https://youtu.be/NHc6OMSu0K4?si=SI_K4goOPEgwo6h2

ಇಟಗಿ ಈರಣ್ಣನವರು ಶಾಯಿರಿಗಳನ್ನು ಮಾತ್ರವಲ್ಲದೇ ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಿಗೆ ತೆರೆದುಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿದರು. ಉರ್ದು ಮತ್ತು ಹಿಂದಿಯಿಂದ ಶಾಯಿರಿಗಳನ್ನು ಕನ್ನಡಕ್ಕೆ ತರುವ ಜೊತೆ ಜೊತೆಗೆ ಸ್ವರಚನೆಯ ಸಾಹಿತ್ಯವೂ ಸ್ಪುರಿಸಿದರು. ಪಂಜಾಬಿ ಕಥೆ, ಕವನಗಳನ್ನು ಕನ್ನಡೀಕರಿಸಿ ಓದುಗ ವಲಯಕ್ಕೆ ಕೊಟ್ಟರು. ಇಷ್ಟಲ್ಲದೇ, ಕನ್ನಡ ಗಜಲ್ ಹಾಗೂ ರುಬಾಯಿಗಳು ರಚಿಸಿದರು.
ಇತರೆ ಭಾಷೆಗಳ ಮೇಲಿದ್ದ ಒಲವು ಇವರು ಅಲ್ಲಿನ ಉತ್ಕೃಷ್ಟ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿ ಕೊಡಲು ಬಳಸಿಕೊಂಡರು. ಆ ಮೂಲಕ ಇಲ್ಲಿನ ಸಹೃದಯಕ್ಕೆ ಹೊಸ ಬಗೆಯ ರುಚಿಯನ್ನು ಉಣಿಸಲು ಯತ್ನಿಸಿದರು. ತಾವು ಬರೆದದ್ದನ್ನು ಬಲವಂತವಾಗಿ ಓದಿಸುವ ಬದಲು ಓದುಗರು ಬಯಸುವ ಹೊಸತನವನ್ನು ಕೊಡಲು ಈರಣ್ಣನವರು ಉತ್ಸುಕರಾಗಿದ್ದರು ಎಂಬುದು ಅವರ ವಿವಿಧ ಪ್ರಕಾರದ ಸಾಹಿತ್ಯ ರಚನೆಗಳು ತೋರ್ಪಡಿಸುತ್ತವೆ. ತಮ್ಮ ರಚನೆ ಹಾಗೂ ಅನುವಾದ ಸೇರಿದಂತೆ ವಿವಿಧ ಬಗೆಯ ಸಾಹಿತ್ಯ ಸೃಜನೆಯಲ್ಲಿ ಮನುಷ್ಯ ಪ್ರೀತಿಯನ್ನು ಹುಡುಕಿದ್ದಾರೆ.
ಇದರ ಫಲ ಎಂಬಂತೆ ‘ಕಬೀರದಾಸರ ಕನ್ನಡ ದೋಹೆಗಳು’ ಪ್ರಪ್ರಥಮವಾಗಿ ಕನ್ನಡಕ್ಕೆ ತಂದರು. ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಕೇಳಿಬಂತು. ಡಾ.ಹರಿವಂಶ ರಾಯ್ ಬಚ್ಚನ್ ಅವರ ‘ಮಧುಶಾಲಾ’ ಕೃತಿಯನ್ನು ಹಿಂದಿಯಿAದ ಕನ್ನಡಕ್ಕೆ ತಂದು ಇದರ ಘನತೆಯನ್ನು ಹೆಚ್ಚಿಸಿದರು. ವಚನಗಳ ಸೆಳೆತಕ್ಕೂ ಒಳಗಾಗಿದ್ದ ಈರಣ್ಣನವರು ಆಧುನಿಕ ವಚನಗಳನ್ನು ‘ವಚನಾಲಯ’ ಹೆಸರಿನಲ್ಲಿಯೂ ಮತ್ತು ಆಧುನಿಕ ತ್ರಿಪದಿಗಳನ್ನು ‘ಈಶಾನ ವಚನಗಳು’ ಹೆಸರಿನಲ್ಲಿಯೂ ಪ್ರಕಟಿಸಿದರು.
ಈ ನಡುವೆ ‘ಭಕ್ತಿವಾಣಿ’ ‘ಶಬ್ದಮಣಿ ದರ್ಪಣ -ಸಂಗ್ರಹ’ ‘ನಮ್ಮ ಬೆಳಕು’ ‘ಸಾಕ್ಷರತಾ ಆಂದೋಲನದ ತ್ರಿಪದಿಗಳು’ ಹಾಗೂ ‘ಪೊಲೀಸ್ ಸೂಕ್ತಿಗಳು’ ರಚಿಸಿ ಜನಮನ್ನಣೆ ಗಳಿಸಿದರು. ಇವುಗಳಲ್ಲಿ ‘ಭಕ್ತಿವಾಣಿ’ ೧೯೯೨ರಿಂದ ೨೦೦೨ರವರೆಗೆ ಗುಲಬುರ್ಗಾ ವಿಶ್ವ ವಿದ್ಯಾಲಯದ ಬಿ.ಎ ಎರಡನೇ ವರ್ಷಕ್ಕೆ ಪಠ್ಯವಾಗಿ ಹಾಗೂ ವಿಜಯಪುರದ ಮಹಿಳಾ ವಿಶ್ವ ವಿದ್ಯಾಲಯಕ್ಕೆ ಪಠ್ಯವಾಗಿತ್ತು. ‘ಶಬ್ದಮಣಿ ದರ್ಪಣ -ಸಂಗ್ರಹ’ ಗುಲಬುರ್ಗಾ ವಿಶ್ವ ವಿದ್ಯಾಲಯದ ಬಿ.ಎ ಮೂರನೇ ವರ್ಷದ ಪಠ್ಯವಾಗಿತ್ತಲ್ಲದೆ ‘ನಮ್ಮ ಬೆಳಕು – ಭಾಗ – ೩’ ಗುಲಬುರ್ಗಾ ವಿಶ್ವವಿದ್ಯಾಲಯದ ಬಿ.ಕಾಂ ಒಂದನೆ ಸೆಮಿಷ್ಟರ್‌ಗೆ ಪಠ್ಯವಾಗಿ ವಿದ್ಯಾರ್ಥಿಗಳು ಓದಿದ್ದು, ಇವರ ಬರವಣಿಗೆಗೆ ಸಂದ ಗೌರವವಾಗಿದೆ.
ನಾಟಕಗಳ ಅನುವಾದ, ಪ್ರಯೋಗ
ಬಹು ಆಸಕ್ತಿದಾಯಕ ವ್ಯಕ್ತಿತ್ವದ ಈರಣ್ಣನವರು ಸದಾ ಸೃಜನಶೀಲತೆ ಮೈಗೂಡಿಸಿಕೊಂಡಿರುತ್ತಿದ್ದರು ಎಂಬುದಕ್ಕೆ ಅವರ ಸೃಜನೆಯ ಕೃತಿಗಳು ಸಾಕ್ಷಿಗಳಾಗಿವೆ. ಅದರಲ್ಲೂ ಅನುವಾದಿತ ನಾಟಕಗಳು ರಂಗ ಪ್ರಯೋಗ ಕಂಡು ಅವರ ಅಪಾರ ಕೀರ್ತಿಗೂ ನಾಂದಿ ಹಾಡಿವೆ ಎನ್ನಬಹುದು. ರಾವಿ ನದಿಯ ದಂಡೆ ಮೇಲೆ (೨೦೦೧), ನಾನೂ ನೀನು ರಾಜಿ ಏನ್ ಮಾಡ್ತಾನ್ ಖಾಜಿ? (೨೦೦೨), ತಾಜ್‌ಮಹಲ್ ಟೆಂಡರ್ (೨೦೦೩), ಹಾಗೂ ಯಹೂದಿ ಹುಡುಗಿ (೨೦೦೪) ಅನುವಾದಿತ ನಾಟಕಗಳು ರಂಗ ಪ್ರಯೋಗ ಕಂಡು ಯಶಸ್ವಿಯಾಗಿದ್ದು,

ಬಹು ಚರ್ಚೆಗೂ ಕಾರಣವಾಗಿದ್ದವು. ಇಷ್ಟಲ್ಲದೇ ಬೀದಿ ಹಾಗೂ ರೇಡಿಯೋ ನಾಟಕಗಳು, ಸಾಕ್ಷರತಾ ಗೀತೆಗಳು, ಲೇಖನಗಳು ಬರೆದರು. ೧೯೯೮ರ ಹಂಪಿ ಉತ್ಸವದ ವೇದಿಕೆ ಹಂಚಿಕೊಂಡರು. ೨೦೦೪ ಮಾರ್ಚ್ ೧೩ ಮತ್ತು ೧೪ರಂದು ಕೊಪ್ಪಳದಲ್ಲಿ ನಡೆದ ೧೪ನೇ ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ, ಹೊಸಪೇಟೆಯಲ್ಲಿ ಜರುಗಿದ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಉಪನ್ಯಾಸ, ಶಾಯಿರಿ ವಾಚನ ಮೂಲಕ ಈರಣ್ಣನವರು ಸಾರ್ವಜನಿಕ ವಲಯಕ್ಕೆ ಮತ್ತಷ್ಟು ಹತ್ತಿರವಾಗಿ ಜನಮನದ ಹೃದಯಗಳಲ್ಲಿ ನೆಲೆ ನಿಂತರು.
ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ಭಾಗ್ಯ
ಶಾಯಿರಿ ಹಾಗೂ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಹೆಸರುವಾಸಿಯಾಗಿದ್ದ ಈರಣ್ಣನವರಿಗೆ ೨೦೧೦ರ ಫೆ.೧೪ ಮತ್ತು ೧೫ರಂದು ಎರಡು ದಿನಗಳ ಕಾಲ ಬಳ್ಳಾರಿಯಲ್ಲಿ ನಡೆದ ೧೪ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸ್ಥಾನ ಒಲಿದು ಬಂತು. ಸಮ್ಮೇಳನದ ಸವಿ ನೆನಪಿಗಾಗಿ ಈರಣ್ಣರ ‘ಈಶಾ’ನ ವಚನಗಳು ಕೃತಿಯನ್ನು ಬಳ್ಳಾರಿ ಜಿಲ್ಲಾ ಕಸಾಪ ಪ್ರಕಟಿಸಿ ಅಜರಾಮರಗೊಳಿಸಿತು. ಈ ಹೊತ್ತಿಗೆ ಸಾಹಿತಿ ನಿಷ್ಠಿ ರುದ್ರಪ್ಪ ಬಳ್ಳಾರಿ ಜಿಲ್ಲಾ ಕಸಾಪದ ಅಧ್ಯಕ್ಷರಾಗಿದ್ದರು ಮತ್ತು ಮುಖಂಡರಾದ ಜನಾರ್ಧನ ರೆಡ್ಡಿ, ಸೋಮಶೇಖರ ರೆಡ್ಡಿ, ಶ್ರೀರಾಮುಲು, ಶ್ರೀರಾಮುಲು ತಂಗಿ ಶ್ರೀಮತಿ ಶಾಂತಾ, ಸುರೇಶಬಾಬು ಹಾಗೂ ಸಾಹಿತ್ಯಾಭಿಮಾನಿಗಳಿದ್ದು, ಸಮ್ಮೇಳನ ಯಶಸ್ವಿಗೊಳಿಸಿದ್ದು, ಇಲ್ಲಿ ಸ್ಮರಿಸಬಹುದು.
ಇಹಲೋಕ ತ್ಯಜಿಸಿದ ಇಈ
ಶೈಕ್ಷಣಿಕ ಸೇವೆಯಲ್ಲದೇ ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ಕೊಡುಗೆಗಳನ್ನು ಕೊಟ್ಟ ಇಟಗಿ ಈರಣ್ಣನವರು ಹೊಸಪೇಟೆ ವಿಜಯನಗರ ಕಾಲೇಜಿನಲ್ಲಿ ೩೧ ಜುಲೈ ೨೦೧೦ರಲ್ಲಿ ಸೇವೆಯಿಂದ ನಿವೃತ್ತರಾದರು. ನಿವೃತ್ತಿಯ ನಂತರ ಕುಟುಂಬ ಸಹಿತ ಶಿವಮೊಗ್ಗಕ್ಕೆ ತೆರಳಿದ ಇವರು ಅಲ್ಲಿಯೂ ಸಾಹಿತ್ಯ ಹಾಗೂ ಸಾಹಿತಿಗಳ ಒಡನಾಟದೊಂದಿಗೆ ನೆಮ್ಮದಿಯ ಜೀವನ ಕಳೆಯುತ್ತಿದ್ದರು.
ಮಾ.೮ ೨೦೧೭ರಂದು ಇವರ ತಾಯಿ ಕೊಟ್ರಮ್ಮ ವಯೋಸಹಜ ಸಾವಿನಿಂದ ಕೊನೆಯುಸಿರು ಎಳೆದರು. ತಾಯಿಯನ್ನು ತುಂಬಾ ಹಚ್ಚಿಕೊಂಡಿದ್ದ ಈರಣ್ಣನವರು ಅವರ ಅಗಲಿಕೆಯಿಂದ ತತ್ತರಿಸಿ ಹೋದರು. ಅವತ್ತು ಮಾ.೧೨ ತಾಯಿಯ ಐದನೇಯ ದಿನದ ಶಿವಗಣಾರಾಧನೆ ಕಾರ್ಯಕ್ರಮ ಮುಗಿಸಿ ಮನೆಯಲ್ಲಿರುವಾಗ ರಾತ್ರಿ ಸಮಯ ಈರಣ್ಣರಿಗೆ ಹೃದಯಾಘಾತವಾಯಿತು. ಎದೆ ಹಿಡಿದು ಕುಸಿದವರು ಮತ್ತೆ ಏಳಲೇ ಇಲ್ಲ. ಕನ್ನಡ ಸಾರಸ್ವತ ಲೋಕದ ನಕ್ಷತ್ರವೊಂದು ಮರೆಯಾಯಿತು. ದೈಹಿಕವಾಗಿ ಅವರಿಲ್ಲದ ನಮ್ಮ ನಡುವೆ ಅವರ ಕನ್ನಡ ಶಾಯಿರಿಗಳಷ್ಟೇ ಉಸಿರಾಡುತ್ತಿವೆ ಅವರಿರುವ ಜೀವಂತಿಕೆಯನ್ನು
ನಮ್ಮೊಳಗೆೆ ಹುಟ್ಟಿಸುತ್ತ.
ಮನೋಹರ ಬೊಂದಾಡೆ ಕನಕಗಿರಿ



More Stories
ವನ್ಯಜೀವಿ ಸಂರಕ್ಷಣೆಯ ಹೆಗ್ಗುರುತು
ಆರ್ಟೆಮಿಸ್ II ಮರಳುವಿಕೆ ಯಶಸ್ವಿ
ಇಸ್ರೋ ಗಗನ್ಯಾನ್ ಪರೀಕ್ಷೆ ಯಶಸ್ವಿ