April 29, 2026

Hampi times

Kannada News Portal from Vijayanagara

ತಾರುಣ್ಯದ ಹುಮ್ಮಸ್ಸು ರಾಷ್ಟ್ರ ನಿರ್ಮಾಣಕ್ಕೆ ಬಳಕೆಯಾಗಲಿ: ಚಕ್ರವರ್ತಿ ಸೂಲಿಬೆಲೆ

https://youtu.be/NHc6OMSu0K4?si=SI_K4goOPEgwo6h2

ಹಂಪಿಟೈಮ್ಸ್ ಹೊಸಪೇಟೆ:

ಯುವಜನತೆ ತಾರುಣ್ಯದ ಅದಮ್ಯ ಶಕ್ತಿಯನ್ನು ಸಾಮಾಜಿಕ ಬದುಕಿಗೆ ಸಮರ್ಪಣೆ ಮಾಡಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು  ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.


ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಯುವಾ ಬ್ರಿಗೇಡ್ ಸಹಯೋಗದಲ್ಲಿ ಗುರುವಾರದಂದು ಆಯೋಜಿಸಲಾಗಿದ್ದ “ಯೌವನದ ಹುಮ್ಮಸ್ಸು; ಸಾಮಾಜಿಕ ಜೀವನದ ಹವಿಸ್ಸು” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪದವಿ ವಿದ್ಯಾಭ್ಯಾಸದ ನಾಲ್ಕು ವರ್ಷಗಳು ಜೀವನದ ಅತ್ಯಮೂಲ್ಯ ಸಮಯ. ವಿದ್ಯಾರ್ಥಿಗಳು ಈ ಸಮಯದಲ್ಲಿ ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಂಡು, ಸಮಾಜಮುಖಿಯಾಗಿ ಬೆಳೆಯಬೇಕು.

 

ತಾಂತ್ರಿಕ ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ಕನಸು ಕಾಣದೇ, ಉದ್ಯೋಗದಾತರಾಗುವತ್ತ ಪ್ರಯತ್ನಿಸಬೇಕು. ಸ್ಟಾರ್ಟಪ್ ಗಳಿಗೆ ಈಗ ಹಿಂದೆಂದಿಗಿಂತ ಉತ್ತಮಕಾಲ ಬಂದಿದೆ. ಹೊಸ ಆವಿಷ್ಕಾರಗಳ ಮೂಲಕ ಹೊಸ ಉದ್ಯಮ ಸ್ಥಾಪಿಸುವಲ್ಲಿ ತಾಂತ್ರಿಕ ಪದವೀಧರರು ಯಶಸ್ವಿಯಾಗುತ್ತಿದ್ದಾರೆ.

ಒಂದು ಶತಕೋಟಿ ಮೌಲ್ಯವನ್ನು ಮೀರಿದ ಕಂಪನಿಗಳನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತಿದೆ. ಜಗತ್ತಿನ ಹೆಚ್ಚು ಯುನಿಕಾರ್ನ್ ಗಳನ್ನು ಹೊಂದಿರುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನ ಹೊಂದಿದೆ. ಕೆಲವೇ ವರ್ಷಗಳಲ್ಲಿ ಚೀನಾ ಹಾಗೂ ಅಮೆರಿಕಾಗಳನ್ನು ಹಿಂದಿಕ್ಕುವ ವೇಗದಲ್ಲಿ ಭಾರತ ಬೆಳೆಯುತ್ತಿದೆ ಎಂದರು.

ವಿದ್ಯಾರ್ಥಿಗಳು ಸಮಾಜವನ್ನು ಹತ್ತಿರದಿಂದ ಗಮನಿಸಿದಾಗ, ಜನರ ಬದುಕು ಬದಲಿಸಬಲ್ಲ ಹೊಸ ತಾಂತ್ರಿಕ ಆವಿಷ್ಕಾರಗಳು ಸಾಧ್ಯವಾಗುತ್ತವೆಯೇ ಹೊರತು ಏಸಿ ರೂಮಿನಲ್ಲಿ ಕುಳಿತವರಿಂದ ಅಲ್ಲ ಯುವಾ ಬ್ರಿಗೇಡ್ ಸಂಸ್ಥೆ ‘ಯುವಾಲ್ಯಾಬ್’ ಸ್ಥಾಪಿಸಿದ್ದು ಹೊಸ ವಿಚಾರ, ತುಡಿತಗಳೊಂದಿಗೆ ಬರುವ ಯುವಜನತೆಗೆ ಎಲ್ಲಾ ಪ್ರೋತ್ಸಾಹ ನೀಡಿ ಯಶಸ್ವಿಯಾಗಿ ಉದ್ಯಮ ಸ್ಥಾಪಿಸಲು ನೆರವಾಗುತ್ತಿದೆ ಎಂದು ಹೇಳಿದರು.

ಪ್ರಾಂಶುಪಾಲ ಡಾ. ಎಸ್.ಎಂ.ಶಶಿಧರ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹೊಸ ಶಿಕ್ಷಣ ನೀತಿಯಲ್ಲಿ ಕೇವಲ ಪಠ್ಯಕ್ಕಷ್ಟೇ ಸೀಮಿತವಾಗದೇ, ಸಾಮಾಜಿಕ ಜವಾಬ್ದಾರಿಗಳನ್ನೂ ಅರಿಯುವ ಹಾಗೂ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಕ್ಕೆ ಒತ್ತು ನೀಡುವ ವಿಷಯಗಳನ್ನು ಆಳವಡಿಸಲಾಗಿದೆ. ಈ ದಿಸೆಯಲ್ಲಿ ಇಂತಹ ಉಪನ್ಯಾಸಗಳು ಪ್ರೇರಣಾದಾಯಕವಾಗುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರೊ. ಮಧ್ವರಾಜ್ ಸ್ವರಚಿತ ದೇಶಭಕ್ತಿ ಗೀತೆ ಹಾಡಿದರು. ಉಪಪ್ರಾಂಶುಪಾಲ ಡಾ ಯು ಎಂ ರೋಹಿತ್, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.

Please follow and like us:

 

 

 

 

 

Translate »
[t4b-ticker]
error: Content is protected !!