https://youtu.be/NHc6OMSu0K4?si=SI_K4goOPEgwo6h2

ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಮಕ್ಕಳ ಬದುಕಿನಲ್ಲಿ ಸದಾ ಹಸಿರಾಗಿರುತ್ತವೆ | ಗೆಳೆಯರ ಬಳಗದಿಂದ ಮಾದರಿ ಕಾರ್ಯ ಧನ ಸದ್ವಿನಿಯೋಗ | ರಾಜಕೀಯ ಹಳಿತಪ್ಪುತ್ತಲಿದೆ | ಸಾಂಸ್ಕೃತಿಕ ರಂಗ ಸೊರಗುತ್ತಿದೆ | ಕ್ರೀಡಾರಂಗ ಕಿಲುಬುಗಟ್ಟುತ್ತಿದೆ. | ಆರ್ಥಿಕ ರಂಗ ಹದಗೆಡುತ್ತಲಿದೆ | ಶೈಕ್ಷಣಿಕ ರಂಗ ಸಿಕ್ಕು ಒದ್ದಾಡುತ್ತಿದೆ | ಸಾವು ಇತಿಹಾಸವಾಗಬೇಕು | ಅತ್ಯುನ್ನತ ಗುರಿ ಇಟ್ಟುಕೊಳ್ಳಿ | ಗುರಿ ಇರದ ಬದುಕು ಬರೀ ಕಿರಿಕಿರಿ | ಓದಿಗೆ ಬಡತನ ಅಡ್ಡಿ ಬರಲ್ಲ |
ಹಂಪಿ ಟೈಮ್ಸ್ ಹೊಸಪೇಟೆ:
ಹೆತ್ತು ಹೊತ್ತು ಪೋಷಿಸಿದ ತಂದೆ ತಾಯಿಗಳನ್ನೆ ತನ್ನ ಹೀರೋಗೆಳೆಂದು ಭಾವಿಸಬೇಕು. ನಮಗಾಗಿ ದಣಿದ ಇಳಿವಯಸ್ಸಿನ ತಂದೆ ತಾಯಿಗಳನ್ನು ವೃದ್ಧಾಶ್ರಮಗಳಿಗೆ ಸೇರಿಸದೆ, ಅವರ ಆರೈಕೆ ಮಾಡುವ ಮೂಲಕ ನಾಡಿನ ಸಂಸ್ಕಾರವನ್ನು ಯುವಕರು ಎತ್ತಿಹಿಡಿಯಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಎಚ್.ಎಂ.ಚಂದ್ರಶೇಖರ್ ಶಾಸ್ತ್ರಿ ಹೇಳಿದರು.

ನಗರದ ವಿಜಯನಗರ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹೊಸಪೇಟೆಯ ಶೈಕ್ಷಣಿಕ ಚಿಂತಕರ ಗೆಳೆಯರ ಬಳಗ ಭಾನುವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಶಾಲಾ ಟಾಪರ್ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ಸರ್ವ ಸಮುದಾಯಗಳ ಮಕ್ಕಳ ಬದುಕು ರೂಪಿಸುವ ಶಿಲ್ಪಿಗಳು, ಸಾವಿರ ಸಾವಿರ ಪುರೋಹಿತ, ಪಾದ್ರಿ, ಮೌಲ್ವಿಗಳಿಗಿಂತ ಅತ್ಯಂತ ಶ್ರೇಷ್ಠರು ಶಿಕ್ಷಕರು. ಶಿಕ್ಷಕ್ಷರ ಮಾರ್ಗದರ್ಶನದಲ್ಲಿ ಬೆಳೆದ ಮಕ್ಕಳು ಸಮಾಜದ ಮುತ್ತು ರತ್ನಗಳಾಗಿ ಹೊರಹೊಮ್ಮಿ , ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸುತ್ತಾರೆ. ಮಕ್ಕಳು ಮೊಬೈಲ್‌ಗಳನ್ನು ಬಿಟ್ಟು ಪುಸ್ತಕಗಳಲ್ಲಿನ ವಿಷಯಗಳನ್ನು ಮಸ್ತಕಕ್ಕೆ ತೆಗೆದುಕೊಂಡರೆ ಭವಿಷ್ಯದಲ್ಲಿ ಉದ್ಯೋಗಕ್ಕಾಗಿ ಅಲೆದಾಡುವುದು ತಪ್ಪಲಿದೆ ಎಂದ ಅವರು, ನವಯುವಕರು ನಾಚುವಂತೆ ಇಳಿ ವಯಸ್ಸಿನಲ್ಲೂ ಹೊಸಪೇಟೆಯಲ್ಲಿ ನಿವೃತ್ತ ನೌಕರರು ಕೂಡಿಕೊಂಡು ರಚಿಸಿಕೊಂಡಿರುವ ಶೈಕ್ಷಣಿಕ ಚಿಂತಕರ ಗೆಳೆಯರ ಬಳಗ ಸಾಮಾಜಿಕ ಚಿಂತನೆಗಳೊಂದಿಗೆ ಯುವ ಪೀಳಿಗೆಗೆ ದಾರಿದೀಪವಾಗಬಲ್ಲ ಮಾದರಿ ಕಾರ್ಯಕ್ಕೆ ಮುನ್ನುಡಿ ಬರೆದಿದೆ. ಹೊಸಪೇಟೆ ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 2024-25ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಟಾಪರ್ ಆಗಿರುವ 35 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಮೂಲಕ ಭವಿಷ್ಯದ ಶೈಕ್ಷಣಿಕ ಸಾಧನೆಗೆ ಪ್ರೇರಣೆ ನೀಡಿರುವುದು ಶ್ಲಾಘನೀಯ ಅಭಿನಂದನೀಯ ಕಾರ್ಯ ಎಂದರು.

ಸಂಪಾದಕ ಬಸಾಪುರ ಬಸವರಾಜ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಪದವಿ ಪ್ರಮಾಣಪತ್ರಗಳ ಜೊತೆಗೆ ಕೌಶಲ್ಯ ಬೆಳೆಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ನಿರುದ್ಯೋಗಿಗಳಾಗಿ ಅಲೆದಾಡಬೇಕಾಗುತ್ತದೆ. ಶಿಕ್ಷಣದ ಜೊತೆ ಜೊತೆಗೆ ಬದುಕು ರೂಪಿಸಿಕೊಳ್ಳಲು ಬೇಕಾದ ಕೌಶಲ್ಯಗಳನ್ನು ಕಲಿಯಲೇಬೇಕಿದೆ. ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳು ಗರಿಷ್ಠ ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಮುದಾಯದ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ. ಶಾಲೆಗೆ ಹೋಗದ ಮಕ್ಕಳನ್ನು ಕಂಡರೆ ಶಾಲೆಗೆ ಹೋಗುವಂತೆ ತಿಳಿಸಬೇಕು. ಶಾಲೆಗೆ ಬಾರದ ಮಕ್ಕಳನ್ನು ಶಾಲೆಗೆ ಕರೆತರಲು ಶಿಕ್ಷಕರು ಮನೆ ಮನೆಗೆ ಬರುವುದನ್ನು ಸಮುದಾಯ ತಪ್ಪಿಸಿ, ಶಿಕ್ಷಕರ ಮೌಲ್ಯಯುತ ಸಮಯ ಮಕ್ಕಳ ಶಿಕ್ಷಣಕ್ಕೆ ಮೀಸಲಾಗಿಸಿದರೆ, ಸಮಾಜದ ಪ್ರತಿಯೊಬ್ಬ ಮಗುವಿಗೆ ಗುಣಮಟ್ಟದ ಶಿಕ್ಷಣ ದೊರೆಯಬಲ್ಲದು ಎಂಬುದನ್ನು ಪ್ರತಿಯೊಬ್ಬ ನಾಗರಿಕರು ಅರಿಯಬೇಕು. ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಶೈಕ್ಷಣಿಕ ಚಿಂತಕರ ಗೆಳೆಯರ ಬಳಗ ಜನ್ಮತಾಳಿರುವುದು ಹರ್ಷದ ಸಂಗತಿ. ವಿಜಯನಗರ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಗತಿಗೆ ಹಂಪಿ ಟೈಮ್ಸ್ ಪತ್ರಿಕೆ ಶಿಕ್ಷಕರ ಸಹಕಾರದೊಂದಿಗೆ ಅಳಿಲು ಸೇವೆ ಸಲ್ಲಿಸಿದೆ. ಇನ್ನಷ್ಟು ಪ್ರಗತಿಗೆ ಸಮುದಾಹದ ಸಹಭಾಗಿತ್ವ ಅಗತ್ಯವಿದೆ. ಸರ್ಕಾರಿ ಶಾಲೆಗಳ ಬಲವರ್ಧನೆ ಸಮಾಜದ ಪ್ರತಿಯೊಬ್ಬರ ಆಧ್ಯ ಕರ್ತವ್ಯವೆಂದು ಭಾವಿಸಿ ಪ್ರತಿ ಮಗುವಿನ ಏಳ್ಗೆಗೆ ಕೈಜೋಡಿಸಿದಾಗ ಅಸಾಧ್ಯವೆಂಬುದೆಲ್ಲ ಸಾಧ್ಯವಾಗಲಿದೆ ಎಂದರು.


ಇಳಿವಯಸ್ಸಿನಲ್ಲಿಯೂ ಸಮಾಜಮುಖಿ ಚಿಂತನೆಗಳೊಂದಿಗೆ ಯುವ ಪೀಳಿಗೆಗೆ ದಾರಿದೀಪವಾಗಬಲ್ಲ ಶೈಕ್ಷಣಿಕ ಚಿಂತಕರ ಗೆಳೆಯರ ಬಳಗವು ಹೊಸಪೇಟೆಯಲ್ಲಿ ಮಾದರಿ ಕಾರ್ಯಕ್ಕೆ ನಾಂದಿ ಹಾಡಿದೆ. ಸುಮಾರು 70 ವರ್ಷ ವಯಸ್ಸಿನ ಹಿರಿಯ ನಾಗರಿಕರನ್ನೊಳಗೊಂಡ ಈ ಬಳಗವು, ಕೇವಲ ವಿಶ್ರಾಂತ ಜೀವನಕ್ಕೆ ಸೀಮಿತವಾಗದೆ, ಸಮಾಜದ ಶೈಕ್ಷಣಿಕ ಉನ್ನತಿಗೆ ತಮ್ಮ ಅಮೂಲ್ಯ ಸಮಯ ಮತ್ತು ಅನುಭವವನ್ನು ಮೀಸಲಿಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಳಿವಯಸ್ಸಿನಲ್ಲಿಯೂ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂಬ ಅವರ ತುಡಿತವು ನಿಜಕ್ಕೂ ಶ್ಲಾಘನೀಯ.

ಭಾವುಕರನ್ನಾಗಿಸಿದ ವಿದ್ಯಾರ್ಥಿಗಳ ನುಡಿ:
ಸಮಾಜದಲ್ಲಿ ಸರ್ಕಾರಿ ಶಾಲೆಗಳೆಂದಾಕ್ಷಣ ಕಡೆಗಣಿಸಬೇಕಿಲ್ಲ. ಬಡ ವಿದ್ಯಾರ್ಥಿಗಳನ್ನು ಬೌದ್ಧಿಕವಾಗಿ ಶ್ರೀಮಂತಗೊಳಿಸುವ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವ ಶಕ್ತಿ ಸರ್ಕಾರಿ ಶಿಕ್ಷಕರಲ್ಲಿದೆ. ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಬಿತ್ತುತ್ತಾರೆ. ವಿದ್ಯಾರ್ಥಿಗಳು ಸಮಾಜಕ್ಕೆ ಉನ್ನತ ಸೇವೆ ನೀಡುವ ಕನಸು ಕಾಣಬೇಕು. ತಂದೆ ತಾಯಿಗಳೇ ನಮ್ಮ ಪಾಲಿಗೆ ಹೀರೋಗಳು. ನಾವು ಉನ್ನತ ಶಿಕ್ಷಣ ಪಡೆದು ವಿದೇಶಗಳಿಗೆ ಹೋಗಿ ತಂದೆ ತಾಯಿಗಳನ್ನು ಒಂಟಿಯಾಗಿಡುವುದಿಲ್ಲ. ತಂದೆ ತಾಯಿಗಳನ್ನ ನೋಡಿಕೊಂಡು ಹೋಗುವ ಶಿಕ್ಷಣವನ್ನು ನಮಗೆ ಶಿಕ್ಷಕರು ನೀಡಿದ್ದಾರೆ ಎಂದು ಪ್ರತಿಭಾಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡು ಸಮಾರಂಭದಲ್ಲಿದ್ದವರ ಕಣ್ಣಾಲೆಗಳನ್ನು ತೇವಗೊಳಿಸಿದರು.


ಗೆಳೆಯರ ಬಳಗದ ಅಧ್ಯಕ್ಷ ಎ.ಪಾಲಾಕ್ಷಗೌಡ ಅಧ್ಯಕ್ಷತೆವಹಿಸಿದ್ದರು. ವಿದ್ಯಾರ್ಥಿಗಳು, ಪಾಲಕರು, ಪೋಷಕರು, ನಿವೃತ್ತ ನೌಕರರು, ಶಿಕ್ಷಣ ಪ್ರೇಮಿಗಳು ಇದ್ದರು. ಬಳಗದ ಎಂ.ಎಂ.ವಿರೂಪಾಕ್ಷಯ್ಯ, ಎಸ್ ಎಂ.ಶಶಿಧರ, ನಿರ್ದೇಶಕರಾದ ರಾಜಶೇಖರಗೌಡ ಪಾಟೀಲ್, ನಿರಂಜನಮೂರ್ತಿ ಜಿ.ಎಂ., ಮಂಜುನಾಥ ಜಿ.ಎಂ. ನಿರ್ವಹಸಿದರು.




More Stories
ವಿಶ್ವ ಮಲೇರಿಯಾ ಜಾಗೃತಿ ದಿನ: ಬೇವಿನಾಳ ಗ್ರಾಮದಲ್ಲಿ ಸಾರ್ವಜನಿಕರಿಗೆ ಅರಿವು
ಬಳ್ಳಾರಿ ಲಿಡ್ಕರ್ ಎಂಪೋರಿಯಂನಲ್ಲಿ ಚರ್ಮವಸ್ತುಗಳ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ
ಕ್ರೀಡಾ ಜಗತ್ತಿಗೆ ಸ್ಫೂರ್ತಿ ಭಾರತದ ಮಹಿಳಾ ಆರ್ಚರಿ ಪಟು ಪಾಯಲ್ ನಾಗ್