August 13, 2026

Hampi times

Kannada News Portal from Vijayanagara

ಬೆಳೆ ನಷ್ಟ ಅನುಭವಿಸಿದ ಪ್ರತಿಯೊಬ್ಬ ರೈತರಿಗೂ ನ್ಯಾಯ ಒದಗಿಸಲು ಸರ್ಕಾರ ಬದ್ಧ: ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್

https://youtu.be/NHc6OMSu0K4?si=SI_K4goOPEgwo6h2

 

ಸಕಾಲಕ್ಕೆ ಬಾರದ ಮಳೆ, ಶೇ 60 ರಷ್ಟು ಮಳೆ ಕೊರತೆ, ಮುಂಗಾರು ವಿಫಲ,
ಹಂಪಿ ಟೈಮ್ಸ್‌ ಹೊಸಪೇಟೆ

ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳು ಸೇರಿ ಪ್ರಸಕ್ತ ಮುಂಗಾರಿನಲ್ಲಿ ಶೇ 60 ರಷ್ಟು ಮಳೆಯ ಕೊರತೆಯಾಗಿದ್ದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರಾದ ಬಿ. ಜೆಡ್ ಜಮೀರ್ ಅಹ್ಮದ್ ಖಾನ್ ಅವರು ಶುಕ್ರವಾರ ವಿಜಯನಗರ ಜಿಲ್ಲೆಯ ಬರಪೀಡಿತ ಭಾಗಗಳಿಗೆ ಭೇಟಿ ನೀಡಿ ಬೆಳೆ ಹಾನಿ ಮತ್ತು ರೈತರ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು. ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸಿ, ಸಂಪೂರ್ಣ ವರದಿಯನ್ನು ಶೀಘ್ರದಲ್ಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು.
ಮುಂಗಾರು ಕೈಕೊಟ್ಟಿದೆ. ಕೆಲವು ರೈತರು ಬೆಳೆ ವಿಮೆ ಕಟ್ಟಿದ್ದಾರೆ, ಕೆಲ ರೈತರು ಬೆಳೆ ವಿಮೆ ಕಟ್ಟಿರುವುದಿಲ್ಲ. ಇನ್ನು ಕೆಲ ರೈತರು ಬಿತ್ತನೆ ಮಾಡದ ಹಿನ್ನೆಲೆಯಲ್ಲಿ ವಿಮೆಯನ್ನು ಪಾವತಿಸಲು ಸಾಧ್ಯವಾಗಿಲ್ಲ. ಬಹುತೇಕ ರೈತರು ಬೆಳೆ ವಿಮೆ ಪಾವತಿಸಿಲ್ಲ. ಆದಾಗ್ಯೂ, ವಿಮೆ ಮಾಡಿಸಿದ ಮತ್ತು ವಿಮೆ ಮಾಡಿಸದ ಇಬ್ಬರೂ ರೈತರ ಪಟ್ಟಿಯನ್ನು ಪ್ರತ್ಯೇಕವಾಗಿ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ ವರ್ಷದ ವಿಮಾ ಪರಿಹಾರವಾಗಿ ರೂ.109.54 ಕೋಟಿ ಪೈಕಿ ಈಗಾಗಲೇ ರೂ.66.397 ಕೋಟಿ ಬಿಡುಗಡೆಯಾಗಿದ್ದು, ಬಾಕಿ 42.139 ಕೋಟಿ ರೂಪಾಯಿ ಬರಬೇಕಾಗಿದೆ ಎಂದರು.

ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 69 ಟಿಎಂ ಸಿ ನೀರು ಸಂಗ್ರಹವಿದ್ದು, ಕುಡಿಯುವ ನೀರಿಗೆ ಯಾವುದೇ ಅಭಾವ ಎದುರಾಗುವುದಿಲ್ಲ. ಬರ ಪರಿಶೀಲನಾ ವರದಿಯನ್ನು ಶೀಘ್ರವಾಗಿ ಸಲ್ಲಿಸಿ, ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣವೇ ಸರ್ಕಾರದಿಂದ ಸೂಕ್ತ ನಷ್ಟಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಕುರಿತು ಆಗಸ್ಟ್ 15ರ ಒಳಗಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂಬ ಭರವಸೆ ವ್ಯಕ್ತಪಡಿಸಿದರು.

ಮುಂಗಾರು ಹಂಗಾಮಿನಲ್ಲಿ ಜೂನ್ ನಿಂದ ಇಲ್ಲಿಯವರೆಗೆ 188.7 ಮಿ.ಮೀ ಮಳೆಯಾಗಬೇಕಿದ್ದು ಆದರೆ 76 ಮಿಮೀ ಮಳೆಯಾಗಿ ವಾಡಿಕೆಗೆ ಶೇ 60 ರಷ್ಟು ಕೊರತೆಯಾಗಿದೆ. ಮತ್ತು 1,93,670 ಹೆಕ್ಟೇರ್ ಬಿತ್ತನೆ ಮಾಡಿದ ಪ್ರದೇಶದಲ್ಲಿ ನೀರಾವರಿ 46,958 ಹೆ, 1,46,712 ಹೆ ಖುಷ್ಕಿ ಪ್ರದೇಶ ಸೇರಿ ಶೇ 65 ರಷ್ಟು ಬಿತ್ತನೆ ಮಾಡಲಾಗಿದೆ. ಮಳೆ ಆಧಾರಿತ ಬೆಳೆಗಳಾದ ಮೆಕ್ಕೆಜೋಳ, ಹೈಬ್ರೀಡ್ ಜೋಳ, ಸೂರ್ಯಕಾಂತಿ, ಈರುಳ್ಳಿ, ಸಜ್ಜೆ ಹಾಗೂ ಇನ್ನಿತರೆ ಬೆಳೆಗಳು ಸೇರಿ 1,46,712 ಹೆಕ್ಟೇರ್ ಬೆಳೆಗಳಲ್ಲಿ 1,25,717 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ತೇವಾಂಶದ ಕೊರತೆಯಿಂದ ಬಾಡಿ, ಬೆಳೆ ಕುಂಠಿತವಾಗಿದ್ದು ಇಳುವರಿಯ ಮೇಲೆ ಸಂಪೂರ್ಣ ಪರಿಣಾಮ ಬೀರಿದೆ.

 

 

ಜಿಲ್ಲೆಯಲ್ಲಿ ಹೆಚ್ಚು ಮಳೆ ಕೊರತೆಯು ಹೊಸಪೇಟೆ ತಾಲ್ಲೂಕಿನಲ್ಲಿ ಶೇ 77 ರಷ್ಟು ಮತ್ತು ಕೊಟ್ಟೂರಿನಲ್ಲಿ ಶೇ 44 ರಷ್ಟು ಮಳೆ ಕೊರತೆ ಉಂಟಾಗಿದೆ. ಅನಾವೃಷ್ಟಿಯಿಂದ ಕೂಡ್ಲಿಗಿ ತಾಲ್ಲೂಕಿನಲ್ಲಿ 34,640 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಮಳೆ ಕೊರತೆಯಿಂದ ಬಿತ್ತನೆ ಹೆಚ್ಚು ಮಾಡದ ಹೊಸಪೇಟೆ ತಾಲೂಕಿನಲ್ಲಿ 2432 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಬೆಳೆ ವಿಮೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 1,43,903 ರೈತರು ಬೆಳೆ ವಿಮೆಗೆ ನೊಂದಾಯಿಸದಿರುವವರು, ಬೆಳೆ ವಿಮೆಗೆ ನೊಂದಾಯಿಸಲು ಆಗಸ್ಟ್ 15 ರ ವರೆಗೆ ಅವಕಾಶ ಇದ್ದು ರೈತರು ಬೆಳೆ ವಿಮೆ ಸೌಲಭ್ಯ ಪಡೆಯಲು ನೊಂದಾಯಿಸಲು ರೈತರಿಗೆ ತಿಳಿಸಿದರು‌.

ಆರಂಭದಲ್ಲಿ ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮ: ಸಚಿವರು ಮೊರಬ ಗ್ರಾಮದ ಶಾಂತಲಿಂಗಮ್ಮ ಅವರ ಜಮೀನಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಶಾಂತಲಿಂಗಮ್ಮ ಅವರು ಒಟ್ಟು 15 ಎಕರೆ ಜಮೀನು ಹೊಂದಿದ್ದು, ಸಕಾಲಕ್ಕೆ ಮಳೆ ಬಾರದ ಕಾರಣ ಕೇವಲ 5 ಎಕರೆಯಲ್ಲಿ ಮಾತ್ರ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ಬೆಳೆಯೂ ಈಗ ಮಳೆ ಬಂದರು ಇಳುವರಿ ಬರುವುದು ಸಾಧ್ಯವಿಲ್ಲ. ಬೀಜ ಹಾಗೂ ರಸಗೊಬ್ಬರಗಳ ಬೆಲೆ ವಿಪರೀತ ಹೆಚ್ಚಾಗಿದ್ದು, ಒಂದು ಚೀಲಕ್ಕೆ ರೂ.2,000 ವರೆಗೆ ದುಬಾರಿಯಾಗಿದೆ. ಕೃಷಿ ವೆಚ್ಚ ಹಾಗೂ ಬೀಜ-ಗೊಬ್ಬರ ಖರೀದಿಸಲು ತಮ್ಮಲ್ಲಿದ್ದ ಬಂಗಾರ-ಬೆಳ್ಳಿಯ ಆಭರಣಗಳನ್ನು ಅಡವಿಟ್ಟು ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು. ಜೊತೆಗೆ, ಕೂಡ್ಲಿಗಿ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಶಾಸಕರಾದ ಡಾ.ಎನ್.ಟಿ.ಶ್ರೀನಿವಾಸ್ ಮನವಿ ಮಾಡಿದರು.

ಕೊಟ್ಟೂರು ತಾಲೂಕಿನ ಗಜಾಪುರ ಗ್ರಾಮದ ಸಿದ್ದಪ್ಪ ಎಂಬುವರ 6 ಎಕರೆ ಮೆಕ್ಕೆಜೋಳ ಜಮೀನು ಸಂಪೂರ್ಣ ಬರಕ್ಕೆ ತುತ್ತಾಗಿರುವುದನ್ನು ಸಚಿವರು ಪರಿಶೀಲಿಸಿದರು. ಬೆಳೆ ನಷ್ಟ ಪರಿಹಾರ ಹಾಗೂ ವಿಮಾ ಯೋಜನೆಯಡಿ ಸೂಕ್ತ ನೆರವು ನೀಡುವ ಭರವಸೆ ನೀಡಿದರು.
ಸಾಲ ಸೋಲ ಮಾಡಿ ಎಕರೆಗೆ ರೂ.15,000ಕ್ಕೂ ಹೆಚ್ಚು ವೆಚ್ಚ ಮಾಡಿದ ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಬಿತ್ತನೆ ಪ್ರದೇಶದಲ್ಲಿ ಗಾಳಿಯಂತ್ರ (ವಿಂಡ್ ಫ್ಯಾನ್), ಸೋಲಾರ್ ಪ್ಯಾನಲ್‌ಗಳು ಮತ್ತು ಹೈ-ಟೆನ್ಷನ್ ವಿದ್ಯುತ್ ಮಾರ್ಗಗಳು ಹೆಚ್ಚಾಗಿ ವಿಸ್ತರಿಸುತ್ತಿದ್ದು, ರೈತರು ಕೇವಲ ಕೃಷಿಯನ್ನೇ ನಂಬಿ ಜೀವಿಸಲು ಜಾಗವಿಲ್ಲದಂತಾಗಿದೆ ಎಂದ ಅವರು, ಸರ್ಕಾರದ ಯೋಜನೆಗಳ ಮೂಲಕ 74 ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗುತ್ತಿದ್ದು, ಅದು ಕೇವಲ ಅಚ್ಚುಕಟ್ಟು ಪ್ರದೇಶಗಳಿಗೆ ಮಾತ್ರ ಉಪಯುಕ್ತವಾಗುತ್ತಿದೆ. ಮಳೆ ಆಶ್ರಿತ ಒಣಭೂಮಿ ನಂಬಿರುವ ರೈತರಿಗೆ ಇದರಿಂದ ಯಾವುದೇ ಅನುಕೂಲವಾಗುತ್ತಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಅದಷ್ಟೇ ಅಲ್ಲದೇ ಪ್ರಸ್ತುತ ಬರ ಆವರಿಸಿದ್ದು, ರೈತರು ಇನ್ನಿಲ್ಲದ ಸಂಕಷ್ಟಗಳ ಎದುರಿಸುತ್ತಿದ್ದಾರೆ. ಇಂಥಹ ಕಷ್ಟದ ಸಮಯದಲ್ಲಿ ಬ್ಯಾಂಕ್‌ಗಳಿಂದ ಸಾಲ ಮರುಪಾವತಿ ಮಾಡುವಂತೆ ರೈತರಿಗೆ ನೋಟೀಸ್ ನೀಡುತ್ತಿರುವ ಕುರಿತು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ರೈತರಿಗೆ ತೊಂದರೆಯಾಗದಂತೆ ಸೂಕ್ತ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಹರಪನಹಳ್ಳಿ ಹರಾಳು ಗುಡ್ಡಪ್ಪನವರ ಈರುಳ್ಳಿ, ನಿಚ್ಚಾಪುರದಲ್ಲಿ ಹಲಗೂರು ನಿಂಗಪ್ಪ ನ ಜಮೀನಿನಲ್ಲಿ ಹಾನಿಯಾದ ಮೆಕ್ಕೆಜೋಳದ ವೀಕ್ಷಣೆ ಮಾಡಿದರು.

ಈ ವೇಳೆ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಜಿಲ್ಲಾ ಪಂಚಾಯತ್ ಸಿಇಓ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

Please follow and like us:

 

 

 

 

 

 

 

 

Translate »
[t4b-ticker]
error: Content is protected !!