https://youtu.be/NHc6OMSu0K4?si=SI_K4goOPEgwo6h2

ಹಂಪಿಟೈಮ್ಸ್ ಹೊಸಪೇಟೆ:
ದೇಶದಲ್ಲಿ ಕೃಷಿಕರ ಸಂಖ್ಯೆ ಶೇ 50ರಷ್ಟಿದೆ. ಭಾರತ ಕೃಷಿ ಪ್ರಧಾನವಾದ ರಾಷ್ಟ್ರ. ಆಧುನಿಕ ಪದ್ಧತಿಯನ್ನು ಅಳವಡಿಸಿಕೊಂಡು ಮಾರ್ಗದರ್ಶನದೊಂದಿಗೆ ಸುಧಾರಿತ ಕೃಷಿ ಮಾಡಿ ರೈತರು ಲಾಭ ಗಳಿಸಬೇಕು. ಕೋವಿಡ್ ದಿನಗಳಲ್ಲಿ ಕೈಗಾರಿಕೆಗಳು ಸೇರಿದಂತೆ ಅನೇಕ ಉದ್ಯಮಗಳು ಬಂದ್ ಆಗಿದ್ದವು. ಆದರೆ, ರೈತರ ಕೃಷಿ ಕಾಯಕ ನಿಲ್ಲಲಿಲ್ಲ. ಕೃಷಿ ಎಂದೂ ಮುಚ್ಚಲಾರದ ಕಾರ್ಖಾನೆ ಎಂದು ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಹೇಳಿದರು.
ನಗರದ ಸಾಯಿಲೀಲಾ ರಂಗಮಂದಿರದಲ್ಲಿ ‘ಪ್ರಜಾವಾಣಿ’ ಅಮೃತ ಮಹೋತ್ಸವದಂಗವಾಗಿ ವಿಜಯನಗರ ಜಿಲ್ಲಾ ಕೃಷಿ ಇಲಾಖೆ ಹಾಗೂ ಇನ್ನರ್ ವೀಲ್ ಕ್ಲಬ್ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಎಷ್ಟೇ ವಿಜ್ಞಾನ ಬೆಳೆದರೂ, ಪ್ರಯೋಗಾಲಯದಲ್ಲಿ ಲಸಿಕೆ ಕಂಡುಹಿಡಿದರೂ, ಜೀವ ಸಂಕುಲಗಳ ಹಸಿವು ತೀರಿಸಲಾರದು. ರೈತ ಉತ್ತಿ ಬಿತ್ತದರೆ ಮಾತ್ರ ವಿಶ್ವದ ಜನತೆಗೆ, ಪ್ರಾಣಿ ಪಕ್ಷಿಗಳು ಅನ್ನ ಎಂಬುದು ಮರೆಯಬಾರದು. ಕೃಷಿಯನ್ನು ನಿರ್ಲಕ್ಷಿಸಿದೇ, ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು, ಮಾರುಕಟ್ಟೆಯ ಜ್ಞಾನ ಬೆಳೆಸಿಕೊಂಡರೆ ಲಾಭ ಕಾಣಬಹುದು. ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರು ರೈತರ ಮೇಲಿನ ಕಾಳಜಿಯಿಂದ ಕೃಷಿ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದರು. ಕೃಷಿಗೆ ಸರಿಸಾಟಿಯಾದ ಹುದ್ದೆ ಬೇರೊಂದಿಲ್ಲ. ರೈತರು ಏಕ ಬೆಳೆ ಬೆಳೆಯುವುದಕ್ಕಿಂತ ಬಹುಬೆಳೆ ಬೆಳೆಯಲು ಮುಂದಾದರೆ ನಷ್ಟಕ್ಕೀಡಾಗುವುದಿಲ್ಲ. 4873 ಪಹಣಿಗಳು ಪೆಂಡಿAಗ್ ಇದ್ದು, ಅವುಗಳನ್ನೆಲ್ಲ ಬೇಗ ವಿಲೇವಾರಿಗೊಳಿಸಲಾಗುವುದು ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ಪ್ರತಿವರ್ಷ ರೈತರ ದಿನ ಆಚರಿಸಲಾಗುತ್ತದೆ. ಅವರು ಜಮೀನ್ದಾರಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ್ದರು. ಕೃಷಿ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದರು ಎಂದರು.
ರಾಯಚೂರು ಕೃಷಿ ಕಾಲೇಜಿನ ವಿಜ್ಞಾನಿ ಬಸವಣ್ಣೆಪ್ಪ ಮಾತನಾಡಿ,. ಸೋನಾ ಮಸೂರಿ ಬೆಳೆಸುವವರು ಜೂನ್ 30ರೊಳಗೆ ಬೆಳೆಯಬೇಕು. ಉಳಿದ ತಳಿಗಳನ್ನು ಆಗಸ್ಟ್ 15ರ ವರೆಗೆ ಬೆಳೆಸಬೇಕು. ಇಳಿಜಾರು ಇರುವಲ್ಲಿ ಭತ್ತ ಬೆಳೆಸಬೇಕು ಎಂದು ಹೇಳಿದರು.
ಗಂಗಾವತಿ ಕೃಷಿ ಕಾಲೇಜಿನ ಕೀಟನಾಶಕ ವಿಭಾಗದ ಮುಖ್ಯಸ್ಥ ಬದ್ರಿಪ್ರಸಾದ್ ಪಿ.ಆರ್. ಮಾತನಾಡಿ, ರೈತರು ಆಧುನಿಕ ತಂತ್ರಜ್ಞಾನದೊAದಿಗೆ ಹೊಸ ಮಿಶ್ರ ಬೇಸಾಯ ಕ್ರಮಗಳನ್ನು ಅನುಸರಿಸಿದರೆ ಆದಾಯ ಗಳಿಸಲು ಸಾಧ್ಯ. ಎಷ್ಟು ಹೊಲ ಇರಬೇಕು ಎನ್ನುವುದು ಮುಖ್ಯವಲ್ಲ ಎಂದರು.

ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರು ಮಾಜಿಪ್ರಧಾನಿ, ರೈತ ಮುಖಂಡ ಚೌಧರಿ ಚರಣ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪ್ರಗತಿಪರ ರೈತ ರಮಾಕಾಂತ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್. ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಕೃಷಿ ಇಲಾಖೆಯ ಉಪನಿರ್ದೇಶಕಿ ಮಂಜುಳಾ ಬಸವರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ ಕೆ. ವಾಮದೇವ, ಇನ್ನರ್ ವೀಲ್ ಕ್ಲಬ್ ಜಿಲ್ಲಾಧ್ಯಕ್ಷೆ ಡಾ. ಮಾಧವಿ, ಹೊಸಪೇಟೆ ಇನ್ನರ್ ವೀಲ್ ಕ್ಲಬ್ನಿಂದ ಹತ್ತು ರೈತ ಮಹಿಳೆಯರಿಗೆ ನೇಗಿಲು ವಿತರಿಸಲಾಯಿತು. ಇದೇ ವೇಳೆ ರೈತರಿಗೆ ಆಯುಷ್ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಘಟಕದ ಅಧ್ಯಕ್ಷೆ ರೇಖಾ ಪ್ರಕಾಶ್ ಉಪಸ್ಥಿತರಿದ್ದರು.
ಸಂಗೀತ ಶಿಕ್ಷಕ ಜಿ. ಮಾರುತಿರಾವ್ ನಾಡಗೀತೆ, ರೈತಗೀತೆ ಹಾಡಿದರು. ಭೂಮಿಕಾ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಟಿ.ಎಚ್. ಬಸವರಾಜ ನಿರೂಪಿಸಿದರು. ‘ಪ್ರಜಾವಾಣಿ’ ಜಿಲ್ಲಾ ಹಿರಿಯ ವರದಿಗಾರ ಶಶಿಕಾಂತ ಎಸ್. ಶೆಂಬೆಳ್ಳಿ, ಸ್ವಾಗತಿಸಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ವಾಮದೇವ ವಂದಿಸಿದರು.
ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ: ಹಗರಿಬೊಮ್ಮನಹಳ್ಳಿ ಹಿರೇಸೊಬಟಿಯ ಎಚ್. ಈರಣ್ಣ ಕಡ್ಲೆಪ್ಪ, ನೆಲ್ಕುದ್ರಿಯ ಎಚ್. ಬಸವರಾಜ ಸಿದ್ದಪ್ಪ, ಹರಪನಹಳ್ಳಿಯ ಕಮಲಮ್ಮ ಬಸವಂತಪ್ಪ, ಸುಜಾತ ನಾಗರಾಜ್, ಹೂವಿನಹಡಗಲಿಯ ರವಿಕುಮಾರ ದೊಡ್ಡಮನಿ, ವೀರಣ್ಣ ಹಕ್ಕಂಡಿ, ಕೂಡ್ಲಿಗಿಯ ಎಚ್.ಬಿ. ಮಹದೇವಸ್ವಾಮಿ, ಹೊಸಪೇಟೆಯ ಎನ್.ಟಿ. ವೀರಣ್ಣ ತಾಳೂರಪ್ಪ, ಭಾರತಿ ಪಾಟೀಲ ಅವರಿಗೆ ಜಿಲ್ಲಾಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ: ಹೊಸಪೇಟೆಯ ರೈತರಾದ ಡಾ. ಅಜಯ್ ಕುಮಾರ್ ತಾಂಡೂರ್, ನಾಗೇಂದ್ರಪ್ಪ ಜಂಬಯ್ಯ, ಗೀತಾ ಸುರೇಂದ್ರಬಾಬು, ಹನುಮಕ್ಕ ಸಿದ್ದಪ್ಪ, ಜಿ. ಸಿದ್ರಾಮಪ್ಪ ಬಸಪ್ಪ ಅವರಿಗೆ ತಾಲ್ಲೂಕು ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.



More Stories
ಪೊಲೀಸ್ ಕಲ್ಯಾಣಕ್ಕೆ ₹12.61 ಲಕ್ಷ ನೆರವು : ಎಸ್ಪಿ ಎಸ್ ಜಾಹ್ನವಿ
ಹಂಪಿ ಒಡೆಯನಿಗಿಂದು ವಿವಾಹದ ಸಂಭ್ರಮ
ಬಸವಾಮೃತ-೨ ವಚನ ವೈಭವ – ಅರಿವಿನ ಬೆಳಕು : ಬಿಎಂಆರ್