March 4, 2026

Hampi times

Kannada News Portal from Vijayanagara

ಜಾನಪದ ವಿದ್ವಾಂಸ ಡಾ. ಬಿ.ಎ. ವಿವೇಕ ರೈ ಅವರಿಗೆ “ಪಂಪ ಪ್ರಶಸ್ತಿ” :

https://youtu.be/NHc6OMSu0K4?si=SI_K4goOPEgwo6h2

ಕನ್ನಡದ ಹೆಸರಾಂತ ಹಿರಿಯ ಲೇಖಕರು, ಜಾನಪದ ವಿದ್ವಾಂಸರು, ಸಂಶೋಧಕರು, ಅನುವಾದಕರು, ನಿವೃತ್ತ ಕನ್ನಡ ಪ್ರಾಧ್ಯಾಪಕರು ಮತ್ತು ಕನ್ನಡ ಹಾಗೂ ತುಳು ಭಾಷೆ, ಸಾಹಿತ್ಯಗಳಿಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿಕೊಟ್ಟಿರುವ  ಡಾ. ಬಿ.ಎ. ವಿವೇಕ ರೈ ಅವರಿಗೆ 2024- 25 ನೇ ಸಾಲಿನ ಕನ್ನಡದ ಆದಿಕವಿ ಪಂಪನ ಹೆಸರಲ್ಲಿ ಕೊಡಮಾಡುವ ಕರ್ನಾಟಕ  ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ “ಪಂಪ ಪ್ರಶಸ್ತಿ” ಲಭಿಸಿರುವುದು ಕನ್ನಡ ಸಾರಸ್ವತ ಲೋಕಕ್ಕೆ ಹರ್ಷ ತಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚ ಗ್ರಾಮದ ಅಗ್ರಾಳದಲ್ಲಿ ಕೃಷಿಕ ಕುಟುಂಬದಲ್ಲಿ  08, ಡಿಸೆಂಬರ್ 1946ರಂದು ಜನಿಸಿದ ವಿವೇಕ ರೈ ಅವರ ತಂದೆ ಅಗ್ರಾಳ ಪುರಂದರ ರೈ. ವಿವೇಕ ರೈ ಅವರ ತಂದೆಯವರು ಕೆ.ಶಿವರಾಮ ಕಾರಂತರ ಶಿಷ್ಯ ಹಾಗೂ ಅಭಿಮಾನಿಯಾಗಿದ್ದರು. ಅಲ್ಲದೆ ಗಾಂಧಿವಾದಿ, ಸಾಹಿತಿ, ಪತ್ರಕರ್ತರೂ ಆಗಿದ್ದರು. ತಂದೆಯವರ ಪ್ರೇರಣೆ ಹಾಗೂ ಪ್ರೋತ್ಸಾಹ ಮತ್ತು   ತಾಯಿಯವರು ಪುಸ್ತಕವಿಲ್ಲದೆ ಹಾಡುತ್ತಿದ್ದ ಕುಮಾರವ್ಯಾಸ ಭಾರತ ಹಾಗೂ ಜೈಮಿನಿ ಭಾರತದ ಪದ್ಯಗಳ ಕೇಳ್ಮೆಯ ಪರಿಣಾಮದಿಂದಾಗಿ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಚಿಕ್ಕಂದಿನಲ್ಲಿಯೇ ಕಾರಂತರ ಪುಸ್ತಕಗಳು ಅವರ ಮನೆಗೆ ಬರುತ್ತಿದ್ದರಿಂದ ಅವನ್ನು ವಿವೇಕ ರೈ  ಓದುತ್ತಿದ್ದರಂತೆ.

ಪುಣಚ, ಪುತ್ತೂರುಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢವ್ಯಾಸಂಗದೊಂದಿಗೆ ಬಿ. ಎಸ್ಸಿ. ಪದವಿಯನ್ನು ಪೂರೈಸಿದರು. ತರುವಾಯ  ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ. 1970 ರಲ್ಲಿ ಮಾಡಿದರು. ತಾವು ವಿಜ್ಞಾನ ಪದವಿ ಪಡೆದಿದ್ದರೂ ಕನ್ನಡ ಎಂ.ಎ. ಮಾಡುವಲ್ಲಿಯೂ ಶಿವರಾಮ ಕಾರಂತರು ‘ಎಂ ಎ ಗೆ ಸೀಟು ಸಿಕ್ಕಿದೆ ಸೇರಿಸಲೋ ಬೇಡವೋ’  ಎಂದ ತಂದೆಯವರಿಗೆ ಹೇಳಿದ “ಸಾಹಿತಿಯಾಗ್ತಾನೋ ಇಲ್ಲವೋ, ಸಂಸ್ಕಾರವಂತೂ ಬರುತ್ತೆ ಕನ್ನಡ ಎಂ.ಎ. ಗೆ ಸೇರಿಸಿಬಿಡು” ಎಂಬ ಮಾತು ಪ್ರೇರಣೆಯೆಂದು ಹೇಳಿದ್ದಾರೆ. ಒಮ್ಮೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಡಾ. ಹಾ.ಮಾ.ನಾಯಕರನ್ನು ಭೇಟಿಯಾದಾಗ ‘ನೀವು ತುಳುವಿನಲ್ಲಿ ಏಕೆ ಕೆಲಸ ಮಾಡಬಾರದು’ ಎಂಬ ಪ್ರೇರಣಾದಾಯಕ ನುಡಿ ತುಳು ಭಾಷೆ ಮತ್ತು ಸಾಹಿತ್ಯದ ಅಧ್ಯಯನ, ಸಂಶೋಧನೆಗೆ ಕಾರಣವಾಯಿತು. ಅವರ ಮಾರ್ಗದರ್ಶನದಲ್ಲೇ 1981 ರಲ್ಲಿ ಪಿಎಚ್. ಡಿ. ಪದವಿಗಾಗಿ ಸಂಶೋಧನೆ ಮಾಡಿದರು.   ಅಲ್ಲದೆ ಕು. ಶಿ. ಹರಿದಾಸಭಟ್ಟರ ಸಹಕಾರ ಮತ್ತು ಪ್ರೋತ್ಸಾಹ ನೆರವಾದವು.

ಮಂಗಳೂರು ಸ್ನಾತಕೋತ್ತರ ಕೇಂದ್ರ, ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿ 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸುವುದರ ಜೊತೆಗೆ ಸಂಶೋಧನೆಯಲ್ಲೂ ಮಹತ್ವದ ಕಾರ್ಯಗಳನ್ನು ಮಾಡಿದ್ದಾರೆ.
2004-2007 ರವರೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ, 2007-2009 ರವರಿಗೆ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು. ನಂತರ 2009 ರಿಂದ 2012ರವರೆಗೆ ಅತಿಥಿ ಪ್ರಾಧ್ಯಾಪಕರಾಗಿ ಜರ್ಮನಿಯ ಟ್ಯೂಬಿಂಗನ್ ವಿಶ್ವವಿದ್ಯಾಲಯ, ವ್ಯೂರ್ತ್ಬರ್ಗ್, ಫಿನ್ಲೆಂಡ್ , ಜಪಾನ್, ಅಮೆರಿಕ, ಇಂಗ್ಲೆಂಡ್, ಪೋಲೆಂಡ್ ಮೊದಲಾದ ವಿದೇಶಗಳಲ್ಲಿ ಕನ್ನಡ ಮತ್ತು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ಧಾರ್ಮಿಕ ಪರಂಪರೆಗಳ ಕುರಿತು ಬೋಧನೆ ಹಾಗೂ ಉಪನ್ಯಾಸಗಳನ್ನು ನೀಡಿದ್ದಾರೆ. ಕಲಿಕಾ ಶಿಬಿರಗಳನ್ನು ನಡೆಸಿದ್ದಾರೆ  ತಮ್ಮ ಹಲವಾರು ಸಂಶೋಧನಾ ಬರಹಗಳು ಮತ್ತು ವೈಚಾರಿಕ ಚಿಂತನೆಗಳಿಂದ ಅಂತಾರಾಷ್ಟ್ರೀಯ ವಿದ್ವಾಂಸರ ಗಮನವನ್ನು ಸೆಳೆದಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ ರೈ ಅವರು ಮಾಡಿರುವ ಕೆಲಸ ಮಹತ್ವಪೂರ್ಣವಾದುದು. ‘ತುಳು ಆಗಲಿ, ಕೊಂಕಣಿ ಆಗಲಿ  ಕನ್ನಡವನ್ನು ಬಿಟ್ಟು ಅದಕ್ಕೆ ಅಸ್ತಿತ್ವವಿಲ್ಲ. ಭಾಷಾ ಅಕಾಡೆಮಿಗಳು ಯಾವುದೇ ಜಾತಿಗೆ ಸೀಮಿತವಾಗದೆ ಜಾತ್ಯತೀತವಾಗಿ ಅವುಗಳನ್ನು ಬೆಳೆಸುವುದು ಮುಖ್ಯ’ ಎಂಬ ಧೋರಣೆಯೊಂದಿಗೆ ಅವರ ಕಾರ್ಯವೈಖರಿ ಮತ್ತು ಪ್ರಕಟಣೆಗಳು ಪ್ರಮುಖವೆನಿಸುತ್ತವೆ. ತುಳು ಗಾದೆಗಳು, ತುಳು ಒಗಟುಗಳು, ತೌಳವ ಸಂಸ್ಕೃತಿ, ತುಳುವ ಅಧ್ಯಯನ: ಕೆಲವು ವಿಚಾರಗಳು, ತುಳು ಜಾನಪದ ಸಾಹಿತ್ಯ, ಓರಲ್ ಟ್ರೆಡಿಶನ್ಸ್ ಇನ್ ಸೌತ್ ಇಂಡಿಯಾ ಎಪಿಕ್ಸ್, ತುಳು ಸಾಹಿತ್ಯ ಚರಿತ್ರೆ, ತುಳು ಕಬಿತಗಳು, ಶರಣರ 2500 ವಚನಗಳ ತುಳು ಅನುವಾದ ಈ ಮೊದಲಾದವು ರೈ ಅವರು ತುಳು ಭಾಷಾ ಸಾಹಿತ್ಯಕ್ಕೆ ನೀಡಿದ ಮಹತ್ವದ ಕೊಡುಗೆಗಳಾಗಿವೆ.

 

ಸಂಶೋಧನಾತ್ಮಕ,  ವೈಚಾರಿಕ, ಅನುವಾದ, ಅಂಕಣ ಬರಹ-ಮೊದಲಾದ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ವಿವೇಕ ರೈ ಅವರು ರಚಿಸಿದ್ದಾರೆ. ಆನ್ವಯಿಕ ಜಾನಪದ, ಭಾರತೀಯ ಪರಂಪರೆ ಮತ್ತು ಸಾಹಿತ್ಯದಲ್ಲಿ ಒಗಟು (ಅನುವಾದ), ಸಂಸ್ಕೃತಿ ಚಿಂತನೆ ಕುರಿತಂತೆ ಗಿಳಿಸೂವೆ, ಇರುಳ ಕಣ್ಣು-ಅಂಕಣ ಬರಹಗಳು ಓದುಗರನ್ನು ತೀವ್ರವಾಗಿ ಆಕರ್ಷಿಸಿವೆ. ರಂಗಭೂಮಿಯನ್ನು ಕುರಿತು ‘ರಂಗದೊಳಗಣ ಬಹಿರಂಗ’ ಕನ್ನಡ ನಾಡು-ನುಡಿಯ ಬರಹಗಳು, ಜರ್ಮನಿಯ ಒಳಗಿಂದ, ಅನುವಾದಿತ ಕಥಾಸಂಕಲನ ‘ಚಿಲಿಯಲ್ಲಿ ಭೂಕಂಪ’, ಅನುವಾದಿತ ನಾಟಕ ‘ನೆತ್ತರ ಮದುವೆ’, ‘ಅರಿವು ಸಾಮಾನ್ಯವೇ’, ‘ಕನ್ನಡ ದೇಸಿ ಸಮ್ಮಿಲನದ ನುಡಿಗಳು’, ‘ಬದುಕು ಕಟ್ಟಿದ ಬಗೆಗಳು’, ‘ಕ್ಯಾಮರಾ ಕಣ್ಣಿನಲ್ಲಿ ಜರ್ಮನಿ’- ಮೊದಲಾದವು ವಿವೇಕ ರೈ ಅವರ ಇತರ ಕೃತಿಗಳು. ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿಯನ್ನು ಕ್ಯಾತ್ರಿನ್ ಬೈಂಡರ್ ಅವರೊಂದಿಗೆ  ಜರ್ಮನ್ ಭಾಷೆಗೆ ಅನುವಾದ ಮಾಡಿರುವುದು, ಪ್ರೊ.ಸಿ.ಎನ್. ರಾಮಚಂದ್ರನ್ ಅವರೊಂದಿಗೆ ‘ಕ್ಲಾಸಿಕಲ್ ಕನ್ನಡ ಪೊಯೆಟ್ರಿ ಅಂಡ್ ಪ್ರೋಸ್ : ರೀಡರ್’, ಮತ್ತು ‘ಮಿಡಿವಲ್ ಕನ್ನಡ ಲಿಟರೇಚರ್ ಎ ರೀಡರ್’, ಜರ್ಮನಿಯ ಹೈಡ್ರನ್ ಬ್ರುಕ್ನರ್ ಅವರೊಟ್ಟಿಗೆ ‘ಓರಲ್ ಟ್ರೆಡಿಷನ್ಸ್ ಇನ್ ಸೌತ್ ಇಂಡಿಯಾ : ಓಲ್ಡ್ ಎಪಿಕ್ಸ್’, ಲೌರಿ ಹೊಂಕೋ,ಅನ್ನೆಲಿ ಹೊಂಕೋ, ಚಿನ್ನಪ್ಪಗೌಡ ಅವರೊಂದಿಗೆ ಸಂಪಾದಿಸಿದ – ‘ಸಿರಿ ಎಪಿಕ್ ಆಸ್ ಪರ್ಫಾರ್ಮ್ಡ್ ಬೈ ಗೋಪಾಲ ನಾಯಕ, ಕಲ್ಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಸಿದ್ಧಪಡಿಸಿದ ‘ಎ ಹ್ಯಾಂಡ್ ಬುಕ್ ಆಫ್ ಕನ್ನಡ ಪ್ರಾಸಿಡಿ’     ಕೃತಿಗಳು ಕನ್ನಡ ಮತ್ತು ಇತರ ಭಾಷೆಗಳ ನಡುವೆ ನಿರ್ಮಾಣ ಮಾಡಿದ ಸಾಂಸ್ಕೃತಿಕ, ಸಾಹಿತ್ಯಕ ವಿಸ್ತರಣದ   ಸೇತುವೆಗಳಾಗಿವೆ.
ಸಮಗ್ರ ಕನ್ನಡ ಜೈನ ಸಾಹಿತ್ಯ -19 ಸಂಪುಟಗಳು, ಮಂಗಳೂರು ದರ್ಶನ- 3 ಸಂಪುಟಗಳು, ರಾಘವಾಂಕನ ಸಮಗ್ರ ಕಾವ್ಯ, ಯಕ್ಷಗಾನ ಪ್ರಸಂಗ ಸಂಪುಟ, ಮಲೆ ಕುಡಿಯರು,  ಮೊದಲಾದ ಸಂಪಾದನಾ ಕೃತಿಗಳು ರೈ ಅವರ ಸಾಹಿತ್ಯಾಧ್ಯಯನದ ವೈಶಾಲ್ಯತೆ, ಗಹನತೆಯ ಪ್ರತಿಬಿಂಬವಾಗಿವೆ .

ವಿವೇಕ ರೈ ಅವರ ಬಹುಮುಖೀ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ, ಕರ್ನಾಟಕ ಜಾನಪದ ಅಕಾಡೆಮಿಯ ‘ಜನಪದ ತಜ್ಞ ಪ್ರಶಸ್ತಿ’, ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಹಾ. ಮಾ. ನಾ. ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕಾರಂತ ಪ್ರಶಸ್ತಿ, ‘ನೆತ್ತರ ಮದುವೆ’ ಅನುವಾದ ಕೃತಿಗೆ ಕುವೆಂಪು ಭಾಷಾ ಭಾರತಿ ಪ್ರಶಸ್ತಿ -ಹೀಗೆ ಹಲವು ಗೌರವ ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರ ರಾಗಿದ್ದಾರೆ. ಕರ್ನಾಟಕ ಜಾನಪದ ಸಮ್ಮೇಳನ, ಕರ್ನಾಟಕ ಸಂಸ್ಕೃತಿ ಸಮ್ಮೇಳನ, ಕರ್ನಾಟಕ ದೇಸಿ ಸಮ್ಮೇಳನ, ಕುವೈತ್ ತುಳು ಸಮ್ಮೇಳನ, ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್   ಸಮ್ಮೇಳನಗಳ ಅಧ್ಯಕ್ಷ ಗೌರವಗಳ ಜೊತೆಗೆ ಇದೀಗ ಕರ್ನಾಟಕ ಸರ್ಕಾರದ ಪ್ರತಿಷ್ಠಿತ “ಪಂಪ ಪ್ರಶಸ್ತಿ” ಗೆ ಭಾಜನರಾಗಿರುವುದು ಕಿರೀಟಪ್ರಾಯವಾಗಿದೆ.

ಉನ್ನತ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದನ್ನು ಕುರಿತಂತೆ ಡಾ. ಬಿ. ಎ. ವಿವೇಕ ರೈ ಅವರ ಚಿಂತನೆಗಳು ಗಮನೀಯವಾಗಿವೆ. ‘ಉನ್ನತ ಶಿಕ್ಷಣ ಕುರಿತ ಚಿಂತನೆಗಳು ದುರ್ಬಲವಾಗಿವೆ. ಯಾವುದೇ ಸುಧಾರಣೆಗಳನ್ನು ತಂದರೂ ಅದು ಹೊರಮೈಯಲ್ಲಿ ಮಾತ್ರ ಬದಲಾವಣೆಯಾಗುತ್ತದೆ ಆಳವಾಗಿ ಆಗುತ್ತಿಲ್ಲ. ಇತರ ಕ್ಷೇತ್ರಗಳಲ್ಲಿನ ಉದಾರೀಕರಣದಂತೆ ಶಿಕ್ಷಣ ಸಂಸ್ಥೆಗಳು, ಬೋಧಕರು ಬೋಧನೆ, ಪರೀಕ್ಷೆ, ಮೌಲ್ಯಮಾಪನಗಳಲ್ಲಿ ಉದಾರೀಕರಣವನ್ನು ಅಳವಡಿಸಿಕೊಂಡುಬಿಟ್ಟಿದ್ದಾರೆ. ಶಿಕ್ಷಣ ಸಂಸ್ಥೆಗಳು ನ್ಯಾಕ್ ನಲ್ಲಿ ಉತ್ತಮ ಶ್ರೇಣಿ ಪಡೆಯಲು ಅನುಸರಿಸುತ್ತಿರುವ ಮಾರ್ಗಗಳು ಬೇರೆಯೇ ಆಗಿವೆ. ವಿದ್ಯಾರ್ಥಿಗಳ ನಿಜವಾದ ಮೌಲ್ಯಮಾಪನ ಸಾಧ್ಯವಾಗುತ್ತಿಲ್ಲ. ಪರೀಕ್ಷೆ, ಅಂಕ, ರಾಂಕ್- ಈ ಚಕ್ರದಿಂದ ಬಿಡಿಸಿ ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಪ್ರಚೋದಿಸುವ ಪ್ರಯತ್ನಗಳು ಆಗಬೇಕು. ಬೋಧಕರು ನಿರಂತರ ಕಲಿಯುವ ಮನಃಸ್ಥಿತಿಯಿಂದ ದೂರವಾಗಿ ಪ್ರಾಧ್ಯಾಪಕರಾಗಿ ಬಡ್ತಿ ಪಡೆದರೆ ಸಾಕು, ಏನನ್ನೂ ಓದಬೇಕಿಲ್ಲ ಎಂಬ ಮನಃಸ್ಥಿತಿಗೆ ತಲುಪಿದ್ದಾರೆ. ಅವರು ಅದರಿಂದ ಹೊರ ಬರಬೇಕಾಗಿದೆ. ಅಂತೆಯೇ ವಿಶ್ವವಿದ್ಯಾಲಯಗಳು ಮೂರು ವರ್ಷಕ್ಕೊಮ್ಮೆ ಪಠ್ಯಕ್ರಮ ಬದಲಿಸಿದರೆ ಪ್ರಯೋಜನವಿಲ್ಲ. ಪರಂಪರೆ ಮತ್ತು ಆಧುನಿಕತೆಗಳ  ಮೇಳೈಕೆಯೊಂದಿಗೆ ವರ್ತಮಾನ ಹಾಗೂ ಭವಿಷ್ಯತ್ತಿಗೆ ಉಚಿತವಾದ ಜ್ಞಾನವನ್ನು ಕಂಡುಕೊಳ್ಳುವ ತಲಸ್ಪರ್ಶಿ ಪ್ರಯತ್ನಗಳು, ಸಂಶೋಧನೆಗಳು ನಡೆಯಬೇಕಾಗಿದೆ. ಜನಪದದ ಬಗ್ಗೆ ಮಾತನಾಡುತ್ತಾ ಜನರನ್ನು ಹೊರಗಿಡುವ ಕ್ರಮ ವಿಶ್ವವಿದ್ಯಾಲಯಗಳಲ್ಲಿ ಬದಲಾಗಬೇಕು. ಅಧ್ಯಾಪಕರಾದವರು ತರಗತಿಯಲ್ಲಿ ತಾಳ್ಮೆಗೆಡಬಾರದು- ಈ ಮೊದಲಾದ ಅವರ ಚಿಂತನಾ ಕ್ರಮಗಳ ಕುರಿತು ಇಂದು ಚಿಂತನ ಮಂಥನಗಳು ಅಗತ್ಯ.

ಡಾ. ಬಿ. ಜಿ. ಕನಕೇಶಮೂರ್ತಿ
ವಿಶ್ರಾಂತ ಪ್ರಾಧ್ಯಾಪಕರು.

96866 17897

Please follow and like us:

 

 

 

 

 

Translate »
[t4b-ticker]
error: Content is protected !!