April 30, 2026

Hampi times

Kannada News Portal from Vijayanagara

ಹಂಪಿ ದೇವಸ್ಥಾನ ಪ್ರವೇಶಕ್ಕೆ ತುಂಡುಡುಗೆ ನಿಷೇಧ, ಭಕ್ತರಿಗೆ ಶುಲ್ಕ ರಹಿತ ಪಂಚೆ ವಿತರಣೆ: ಡಿಸಿ ದಿವಾಕರ

https://youtu.be/NHc6OMSu0K4?si=SI_K4goOPEgwo6h2

ಪ್ರಸಿದ್ಧ ಹಂಪಿಯಲ್ಲಿ ವಸ್ತ್ರ ಸಂಹಿತೆ ಹೊಸ ಪರಂಪರೆಗೆ ವಿಜಯನಗರ ಜಿಲ್ಲಾಡಳಿತದಿಂದ  ಕ್ರಮ
ಹಂಪಿ ಟೈಮ್ಸ್ ಹೊಸಪೇಟೆ :
ಪ್ರಸಿದ್ಧ ಪ್ರವಾಸಿ ತಾಣವಾದ ವಿಜಯನಗರ ಜಿಲ್ಲೆಯ ಹಂಪಿಗೆ ಬರುವ ಭಕ್ತಾದಿಗಳಲ್ಲಿ ಭಕ್ತಿ ಭಾವನೆ ಮೂಡಿಸುವ ಸದುದ್ದೇಶದಿಂದ ಜಿಲ್ಲಾಡಳಿತವು ಹೊಸ ಹಜ್ಜೆ ಇರಿಸಿದೆ.
ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಜನವರಿ 26ರಂದು ಖುದ್ದು ಹಂಪಿಗೆ ತೆರಳಿ ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರೊಂದಿಗೆ ಹಂಪಿಯ ಶ್ರೀ ವಿರುಪಾಕ್ಷೇಶ್ವರನ ಸನ್ನಿಧಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದರು. ಜೀನ್ಸ್ ಪ್ಯಾಂಟ್ ಮತ್ತು ಬರಮೋಡ ತೊಟ್ಟು ಬಂದ ಭಕ್ತರೊಂದಿಗೆ ಆತ್ಮೀಯವಾಗಿ ಮಾತನಾಡಿದರು. ಹಂಪಿಯು ಬರೀ ಪ್ರವಾಸಿತಾಣವಲ್ಲ; ಅದು ಶ್ರೀ ವಿರುಪಾಕ್ಷೇಶ್ವರ ದೇವರ ಪವಿತ್ರ ತಾಣವೂ ಆಗಿದೆ ಎಂದು ಮನವರಿಕೆ ಮಾಡಿದರು. ಸಾಂಪ್ರದಾಯಿಕ ಶೈಲಿಯ ಬಟ್ಟೆ ಧರಿಸಿ ದೇವರ ದರ್ಶನ ಪಡೆಯಲು ತಿಳಿಸಿ ಜಾಗೃತಿ ಮೂಡಿಸಿದರು.
ಶಲ್ಲೆ, ಪಂಚೆ ನೀಡಿದರು: ಜನವರಿ 26ರಂದು ಹಂಪಿಯ ಶ್ರೀ ವಿರುಪಾಕ್ಷೇಶ್ವರ ದೇವಾಲಯಕ್ಕೆ ತೆರಳಿದ ವೇಳೆ ಜಿಲ್ಲಾಧಿಕಾರಿಗಳು ತಾವೇ ಖುದ್ದು ಭಕ್ತರಿಗೆ, ಪ್ರವಾಸಿಗರಿಗೆ ಪಂಚೆ, ಶಲ್ಲೆ ನೀಡಿದರು. ತುಂಬುಡುಪು ಧರಿಸಿ ದೇವಸ್ಥಾನ ಪ್ರವೇಶಿಸುವಂತೆ ಮಾಡಿದರು. ಈ ಮೂಲಕ ಜನರಲ್ಲಿ ದೇವಾಲಯದ ಬಗ್ಗೆ ಭಕ್ತಿ ಭಾವನೆ ಬರುವಂತೆ ಇತರರಿಗೆ ಪ್ರೇರೇಪಣೆ ನೀಡಿ ಗಮನ ಸೆಳೆದರು.

ಬಹಳ ದಿನಗಳ ಬೇಡಿಕೆ: ಹಂಪಿಯು ಪ್ರವಾಸಿ ತಾಣದ ಜೊತೆಗೆ ಸುಪ್ರಸಿದ್ಧ ಭಕ್ತಿಯ ಕೇಂದ್ರವೂ ಆಗಿದೆ. ಆದರೆ, ಕೆಲವು ಪ್ರವಾಸಿಗರು ಹಂಪಿಗೆ ಬಂದಾಗ ಬರಮೋಡ್ ಮತ್ತು ಜೀನ್ಸಪ್ಯಾಂಟ್‌ನಂತಹ ತುಂಡುಡುಗೆ ಧರಿಸಿಯೇ ಶ್ರೀವಿರುಪಾಕ್ಷೇಶ್ವರನ ದೇವಸ್ಥಾನ ಪ್ರವೇಶಿಸುತ್ತಿದ್ದುದು ಸಾಮಾನ್ಯವಾಗಿತ್ತು. ಇದನ್ನು ಸಾರ್ವಜನಿಕರು ಅನೇಕ ಭಾರಿ ಪ್ರಶ್ನಿಸಿದ್ದರು. ಹೀಗಾಗಿ ಅನೇಕ ದಿನಗಳ ಸಾರ್ವಜನಿಕರ ಬೇಡಿಕೆಯನ್ನು ಪರಿಗಣನೆಗೆ ತೆಗೆದುಕೊಂಡ ಜಿಲ್ಲಾಡಳಿತವು ಅಗತ್ಯ ಕ್ರಮವಹಿಸಿ ಹೊಸ ಪರಂಪರೆಗೆ ಅವಕಾಶ ಕಲ್ಪಿಸಿದೆ.

ದೇವಸ್ಥಾನದ ಸೇವೆಗೆ ಗಣಕೀಕರಣ: ದೇವಸ್ಥಾನದಲ್ಲಿ ಭಕ್ತಿಯ ಸೇವೆಗಳಿಗೆ ಭೌತಿಕವಾಗಿ ರಸೀದಿ ನೀಡಿ ಹಣ ಪಡೆಯುವ ವ್ಯವಸ್ಥೆ ಇತ್ತು. ಇದನ್ನು ಇದೀಗ ಸಂಪೂರ್ಣವಾಗಿ ಗಣಕೀಕರಣಗೊಳಿಸುವುದಕ್ಕೆ ಸಹ ಜಿಲ್ಲಾಧಿಕಾರಿಗಳು ಜನವರಿ 26ರಂದು ವಿಶೇಷ ಕ್ರಮ ವಹಿಸಿದರು. ಮೊದಲನೇಯದಾಗಿ ಶಾಸಕರಿಂದಲೇ ಹಣ ಪಡೆದು ರಸೀದಿ ನೀಡಿ ಸೇವೆಗೆ ಜಿಲ್ಲಾಧಿಕಾರಿಗಳು ಅವಕಾಶ ಕಲ್ಪಿಸಿದರು. ಇದರಿಂದ ಸೋರಿಕೆ ತಡೆದು ದೇವಸ್ಥಾನಕ್ಕೆ ಹೆಚ್ಚಿನ ಆದಾಯ ಬರುವಂತಾಗಲಿದೆ.
ಮೆಟಲ್ ಡಿಟೆಕ್ಟರ್ ಅಳವಡಿಸಲು ಕ್ರಮ: ಹಂಪಿ ಮತ್ತು ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ಪ್ರತಿ ದಿನ ಲಕ್ಷಕ್ಕೂ ಹೆಚ್ಚು ಭಕ್ತರು ಬರುತ್ತಿದ್ದು, ಇದರಿಂದಾಗಿ ದೇವಸ್ಥಾನದ ಆವರಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ದೇವಸ್ಥಾನದಲ್ಲಿ ಮೆಟಲ್ ಡಿಟೆಕ್ಟರನ್ನು ಅಳವಡಿಸಲು ಸಹ ಜನವರಿ 26ರಂದು ಜಿಲ್ಲಾಡಳಿತದಿಂದ ಕ್ರಮ ವಹಿಸಲಾಯಿತು.

ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆ: ಹಂಪಿಯು ಪ್ರವಾಸಿ ತಾಣದ ಜೊತೆಗೆ ಭಕ್ತಿಯ ಶ್ರದ್ಧಾ ಕೇಂದ್ರವಾಗಿದೆ. ಪ್ರವಾಸಕ್ಕೆ ಬರುವವರು ದೇವಸ್ಥಾನಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಭಕ್ತಿ ಭಾವನೆ ಉದ್ದೀಪನೆಯ ಉಡುಪು ಧರಿಸಿ ದೇವರ ದರ್ಶನ ಪಡೆಯುವ ಸದುದ್ದೇಶದಿಂದ ಜನರಿಗೆ ವಿಶೇಷ ಸಂದೇಶ ಹೋಗುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ವಿಶೇಷ ಕ್ರಮ ವಹಿಸಿದ್ದೇವೆ. ದೇವರ ದರ್ಶನ ವೇಳೆಯಲ್ಲಿ ದೇವಸ್ಥಾನದಲ್ಲಿ ಪಂಚೆ, ಶಲ್ಲೆ ಪಡೆಯಲು ಯಾವುದೇ ಶುಲ್ಕ ನಿಗದಿಪಡಿಸಿಲ್ಲ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಮಹದ್ ಅಲಿ ಅಕ್ರಮ ಷಾಹ ಹಾಗೂ ಹಂಪಿ ಗ್ರಾಮಸ್ಥರು ಮತ್ತು ಪ್ರವಾಸಿಗರು ಹಾಗು ಅಧಿಕಾರಿಗಳು ಇದ್ದರು.

 

Please follow and like us:

 

 

 

 

 

Translate »
[t4b-ticker]
error: Content is protected !!