
HAMPI TIMES
ಶ್ರೀ ಸಾಯಿಬಾಬ ದೇವಸ್ಥಾನದ ತಡೆಗೋಡೆ, ವಾಣಿಜ್ಯ ಮಳಿಗೆಗಳ ತೆರವು
ಹೊಸಪೇಟೆ: ನಗರದ ಡ್ಯಾಂ ರಸ್ತೆಯ ಶ್ರೀ ಸಾಯಿಬಾಬ ದೇವಸ್ಥಾನದ ತಡೆಗೋಡೆ ಸೇರಿದಂತೆ ನೂತನ ಜಿಲ್ಲಾಧಿಕಾರಿಗಳ ಕಚೇರಿವರೆಗಿನ ರಸ್ತೆ ಅಕ್ಕಪಕ್ಕದ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ವಾಣಿಜ್ಯ ಮಳಿಗೆಗಳನ್ನು ತಹಶೀಲ್ದಾರ್ ವಿಶ್ವಜಿತ್ ಮೆಹತಾ, ನಗರಸಭೆ ಪೌರಾಯುಕ್ತ ಮನೋಹರ ನಾಗರಾಜ ಸಮ್ಮುಖದಲ್ಲಿ ಗುರುವಾರ ಬೆಳಿಗ್ಗೆ ಐದು ಜೆಸಿಬಿಗಳಿಂದ ತೆರವು ಕಾರ್ಯ ನಡೆಯಿತು.

ಈವರೆಗೂ ರಸ್ತೆಯ ಅಕ್ಕಪಕ್ಕ ಸರ್ಕಾರಿ ಸ್ಥಳದಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ 10 ವಾಣಿಜ್ಯ ಮಳಿಗೆಗಳನ್ನು ಮತ್ತು ಸುಮಾರು 25 ಅಡಿ ರಸ್ತೆಯನ್ನು ಅತಿಕ್ರಮಿಸಿ ಶ್ರೀ ಸಾಯಿಬಾಬ ದೇವಸ್ಥಾನಕ್ಕೆ ನಿರ್ಮಿಸಿದ್ದ ತಡೆಗೋಡೆಯನ್ನು ತೆರವುಗೊಳಿಸಲಾಗಿದೆ. ಇನ್ನೂ ಕೆಲವರು ಸ್ವಯಂಪ್ರೇರಿತವಾಗಿ ಮಳಿಗೆಗಳ ತೆರವು ಕಾರ್ಯದಲ್ಲಿ ತೊಡಗಿದ್ದಾರೆ. ಹಕ್ಕುಪತ್ರ ಪಡೆದ ಕೆಲ ನಿವಾಸಿಗಳು ಐದಾರು ಅಡಿಯಷ್ಟು ಅತಿಕ್ರಮ ಮಾಡಿದ್ದಾರೆ, ನ್ಯಾಯಾಲಯದ ಆದೇಶದ ಮೇರೆಗೆ ಮನೆಗಳÀ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತರು ತಿಳಿಸಿದರು.


ಬಯಲಾದ ಬದುಕು: ಟಿಬಿಡ್ಯಾಂ ರಸ್ತೆ ಬದಿಯ ಮಳಿಗೆಗಳು ಅನಧಿಕೃತವೆಂದು ತಿಳಿಯದೇ ಕೆಲವರು ಮಳಿಗೆಗಳನ್ನು ಬಾಡಿಗೆ ಪಡೆದು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿದ್ದರು. ಬೆಳ್ಳಂಬಳಿಗ್ಗೆ ಜೆಸಿಬಿಗಳ ಘರ್ಜನೆಯಿಂದ ಮಳಿಗೆಗಳ ಮೇಲಿದ್ದ ಶೀಟ್‌ಗಳು, ಕಬ್ಬಿಣದ ಸರಳು ಹಾಗೂ ಮತ್ತಿತ್ತರ ಗೃಹಬಳಕೆ ವಸ್ತುಗಳು ನುಜ್ಜುಗುಜ್ಜಾಗಿ ಮರುಬಳಕೆಗೆ ಬಾರದಂತೆ ಗುಜರಿ ಪಾಲಾದವು. ಸಮಯವಕಾಶ ಕೊಟ್ಟಿದ್ದರೆ ಒಂದಿಷ್ಟು ಗೃಹ ಉಪಯೋಗಿ ಸಾಮಾಗ್ರಿಗಳನ್ನು ಮರುಬಳಕೆಗೆ ಬರುವಂತೆ ತೆಗೆದುಕೊಳ್ಳುತ್ತಿದ್ದೆವು. ಇದೀಗ ಸೂರು ಇಲ್ಲ, ಸೂರು ನಿರ್ಮಿಸಿಕೊಳ್ಳಲು ಸಾಮಾಗ್ರಿಗಳು ಇಲ್ಲದಂತಾಗಿದೆ. ಮಳಿಗೆಗಳ ತೆರವಿನಿಂದ ಬದುಕು ಬೀದಿಗೆ ಬಂದಿದೆ ಎಂದು ಮಳಿಗೆ ನಿವಾಸಿಗಳು ಕಣ್ಣೀರಿಟ್ಟರು.

ಚುನಾವಣೆ ಹೊಸ್ತಿಲಲ್ಲಿರುವಾಗ ಜನಪ್ರತಿನಿಧಿಗಳು ಬಡವರ ಮನೆ ಬಾಗಿಲಿಗೆ ಬಂದು ಕೈಮುಗಿದು, ನೀವೇ ಪ್ರಭುಗಳು ಅಂತಾರೆ. ಮತ್ತೊಮ್ಮೆ ಚುನಾವಣೆ ಬಂದಾಗಲೆ ಅವರ ದರ್ಶನವಾಗುತ್ತದೆ. ರಸ್ತೆ ಅಗಲೀಕರಣದಿಂದ ರಸ್ತೆ ಬದಿಯಲ್ಲೆ ಜೀವನ ನಡೆಸುವ ಅನೇಕ ಸ್ವಾಭಿಮಾನಿ ಬಡಕುಟುಂಬಗಳು ಅತಂತ್ರ ಸ್ಥಿತಿಗೆ ತಲುಪಿವೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ನಮ್ಮ ನೋವಿನ ದನಿ ಕೇಳಲು ಬರುತ್ತಿಲ್ಲ. ಬಡವರು ಸಂಕಷ್ಟಕ್ಕೆ ಸಿಲುಕಿದಾಗ ಅಸರೆಯಾಗಬೇಕಾದ ಜನಪ್ರತಿನಿಧಿಗಳೆ ದೂರ ಉಳಿದುಕೊಂಡರೆ ಯಾರನ್ನು ದೂರಬೇಕು ಎಂದು ನಿವಾಸಿಗಳಾದ ಸೆಲ್ವಂ, ರಾಜೇಶ್ ಸೇರಿದಂತೆ ಇತರರು ಅಳಲು ತೋಡಿಕೊಂಡರು.



More Stories
ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆಯ ಪಿ.ಎಂ. ಶ್ರೀವರ್ಧನ್ ರೆಡ್ಡಿಗೆ ಪ್ರಥಮ ಸ್ಥಾನ
ಕ್ರೀಡೆಗಳು ಬಂದಿಗಳಲ್ಲಿ ಮಾನಸಿಕ ಉಲ್ಲಾಸ, ಸಕಾರಾತ್ಮಕ ಬದಲಾವಣೆ ತರಲು ಸಹಕಾರಿ: ಮಧುಸೂದನ್
ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಹೊಸಪೇಟೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ