https://youtu.be/NHc6OMSu0K4?si=SI_K4goOPEgwo6h2

ಮಾ.9ರಿಂದ ಮಾ.29ರವರೆಗೆ ದ್ವಿತೀಯ ಪಿಯು ಪರೀಕ್ಷೆ
ಹಂಪಿ ಟೈಮ್ಸ್ ಹೊಸಪೇಟೆ :
ಇದೇ ಮಾರ್ಚ್ ತಿಂಗಳ ಎರಡನೇ ವಾರದಿಂದ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ವ್ಯವಸ್ಥಿತವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಿದ್ದತೆ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ.9ರ ಗುರುವಾರ ಆರಂಭಗೊಂಡು ಮಾ.29 ಬುಧವಾರದವರೆಗೆ ನಡೆಯಲಿವೆ. ಜಿಲ್ಲೆಯ ವಿವಿಧ ತಾಲ್ಲೂಕಿನ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಬಾರಿ ಒಟ್ಟು 15,479 ಜನ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ.

ಪರೀಕ್ಷಾ ಪ್ರಾಧಿಕಾರದ ನಿಯಮದಂತೆ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನೋಡಲ್ ಅಧಿಕಾರಿಗಳ ತ್ರಿಸದಸ್ಯ ಸಮಿತಿಯೊಂದಿಗೆ ಪರೀಕ್ಷೆಗಳಿಗೆ ಸಂಬಂಧಿಸಿದ ಬಂಡಲ್‌ಗಳ ನಿರ್ವಹಣೆ ಕೈಗೊಳ್ಳಲು ಸೂಚಿಸಿದರು. ಪರೀಕ್ಷೆಗಳು ನಡೆಯಲಿರುವ ಜಿಲ್ಲೆಯ 18 ಪರೀಕ್ಷಾ ಕೇಂದ್ರಗಳಲ್ಲಿ ನಿಷೇಧಾಜ್ಞೆ ಸೇರಿದಂತೆ ಝೆರಾಕ್ಸ್, ಸೈಬರ್ ಸೆಂಟರ್ ಮುಚ್ಚುವ ಕುರಿತು ಅದೇಶ ಹೊರಡಿಸಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ಬಂಡಲ್‌ಗಳನ್ನು ಸಾಗಿಸುವ ಸಮಯದಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮೀಣ ಭಾಗಗಳಿಂದ ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಸೇರಿದಂತೆ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ ಪರಿಶೀಲಿಸಲು ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಅಪರ ಜಿಲ್ಲಾಧಿಕಾರಿ ಅನುರಾಧ ಕೆ., ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಪರೀಕ್ಷಾ ಕೇಂದ್ರಗಳು 18 ಎಲ್ಲೆಲ್ಲಿ: ಹೊಸಪೇಟೆ – 5, ಹರಪನಹಳ್ಳಿ- 5, ಹೂವಿನಹಡಗಲಿ – 2, ಕೂಡ್ಲಿಗಿ – 2, ಕೊಟ್ಟೂರು – 2, ಹಗರಿಬೊಮ್ಮನಹಳ್ಳಿ – 2
ವಿದ್ಯಾರ್ಥಿಗಳ ವಿವರ : ಒಟ್ಟು ನೋಂದಾಯಿತ ವಿದ್ಯಾರ್ಥಿಗಳು:- 15,479, ಪ್ರಥಮ ಬಾರಿಗೆ ಪರೀಕ್ಷೆ ಎದುರಿಸುವವರು:- 12,832, ಪುನರಾವರ್ತಿತ ವಿದ್ಯಾರ್ಥಿಗಳು:- 2,178, ಖಾಸಗಿ ಪರೀಕ್ಷಾರ್ಥಿಗಳು:- 469
ತಾಲ್ಲೂಕುವಾರು ವಿದ್ಯಾರ್ಥಿಗಳ ವಿವರ: ಹೊಸಪೇಟೆ:- 4966, ಹರಪನಹಳ್ಳಿ:- 3354, ಹೂವಿನಹಡಗಲಿ:- 1576, ಕೂಡ್ಲಿಗಿ:- 1250, ಕೊಟ್ಟೂರು:- 2204, ಹಗರಿಬೊಮ್ಮನಹಳ್ಳಿ:- 2129



More Stories
ವಿಶ್ವ ಮಲೇರಿಯಾ ಜಾಗೃತಿ ದಿನ: ಬೇವಿನಾಳ ಗ್ರಾಮದಲ್ಲಿ ಸಾರ್ವಜನಿಕರಿಗೆ ಅರಿವು
ಬಳ್ಳಾರಿ ಲಿಡ್ಕರ್ ಎಂಪೋರಿಯಂನಲ್ಲಿ ಚರ್ಮವಸ್ತುಗಳ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ
ಕ್ರೀಡಾ ಜಗತ್ತಿಗೆ ಸ್ಫೂರ್ತಿ ಭಾರತದ ಮಹಿಳಾ ಆರ್ಚರಿ ಪಟು ಪಾಯಲ್ ನಾಗ್