https://youtu.be/NHc6OMSu0K4?si=SI_K4goOPEgwo6h2

ಮಾ. 22 ಅಗ್ನಿಕುಂಡ, ಮಾ.23 ರಥೋತ್ಸವ, ಮಾ.24 ಕಡುಬಿನ ಕಾಳಗ
ಹಂಪಿಟೈಮ್ಸ್ ಹೊಸಪೇಟೆ:
ನಗರದ ಐತಿಹಾಸಿಕ ಶ್ರೀ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ನಿಮಿತ್ತ ಮಾ.22 ರಿಂದ ಮಾ.24 ರಂದು ವಿಶೇಷ ಪೂಜಾ ಕಾರ್ಯಗಳು ಜರುಗಲಿದ್ದು, ಮಾ.23ರಂದು ಸಂಜೆ 5ಕ್ಕೆ ಶ್ರೀ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಜಿ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ತೇರಿಗೆ ಬಾಳೆ ಹಣ್ಣು ಎಸೆಯುವುದನ್ನು ನಿಷೇಧಿಸಲಾಗಿದ್ದು, ಭಕ್ತಾದಿಗಳು ಉತ್ತುತ್ತಿ ಎಸೆಯುವ ಮೂಲಕ ಭಕ್ತಿ ಸಮರ್ಪಿಸಬೇಕು ಎಂದು ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಅಶ್ವಿನ್ ಕೋತ್ತಂಬರಿ ಹೇಳಿದರು.


ನಗರದ ಶ್ರೀ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾ.22ರಂದು ನಗರದ ಮುಖ್ಯ ಬೀದಿಯಲ್ಲಿರುವ ಶ್ರೀಪೇಟೆ ಬಸವೇಶ್ವರ ದೇವಸ್ಥಾನದಿಂದ ಸಕಲವಾಧ್ಯ ವೈಭವಗಳೊಂದಿಗೆ ಉತ್ಸವವು ನೆಹರುಕಾಲೊನಿಯಲ್ಲಿನ ಶ್ರೀ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನ ತಲುಪಿ, ಸಂಜೆ 5 ಗಂಟೆಯಿಂದ ದೇವಸ್ಥಾನದ ಮುಂಭಾಗದಲ್ಲಿ ಅಗ್ನಿ ಕುಂಡ ಜರುಗಲಿದೆ. ಅಗ್ನಿ ಕುಂಡ ಪ್ರವೇಶಿಸಲು ಇಚ್ಚಿಸುವವರು ನೋಂದಣಿ ಶುಲ್ಕ 100 ರೂ. ಪಾವತಿ ಮಾಡಿ ಹೆಸರು ನೋಂದಾಯಿಸಬೇಕು. ಅಗ್ನಿ ಕುಂಡ ಪ್ರವೇಶಕ್ಕೆ ಮಕ್ಕಳು ಹಾಗೂ ಅಪ್ರಾಪ್ತ ವಯಸ್ಸಿನವರಿಗೆ ಅಗ್ನಿ ಪ್ರವೇಶ ನಿಷೇಧಿಸಲಾಗಿದೆ. ಮಾ.24 ರಂದು ಶುಕ್ರವಾರ ಸಂಜೆ 6 ಗಂಟೆಗೆ ಕಡುಬಿನ ಕಾಳಗ ಕಾರ್ಯಕ್ರಮ ಜರುಗಲಿದೆ. ಅಂದು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಶ್ರೀ ಪೇಟೆ ಬಸವೇಶ್ವರ ದೇವಸ್ಥಾನಕ್ಕೆ ತಲುಪಿ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.

ಸಮಿತಿ ಕೋಶಾಧ್ಯಕ್ಷ ಕೆ.ಗಂಗಾಧರಪ್ಪ ಮಾತನಾಡಿ, ಶ್ರೀ ಸಣ್ಣಕ್ಕಿ ವೀರಭದ್ರೇಶ್ವರ ರಥೋತ್ಸವಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಭಕ್ತರು ಕೊಡುವ ಕಾಣಿಕೆ ಮತ್ತು ರಥೋತ್ಸವದಂದು ಜರುಗುಪ ಪಟ ಹರಾಜಿನಿಂದ ಬಂದ ಹಣದಿಂದ ದೇವಸ್ಥಾನ ಪೂಜೆ ಮತ್ತು ನಿರ್ವಹಣೆ ಮಾಡಲಾಗುತ್ತದೆ. ಶ್ರೀ ಸಣ್ಣಕ್ಕಿ ವೀರಭದ್ರೇಶ್ವರ ರಥೋತ್ಸವಕ್ಕೆ ನಾಡಿನ ನಾನಾಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ ಎಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ ಮಾತನಾಡಿ, ರಥೋತ್ಸವಕ್ಕೆ ನಗರಸಭೆಯಿಂದ ಸ್ವಚ್ಛತೆ ಸೇರಿದಂತೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹೆಚ್.ವಿ.ಶರಣಸ್ವಾಮಿ, ಸಮಾಜದ ಮುಖಂಡರಾದ ಗೊಗ್ಗ ಚನ್ನಬಸವರಾಜ, ಬಿ.ಎಂ.ಸೋಮಶೇಖರ್, ಸಂಗಪ್ಪ, ಎಲ್.ನಾಗರಾಜ, ಶಶಿಧರಸ್ವಾಮಿ, ಬಿ.ಮಲ್ಲೇಶಪ್ಪ, ಎಂ.ವಿರೂಪಾಕ್ಷಸ್ವಾಮಿ, ಸತ್ಯನಾರಾಯಣ, ಎಂ.ಜೆ.ವೈ ಮಂಜುನಾಥ ಇತರರು ಇದ್ದರು.



More Stories
ಹೊಸಪೇಟೆಯಲ್ಲಿ ಯುವಕನ ಬರ್ಬರ ಹತ್ಯೆ- ಕೊಲೆ ಆರೋಪಿಗಳು ಶರಣು, ಆತಂಕದ ವಾತಾವರಣ ನಿರ್ಮಾಣ
ಸೋಷಿಯಲ್ ಮೀಡಿಯಾ: ಕಣ್ಣಿಗೆ ಆಕರ್ಷಕ, ಮನಸ್ಸಿಗೆ ಮಾರಕ!
ಉದ್ಯಮಿ ಕೆ.ರವಿಶಂಕರ್ ಜನ್ಮದಿನದ ಸಾರ್ಥಕ ಸೇವೆ: ಆಸ್ಪತ್ರೆಯ ರೋಗಿಗಳಿಗೆ ಪೌಷ್ಟಿಕಾಹಾರ ವಿತರಣೆ