https://youtu.be/NHc6OMSu0K4?si=SI_K4goOPEgwo6h2

ಜನವರಿ 26 ಭಾರತೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನ. ಇದು ಕೇವಲ ಒಂದು ರಾಷ್ಟ್ರೀಯ ಹಬ್ಬವಲ್ಲ; ಅದು ಭಾರತದ ಜನತೆಯ ರಾಜಕೀಯ ಮತ್ತು ಸಾಮಾಜಿಕ ಬದುಕಿಗೆ ನಿರ್ದಿಷ್ಟ ನೆಲೆ ನೀಡಿದ ದಿನ. 1950ರ ಜನವರಿ 26ರಂದು ಭಾರತ ತನ್ನದೇ ಸಂವಿಧಾನವನ್ನು ಜಾರಿಗೆ ತಂದು, ಪ್ರಜೆಗಳ ಆಡಳಿತವಿರುವ ಗಣರಾಜ್ಯ ರಾಷ್ಟ್ರವಾಗಿ ರೂಪುಗೊಂಡಿತು. ಈ ದಿನದಿಂದ ಭಾರತ ರಾಜರು, ಸಾಮ್ರಾಟರು ಅಥವಾ ವಿದೇಶಿ ಆಳ್ವಿಕೆಯ ಕಪಿಮುಷ್ಠಿಯಿಂದ ಬೇಡಿಗಳನ್ನ ಕಳಚಿಕೊಂಡು, ಕಾನೂನು ಮತ್ತು ಸಂವಿಧಾನದ ಆಧಾರದಲ್ಲಿ ಜಗತ್ತಿನ ಅತಿ ದೊಡ್ಡ ಮತ್ತು ಪ್ರಬಲ ರಾಷ್ಟ್ರವಾಗಿ ಗುಂಪುಗೊಂಡಿತು.
ಸ್ವಾತಂತ್ರ್ಯವನ್ನು ಭಾರತ 1947ರಲ್ಲಿ ಪಡೆದರೂ, ಸ್ವಾತಂತ್ರ್ಯಕ್ಕೆ ಅರ್ಥ ಮತ್ತು ಸ್ಥಿರತೆ ನೀಡಿದ್ದು ಸಂವಿಧಾನ. ಸಂವಿಧಾನವಿಲ್ಲದೆ ಸ್ವಾತಂತ್ರ್ಯ ದಿಕ್ಕು ತಪ್ಪಿದ ಶಕ್ತಿಯಾಗಬಹುದಿತ್ತು. ಈ ಕಾರಣಕ್ಕೇ ಜನವರಿ 26 ಕೇವಲ ಆಚರಣೆಯ ದಿನವಲ್ಲ; ಅದು ಸ್ವಾತಂತ್ರ್ಯವನ್ನು ಒಂದು ಬಲವಾದ ವ್ಯವಸ್ಥೆಯೊಳಗೆ ರೂಪಿಸಿ ರಚಿಸಿ ನಿರ್ಮಿಸಿದ ದಿನ.
ಭಾರತೀಯ ಸಂವಿಧಾನವು ವಿಶ್ವದಲ್ಲೇ ಅತ್ಯಂತ ವಿಶಾಲ ಮತ್ತು ಸಮಗ್ರ ಸಂವಿಧಾನಗಳಲ್ಲಿ ಒಂದಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲಾದ ಈ ಸಂವಿಧಾನವು ಕೇವಲ ಆಡಳಿತದ ನಿಯಮಾವಳಿ ಅಲ್ಲ; ಅದು ಸಾಮಾಜಿಕ ನ್ಯಾಯದ ಘೋಷಣೆಯಾಗಿದೆ. ಶತಮಾನಗಳಿಂದ ಶೋಷಣೆಗೆ ಒಳಗಾದ ಸಮುದಾಯಗಳಿಗೆ ಗೌರವ, ಸಮಾನತೆ ಮತ್ತು ಅವಕಾಶ ನೀಡುವ ಉದ್ದೇಶ ಇದರ ಮೂಲದಲ್ಲಿದೆ. ಜಾತಿ, ಧರ್ಮ, ಲಿಂಗ, ಭಾಷೆ ಎಂಬ ಎಲ್ಲ ಭೇದಗಳನ್ನು ಮೀರಿಸಿ ಪ್ರತಿಯೊಬ್ಬ ಭಾರತೀಯನಿಗೂ ಸಮಾನ ಹಕ್ಕು ನೀಡುವುದು ಇದರ ಆಶಯ.
ಪ್ರತಿ ವರ್ಷ ಗಣರಾಜ್ಯೋತ್ಸವದಂದು ನಡೆಯುವ ಪೆರೇಡ್, ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ರಾಷ್ಟ್ರದ ವೈವಿಧ್ಯತೆ ಮತ್ತು ಶಕ್ತಿಯನ್ನು ಪ್ರದರ್ಶಿಸುತ್ತವೆ. ಆದರೆ ಗಣರಾಜ್ಯದ ನಿಜವಾದ ಶಕ್ತಿ ಈ ವೈಭವದಲ್ಲಿ ಮಾತ್ರ ಇಲ್ಲ. ಅದು ದೇಶದ ಸಾಮಾನ್ಯ ನಾಗರಿಕನ ನಡವಳಿಕೆಯಲ್ಲಿ, ಕಾನೂನಿಗೆ ತೋರಿಸುವ ಗೌರವದಲ್ಲಿ ಮತ್ತು ಸಮಾಜದಲ್ಲಿ ನ್ಯಾಯವನ್ನು ಕಾಪಾಡುವ ಮನೋಭಾವದಲ್ಲಿ ಇದೆ.
ಸಂವಿಧಾನವು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳೆಂಬ ಒಂದೇ ನಾಣ್ಯದ ಎರಡು ಮುಖಗಳಂತಿರುವ ಮೂಲಭೂತ ಅಂಶಗಳನ್ನು ಒಳಗೊಂಡಿದೆ. ನಮ್ಮ ದೇಶದ ಪ್ರಜೆಗಳು ಕೇವಲ ತಮ್ಮ ಮೂಲಭೂತ ಹಕ್ಕುಗಳಿಗೆ ಮಾತ್ರ ಹೋರಾಡುತ್ತಾರೆ ಹೊರತು, ಸಂವಿಧಾನವು ನಿರ್ದೇಶಿಸಿರುವ ಮೂಲಭೂತ ಕರ್ತವ್ಯಗಳ ಕಡೆಗೂ ಗಮನ ಹರಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮೂಲಭೂತ ಹಕ್ಕುಗಳಿಗೆ ಪೆಟ್ಟು ಬಿದ್ದಾಗ ಕೋರ್ಟಿನ ಮೆಟ್ಟಿಲೇರುವ ನಾವುಗಳು, ಸಂವಿಧಾನವು ಸೂಚಿಸಿದ ಮೂಲಭೂತ ಕರ್ತವ್ಯಗಳನ್ನ ಸರಿಯಾಗಿ ಪಾಲಿಸುತ್ತಿದ್ದೇವೆ ಎಂದು ನಮ್ಮೊಳಗಿನ ಆತ್ಮಸಾಕ್ಷಿ ಎಂಬ ಮೌನ ನ್ಯಾಯಾಲಯವನ್ನು ಎಂದಾದರೂ ನಾವು ಕೇಳಿದ್ದೀವಿಯೇ? ಸಾರ್ವಜನಿಕ ನಳಗಳು, ಆಸ್ಪತ್ರೆಗಳು, ಶಾಲೆಗಳು, ಅರಣ್ಯಗಳು ಇವುಗಳ ಸರಿಯಾದ ನಿರ್ವಹಣೆ ಮತ್ತು ರಕ್ಷಣೆ ನಮ್ಮ ಹೊಣೆ ಎಂದು ಅಂದುಕೊಂಡು ಮುಂದುವರೆದಿದ್ದೇವೆಯೇ?
ಜಗತ್ತಿನಲ್ಲಿ ಅತ್ಯಂತ ಬಲಿಷ್ಠವಾದ ಸಂವಿಧಾನವನ್ನು ಹೊಂದಿರುವ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಮಗೆ ಇಂದಿಗೂ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳು, ಇಂದಿಗೂ ಜೀವಂತವಾಗಿರುವ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಮರ್ಯಾದೆ ಹತ್ಯೆಗಳು, ಹೆಣ್ಣು ಭ್ರೂಣ ಹತ್ಯೆ,ಆರ್ಥಿಕ ಅಸಮಾನತೆ, ಸಾಮಾಜಿಕ ಅಸಹಿಷ್ಣುತೆ, ಭ್ರಷ್ಟಾಚಾರ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ನಿರ್ಲಕ್ಷ್ಯ—ಇವೆಲ್ಲವೂ ಗಣರಾಜ್ಯದ ಪ್ರಸ್ತುತತೆಯನ್ನು ಪ್ರಶ್ನಿಸುತ್ತಿವೆ.

ಇಂತಹ ಸಂದರ್ಭದಲ್ಲಿ ಗಣರಾಜ್ಯೋತ್ಸವ ನಾವುಗಳು ನಮ್ಮ ಆತ್ಮಾವಲೋಕನ ಮಡಿಕೊಳ್ಳುವ ಸಮಯವು ಹೌದು. ನಾವು ಸಂವಿಧಾನವನ್ನು ಎಷ್ಟು ಪಾಲಿಸುತ್ತಿದ್ದೇವೆ? ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತಿದೆಯೇ? ಭಿನ್ನಾಭಿಪ್ರಾಯಗಳಿಗೆ ಗೌರವ ನೀಡುತ್ತಿದ್ದೇವೆಯೇ? ಎಂಬ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ಬೇಕಾಗಿದೆ.
ಗಣರಾಜ್ಯ ಎಂದರೆ ಕೇವಲ ಚುನಾವಣೆ ನಡೆಸುವ ವ್ಯವಸ್ಥೆ ಅಲ್ಲ. ಅದು ಪ್ರಶ್ನಿಸುವ ನಾಗರಿಕರು, ಹೊಣೆಗಾರ ಆಡಳಿತ ಮತ್ತು ಸ್ವತಂತ್ರ ಸಂಸ್ಥೆಗಳ ಸಮತೋಲನದ ಮೇಲೆ ನಿಂತಿರುವ ವ್ಯವಸ್ಥೆ. ಸಂವಿಧಾನಾತ್ಮಕ ಸಂಸ್ಥೆಗಳ ಸ್ವಾಯತ್ತತೆ ಕುಂದಿದಾಗ ಅಥವಾ ನಾಗರಿಕರ ಧ್ವನಿಗೆ ಪೆಟ್ಟು ಬಿದ್ದು ಮೌನವಾದಾಗ, ಗಣರಾಜ್ಯದ ಅಡಿಪಾಯವೇ ದುರ್ಬಲವಾಗುತ್ತದೆ!
ಭಾರತವು ಗಣರಾಜ್ಯವಾದ ನಂತರ ಹಲವಾರು ಸಾಧನೆಗಳನ್ನ ಮುಡಿಗೇರಿಸಿಕೊಂಡಿದೆ ಜಪಾನ್ ದೇಶವನ್ನ ಹಿಂದಕ್ಕೆ ಜಗತ್ತಿನ ಅತಿ ದೊಡ್ಡ ನಾಲ್ಕನೇ ಆರ್ಥಿಕ ವ್ಯವಸ್ಥೆ ಎಂಬ ಸಾಧನೆಯನ್ನು ಮಾಡಿದೆ, ಬಾಹ್ಯಾಕಾಶದ ಕ್ಷೇತ್ರದಲ್ಲಂತೂ ಊಹೆಗೆ ನಿಲಕದಷ್ಟು ಸಾಧನೆಯನ್ನ ಇಸ್ರೋ ಮಾಡಿ ಜಗತ್ತಿಗೆ ತೋರಿಸಿದೆ. ಕೃಷಿ, ಆರೋಗ್ಯ, ಶಿಕ್ಷಣ, ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಪ್ರಪಂಚದ ಭೂಪಟಗಳಲ್ಲಿ ಭಾರತವು ಅತ್ಯುತ್ತಮ ಸಾಧನೆಯನ್ನು ಮಾಡಿದೆ. ಇಂತಹ ಹಲವಾರು ಶ್ರೇಷ್ಠ ಸಾಧನೆಗಳ ಹಿಂದಿರುವ ಅತಿ ದೊಡ್ಡ ಶಕ್ತಿ ಭಾರತದ ಪ್ರಜಾಸತ್ತಾತ್ಮಕ ಗಣರಾಜ್ಯ ವ್ಯವಸ್ಥೆ ಹಾಗೂ ಇಲ್ಲಿನ ಆಡಳಿತ ವ್ಯವಸ್ಥೆ.
ಡೋನಾಲ್ಡ್ ಟ್ರಂಪ್ ಅಮೆರಿಕದ ಸಾರಥ್ಯ ವಹಿಸದ ನಂತರ, ಅವರು ಕೈಗೊಂಡ ಕ್ರಮಗಳು ಜಾಗತಿಕ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುವಂತಿವೆ? ಶಾಂತಿ,ಸಂಧಾನವೆಂದೇ ಅತಿ ಹೆಚ್ಚು ಸುಂಕ, ದಾಳಿ ಮಾಡುವ ಬೆದರಿಕೆಗಳ ಮೂಲಕ ಪ್ರಜಾಸತಾತ್ಮಕವಲ್ಲದ ಕ್ರಮಗಳಿಂದ ಜಾಗತಿಕ ಆಡಳಿತ ವ್ಯವಸ್ಥೆ ಕುಸಿಯುವಂತೆ ಮಾಡಿ ಮೂರನೇ ಮಹಾಯುದ್ಧದ ವಸ್ತಿಲಿಗೆ ತಂದು ಬಿಟ್ಟಿದ್ದಾರೆ! ಈ ಹೊತ್ತಲ್ಲಿ ಜಾಗತಿಕವಾಗಿ ಅತಿ ದೊಡ್ಡ ಪ್ರಜಾ ವ್ಯವಸ್ಥೆಯನ್ನು ಒಳಗೊಂಡಿರುವ ನಮ್ಮ ನಡೆ ಬಹಳಷ್ಟು ಜಾಗರೂಕವಾಗಿರಬೇಕು ಜೊತೆಗೆ ಯಾವುದೇ ಕಾರಣಕ್ಕೂ ನಮ್ಮ ದೇಶದ ಸಾರ್ವಭೌಮತ್ವ ಕಡೆಗಣಿಸದೆ, ಇತರ ದೇಶಗಳ ಪ್ರಜೆಗಳ ಹಾಗೂ ಹಾಗೂ ಅವರ ಹಕ್ಕುಗಳು, ಸ್ವಾತಂತ್ರವನ್ನು ಗೌರವಿಸುವ ಮತ್ತು ಪೆಟ್ಟು ಬಿದ್ದಾಗ ಯಾವುದೇ ಅಂಜಿಕೆ ಇಲ್ಲದೆ ಧ್ವನಿ ಎತ್ತುವಂತೆ ಆಗಬೇಕು. ಆ ಮೂಲಕ ಮತ್ತಷ್ಟು ಭಾರತವನ್ನು ಜಾಗತಿಕ ಪ್ರಜಾಪ್ರಭುತ್ವ ರಾಷ್ಟ್ರಗಳ ಸಾಲಿನಲ್ಲಿ ಪ್ರಭಾವಿತ ರಾಷ್ಟ್ರವಾಗಿ ಬೆಳೆಯುವ ಅವಕಾಶವನ್ನ ಮತ್ತಷ್ಟು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ.
77ನೇ ಗಣರಾಜ್ಯೋತ್ಸವದ ಹೊತ್ತಿನಲ್ಲಿ ನಾವು ಕೆಲವೊಂದು ಅಂಶಗಳನ್ನು ಅವಲೋಕಿಸಬೇಕಿದೆ. 140 ಕೋಟಿಗೂ ಅಧಿಕ ಜನಸಂಖ್ಯೆಗೆ ಅಗತ್ಯವಾದಂತಹ ಗುಣಮಟ್ಟದ ಆರೋಗ್ಯ ಸೌಕರ್ಯ, ಪೌಷ್ಟಿಕ ಆಹಾರ, ವಸತಿ ಹಾಗೂ ಇತರ ಮೂಲಭೂತ ಸೌಕರ್ಯಗಳು ನೀಡುವಲ್ಲಿ ಗಮನವಹಿಸಬೇಕು. ಅತಿ ಹೆಚ್ಚು ಯುವಜನತೆಯನ್ನು ಹೊಂದಿರುವ ಭಾರತದಲ್ಲಿ ಉದ್ಯೋಗಾವಕಾಶಗಳು ಹೆಚ್ಚಬೇಕಿದೆ. ಲಿಂಗ ಸಮಾನತೆಯಲ್ಲಿ, ಹಸಿವಿನ ಸೂಚ್ಯಂಕದಲ್ಲಿ, ಆದಾಯದ ಅಸಮಾನತೆಯಲ್ಲಿ, ಬೇರೆ ದೇಶಗಳಿಗೆ ಹೋಲಿಸಿದರೆ ಕಳಪೆ ಸಾಧನೆ ಮಾಡಿದ ನಾವುಗಳು ಇವುಗಳನ್ನು ಸಾಧಿಸಲು ಬಹಳಷ್ಟು ದಾರಿಯನ್ನ ಸವೆಸಬೇಕಾಗಿದೆ.
ಗಣರಾಜ್ಯೋತ್ಸವವು ಭೂತಕಾಲದ ಸಾಧನೆಗಳ ಸ್ಮರಣೆ ಮಾತ್ರವಲ್ಲ; ಅದು ಭವಿಷ್ಯದ ಸಂಕಲ್ಪವೂ ಹೌದು. ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವ ಎಂಬ ಮೌಲ್ಯಗಳನ್ನು ನಾವು ಭಾರತೀಯ ನಾಗರಿಕರಾಗಿ ನಮ್ಮ ಜೀವನದಲ್ಲಿ ಪಾಲಿಸಿದಾಗ ಮಾತ್ರ ಭಾರತ ನಿಜವಾದ ಅರ್ಥದಲ್ಲಿ ಗಣರಾಜ್ಯವಾಗುತ್ತದೆ.

ಶಿವಣ್ಣ ಗಾಣಗಟ್ಟೆ
ಶಿಕ್ಷಕರು.





More Stories
ಕಾಂಗ್ರೆಸ್ ಅಪಪ್ರಚಾರಕ್ಕೆ ಬಣವಿಕಲ್ ಕೆ. ನಾಗರಾಜ್ ಆಕ್ರೋಶ
ಹೊಸಗಾಲದ ವಿಸ್ಮಯ, ಸಮನ್ವಯಕವಿ: ಜಿ.ಎಸ್.ಶಿವರುದ್ರಪ್ಪ
ಒನಕೆ ಓಬವ್ವ.. ಅಸಾಮಾನ್ಯ ಸಾಹಸಿ ಮಹಿಳೆ