಯದ ಮೊದಲ ಲೀಲೆಯನ್ನು ಕಾಣಬಹುದು.

🌹 ಶ್ರೀಕೃಷ್ಣಾರ್ಪಣಮಸ್ತು 🌹

ಲೇಖಕರು: ಪ್ರಶಾಂತ ಕುಲಕರ್ಣಿ ಸಿಂದಗಿ

Please follow and like us:

 

 

 

 

 

 

 

 

 

 

 

 

Translate »
[t4b-ticker]
error: Content is protected !!