https://youtu.be/NHc6OMSu0K4?si=SI_K4goOPEgwo6h2

ಕರ್ನಾಟಕ ಸಂಗೀತ ಕಚೇರಿಗಳಲ್ಲಿ ಮತ್ತು ತಾಳವಾದ್ಯಗಳಲ್ಲಿ ಮೋರ್ ಝಿಂಗ್ ವಾದ್ಯ ಬಳಕೆ.
ಪ್ರಾಚೀನ ಸಂಗೀತ ಕಲೆ ಪುನರ್ಜೀವಕ್ಕಾಗಿ 20 ದಿನ ತರಬೇತಿ ಶಿಬಿರ | ಇಂಪಾದ ಈ ಸಂಗೀತಕ್ಕೆ ಮನಸೋಲದವರಿಲ್ಲ…
ಹಂಪಿ ಟೈಮ್ಸ್ ಹೊಸಪೇಟೆ:
ಹನ್ನೆರಡನೇ ಶತಮಾನದ ಬಸವಣ್ಣನ ಕಾಲಾವಧಿಯಲ್ಲಿ ಸಿದ್ಧ ಪುರುಷರು ನುಡಿಸುವ ಮತ್ತು ಮೈಸೂರು ಒಡೆಯರ ಅರಸರ ಅವಧಿಯಲ್ಲಿ ತ್ರಿಶೂಲಾಕಾರದ ಲೋಹದ ಸಾಧನದಿಂದ ಹೊರಹೊಮ್ಮುವ ಮೊರ್ ಝಿಂಗ್ ಸಂಗೀತಕ್ಕೆ ಹೆಚ್ಚಿನ ಮಹತ್ವವಿತ್ತು. ಆಧುನಿಕ ವಾದ್ಯಗಳ ಭರಾಟೆಯಲ್ಲಿ ನಶಿಸುತ್ತಿರುವ ಅಪರೂಪದ ಕಲೆಗಳನ್ನು ಗುರುತಿಸಿ ಮುಂದಿನ ಪೀಳಿಗೆಗಾಗಿ ಉಳಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿರುವುದು ಸಂತಸ ತಂದಿದೆ ಎಂದು ವಿಜಯನಗರ ಜಿಲ್ಲಾ ಅಲೆಮಾರಿ ಅಭಿವೃದ್ಧಿ ಅನುಷ್ಠಾನ ಸಮಿತಿ ನಾಮನಿರ್ದೇಶಿತ ಸದಸ್ಯ ಪಕ್ಕೀರಪ್ಪ ಬಾದಿಗಿ ಹೇಳಿದರು.
ನಗರದ ಹೊರವಲಯದ ಆಶ್ರಯ ಕಾಲೋನಿಯಲ್ಲಿ ಶ್ರೀಲಕ್ಷ್ಮೀ ಶ್ರೀದೇವಿ ಮೋರ್ಝಿಂಗ್ ನುಡಿಸುವ ಕಲಾತಂಡ, ಜಾನಪದ ತಂಡವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಶಿಸಿ ಹೋಗುತ್ತಿರುವ ತಳಸಮುದಾಯಗಳ ವಿಶಿಷ್ಟ ಕಲೆಗಳ 20 ದಿನದ ತರಬೇತಿ ಸಮಾರೋಪದಲ್ಲಿ ಭಾನುವಾರ ಮಾತನಾಡಿದರು. ಮೋರ್ ಝಿಂಗ್ (ಝಾಹಾರ್ಫ್) ವಾದನಕ್ಕೆ ಕನ್ನಡದಲ್ಲಿ ಬಾಯಿ ಬಿಲ್ ಸ್ವರವೆಂದು ಕರೆಯುತ್ತಾರೆ. ಮಾನಸಿಕ ಒತ್ತಡ ನಿವಾರಣೆ ಮತ್ತು ಏಕಾಗ್ರತೆ ಹಾಗೂ ಸಂಗೀತ ಜ್ಞಾನ ಹೆಚ್ಚಿಸಿಕೊಳ್ಳಲು ರಾಜಮಹಾರಾಜರು ಮೋರ್‌ಝಿಂಗ್ ವಾದನ ಕೇಳುತ್ತಿದ್ದರು. ತಳಸಮುದಾಯದ ಹಿರಿಯ ಕಲಾವಿದ ಬಾದಿಗಿ ದುರುಗಪ್ಪ 50 ವರ್ಷಗಳ ಕಾಲ ಮೋರ್ ಝಿಂಗ್ ವಾದನ ನುಡಿಸಿ ಮರೆಯಾದ ನಂತರ ಅವರ ಪುತ್ರ ಶಂಕ್ರಪ್ಪ ಬಾದಿಗಿ ಅವರು ಕಲೆ ಉಳಿವಿಗೆ ಶ್ರಮಿಸುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯು ಹಿರಿಯ ಕಲಾವಿದರನ್ನು ಗುರುತಿಸಿ ಅಪರೂಪದ ಕಲೆಗಳ ಪೋಷಣೆಗೆ ನಿರಂತರವಾಗಿ ಸಹಕಾರ ನೀಡಲಿ ಎಂದರು.


ಶ್ರೀಲಕ್ಷ್ಮೀ ಶ್ರೀದೇವಿ ಮೋರ್ಝಿಂಗ್ ನುಡಿಸುವ ಕಲಾತಂಡ, ಜಾನಪದ ತಂಡ ಮುಖ್ಯಸ್ಥರು ಹಾಗೂ ತರಬೇತುದಾರರಾದ ಶಂಕ್ರಪ್ಪ ಬಾದಿಗಿ ಮಾತನಾಡಿ, ತಂದೆ ಬಾದಿಗಿ ದುರುಗಪ್ಪ ತಾಯಿ ಲಕ್ಷ್ಮಮ್ಮನವರಿಂದ ಬಳುವಳಿಯಾಗಿ ಬಂದ ಸಂಗೀತ ಕಲೆಯನ್ನು ಮುಂದಿನ ಪೀಳಿಗೆಗಾಗಿ ಉಳಿಸಲು ಸೇವೆ ಮುಂದುವರೆಸಿದ್ದೇನೆ. ತ್ರೀಶೂಲಾಕಾರದಲ್ಲಿ ಕಾಣುವ ಈ ವಾದ್ಯವನ್ನು ಹಲ್ಲುಗಳ ಮದ್ಯೆ ಇಟ್ಟುಕೊಂಡು ಉಸಿರೊಡನೆ ನುಡಿಸುವ ಸಂಗೀತವೆ ಮೋರ್ ಝಿಂಗ್ ಸಂಗೀತವಾಗಿದೆ. ಮೂರು ದಶಕಗಳಿಂದ ಕಲೆಯ ಉಳಿವಿಗಾಗಿ ಶ್ರಮಿಸುತ್ತಿದ್ದೇನೆ. ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರ ಸಹಕಾರದಿಂದಾಗಿ ಮಾ.21ರಿಂದ ಏ.9ವರೆಗೆ ನಡೆದ ತರಬೇತಿಯಲ್ಲಿ 11 ಜನರಿಗೆ ತರಬೇತಿ ನೀಡಲಾಗಿದೆ. ತಳಸಮುದಾಯದ ವಿದ್ಯಾರ್ಥಿಗಳು ಸಂಗೀತ ನುಡಿಸಲು ಮುಂದಾಗಿದ್ದಾರೆ. ಮೋರ್ ಝಿಂಗ್ ನುಡಿಸಲು ಆಸಕ್ತಿ ತೋರಿದ ಸಂಗೀತಾಸಕ್ತರಿಗೂ ತರಬೇತಿ ನೀಡಲಾಗುವುದು ಎಂದರು.
ಸಮಾರೋಪದಲ್ಲಿ ತರಬೇತಿ ಪಡೆದ ಯಲ್ಲಮ್ಮ ಬಾದಿಗಿ, ಸಣ್ಣ ಪಕ್ಕೀರಪ್ಪ, ಬಿ.ಮಂಜುನಾಥ, ದುರುಗಮ್ಮ, ಕೆ.ಹೊನ್ನೂರಸ್ವಾಮಿ, ದುರುಗಮ್ಮ ಬಾದಿಗಿ, ದುರುಗಮ್ಮ, ಮೀನಾಕ್ಷಿ ಬಾದಿಗಿ, ಕಾಮಾಕ್ಷಿ ಬಾದಿಗಿ, ಗೀತಾ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.
– ಅಧುನಿಕ ಸಂಗೀತ ವಾದ್ಯಗಳ ಭರಾಟೆಯಲ್ಲಿ ಪ್ರಾಚೀನ ಕಲೆಗಳು ಮೂಲೆಗುಂಪಾಗುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಪರೂಪದ ಮೋರ್‌ಝಿಂಗ್ ಸಂಗೀತವನ್ನು ಗುರುತಿಸಿ ಪುನರ್ಜೀವಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ.
• ಶಂಕ್ರಪ್ಪ ಬಾದಿಗಿ, ಹಿರಿಯ ಮೋರ್ ಝಿಂಗ್ ತರಬೇತುದಾರರು, ಹೊಸಪೇಟೆ.



More Stories
ಸೋಷಿಯಲ್ ಮೀಡಿಯಾ: ಕಣ್ಣಿಗೆ ಆಕರ್ಷಕ, ಮನಸ್ಸಿಗೆ ಮಾರಕ!
ಉದ್ಯಮಿ ಕೆ.ರವಿಶಂಕರ್ ಜನ್ಮದಿನದ ಸಾರ್ಥಕ ಸೇವೆ: ಆಸ್ಪತ್ರೆಯ ರೋಗಿಗಳಿಗೆ ಪೌಷ್ಟಿಕಾಹಾರ ವಿತರಣೆ
ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್, ಕೋಟ್ಯಂತರ ರೂಪಾಯಿ ರಾಜಸ್ವ ಸಂಗ್ರಹ : ಅಬಕಾರಿ ನಿರೀಕ್ಷಕಿ ಎಸ್.ಬಿ.ಮಮತಾ