April 11, 2026

Hampi times

Kannada News Portal from Vijayanagara

ಹೆರಿಗೆ ಶಸ್ತ್ರಚಿಕಿತ್ಸೆ ಇಳಿಕೆಗೆ ಕ್ರಮ ವಹಿಸಿ

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್‌ ಬಳ್ಳಾರಿ

ಜಿಲ್ಲೆಯಲ್ಲಿ ತಾಯಿ ಮರಣ, ಶಿಶು ಮರಣ ಹಾಗೂ ನಿರ್ಜೀವ ಜನನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಜಾಗರೂಕರಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ವಿಶೇಷವಾಗಿ ಪ್ರಸ್ತುತ ನಡೆಯುತ್ತಿರುವ ಶಸ್ತ್ರ ಚಿಕಿತ್ಸಾ ಹೆರಿಗೆಗಳ ಪ್ರಮಾಣವನ್ನು ಶೇ.೨೫ಕ್ಕೆ ಇಳಿಸುವ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿದ ಡಿಹೆಚ್‌ಓ ಅವರು, ನಿರ್ಜೀವ ಜನನಗಳನ್ನು ತಡೆಯುವ ಕುರಿತು ತಜ್ಞ ವೈದ್ಯರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ವರದಿಯನ್ನು ಸಿದ್ಧಪಡಿಸಬೇಕು. ೨೦೨೫-೨೬ನೇ ಸಾಲಿನಲ್ಲಿ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಿಂದ ೫೪ ತಾಯಂದಿರನ್ನು ಹಾಗೂ ಜಿಲ್ಲಾ ಆಸ್ಪತ್ರೆಯಿಂದ ೨೪ ತಾಯಂದಿರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.

 

ಒಟ್ಟಾರೆ ೭೮ ತಾಯಂದಿರ ಮರಣವನ್ನು ತಡೆಯುವಲ್ಲಿ ಯಶಸ್ವಿಯಾಗಿರುವ ಆಸ್ಪತ್ರೆಗಳ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು, ತಜ್ಞ ವೈದ್ಯರು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ತಾಯಿ ಮರಣ ದರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳು ಸಕಾರಾತ್ಮಕ ಫಲಿತಾಂಶ ನೀಡುತ್ತಿವೆ.

೨೦೨೬-೨೭ನೇ ಸಾಲಿನಲ್ಲಿ ತಾಯಿ ಮರಣ ದರವನ್ನು ಶೂನ್ಯದತ್ತ ಕೊಂಡೊಯ್ಯುವ ಗುರಿಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿದೆ. ಇದಕ್ಕಾಗಿ ಮತ್ತಷ್ಟು ಜಾಗರೂಕತೆಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಮತ್ತು ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಹನುಮಂತಪ್ಪ, ಬಿಎಂಸಿಆರ್‌ಸಿ ಯ ಎಂಎಂಆರ್ ನ ನೋಡಲ್ ಅಧಿಕಾರಿ ಡಾ.ಹೆಚ್.ಇ. ರಾಮರಾಜು,

ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞರ ವಿಭಾಗದ ಮುಖ್ಯಸ್ಥ ಡಾ.ವಿಶ್ವನಾಥ್ ಬಿ., ಬಿಎಂಸಿಆರ್‌ಸಿ ಎಸ್‌ಎನ್‌ಸಿಯು ಮುಖ್ಯಸ್ಥ ಡಾ.ರಿಜೇಶ್, ಪ್ರಸೂತಿ ತಜ್ಞ ಡಾ.ಪ್ರಶಾಂತ್, ಮಕ್ಕಳ ತಜ್ಞ ಡಾ.ಎಮ್. ಬಾಲವೆಂಕಟೇಶ್ವರರಾವ್, ವಿವಿಧ ತಾಲ್ಲೂಕುಗಳ ಆರೋಗ್ಯ ಅಧಿಕಾರಿಗಳಾದ ಡಾ.ಆರ್.ಅಬ್ದುಲ್ಲಾ, ಡಾ.ಸುನೀಲ್, ಡಾ.ಅರುಣ್, ಡಾ.ಮಂಜುನಾಥ್ ಜವಳಿ, ಡಾ.ಭರತ್, ಡಾ.ಸುರೇಶ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ಎನ್.ಕ್ಯೂ.ಎ.ಎಸ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Please follow and like us:

 

 

 

 

 

Translate »
[t4b-ticker]
error: Content is protected !!