https://youtu.be/NHc6OMSu0K4?si=SI_K4goOPEgwo6h2

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಮುಖ ಉದ್ದೇಶಗಳು ಹಾಗೂ ವಿಶೇಷತೆಗಳು
ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಬಲಿಷ್ಠಗೊಳಿಸಲು ಮತ್ತು ರಾಜ್ಯದ ಮಕ್ಕಳ ಭವಿಷ್ಯವು ಬಾಲ್ಯಾವಸ್ಥೆಯಿಂದಲೇ ಆಶಾದಾಯಕವಾಗಿರಲು ಭದ್ರಬುನಾದಿ ಹಾಕುವ ದೂರದೃಷ್ಟಿಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ.
ಇಲಾಖೆಯ ಹಿನ್ನೆಲೆ: 1957ರ ಅವಧಿಯಲ್ಲಿ, ಸಾಮಾಜಿಕ ಶಾಸನದ ವಿವಿಧ ವಸ್ತುಗಳ ಅಡಿಯಲ್ಲಿ ಕೆಲಸ ನೋಡಿಕೊಳ್ಳಲು ಮತ್ತು ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಸಂಬAಧ ಹೊಂದಿದ್ದಕ್ಕಾಗಿ ಪ್ರೊಬೇಷನ್ ಅಂಡ್ ಆಫ್ಟರ್-ಕೇರ್ ಸರ್ವೀಸಸ್ ಡಿಪಾರ್ಟಮೆಂಟ್ ಎಂಬ ಪ್ರತ್ಯೇಕ ಇಲಾಖೆ ರಚಿಸಲಾಯಿತು. ಇದಲ್ಲದೆ, ಸಾಮಾಜಿಕ ಮತ್ತು ನೈತಿಕ ನೈರ್ಮಲ್ಯ ಮತ್ತು ನಂತರದ ಆರೈಕೆ ಕಾರ್ಯಕ್ರಮ ಮತ್ತು ಕಲ್ಯಾಣ ಸೇವೆಗಳ ಅಡಿಯಲ್ಲಿ ಈ ಇಲಾಖೆಯನ್ನು ಸಹ ನೇಮಿಸಲಾಯಿತು. ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಕಟಣೆಯ ನಂತರ 1975ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನಂತರದ ಆರೈಕೆ ಸೇವೆಗಳು ವಿಭಾಗವನ್ನು ಪರಿವರ್ತಿಸಲಾಯಿತು. ಮಹಿಳಾ ಅಭಿವೃದ್ಧಿ ನಿಗಮವನ್ನು ಮಹಿಳೆಯರಿಗೆ ಆದಾಯ ಉತ್ಪಾದಿಸುವ ಕಾರ್ಯಕ್ರಮಗಳಿಗೆ 1987ರಲ್ಲಿ ಸ್ಥಾಪಿಸಲಾಯಿತು.
ಇಲಾಖೆಯ ಉದ್ದೇಶವೇನು: 0-6 ವರ್ಷದ ಮಕ್ಕಳ ಸರ್ವತೋಮುಖ ಬೆಳವಣಿಗೆ., 11-18 ವರ್ಷದ ಪ್ರಾಯ ಪೂರ್ವ ಬಾಲಕಿಯರ ಸಬಲೀಕರಣ., ಪಾಲನೆ ಮತ್ತು ಪೋಷಣೆ ಅಗತ್ಯವಿರುವ ಹಾಗೂ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸುರಕ್ಷಿತವಾದ ವಾತಾವರಣ ಕಲ್ಪಿಸುವುದು., ಬಾಲ್ಯ ವಿವಾಹ ತಡೆಗಟ್ಟುವುದು., ಹೆಣ್ಣು ಮಗುವಿನ ವಿರುದ್ಧವಿರುವ ಪಕ್ಷಪಾತ ಹೋಗಲಾಡಿಸುವುದು., ಇಳಿಯುತ್ತಿರುವ ಲಿಂಗ ಪ್ರಮಾಣ ಸರಿಪಡಿಸುವುದು ಹಾಗೂ ಸಾಮಾಜಿಕ ಪಿಡುಗುಗಳ ನಿರ್ಮೂಲನೆ., ಮಹಿಳೆಯರ ಮತ್ತು ಮಕ್ಕಳ ಸಾಗಣೆ ತಡೆಯುವುದು., ಮಹಿಳೆಯರ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಬಲೀಕರಣ., ಕೌಟುಂಬಿಕ, ಸಾಮಾಜಿಕ ಬೆಂಬಲವಿಲ್ಲದ, ಪ್ರತ್ಯೇಕ ಆದಾಯವಿಲ್ಲದ, ಖಂಡನೆಗಳಿಗೆ ಅವಕಾಶವಿರುವಂತಹ ಮಹಿಳೆಯರಿಗೆ ನೆರವು ಹಾಗೂ ಪುನರ್ವಸತಿ ಕಲ್ಪಿಸುವುದು., ಮಹಿಳಾ ಉದ್ದೇಶಿತ ಆಯವ್ಯಯ ನಿಗದಿಪಡಿಸುವ ಮೂಲಕ ಮಹಿಳೆಯರ ಪರ ನೀತಿ ಯೋಜನೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ಲಿಂಗತ್ವ ಸಮಾನತೆ ಪಡೆಯುವುದು., ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣ ನಿಶ್ಚಯಪಡಿಸುವುದು., ರಾಜ್ಯ ಸಮಾಜ ಕಲ್ಯಾಣ ಮಂಡಳಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಜಾಲದ ಮೂಲಕ ಮಹಿಳೆಯರನ್ನು ಹಾಗೂ ಮಕ್ಕಳನ್ನು ಬೆಂಬಲಿಸುವ ಸೇವೆಗಳನ್ನು ಒದಗಿಸುವುದು., ದುಡಿಯುವ ಮಹಿಳೆಯರ ಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರ ಯೋಜನೆಯ ಅನುಷ್ಠಾನ ಹಾಗೂ ತಿದ್ದುಪಡಿ., ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ಯೋಜನೆಗಳನ್ನು ಅನುಷ್ಠಾನಗೊಳಿಸುವುದು., ಮಹಿಳಾ ಆಯೋಗದ ಮೂಲಕ ನ್ಯಾಯ ದೊರಕಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಹಿಳೆಯರನ್ನು ಸಬಲೀಕರಿಸುವುದು ಮತ್ತು ಬಾಲ ವಿಕಾಸ ಅಕಾಡೆಮಿ ಹಾಗೂ ಬಾಲಭವನಗಳ ಮೂಲಕ ಮಕ್ಕಳಲ್ಲಿ ಹುದುಗಿರುವ ಸೃಜನಾತ್ಮಕ ಪ್ರತಿಭೆಯನ್ನು ಹೊರಹೊಮ್ಮಲು ಕ್ರಿಯಾತ್ಮಕ, ಸೃಜನಾತ್ಮಕ ಹಾಗೂ ಮನರಂಜನಾ ಕಾರ್ಯಕ್ರಮಗಳ ಅನುಷ್ಟಾನಗೊಳಿಸುವ ಉದ್ದೇಶಗಳೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕಾರ್ಯ ನಿರ್ವಹಿಸುತ್ತಿದೆ.

ಪ್ರಮುಖ ಯೋಜನೆಗಳು: ಗೃಹಲಕ್ಷ್ಮೀ ಯೋಜನೆ, ಸ್ತ್ರೀ ಶಕ್ತಿ ಯೋಜನೆ, ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆ, ಮಾತೃವಂದನಾ ಯೋಜನೆ ಸೇರಿದಂತೆ ನಾನಾ ಯೋಜನೆಗಳನ್ನು ಇಲಾಖೆಯ ಅನುಷ್ಠಾನಗೊಳಿಸುತ್ತಿದೆ.
ಗೃಹಲಕ್ಷ್ಮೀ ಯೋಜನೆ: ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಕುಟುಂಬದಲ್ಲಿನ ಯಜಮಾನಿಯೊಬ್ಬರು ಆರ್ಥಿಕವಾಗಿ ಸಬಲರಾದಲ್ಲಿ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತದೆ. ಇದನ್ನರಿತು ರಾಜ್ಯ ಸರ್ಕಾರವು ಗೃಹಲಕ್ಷಿö್ಮ ಯೋಜನೆಯನ್ನು ಜಾರಿ ಮಾಡಿದ್ದು ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂ.ಗಳನ್ನು ನೀಡಲಾಗುತ್ತದೆ. ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರು ಈ ಯೋಜನೆಯ ಅರ್ಹ ಫಲಾನುಭವಿಯಾಗುತ್ತಾರೆ. ಒಂದೇ ಕುಟುಂಬದಲ್ಲಿ ಒಂದಕ್ಕಿAತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಈ ಯೋಜನೆಯು ಅನ್ವಯಿಸುತ್ತದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತ್, ನಾಡ ಕಚೇರಿಗಳಲ್ಲಿ ಬ್ಯಾಂಕ್ ಪಾಸಬುಕ್ ಮತ್ತು ಆಧಾರ ಕಾರ್ಡ್ಗಳ ಜೊತೆಗೆ ಆಫ್ ಲೈನ್‌ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಸಮಗ್ರ ಶಿಶು ಅಭಿವೃದ್ಧಿ ಯೋಜನೆ: ಈ ಯೋಜನೆಯನ್ನು ಪ್ರಾಯೋಗಿಕವಾಗಿ 1975ರಲ್ಲಿ ರಂದು ಮೈಸೂರು ಜಿಲ್ಲೆಯಿಂದ ಆರಂಭಿಸಲಾಯಿತು. ಈಗ ರಾಜ್ಯದ ಎಲ್ಲಾ ತಾಲ್ಲೂಕುಗಳಿಗೆ ವಿಸ್ತರಿಸಲಾಗಿದೆ. ಗರ್ಭಿಣಿ, ಬಾಣಂತಿ, ಕಿಶೋರಿಯರು ಮತ್ತು 6 ವರ್ಷದೊಳಗಿನ ಮಕ್ಕಳ ಕಲ್ಯಾಣವು ಈ ಯೋಜನೆಯ ಮುಖ್ಯ ಗುರಿಯಾಗಿದೆ. 0-6 ವರ್ಷದ ಮಕ್ಕಳ ಆರೋಗ್ಯ, ಪೌಷ್ಠಿಕಮಟ್ಟ ವೃದ್ಧಿಸುವುದು., ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವುದು., ಮಕ್ಕಳಲ್ಲಿ ಸಾವು, ಅನಾರೋಗ್ಯ, ಅಪೌಷ್ಠಿಕತೆ ಮತ್ತು ಶಾಲಾ ಬಿಡುವಿಕೆಯನ್ನು ಕಡಿಮೆಗೊಳಿಸುವುದು., ಶಿಶು ಅಭಿವೃದ್ಧಿ ಕಾರ್ಯಕ್ರಮವನ್ನು ಉತ್ತಮಗೊಳಿಸುವ ಕಾರ್ಯನೀತಿ ಮತ್ತು ಅನುಷ್ಠಾನಗೊಳಿಸುವ ದಿಸೆಯಲ್ಲಿ ಪರಿಣಾಮಕಾರಿಯಾದ ಸಮನ್ವಯತೆಯನ್ನು ಸಾಧಿಸುವುದು ಹಾಗೂ ಆರೋಗ್ಯ ಮತ್ತು ಪೌಷ್ಠಿಕತೆಯ ಶಿಕ್ಷಣ ನೀಡುವುದರ ಮೂಲಕ ತಾಯಂದಿರಲ್ಲಿ ತಮ್ಮ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕತೆಯ ಅಗತ್ಯಗಳನ್ನು ಸರಿಯಾಗಿ ನೋಡಿಕೊಳ್ಳುವ ಸಾಮಥ್ರ‍್ಯ ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಸ್ತ್ರೀಶಕ್ತಿ ಯೋಜನೆ: ಸ್ತ್ರೀಶಕ್ತಿ ಯೋಜನೆಯಡಿ ಸುತ್ತುನಿಧಿ, ಬ್ಯಾಂಕ್ ಲಿಂಕೇಜ್, ಸಾಲದ ಮೇಲಿನ ಬಡ್ಡಿಗೆ ಶೇಕಡ 6ರ ಸಹಾಯ ಧನ, ಅಧಿಕ ಉಳಿತಾಯ ಮಾಡಿರುವ ಗುಂಪುಗಳಿಗೆ ಪ್ರೋತ್ಸಾಹಧನ, ವಿವಿಧ ಹಂತಗಳಲ್ಲಿ ತರಬೇತಿ, ಆದಾಯೋತ್ಪನ್ನ ಚಟುವಟಿಕೆಯಲ್ಲಿ ತೊಡಗಿರುವ ಗುಂಪುಗಳಿಗೆ ಪ್ರೋತ್ಸಾಹಧನ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ, ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುತ್ತದೆ.
ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆ: ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿಗಳ ಮೂಲಕ ಆಯ್ಕೆಯಾದ 7500 ಸ್ವ-ಸಹಾಯ ಗುಂಪುಗಳಿಗೆ ತಲಾ 1 ಲಕ್ಷ ರೂ.ದಂತೆ ಬೀಜಧನ ಒದಗಿಸಲಾಗುತ್ತದೆ.
ಬಾಲ ಸ್ನೇಹಿ ಯೋಜನೆ: ಅಂಗನವಾಡಿ ಕೇಂದ್ರವನ್ನು ಮಕ್ಕಳಿಗಾಗಿ ಸಂತೋಷ ಮತ್ತು ಆನಂದದಾಯಕ ಸ್ಥಳವನ್ನಾಗಿ ಮಾಡುವುದು ಬಾಲಸ್ನೇಹಿಯು ಪ್ರಮುಖ ಅಂಶವಾಗಿದೆ. 10,000 ಅಂಗನವಾಡಿ ಕೇಂದ್ರಗಳನ್ನು ಬಾಲಸ್ನೇಹಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ.
ಅಪೌಷ್ಠಿಕ ಮಕ್ಕಳ ವೈದ್ಯಕೀಯ ವೆಚ್ಚ ಭರಿಸುವ ಯೋಜನೆ: ಈ ಯೋಜನೆಯಡಿ ತೀವ್ರ ನ್ಯೂನಪೋಷಣೆಗೊಳಗಾದ ಮಕ್ಕಳ ಪೌಷ್ಠಿಕಮಟ್ಟ ಸುಧಾರಿಸಿ ಸಾಮಾನ್ಯ ದರ್ಜೆಗೆ ತರಲು ವೈದ್ಯಾಧಿಕಾರಿಗಳ ಸೂಚನೆಯಂತೆ ಔಷಧೋಪಚಾರ ಹಾಗೂ ಚಿಕಿತ್ಸಾ ಆಹಾರಕ್ಕಾಗಿ ಪ್ರತಿ ಮಗುವಿಗೆ ವರ್ಷಕ್ಕೆ 2000 ರೂ.ನೀಡಲಾಗುತ್ತಿದೆ.
ಪ್ರಾಯಪೂರ್ವ ಬಾಲಕಿಯರ ಯೋಜನೆ: ಪೂರಕ ಪೌಷ್ಠಿಕ ಆಹಾರವನ್ನು 11-14 ವರ್ಷದ ಶಾಲೆಯಿಂದ ಹೊರಗೆ ಉಳಿದ ಕಿಶೋರಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಒದಗಿಸಲಾಗುತ್ತದೆ. ಪೌಷ್ಠಿಕೇತರ ಅಂಶದಡಿ ಕಿಶೋರಿಯರಿಗೆ ಆರೋಗ್ಯ ತಪಾಸಣೆ, ಪೌಷ್ಠಕತೆ ಮತ್ತು ಆರೋಗ್ಯ ಶಿಕ್ಷಣ, ಕುಟುಂಬ ಕಲ್ಯಾಣ, ಮಕ್ಕಳ ಪಾಲನೆ, ಗೃಹ ನಿರ್ವಹಣೆ, ಸಂತಾನೋತ್ಪತಿ ಮತ್ತು ಲೈಂಗಿಕ ಆರೋಗ್ಯ, ಜೀವನ ಕೌಶಲ್ಯ ಶಿಕ್ಷಣ, ವೃತ್ತಿಪರ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುತ್ತದೆ.
ಮಾತೃವಂದನಾ ಯೋಜನೆ: ಇದು 60:40 ಕೇಂದ್ರ : ರಾಜ್ಯ ಸರ್ಕಾರದ ಧನ ಸಹಾಯ ಯೋಜನೆಯಾಗಿದೆ. 0-6 ತಿಂಗಳವರೆಗೆ ಕೇವಲ ತಾಯಿ ಎದೆ ಹಾಲುಣಿಸುವುದು, ಹೆರಿಗೆಯಾದ ಒಂದು ಗಂಟೆಯೊಳಗೆ ಎದೆ ಹಾಲುಣಿಸುವುದು ಹಾಗೂ ಅತಿ ಸಣ್ಣಮಕ್ಕಳಿಗೆ ಉಣಿಸುವ ಅಭ್ಯಾಸಗಳನ್ನು ಬೆಳಸಿಕೊಳ್ಳುವ ಬಗ್ಗೆ ಮಹಿಳೆಯರನ್ನು ಪ್ರೋತ್ಸಾಹಿಸುವುದು ಹಾಗೂ ಗರ್ಭಿಣಿಯರಿಗೆ ಬಾಣಂತಿಯರಿಗೆ ಆರೋಗ್ಯ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಲು ನಗದು ರೂಪದಲ್ಲಿ ಪ್ರೋತ್ಸಾಹಧನ ನೀಡಲಾಗುತ್ತದೆ. ಮೊದಲನೆ ಕಂತು 1000 ರೂ.ಗಳನ್ನು ಗರ್ಭಿಣಿಯಾಗಿ 6 ತಿಂಗಳಲ್ಲಿ, ಎರಡನೇ ಕಂತು 2000 ರೂ.ಗಳನ್ನು ಗರ್ಭಿಣಿಯಾಗಿ 6 ತಿಂಗಳ ನಂತರ ನೀಡಲಾಗುವುದು, ಮೂರನೇಯ ಕಂತು 2000 ರೂ.ಗಳನ್ನು ಮಗು ಮೊದಲನೇ ಹಂತದ ಚುಚ್ಚುಮದ್ದು ಪಡೆದ ನಂತರ ಒಟ್ಟು 3 ಕಂತುಗಳಲ್ಲಿ 5000 ರೂ.ಗಳ ಹೆರಿಗೆ ಭತ್ಯೆಯನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಯ ಖಾಖೆಗೆ ಜಮಾ ಮಾಡಲಾಗುತ್ತದೆ.

ಸಾಂತ್ವನ ಯೋಜನೆ: ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ನೆರವು ಒದಗಿಸುವುದು, ಸಾಂತ್ವನ ಕೇಂದ್ರಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟು 180 ಸಾಂತ್ವನ ಕೇಂದ್ರಗಳು ಕಾರ್ಯನಿರತವಾಗಿವೆ.
ಬಾಲಕಿಯರ ವಸತಿ ನಿಲಯಗಳು: ಗ್ರಾಮಾಂತರ ಹಾಗೂ ಹಿಂದುಳಿದ ಪ್ರದೇಶಗಳ ಹೆಣ್ಣು ಮಕ್ಕಳಲ್ಲಿ ಶಿಕ್ಷಣ ಪ್ರೋತ್ಸಾಹಿಸಲು ಹಾಗು ಶಾಲೆ ಬಿಡುವ ಹೆಣ್ಣುಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು ಇಲಾಖಾಯಿಂದ ಬಾಲಕಿಯರ ವಸತಿ ನಿಲಯಗಳನ್ನು ನಡೆಸಲಾಗುತ್ತಿದೆ. ಸರ್ಕಾರ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಪ್ರೀ ಮೆಟ್ರ‍್ರಿಕ್ ಮತ್ತು ಪೋಸ್ಟ್ ಮೆಟ್ರ‍್ರಿಕ್ ವಿದ್ಯಾರ್ಥಿನಿಯರಿಗೆ ವಸತಿ ಸೌಕರ್ಯ ಕಲ್ಪಿಸಲಾಗಿದೆ. ರಾಜ್ಯದಲ್ಲಿ 33 ಬಾಲಕಿಯರ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ.
ವಸತಿಗೃಹ ನಿರ್ಮಾಣ ಯೋಜನೆ: ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ಸುರಕ್ಷಿತ ಹಾಗೂ ಯೋಗ್ಯ ವಸತಿ ಸೌಕರ್ಯ ಕಲ್ಪಿಸಲು ಪ್ರತಿ ಜಿಲ್ಲಾ ಕೇಂದ್ರದಲ್ಲಿ 4000 ಚದರಡಿ ನಿವೇಶನದಲ್ಲಿ ಉದ್ಯೋಗಸ್ಥ ಮಹಿಳಾ ವಸತಿಗೃಹ ನಿರ್ಮಿಸಲು ನೋಂದಾಯಿತ ಖಾಸಗಿ ಸಂಸ್ಥೆ ಅಥವಾ ಸ್ವಯಂ ಸೇವಾ ಸಂಸ್ಥೆಗಳಿಗೆ 25 ಲಕ್ಷ ರೂ.ಗಳ ಮಿತಿಗೊಳಪಟ್ಟಂತೆ ರಾಜ್ಯ ಸರ್ಕಾರದಿಂದ ನೆರವು ಒದಗಿಸಲಾಗುತ್ತದೆ.
ಉದ್ಯೋಗಸ್ಥ ಮಹಿಳೆಯರಿಗೆ ವಸತಿ: ಉದ್ಯೋಗಸ್ಥ ಮಹಿಳೆಯರಿಗೆ ಹಾಗೂ ಉದ್ಯೋಗಕ್ಕಾಗಿ ತರಬೇತಿ ಪಡೆಯುತ್ತಿರುವ ಮಹಿಳೆಯರಿಗೆ (ಒಂದು ವರ್ಷಕ್ಕೆ ಮೀರದಂತೆ) ಕಡಿಮೆ ಬೆಲೆಯಲ್ಲಿ ಹಾಗೂ ಸುರಕ್ಷಿತವಾದಂತಹ ವಸತಿ ನಿಲಯಗಳನ್ನು ಒದಗಿಸಲು ಅನುದಾನವನ್ನು ಸ್ವಯಂಸೇವಾ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಯೋಜನೆಯ ಹೊಸ ಮಾರ್ಗಸೂಚಿಯನ್ವಯ ವಸತಿಗೃಹ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ ಶೇ.60 ಹಾಗೂ ರಾಜ್ಯ ಸರ್ಕಾರದಿಂದ ಶೇ.15ರಷ್ಟು ಹಾಗೂ ಉಳಿದ ಶೇ.25ರಷ್ಟು ಅನುದಾನವನ್ನು ಸ್ವಯಂಸೇವಾ ಸಂಸ್ಥೆ ಭರಿಸಬೇಕಾಗಿರುತ್ತದೆ.
ಟ್ರಾನ್ಸಿಟ್ ಹಾಸ್ಟೆಲ್ ಯೋಜನೆ: ಉದ್ಯೋಗ, ಸಂದರ್ಶನ, ಪ್ರವೇಶ ಪರೀಕ್ಷೆ ಹಾಗೂ ಇನ್ನಿತರೆ ಕೋರ್ಸ್ಗಳ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಲು ಬೇರೆ ಜಿಲ್ಲೆಗಳಿಂದ ಒಂಟಿಯಾಗಿ ಬೆಂಗಳೂರಿಗೆ ಬರುವ ವಿದ್ಯಾರ್ಥಿನಿಯರು ಮತ್ತು ಮಹಿಳೆಯರಿಗೆ ಮಾತ್ರ ಸುರಕ್ಷಿತ ಆಶ್ರಯ, ರಕ್ಷಣೆಗಾಗಿ ಟ್ರಾನ್ಸಿಟ್ ಹಾಸ್ಟೆಲ್‌ಗಳ ಸೌಲಭ್ಯ ಕಲ್ಪಿಸಿದೆ. ಎಲ್ಲಾ ವರ್ಗದ ಮಹಿಳೆಯರಿಗೂ ವರಮಾನ ಮಿತಿಯಿಲ್ಲದೆ ಗರಿಷ್ಟ 3 ದಿನಗಳು ತಂಗಲು ಅವಕಾಶ, ಉಚಿತ ವಸತಿ, ಉಪಹಾರ, ಊಟ ಮತ್ತು ಸ್ನಾನಕ್ಕೆ ಬಿಸಿ ನೀರು, ಭದ್ರತಾ ಕಪಾಟು ಸೌಲಭ್ಯವಿದೆ. ಯಾವುದೇ ಶುಲ್ಕ ಭರಿಸುವಂತಿಲ್ಲ.
ಮಹಿಳಾ ವಿಶೇಷ ಚಿಕಿತ್ಸಾ ಘಟಕ: ವೈದ್ಯಕೀಯ ಚಿಕಿತ್ಸೆ ಮತ್ತು ಪರೀಕ್ಷೆ, ಪ್ರಥಮ ಮಾಹಿತಿ ವರದಿ ದಾಖಲಿಸುವುದು ಮತ್ತು ಕಾನೂನು ರಕ್ಷಣೆ, ಮಾನಸಿಕ ಸಮಾಲೋಚನೆ, ಕಾನೂನು ಸಮಾಲೋಚನೆ ಮತ್ತು ಕಾನೂನು ಅರಿವು, ವಸತಿ ಹಾಗೂ ಸುರಕ್ಷಿತ ವಾಸ್ತವ್ಯ, ದಿನದ 24 ಘಂಟೆಗಳ ಸೇವೆ ಮತ್ತು ನೊಂದ ಮಹಿಳೆಯರಿಗೆ ಯಾವುದೇ ಭೇದಭಾವವಿಲ್ಲದೆ ಉಚಿತವಾಗಿ ಘಟಕದಲ್ಲಿನ ಸೌಲಭ್ಯಗಳು ದೊರೆಯುತ್ತವೆ. ಸಹಾಯ ಬಯಸುವ ಮಹಿಳೆಯರು ಮಹಿಳಾ ವಿಶೇಷ ಚಿಕಿತ್ಸಾ ಘಟಕ ಯೋಜನೆಯ ಅನುಕೂಲತೆಗಳನ್ನು ಪಡೆಯಬಹುದಾಗಿದೆ.
ಸ್ವಾಧಾರಗೃಹ: ಸಂಕಷ್ಟಪರಿಸ್ಥಿತಿಯಲ್ಲಿರುವ ಮಹಿಳೆಯರಿಗಾಗಿ ಸ್ವಾಧಾರಗೃಹ ಯೋಜನೆ ಅನುಷ್ಠಾನಕ್ಕೆ ತಂದಿದೆ. ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗಾಗಿ ಆಶ್ರಯ, ಆಹಾರ, ಬಟ್ಟೆ, ತರಬೇತಿ ಹಾಗೂ ಶಿಕ್ಷಣ, ವಸತಿ, ವೃತ್ತಿ ತರಬೇತಿ, ಸಮಾಲೋಚನೆ, ವೈದ್ಯಕೀಯ ನೆರವು, ಕುಟುಂಬಕ್ಕೆ ಪುನರ್‌ಮಿಲನ ಮತ್ತು ಕಾನೂನಿನ ನೆರವನ್ನು ನೀಡುವುದರ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಸಶಕ್ತರಾಗುವಂತೆ ಮಾಡುವುದು ಯೋಜನೆಯ ಉದ್ದೇಶ. ರಾಜ್ಯದಲ್ಲಿ ಪ್ರಸ್ತುತ 52 ಸ್ವಾಧಾರಗೃಹ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
ಸಖಿ-ಒನ್ ಸ್ಟಾಪ್ ಸೆಂಟರ್: ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸಮಗ್ರ ಸೌಲಭ್ಯ ಅಂದರೆ, ವೈದ್ಯಕೀಯ ಚಿಕಿತ್ಸೆ ಮತ್ತು ನೆರವು, ಪೊಲೀಸ್ ನೆರವು, ಕಾನೂನು ನೆರವು ಸಮಾಲೋಚನೆ ಹಾಗೂ ತಾತ್ಕಾಲಿಕ ಅಶ್ರಯ ವ್ಯವಸ್ಥೆಗಳನ್ನು ಒನ್ ಸ್ಟಾಪ್ ಸೆಂಟರ್‌ನಲ್ಲಿ ಒದಗಿಸಲಾಗುತ್ತಿದೆ. ರಾಜ್ಯದ ಎಲ್ಲಾ 30 ಜಿಲ್ಲೆಗಳ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಒನ್ ಸ್ಟಾಪ್ ಸೆಂಟರ್ (ಸಖಿ)ಗಳು ಕಾರ್ಯನಿರ್ವಹಿಸುತ್ತಿವೆ.
ಬೇಟಿ ಬಚಾವೊ ಬೇಟಿ ಪಡಾವೊ: ಈ ಕಾರ್ಯಕ್ರಮವು 2015ರಿಂದ ರಾಷ್ರ‍್ಟೀಯ ಮಟ್ಟದಲ್ಲಿ ಜಾರಿಯಿದೆ. ಕುಸಿಯುತ್ತಿರುವ ಮಕ್ಕಳ ಲಿಂಗ ಅನುಪಾತ ಉತ್ತಮ ಪಡಿಸುವುದು ಹಾಗೂ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಖಾತೆ ಯೋಜನೆ: ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಮತ್ತು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2007ರಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಭಾಗ್ಯಲಕ್ಷ್ಮಿ ಎಂಬ ಯೋಜನೆಯನ್ನು ಜಾರಿ ತರಲಾಯಿತು. 2020-21ನೇ ಸಾಲಿನಿಂದ ಭಾಗ್ಯಲಕ್ಷ್ಮಿ ಯೋಜನೆಯನ್ನು ಸರ್ಕಾರದ ಆದೇಶದಂತೆ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯ ಮೂಲಕ ಅನುಷ್ಠಾನಗೊಳಿಲಾಗಿಗುತ್ತಿದೆ. ಈ ಯೋಜನೆಯಡಿ ಬಿಪಿಎಲ್ ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ಪ್ರತಿ ಮಗುವಿನ ಹೆಸರಿನಲ್ಲಿ ವಾರ್ಷಿಕ 3000 ರೂ.ದಂತೆ 15 ವರ್ಷಗಳವರೆಗೆ ಒಟ್ಟು 45,000 ರೂ.ಗಳನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಠೇವಣಿ ಹೂಡಲಾಗುತ್ತದೆ.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಮಹಿಳೆಯರ ಅಭಿವೃದ್ಧಿಗಾಗಿ 5 ವರ್ಷಗಳ ಕಾಲ ಸತತವಾಗಿ ಕಾರ್ಯೋನ್ಮುಖವಾಗಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಹಾಗೂ ಕ್ರೀಡೆ, ಸಾಹಿತ್ಯ, ಕಲೆ, ಶಿಕ್ಷಣ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಲಾಗುತ್ತಿದೆ. ಸಂಕಷ್ಟ ಪರಿಸ್ಥಿತಿಯಲ್ಲಿ ಧೈರ್ಯ ಸಾಹಸದಿಂದ ಇತರರ ಜೀವವನ್ನು ರಕ್ಷಿಸಿದಂತಹ ಮಹಿಳೆಗೆ ವೀರಮಹಿಳೆ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಗಾಗಿ ಆಯ್ಕೆಗೊಂಡ ಸ್ವಯಂ ಸೇವಾ ಸಂಸ್ಥೆಗಳಿಗೆ ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತಿದೆ.
ಮಹಿಳೆಯರ ಸಂರಕ್ಷಣಾ ಕಾಯ್ದೆ: ಸಂವಿಧಾನದಲ್ಲಿ ಖಾತ್ರಿಪಡಿಸಿರುವ ಮಹಿಳೆಯರ ಹಕ್ಕುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರಕ್ಷಣೆ ಮಾಡುವುದು ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ನಿಯಮ 2006 ಕಾಯ್ದೆಯ ಉದ್ದೇಶವಾಗಿದ್ದು, ಕುಟುಂಬದೊಳಗಾಗುವ ಯಾವುದೇ ಬಗೆಯ ಹಿಂಸೆಗೊಳಗಾದ ಮಹಿಳೆಯರಿಗೆ ಸಂಬಂಧಿಸಿದಂತೆ ಹೆಚ್ಚು ಪರಿಣಾಮಕಾರಿಯಾದ ಸಂರಕ್ಷಣೆ ಒದಗಿಸುವುದಕ್ಕಾಗಿ 2006ರಲ್ಲಿ ಈ ಕಾಯಿದೆ ಜಾರಿ ಬಂದಿದೆ. ರಾಜ್ಯದಲ್ಲಿ ಈ ಕಾಯ್ದೆಯನ್ನು ಜೂನ್ 2007ರಿಂದ ಅನುಷ್ಠಾಗೊಳಿಸಲಾಗುತ್ತಿದೆ.

- ಗವಿಸಿದ್ದಪ್ಪ ಹೊಸಮನಿ, ವಾರ್ತಾ ಸಹಾಯಕರು,
ವಾರ್ತಾ ಇಲಾಖೆ, ರಾಯಚೂರ





More Stories
ಹೊಸಪೇಟೆಯಲ್ಲಿ ಫೆ. ೨೭ಕ್ಕೆ ‘ಸರ್ವಧರ್ಮ ಸಮನ್ವಯ’ ಮಹಾರಥೋತ್ಸವದ ವೈಭವ!
ಯುವ ಕವಿಗಳು ಜನಸಾಮಾನ್ಯರ ಬದುಕು-ಬವಣೆಗಳಿಗೆ ಧ್ವನಿಯಾಗಿ
ಮೂರು ದಿನ ಸಾಂಸ್ಕೃತಿಕ ಹಬ್ಬಕ್ಕೆ ಸಜ್ಜಾದ ವಿಜಯನಗರ ಸಾಮ್ರಾಜ್ಯ