April 29, 2026

Hampi times

Kannada News Portal from Vijayanagara

ಜೀವನ ಸಂಘರ್ಷಕ್ಕೆ ನಿಂತವರು ! : ಡಾ.ವಿನಯಕುಮಾರ ಮುತ್ತಗಿ

https://youtu.be/NHc6OMSu0K4?si=SI_K4goOPEgwo6h2

ಜೀವನ ಸಂಘರ್ಷಕ್ಕೆ ನಿಂತವರು !

ಆಯಮ್ಮ ಪೇಷಂಟ್ ಕುರಿಸಿಕೊಂಡಿದ್ದ ವೀಲ್ ಚೇರ್ ತಳ್ಳುತ್ತ ,ಓ ಪಿ ಡಿ ಒಳಗೆ ನನ್ನ ಟೇಬಲ್ ಮುಂದೆ ತಂದು ನಿಲ್ಲಿಸಿದರು.

ಕೂದಲು ಹರಡಿಕೊಂಡಿದ್ದವು ,ಬಲಗೈಯ್ಯ ಸ್ವಾದೀನ ತಪ್ಪಿತ್ತು ,ಸುತ್ತಲಿನ ಪ್ರಪಂಚದ ಅರಿವು ಆಕೆಗೆ ಉಳಿದಿರಲಿಲ್ಲ ,ಕಣ್ಣು ಬಿಟ್ಟು ನಿರುಕಿಸಿ ನಕ್ಕು, ರೋಧಿಸಿಕೊಂಡಳು. ಹೇಳಬೇಕೆಂದು ಕೊಂಡದ್ದು ಯಾವುದು ತುಟಿಗೆ ಬರಲೇ ಇಲ್ಲ,ಕೈ ಎತ್ತಿ ಜೋಡಿಸಿ ನಮಸ್ಕರಿಸಲು ಹೊರಟವಳಿಗೆ ಬಲಗೈಯ ಸಾತು ನೀಡಲಿಲ್ಲ, ಅಸಹಾಯಕತೆÀಯಲ್ಲಿ ಕುಗ್ಗಿ ಕೂತಳು .ಅದೆಲ್ಲಿಂದಲೋ ನೆನಪಿನ ಪಟಲಗಳಲ್ಲಿ ಹೆಕ್ಕಿ ತೆಗೆದು ದನ,ಕರು ಎಂದು ಬಡಬಡಿಸಿಕೊಂಡಳು .

ಈ ಮೆದುಳು ಕ್ಯಾನ್ಸರ್‌ಗಳೇ ಹಾಗೆ, ಉಳಿದೆಲ್ಲ ಕ್ಯಾನ್ಸರ್ಗಳಿಗಿಂತ ಭಿನ್ನ, ಬೇರೆಲ್ಲೂ ಹರಡಿಕೊಳ್ಳದೆ ಕಾಣಿಸಿಕೊಂಡ ಮೆದುಳ ಭಾಗದಲ್ಲೇ ಚಿಕೆತ್ಸೆ ನಂತರವೂ ಮತ್ತೆ ಮರುಕಳಿಸುವಂತದ್ದು.

ಇಂತಹದ್ದೇ ಮೆದುಳು ಕ್ಯಾನ್ಸರ್ಗೆ ಎರಡು ವರ್ಷಗಳ ಕೆಳಗೆ ಆಕೆ ಚಿಕಿತ್ಸೆಗೆಂದು ಬಂದಿದ್ದಳು, ನೋಡಮ್ಮ ರೇಡಿಯೋಥೆರಪಿ ಬೇಕಾಗುತ್ತದೆ, ಕರೆಂಟ್ ಸಾಮಿ !! ನಂಗೆ ಅದ್ಯಾವದು ಬೇಡ ಎಂದಳು .

 

ಇಲ್ಲಿ ಕೇಳು ಕಣ್ಣಿಗೆ ಕಾಣದ ಕ್ಷ- ಕಿರಣಗಳನ್ನ ಬಳಸಿ, ಕಾಯಿಲೆಯ ಜಾಗಕ್ಕೆ ನಿರ್ದಿಷ್ಟವಾಗಿ ಚಿಕಿತ್ಸೆ ನೀಡಲಾಗುತ್ತೆ. ಶಾಕು,ಕರೆಂಟು ಎಲ್ಲ ರೂಢಿ ಪದಗಳಷ್ಟೇ, ಇದರಲ್ಲಿ ಅದ್ಯಾವದು ಇಲ್ಲ, ವಾರದಲ್ಲಿ ಐದು ದಿನ, ನಿರ್ದಿಷ್ಟ ಸಮಯಕ್ಕೆ ಬಂದು ಚಿಕಿತ್ಸೆ ಪಡೆದು ಮನೆಗೆ ವಾಪಾಸ್ ಆಗಬಹುದು ನಿಮ್ಮ ಖಾಯಿಲೆಗೆ ಮೂವತ್ತು ದಿನ ಚಿಕಿತ್ಸೆ ಬೇಕಾಗುತ್ತೆ ಎಂದು ಮಾತು ಮುಗಿಸುವಷ್ಟರಲ್ಲಿ, ಮೂವತ್ತು ದೀವ್ಸಾ  !! ಬುದ್ದಿ ಊರಾಗ ದನ ಕರ ಇದ್ದಾವು ಬ್ಯಾರೆ ಅವ್ರ್ ಮ್ಯಾಗೆ ಬಿಟ್ಟು ಬಂದೀನಿ, ಒಂದ್ವಾರ ಟೇಮ್ ಕೊಡಿ ಎಲ್ಲ ಒಂದ್ ಕಡೆ ಕೂಡಿ ಮೇವು ನೀರು ಸರಿ ಮಾಡಿ ಬತ್ತೀನಿ, ಎಂದು ಹೇಳಿ ಹೋಗಿ ಬಂದು ಚಿಕೆತ್ಸೆ ಪಡೆದು ವಾಪಾಸು ಹೋದವಳು , ಈಗ ವೀಲ್ ಚೇರ್ ನಲ್ಲಿ ನನ್ನ ಮುಂದೆ ನಿಸ್ತೇಜವಾಗಿ ಕೂತಿದ್ದಳು.

ಮತ್ತೆ ಮತ್ತೆ ಮರುಕಳಿಸುವ ಈ ಮೆದುಳು ಕ್ಯಾನ್ಸರ್ ಒಮ್ಮೆ ಕೈ ಕಾಲು ಸ್ವಾಧೀನಕ್ಕೆ, ದೃಷ್ಟಿಗೆ, ಮಾತಿಗೆ, ನೆನಪಿಗೆ ಸಂಬಂಧಪಟ್ಟ ಮೆದುಳ ಭಾಗಕ್ಕೆ ಬಂದು ಆಯಾ ಸಾಮರ್ಥ್ಯ ಕುಗ್ಗುವಂತೆ ಮಾಡುತ್ತೆ.

ಕರುಳ ಬಳ್ಳಿ ಕತ್ತರಿಸಿಕೊಂಡು ಹುಟ್ಟೋ ನಾವು ,ಅದ್ಯಾವ ಸಮಯದಲ್ಲಿ ಹೀಗೆ ಬಿಡಿಸಲಾಗದ ನಂಟು ಬೆಳೆಸಿಕೊಂಡು ಬಿಡುತ್ತೇವೆ .ಅಣ್ಣ, ತಮ್ಮ, ಅಕ್ಕ, ತಂಗಿ, ಗೆಳೆಯ, ಗೆಳತೀ, ಆತ್ಮೀಯರು, ಹಿತೈಷಿಗಳು, ಹೀಗೆ ಕಾಣಿಸದ ಬಂಧನದಲ್ಲಿ ಬೆಸೆದುಕೊಳ್ಳುತ್ತೇವೆ, ನಮಗಲ್ಲವಾದರೂ ಇಂತಹ ಬಂಧನಗಳಿಗೆ ಬದುಕಬೇಕೆಂದು ಛಲ ತುಂಬಿಕೊಳ್ಳುತ್ತೇವೆ, ಹೀಗೆ ತುಡಿಯುವದೇ ಜೀವನ !!

ಇನ್ನೊಮ್ಮೆ ರೇಡಿಯೋಥೆರಪಿ ಮಾಡುವದಾಗಿ ಹೇಳಿ ಆಕೆಯನ್ನು ಕಳಿಸಿಕೊಟ್ಟೆ.

ಪುಣ್ಯಕೋಟಿಯ ಕಥೆ ಕೇಳಿ ಬೆಳೆದೆ ನಾನು, ಅವಳದೇ ಇರುವಿಕೆಯನ್ನ ಬರುವಿಕೆಯನ್ನ ನೆಚ್ಚಿಕೊಂಡ ಆ ದನ ಕರುಗಳಿಗಾಗಿ ಆಕೆ ಚೇತರಿಸಿಕೊಳ್ಳುವಂತಾಗಲಿ ಎಂದುಕೊಂಡೆ.

Please follow and like us:

 

 

 

 

 

Translate »
[t4b-ticker]
error: Content is protected !!