https://youtu.be/NHc6OMSu0K4?si=SI_K4goOPEgwo6h2

-
ಪ್ರೇಮ ವಿಚಾರಕ್ಕೆ ಯುವಕನ ಹತ್ಯೆ ಶಂಕೆ | ಕಣ್ಣಿಗೆ ಕಾರದಪುಡಿ ಎರಚಿ ಅಟ್ಟಾಡಿಸಿ ಕೊಲೆ
- ಪೊಲೀಸ್ ಠಾಣೆಗೆ ಶರಣಾದ ಆರೋಪಿಗಳು | ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣ
ಹೊಸಪೇಟೆ: ಇಲ್ಲಿನ ಎಂಪಿ ಪ್ರಕಾಶ್ ನಗರದ ಆಟೋ ನಿಲ್ದಾಣ ಸಮೀಪ ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರಿ ಯುವಕನೊಬ್ಬನನ್ನು ಕಣ್ಣಿಗೆಖಾರದಪುಡಿ ಎರಚಿ, ಸುಮಾರು 100 ಮೀಟರ್ ಅಟ್ಟಾಡಿಸಿಕೊಂಡು ಬಂದು ಚಾಕುವಿನಿಂದ ಭೀಕರವಾಗಿ ಹತ್ಯೆಗೈದ ಘಟನೆ ನಡೆದಿದೆ. ಮೃತ ಯುವಕನನ್ನು ಯೂನೂಸ್ (28) ಎಂದು ಗುರುತಿಸಲಾಗಿದೆ. ಈ ಹತ್ಯೆ ನಡೆಸಿದ ಆರೋಪಿಗಳಾದ ಖಾಜಾ ಮತ್ತು ಇರ್ಫಾನ್, ಘಟನೆಯ ನಂತರ ಸ್ವಯಂಪ್ರೇರಿತವಾಗಿ ಪೊಲೀಸ್ ಠಾಣೆಗೆ ತೆರಳಿ, ತಾವು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಚಾಕು ಸಮೇತ ಶರಣಾಗಿದ್ದಾರೆ.


ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿಗಳು ಮೊದಲು ಯೂನೂಸ್‌ನ ಕಣ್ಣಿಗೆ ಕಾರದಪುಡಿ ಎರಚಿದ್ದಾರೆ. ಬಳಿಕ ಸುಮಾರು 100 ಮೀಟರ್ ದೂರ ಅಟ್ಟಾಡಿಸಿಕೊಂಡು ಹೋಗಿ, ಕತ್ತು ಮತ್ತು ಹೊಟ್ಟೆಯ ಭಾಗಕ್ಕೆ ಹಲವು ಬಾರಿ ಇರಿದಿದ್ದಾರೆ. ಪರಿಣಾಮ ಯೂನೂಸ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು, ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ವಿಜಯನಗರ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್, ಡಿವೈಎಸ್ಪಿ ಮುರಳೀಧರ ರಾವ್ ಹಾಗೂ ಗ್ರಾಮೀಣ ಠಾಣೆಯ ಪಿಐ ಗುರುರಾಜ ಕಟ್ಟಿಮನಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ಯೂನೂಸ್‌ನ ತಂದೆ ನಜೀರ್ ಅಹಮ್ಮದ್ ಆಸ್ಪತ್ರೆ ಎದುರು ಕಣ್ಣೀರಿಡುತ್ತಾ, ನನ್ನ ಮಗ ಯಾರೊಂದಿಗೂ ಜಗಳ ಮಾಡಿಕೊಳ್ಳುವವನಲ್ಲ. ಮದುವೆಯಾಗಿದ್ದು, ಒಂದು ಮಗು ಇದೆ. ಹೆಂಡತಿ ಗರ್ಭಿಣಿಯಾಗಿದ್ದಾಳೆ. ಹಾರ್ಡ್‌ವೇರ್ ಅಂಗಡಿ ನಡೆಸುತ್ತಿದ್ದ ಮಗ ರಾತ್ರಿ 9.45ರ ಸುಮಾರಿಗೆ ಊಟಕ್ಕೆ ಮನೆಗೆ ಬರಲು ಕರೆ ಮಾಡಿದ್ದ. ಆದರೆ, ಕೆಲವೇ ಕ್ಷಣಗಳಲ್ಲಿ ಮಗನ ಕೊಲೆಯ ಸುದ್ದಿ ತಿಳಿಯಿತು. ಯಾಕೆ ಕೊಲೆ ಮಾಡಿದರು ಎಂಬುದು ಗೊತ್ತಿಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಎದುರು ಮೃತನ ಬಂಧುಗಳು, ಸ್ನೇಹಿತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪರಿಸ್ಥಿತಿ ನಿಯಂತ್ರಣದಲ್ಲಿಡಲು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಇದು ಪ್ರೇಮ ಸಂಬಂಧಿತ ಮರ್ಯಾದೆ ಹತ್ಯೆ ಆಗಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂಜುಮನ್ ಕಮಿಟಿಯ ಮಾಜಿ ಅಧ್ಯಕ್ಷ ಹೆಚ್.ಎನ್.ಎಫ್. ಇಮಾಮ್ ನಿಯಾಜಿ ಈ ಘಟನೆಯನ್ನು ಖಂಡಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಪ್ರಸ್ತುತ ಆರೋಪಿಗಳು ಶರಣಾಗಿರುವ ಹಿನ್ನೆಲೆಯಲ್ಲಿ, ಕೊಲೆಗೆ ನಿಖರ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಎಸ್ಪಿ ಎಸ್ ಜಾಹ್ನವಿ ಅವರು ಭಾನುವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಡಿವೈಎಸ್ಪಿ ಮುರಳೀಧರ ರಾವ್ ಹಾಗೂ ಗ್ರಾಮೀಣ ಠಾಣೆಯ ಪಿಐ ಗುರುರಾಜ ಕಟ್ಟಿಮನಿ ಅವರಿಂದ ಮಾಹಿತಿ ಪಡೆದು ತನಿಖೆ ನಡೆಸಿದರು.



More Stories
ಸೋಷಿಯಲ್ ಮೀಡಿಯಾ: ಕಣ್ಣಿಗೆ ಆಕರ್ಷಕ, ಮನಸ್ಸಿಗೆ ಮಾರಕ!
ಉದ್ಯಮಿ ಕೆ.ರವಿಶಂಕರ್ ಜನ್ಮದಿನದ ಸಾರ್ಥಕ ಸೇವೆ: ಆಸ್ಪತ್ರೆಯ ರೋಗಿಗಳಿಗೆ ಪೌಷ್ಟಿಕಾಹಾರ ವಿತರಣೆ
ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್, ಕೋಟ್ಯಂತರ ರೂಪಾಯಿ ರಾಜಸ್ವ ಸಂಗ್ರಹ : ಅಬಕಾರಿ ನಿರೀಕ್ಷಕಿ ಎಸ್.ಬಿ.ಮಮತಾ