https://youtu.be/NHc6OMSu0K4?si=SI_K4goOPEgwo6h2
‘ನಗುವುದ ಕಲಿಯೋಣ… ನಗುತಾ ಬಾಳೋಣ’ ಎನ್ನುವಂತಹ ಶೀರ್ಷಿಕೆಯ ಮೂಲಕ ತಮ್ಮ ಹಲವು ಬಿಡಿ ಲೇಖನಗಳನ್ನು ಒಂದೆಡೆ ಸಂಗ್ರಹಿಸಿ ಕನ್ನಡ ಜ್ಞಾನಲೋಕಕ್ಕೆ ಅರ್ಪಿಸಿರುವ ಶಿಕ್ಷಕರಾದ ಶೇಖರಯ್ಯ ಟಿ.ಎಚ್.ಎಂ ಅವರಿಗೆ ಮೊದಲಿಗೆ ಅಭಿನಂದನೆಗಳು. ಪ್ರಸ್ತುತ ಕೃತಿ ಶೇಖರಯ್ಯನವರ ತಮ್ಮೂರಿನ ಬಗೆಗಿನ ಪ್ರಾದೇಶಿಕ ಜ್ಞಾನ ಮತ್ತು ಸಾಮಾಜಿಕ ಕಳಕಳಿಯನ್ನು ಪ್ರತಿಧ್ವನಿಸುತ್ತಿದೆ. ಸರಳ ನಿರೂಪಣೆ, ನಿರೂಪಣಾ ತಂತ್ರಗಾರಿಕೆ, ಔಚಿತ್ಯಪೂರ್ಣ ವಿಚಾರಧಾರೆಗಳು, ಬಹುಮುಖಿ ಜ್ಞಾನ, ವಿಷಯದ ಆಳವಾದ ತಿಳುವಳಿಕೆಗಳು ಪ್ರತಿ ಲೇಖನದಲ್ಲೂ ಕಂಡುಬರುತ್ತದೆ. ಸಮಾಜದ ಸರ್ವರಿಗೂ ಒಳಿತಾಗಬೇಕು ಎನ್ನುವ ಭಾವವೊಂದು ಅವರ ನಿರೂಪಣೆಯಲ್ಲಿ ಗೋಚರಿಸುತ್ತಿದೆ. ಒಬ್ಬ ನಿಜವಾದ ಸಾಹಿತ್ಯ ಕಾಳಜಿಯುಳ್ಳ ಲೇಖಕ ಮೊದಲಿಗೆ ತನ್ನ ಸುತ್ತಮುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುತ್ತಾನೆ. ಶೇಖರಯ್ಯ ಅವರ ಬರಹಗಳಲ್ಲಿ ಈ ಗುಣ ಎದ್ದು ಕಾಣುತ್ತಿದೆ. ಸಾಮಾಜಿಕ ಕಳಕಳಿಯೊಂದಿಗೆ ಐತಿಹಾಸಿಕ ಮತ್ತು ಪ್ರಾದೇಶಿಕ ವಿಚಾರಧಾರೆಗಳನ್ನು ನೋಡುವ ಅವರ ದೃಷ್ಟಿಕೋನ ಬಹಳ ಮಹತ್ವದ್ದು. ಈ ನಿಟ್ಟಿನಲ್ಲಿ ಈ ಸಂಕಲನವನ್ನು ಬಹಳ ಅಚ್ಚುಕಟ್ಟಾಗಿ ಸಿದ್ಧಪಡಿಸುವಲ್ಲಿ ಅವರ ಹಾಕಿರುವ ಶ್ರಮ ಕೂಡ ದೊಡ್ಡದು.
ಪ್ರಸ್ತುತ ಸಂಕಲನದಲ್ಲಿ ೧೭ ಲೇಖನಗಳಿವೆ. ಈ ಕೃತಿಯ ಮೊದಲ ಲೇಖನವೇ ಬಾಯಲ್ಲಿ ನೀರು ತರಿಸುತ್ತದೆ. ಇಲ್ಲಿ ಕೂಡ್ಲಿಗಿಯ ಹುಣಸೆಹಣ್ಣಿನ ಬಗೆಗೆ ಬಹಳಷ್ಟು ರುಚಿಕಟ್ಟಾಗಿ ನಿರೂಪಿಸಿದ್ದಾರೆ. ಹುಣಸೆಹಣ್ಣಿನ ವ್ಯಾಪಾರದ ಲಾಭ-ನಷ್ಟಗಳು, ಹುಣಸೆಹಣ್ಣನ್ನು ‘ಬಡಿಸುವ’ ಮತ್ತು ‘ಕುಟ್ಟುವ’ ಪ್ರಕ್ರಿಯೆಗಳು, ಹುಣಸೆಹಣ್ಣಿನ ಅಂತರಾಜ್ಯ ವ್ಯಾಪಾರ ಮತ್ತು ಸಂಬಂಧ ಬೆಸೆಯುವ ಕೊಂಡಿ, ಹುಣಸೆಹಣ್ಣಿನಿಂದ ತಯಾರಿಸಲಾದ ಉದಕ, ಚಟ್ನಿ ಇತ್ಯಾದಿಗಳನ್ನು ಸಾಮಾನ್ಯ ಓದುಗರಿಗೆ ಅರ್ಥವಾಗುವ ಶೈಲಿಯಲ್ಲಿ ಸರಳವಾಗಿ ಮತ್ತು ಅರ್ಥವತ್ತಾಗಿ ನಿರೂಪಿಸಿದ್ದಾರೆ. ಈ ಲೇಖನ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟಗೊಂಡಿರುವುದು ಈ ಲೇಖನದ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಎರಡನೆಯ ಲೇಖನ ‘ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಬೇಕು’ ಎಂಬುದಾಗಿದೆ. ಬಹಳ ಸಲ ಸಾಕಷ್ಟು ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಹೇಗೆ ಎದುರಿಸುವುದು ಎಂಬ ಗೊಂದಲಗಳಿರುತ್ತವೆ. ಪ್ರಸ್ತುತ ಲೇಖನದಲ್ಲಿ ವಿದ್ಯಾರ್ಥಿಗಳ ಪರೀಕ್ಷೆಯ ಭಯವನ್ನು ಹೋಗಲಾಡಿಸಲು ಸಾಕಷ್ಟು ಕಾಳಜಿ, ಆತ್ಮವಿಶ್ವಾಸ, ಶಿಸ್ತು ಧೈರ್ಯ ಕುರಿತ ಮಾರ್ಗದರ್ಶನಗಳಿವೆ. ಪರೀಕ್ಷೆ ಬಂತೆಂದರೆ ವಿದ್ಯಾರ್ಥಿಗಳು ಆಟ, ಊಟಗಳ ಬಗೆಗೆ ಹೆಚ್ಚು ಗಮನ ಹರಿಸದೇ ನಿದ್ದೆಗೆಟ್ಟು ಓದುವವರಿರುತ್ತಾರೆ, ಕೆಲವರು ಪರೀಕ್ಷೆಯ ಭಯದಲ್ಲಿ ಕಷ್ಟಪಟ್ಟು ಓದಿದರೂ ಧೈರ್ಯವಾಗಿ ಪರೀಕ್ಷೆ ಬರೆಯುವಲ್ಲಿ ವಿಫಲರಾಗುತ್ತಾರೆ. ಅಂತಹವರಿಗೆ ಶೇಖರಯ್ಯನವರು ಇಲ್ಲಿ ನೀಡಿರುವ ಸಲಹೆಗಳು ಒಂದೊಂದೂ ಅಮೂಲ್ಯವಾಗಿವೆ. ಮುಂದಿನ ಲೇಖನ ಸಂಕ್ರಾಂತಿ ಹಬ್ಬದ ಕುರಿತ್ತದ್ದಾಗಿದೆ. ಸಂಕ್ರಾಂತಿ ಹಬ್ಬದ ವಿಶೇಷತೆ, ಆಚರಣೆಗಳ ಮಹತ್ವದೊಂದಿಗೆ ವೈಜ್ಞಾನಿಕ ದೃಷ್ಟಿಕೋನವೂ ಇಲ್ಲಿರುವುದು ಲೇಖಕರ ಬಹುಮುಖಿ ಚಿಂತನೆಗೆ ಸಾಕ್ಷಿ. ಮುಂದಿನ ಲೇಖನ ‘ಹೊಸ ವರುಷ’ದ ಕುರಿತಾದದು. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಕುಡಿತ, ಮೋಜು, ಮಸ್ತಿಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುವ ಬದಲಿಗೆ ಹೊಸ ವರುಷದಲ್ಲಿ ‘ಹೊಸ ಸಂಕಲ್ಪ’ಗಳನ್ನು ಮಾಡೋಣ ಎನ್ನುವ ಕುರಿತ ಲೇಖಕರ ಆಲೋಚನೆಗಳು ಅಧಾರಣೀಯ. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಒಳ್ಳೆಯ ಕೆಲಸ-ಕಾರ್ಯಗಳನ್ನು ಆರಂಭಿಸುವ ಮೂಲಕ ಹೊಸ ವರುಷವನ್ನು ಸ್ವಾಗತಿಸಬೇಕು ಎನ್ನುವುದು ಲೇಖಕರ ಕಾಳಜಿಯಾಗಿದೆ.
ಈ ಸಂಕಲನ ‘ಜೋಕುಮಾರಸ್ವಾಮಿ’ ಎನ್ನುವ ಲೇಖನ, ಲೇಖಕರಿಗಿರುವ ಐತಿಹಾಸಿಕ ಮತ್ತು ಪೌರಾಣಿಕ ಜ್ಞಾನಕ್ಕೆ ಉತ್ತಮ ಉದಾಹರಣೆ. ಜೋಕುಮಾರಸ್ವಾಮಿ ಆರಾಧನೆಯ ಇತಿಹಾಸ ಮತ್ತು ಪೌರಾಣಿಕ ಉಲ್ಲೇಖಗಳೊಂದಿಗೆ ಅದರ ಮಹತ್ವವನ್ನು ಪ್ರಸ್ತುತ ಲೇಖನದಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಈ ಲೇಖನಗಳ ಸಂಕಲನದ ಮಹತ್ವದ ಲೇಖನ ‘ನಗುವುದ ಕಲಿಯೋಣ… ನಗುತಾ ಬಾಳೋಣ’ ಇಲ್ಲಿ ನಗುವಿನ ಪ್ರಯೋಜನ ಮತ್ತು ಮಹತ್ವವನ್ನು ಬಹಳ ಅರ್ಥವತ್ತಾಗಿ ಲೇಖಕರು ಬರೆದಿದ್ದಾರೆ. ನಿತ್ಯ ಬದುಕಿನ ಜಂಜಾಟಗಳ ನಡುವೆಯೂ ‘ನಗಲು’ ನಾವೇನು ಮಾಡಬಹುದು ಎನ್ನುವುದರ ಕುರಿತು ಈ ಲೇಖನ ಮಾರ್ಗದರ್ಶನ ನೀಡುತ್ತಿದೆ. ಮುಂದಿನ ಲೇಖನದಲ್ಲಿ ‘ಒಂದು ರಾಷ್ಟ್ರ-ಒಂದು ಚುನಾವಣೆ’ ಕುರಿತಂತೆ ಲೇಖಕರಾಗಿರುವ ಅಭಿಪ್ರಾಯ-ಆಲೋಚನೆಗಳು ವ್ಯಕ್ತವಾಗಿವೆ. ಇಲ್ಲಿ ಲೇಖಕರು ದೇಶದ ಐಕ್ಯತೆಗಾಗಿ ಈ ಪರಿಕಲ್ಪನೆ ಸೂಕ್ತವಾದದು ಎನ್ನುವ ಅಭಿಪ್ರಾಯ ತಳೆದಿದ್ದಾರೆ. ಈ ವಿಷಯ ಕುರಿತಂತೆ ಇನ್ನಷ್ಟು ಸಾಧಕ-ಬಾಧಕಗಳನ್ನು ಚರ್ಚಿಸಿದ್ದರೆ ಈ ಲೇಖನ ಮತ್ತಷ್ಟು ಅರ್ಥಪೂರ್ಣವಾಗುತ್ತಿತ್ತು ಎನಿಸುತ್ತದೆ.
ಔಷದಿ ಗಿಡಮೂಲಿಕೆಯಾದ ‘ಗೆಜ್ಜಡಿಕೆ’ ಎನ್ನುವಂತಹ ಸಸ್ಯ ಕುರಿತು ಮಾಹಿತಿಯನ್ನು ಪ್ರಸ್ತುತ ಕೃತಿಯಲ್ಲಿ ನೀಡಿರುವುದು ವಿಶೇಷವಾಗಿದೆ. ಸಣ್ಣ ರೋಗಕ್ಕೂ ಆಧುನಿಕ ಚಿಕಿತ್ಸಾ ವಿಧಾನಗಳ ಮೊರೆಹೋಗುವ ನಾವುಗಳು ಪ್ರಕೃತಿದತ್ತವಾಗಿ ಸಿಗುವ ಸಹಜ ಚಿಕಿತ್ಸೆಗಳನ್ನು ಮರೆತಿದ್ದೇವೆ. ‘ಗೆಜ್ಜಡಿಕೆ’ ಎನ್ನುವ ಸಸ್ಯದ ಎಲೆಗಳು ಕೊಯ್ದ ಗಾಯಗಳಿಗೆ ಪರಿಣಾಮಕಾರಿ ಔಷಧವಾಗಿದೆ. ದೇಹದ ಯಾವುದಾದರೂ ಭಾಗಗಳು ಕೊಯ್ದಾಗ ಅಥವಾ ತರಚಿದಾಗ ಈ ಎಲೆಯ ರಸವನ್ನು ಹಿಂಡಿದರೆ ತಕ್ಷಣವೇ ರಕ್ತ ಸೋರುವಿಕೆ ನಿಂತು, ಹೆಚ್ಚಿನ ಅಪಾಯಗಳನ್ನು ತಡೆಯುತ್ತದೆ. ಇಂತಹ ವಿಶೇಷ ಗಿಡಮೂಲಿಕೆಗಳು ಕೂಡ್ಲಿಗಿ ತಾಲೂಕಿನ ಹೊಲಗಳ ಬದುವಿನಲ್ಲಿ, ನೀರು ನಿಲ್ಲುವ ಜಾಗಗಳಲ್ಲಿ ಬೆಳೆಯುತ್ತದೆ ಎಂಬುದಾಗಿ ಲೇಖಕರು ಈ ಲೇಖನದಲ್ಲಿ ಸೂಚಿಸಿದ್ದಾರೆ. ಇಂತಹ ವಿಶಿಷ್ಟ ಸಸ್ಯದ ಬಗ್ಗೆ ಮುಂದೆ ಸಂಶೋಧನೆ ನಡೆಸಬಹುದಾದ ಸಾಧ್ಯತೆಗಳನ್ನು ಈ ಲೇಖನ ಹುಟ್ಟುಹಾಕಿದೆ.
‘ಮನೆಯ ಹೊರಗೆ ಗೂಡು ಮಾಡಿ ಮನದ ಒಳಗೆ ಬೀಡುಬಿಟ್ಟ ಅತಿಥಿಗಳು’ ಎನ್ನುವ ಲೇಖನ ಲೇಖಕರ ಜೀವಪರ ಕಾಳಜಿ ಮತ್ತು ಸ್ನೇಹಮಯ ಭಾವಕ್ಕೆ ಸಾಕ್ಷಿ. ಮನುಷ್ಯರು ಪ್ರಾಣಿ-ಪಕ್ಷಿಗಳೊಂದಿಗೆ ಸ್ನೇಹದಿಂದ, ಕೂಡಿ ಬಾಳಬೇಕು ಎನ್ನುವುದನ್ನು ‘ಗುಬ್ಬಚ್ಚಿ ಗೂಡಿನ’ ಕಥೆಯ ಮೂಲಕ ಶೇಖರಯ್ಯ ಇವರು ಬಹಳ ಅರ್ಥಪೂರ್ಣವಾಗಿ ಕಟ್ಟಿಕೊಂಡಿದ್ದಾರೆ. ಮುಂದಿನ ಲೇಖನ ‘ಮೊಬೈಲ್ ಇಲ್ದೆ ಊಟ ಮಾಡಲ್ಲ’ ಇಲ್ಲಿ ಪ್ರಸ್ತುತ ದಿನಗಳಲ್ಲಿ ಮಕ್ಕಳು ಮೊಬೈಲ್‌ಗೆ ಒಗ್ಗಿಕೊಂಡು ಏನೆಲ್ಲಾ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ ಎನ್ನುವುದನ್ನು ಚರ್ಚಿಸಿದ್ದಾರೆ. ಈ ಸಮಸ್ಯೆಯಿಂದ ಹೊರಬರುವ ಮಾರ್ಗಗಳನ್ನು ಸಹ ಲೇಖಕರು ಸೂಚಿಸಿದ್ದಾರೆ. ‘ಸಾವಯುವ ಪದ್ಧತಿಯಲ್ಲಿ ಸಮೃದ್ಧ ಅಡಿಕೆ ಮತ್ತು ಬಾಳೆ’ ಎನ್ನುವ ಲೇಖನದಲ್ಲಿ ವೈಜ್ಞಾನಿಕವಾದ ಆಧುನಿಕವಾದ ಕೃಷಿತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಬಯಲುಸೀಮೆಯ ನೆಲದಲ್ಲಿ ಸಾಕಷ್ಟು ವೈವಿಧ್ಯಮಯ ಕೃಷಿಗಳನ್ನು ಮಾಡಬಹುದು ಎನ್ನುವುದನ್ನು ಶೇಖರಯ್ಯ ಅವರು ಈ ಲೇಖನದಲ್ಲಿ ಚರ್ಚಿಸಿದ್ದಾರೆ. ಈ ಲೇಖನದಲ್ಲಿ ಶೇಖರಯ್ಯ ಅವರಿಗಿರುವ ಕೃಷಿಜ್ಞಾನವನ್ನು, ಅವರ ವೈಜ್ಞಾನಿಕ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತಿದೆ. ಪ್ರಗತಿಪರ ರೈತರಿಗೆ ಇದೊಂದು ಅತ್ಯುತ್ತಮ ಮಾರ್ಗದರ್ಶನ ನೀಡಬಲ್ಲ ಲೇಖನವಾಗಿದೆ.
ಮುಂದಿನ ಲೇಖನಗಳಾದ ‘ದೈವೀಸ್ಥಾನಕ್ಕೇರಿದ ಮಹಾಸತಿ ಶಿಲ್ಪ ಮಾಸ್ತಿಗಲ್ಲು’, ‘ಗುಡೆಕೋಟೆ ಹೋಬಳಿಯ ವಿಶೇಷತೆಗಳು’, ‘ಕೂಡ್ಲಿಗಿ ಹೆಮ್ಮೆಯ ಪವಿತ್ರ ಗಾಂಧೀ ಚಿತಾಬಸ್ಮ ಸ್ಮಾರಕ’ ‘ವಿಸ್ಮಯದ ಅಡಕಲಿ ಗುಂಡು’. ಇಲ್ಲಿ ಕೂಡ್ಲಿಗಿ ತಾಲೂಕಿನ ಬಗ್ಗೆ ಕೆಲವು ಅಮೂಲ್ಯ ವಿಚಾರಧಾರೆಗಳನ್ನು ಕಟ್ಟಿಕೊಡಲಾಗಿದೆ. ಈ ಮೂರು ಲೇಖನಗಳು ಕೂಡ್ಲಿಗಿ ತಾಲೂಕಿನ ಬಗೆಗೆ ಸಾಕಷ್ಟು ಐತಿಹಾಸಿಕ ಮಾಹಿತಿಯನ್ನು ಒದಗಿಸುತ್ತದೆ. ‘ಮಹಾಸತಿ’ ಕಾಲಕ್ರಮೇಣ ಹೇಗೆ ದೇವಿಸ್ಥಾನಕ್ಕೇರಿದಳು ಎನ್ನುವುದನ್ನು ನಿರೂಪಿಸುವಲ್ಲಿ ಲೇಖಕರ ಐತಿಹಾಸಿಕ ಮತ್ತು ಸಮಕಾಲೀನ ಪ್ರಜ್ಞೆ ಕಾಣುತ್ತಿದೆ. ಗುಡೇಕೋಟೆ ಹೋಬಳಿಯ ಪಾಳೇಗಾರರು, ಅವರ ಆಡಳಿತ ಮತ್ತು ಹಿರಿಮೆ, ತ್ಯಾಗಗುಣ, ಸಮಾಜ ಸೇವೆ, ವೀರತನಗಳು ಹಾಗೂ ವರ್ತಮಾನದ ‘ಗುಡೇಕೋಟೆ’ಯ ವಿಶೇಷತೆಗಳು ಲೇಖಕರ ನಿರೂಪಣೆಯಲ್ಲಿ ಔಚಿತ್ಯಪೂರ್ಣವಾಗಿ ಮೂಡಿವೆ. ಗತಿಸಿಹೋದ ಪ್ರಾದೇಶಿಕ ಶ್ರೀಮಂತಿಕೆಯನ್ನು ಅಕ್ಷರ ರೂಪದಲ್ಲಿ ದಾಖಲಿಸಿ ತಮ್ಮ ಊರಿನ ಐತಿಹಾಸಿಕ ಮಹತ್ವವನ್ನು ಓದುಗ ಲೋಕಕ್ಕೆ ಪರಿಚಯಿಸಿರುವ ಶೇಖರಯ್ಯ ಅವರ ಪ್ರಯತ್ನ ನಿಜಕ್ಕೂ ಪ್ರಶಂಶಾರ್ಹ. ‘ನಾನು ಕಂಡ ಅಕ್ಷರ ಜಾತ್ರೆ’ ಎನ್ನುವ ದೀರ್ಘ ಲೇಖನ ‘೮೭ನೇ ಕನ್ನಡ ಸಾಹಿತ್ಯ ಸಮ್ಮೇಳನ’ದಲ್ಲಿ ಭಾಗವಹಿಸಿದ ಲೇಖಕರ ಅನುಭವಗಳನ್ನು ಒಳಗೊಂಡಿದೆ. ಈ ಲೇಖನ ಸಮ್ಮೇಳನದ ಭಾಷಣಗಳು, ಕಾರ್ಯಕ್ರಮಗಳು, ಸಮ್ಮೇಳನದ ಒಟ್ಟು ಆಕರ್ಷಣೆಗಳನ್ನು ತೆರೆದಿಡುತ್ತದೆ. ಕನ್ನಡದ ಈ ಜಾತ್ರೆಯಲ್ಲಿ ‘ಶೇಖರಯ್ಯ’ ಅವರು ಮನಸ್ಸು ಎಷ್ಟೊಂದು ಆಪ್ತವಾಗಿ, ಗಂಭೀರವಾಗಿ, ಕಾಯಕ ಪ್ರಜ್ಞೆಯಲ್ಲಿ, ಸಂಭ್ರಮದಲ್ಲಿ ತೊಡಗಿಸಿಕೊಂಡಿತ್ತೆನ್ನುವುದು ಅವರ ಲೇಖನ ಓದಿದರೆ ತಿಳಿಯುತ್ತದೆ. ಕನ್ನಡದ ಕಾಳಜಿಗೆ, ಅಭಿಮಾನಕೆ, ಪ್ರೀತಿಗೆ ಶೇಖರಯ್ಯ ಅವರಿಗೆ ಅಭಿನಂದನೆಗಳು. ಶೇಖರಯ್ಯ ಅವರು ಶಿಕ್ಷಕರಾಗಿದ್ದರೂ ಸಹ ಒಬ್ಬ ಸುದ್ದಿಪತ್ರಿಕೆ ಬರಹಗಾರ ಬಿತ್ತರಿಸುವ ಸಮ್ಮೇಳನದ ವಿವರಗಳಿಗೆ ಕಮ್ಮಿ ಇಲ್ಲದಂತೆ ಸಮ್ಮೇಳನದ ಇಂಚಿಂಚೂ ವೈಶಿಷ್ಟತೆಗಳನ್ನು ದಾಖಲಿಸುವುದು ಈ ಲೇಖನದ ವಿಶೇಷವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಶೇಖರಯ್ಯ ಅವರ ಈ ಕೃತಿ ವಿವಿಧ ಪುಷ್ಪಗಳ ಸುವಾಸನೆ ತುಂಬಿದ ಹೂದೋಟದಂತಿದೆ. ಸಹೃದಯರಿಗೆ ಇಲ್ಲಿರುವ ಎಲ್ಲ ಪುಷ್ಪಗಳ ಸುವಾಸನೆಯೂ ಒಂದೊಂದು ಬಗೆಯಲ್ಲಿ ಇಷ್ಟವಾಗುವಂತಿದೆ. ಶೇಖರಯ್ಯ ಅವರ ಕನ್ನಡದ ಕಾಯಕ ಹೀಗೆ ನಿರಂತರವಾಗಿರಲಿ. ಭವಿಷ್ಯದಲ್ಲಿ ಇನ್ನಷ್ಟು ಘಮಘಮಿಸುವ ಲೇಖನ ಪುಷ್ಪಗಳು ಅವರ ಕೈಯಿಂದ ಅರಳಲಿ.
ಡಾ. ಮಹೇಂದ್ರ ಟಿ.ಎಂ
ಪೋಸ್ಟ್‌ಡಾಕ್ಟರಲ್ ರಿಸರ್ಚರ್
ಕನ್ನಡ ಭಾರತಿ ವಿಭಾಗ
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ
More Stories
ಜಗದ್ಗುರು ಬಸವಲಿಂಗ ಶ್ರೀಗಳಿಗೆ 32ನೇ ವರ್ಷದ ಜನ್ಮದಿನೋತ್ಸವದ ಸಂಭ್ರಮ
ಕೋಟ್ಯಂತರ ವಿಮಾ ಹಣಕ್ಕಾಗಿ ಕೊಲೆ; ಹೊಸಪೇಟೆಯಲ್ಲಿ 6 ಆರೋಪಿಗಳ ಬಂಧನ : ಎಸ್ಪಿ ಎಸ್ ಜಾಹ್ನವಿ
ಯುದ್ಧಭೂಮಿಯಲ್ಲಿಯೇ ನಿಪುಣ ಆಡಳಿತಗಾರ ಅಳಿಯ ರಾಮರಾಯನ ಶಿರಚ್ಛೇದನ