https://youtu.be/NHc6OMSu0K4?si=SI_K4goOPEgwo6h2

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತಿಗಳಿಗೆ ಸೀಮಿತವಾಗದೆ, ಸಮರ್ಥ ಸಂಘಟನಾಕಾರರ ನೇತೃತ್ವದಲ್ಲಿ ಜನಸಾಮಾನ್ಯರನ್ನು ತಲುಪುವ ಮೂಲಕ ಭಾಷಾ ಬಾಂಧವ್ಯವನ್ನು ಗಟ್ಟಿಗೊಳಿಸಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಇಮಾಮ್ ಸಾಹೇಬ್ ಹಡಗಲಿ ಹೇಳಿದರು.
ಪಟ್ಟಣದ ತುಂಗಭದ್ರ ಬಿಇಡಿ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಪರಿಷತ್ತಿನ ೧೧೨ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ ಎಂ. ವಿಶ್ವೇರಾಯ ಹಾಗೂ ಹಿರಿಯ ಸಾಹಿತಿಗಳ ನಿರಂತರ ಶ್ರಮದ ಫಲವಾಗಿ ೧೯೧೫ರ ಮೇ ೫ರಂದು ‘ಕರ್ನಾಟಕ ಸಾಹಿತ್ಯ ಪರಿಷತ್’ ಆರಂಭವಾಯಿತು. ನಂತರ ೧೯೩೮ರಲ್ಲಿ ಬಳ್ಳಾರಿಯಲ್ಲಿ ನಡೆದ ಸಮ್ಮೇಳನದಲ್ಲಿ ಇದಕ್ಕೆ ‘ಕನ್ನಡ ಸಾಹಿತ್ಯ ಪರಿಷತ್’ ಎಂದು ಮರುನಾಮಕರಣ ಮಾಡಲಾಯಿತು ಎಂದು ಅವರು ಪರಿಷತ್ತಿನ ಇತಿಹಾಸವನ್ನು ಮೆಲುಕು ಹಾಕಿದರು. ಅಲ್ಲದೆ, ಕಸಾಪ ಸಂಘಟನೆಗೆ ಸಮರ್ಥ ಸಂಘಟನಾಕಾರರು ಅಧ್ಯಕ್ಷರಾಗಬೇಕು ಮತ್ತು ಕೊಟ್ಟೂರು ತಾಲೂಕು ಸಾಹಿತ್ಯ ಭವನಕ್ಕೆ ಜಾಗ ನಿಗದಿಪಡಿಸಿದರೆ ಅಗತ್ಯ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ ಮಾತನಾಡಿ, ಆಡಳಿತದಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕನ್ನಡ ಭವನ ನಿರ್ಮಾಣಕ್ಕೆ ಜಾಗ ಗುರುತಿಸಲು ಪಪಂ ವತಿಯಿಂದ ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ದೇವರಮನಿ ಕೊಟ್ರೇಶ್ ಅವರು ಮಾತನಾಡಿ, ರಾಜ್ಯಾಧ್ಯಕ್ಷರ ಹುದ್ದೆಯ ಗೊಂದಲದಿಂದಾಗಿ ತಾಲೂಕು ಸಮ್ಮೇಳನ ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತುಂಗಭದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಶಿವಣ್ಣ ಅವರು ಕನ್ನಡ ಭಾಷೆಯ ಉಳಿವಿಗಾಗಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ ಎಂ.ಶ್ಯಾಮರಾಜ, ಪರಿಷತ್ ಕಾರ್ಯದರ್ಶಿ ಎಸ್.ರಾಜಣ್ಣ, ಹಿರಿಯರಾದ ಹಳ್ಳಿ ಕೊಟ್ರೇಶ್, ಜಿ.ಆರ್. ಬಸವರಾಜೇಶ್ವರಿ ಹಾಗೂ ಡಾ.ಸತೀಶ್ ಬಾಲನಗೌಡ ಅವರನ್ನು ಸನ್ಮಾನಿಸಲಾಯಿತು. ಕಸಾಪ ಗೌರವ ಕಾರ್ಯದರ್ಶಿ ಅರವಿಂದ ಬಸಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಖಜಾಂಚಿ ಈಶ್ವರಪ್ಪ ತುರಕಾಣಿ ಹಾಗೂ ಸದಸ್ಯೆ ಶೆಟ್ಟಿ ಶಶಿಕಲಾ ಉಪಸ್ಥಿತರಿದ್ದರು.



More Stories
ವಸತಿ ನಿವೇಶನಕ್ಕಾಗಿ ಬಡವರ ಆಗ್ರಹ
ವಿಶ್ವ ಮಲೇರಿಯಾ ಜಾಗೃತಿ ದಿನ: ಬೇವಿನಾಳ ಗ್ರಾಮದಲ್ಲಿ ಸಾರ್ವಜನಿಕರಿಗೆ ಅರಿವು
ಬ್ರಿಡ್ಜ್ ಟು ಬೆಂಗಳೂರು’ ಮೂಲಕ ನವಶಕ್ತಿಯ ಅನಾವರಣ