https://youtu.be/NHc6OMSu0K4?si=SI_K4goOPEgwo6h2



ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳೆಂದರೆ ಕೇವಲ ಧಾರ್ಮಿಕ ಆಚರಣೆಗಳಲ್ಲ ಅವು ಬದುಕಿನ ಮಹಾನ್ ತತ್ವಗಳನ್ನು ನೆನಪಿಸುವ ಜೀವಂತ ಪಾಠಶಾಲೆಗಳು. ಇವುಗಳಲ್ಲಿ ಗಣೇಶ ಚತುರ್ಥಿ ಕೇವಲ ಮೋದಕ ಸವಿಯುವ, ಆರತಿ ಬೆಳಗುವ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಭ್ರಮಿಸುವ ದಿನವಲ್ಲ. ಬದಲಿಗೆ, ವಿಘ್ನನಿವಾರಕನಾದ ಗಣಪತಿಯ ರೂಪ ಮತ್ತು ಹಬ್ಬದ ಒಟ್ಟಾರೆ ಆಚರಣೆಯು ಮಾನವನ ಯಶಸ್ವಿ ಹಾಗೂ ಅರ್ಥಪೂರ್ಣ ಬದುಕಿಗೆ ಬೇಕಾದ ಅತಿ ದೊಡ್ಡ ಮೌಲ್ಯಗಳನ್ನು ಸೂಕ್ಷ್ಮವಾಗಿ ಕಲಿಸಿಕೊಡುತ್ತದೆ.
ಗಣಪತಿ ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ಕಣ್ಣಿಗೆ ಕಾಣುವುದು ಅಲಂಕಾರ, ಕಿವಿಗೆ ಕೇಳಿಸುವುದು ಮಂಗಳವಾದ್ಯ, ಮನಸ್ಸಿಗೆ ತುಂಬುವುದು ಭಕ್ತಿ. ಆದರೆ ಗಣಪತಿ ಹಬ್ಬದ ನಿಜವಾದ ಅರ್ಥ ಕೇವಲ ಮಂಟಪದಲ್ಲಿ ಪ್ರತಿಷ್ಠಾಪಿಸುವ ಮೂರ್ತಿಯಲ್ಲ ನಮ್ಮ ಬದುಕಿನಲ್ಲಿ ಪ್ರತಿಷ್ಠಾಪಿಸಬೇಕಾದ ಮೌಲ್ಯಗಳಲ್ಲಿದೆ. ಪೂಜೆಯ ಕೆಲ ಗಂಟೆಗಳಿಗಿಂತ, ಆ ಪೂಜೆಯಿಂದ ಕಲಿಯುವ ಬದುಕಿನ ಪಾಠವೇ ಹೆಚ್ಚು ಮಹತ್ವದ್ದು.
ಗಣಪತಿಯ ದೊಡ್ಡ ತಲೆ ಜ್ಞಾನವನ್ನು ನೆನಪಿಸುತ್ತದೆ. ಬದುಕಿನಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಆಲೋಚಿಸುವ ವಿವೇಕ ಇರಬೇಕು ಎಂಬ ಸಂದೇಶವನ್ನು ನೀಡುತ್ತದೆ. ದೊಡ್ಡ ಕಿವಿಗಳು ಎಲ್ಲರ ಮಾತನ್ನೂ ತಾಳ್ಮೆಯಿಂದ ಕೇಳುವ ಗುಣವನ್ನು ಕಲಿಸುತ್ತವೆ. ಇಂದಿನ ಸಮಾಜದಲ್ಲಿ ನಾವು ಮಾತನಾಡಲು ಆತುರಪಡುತ್ತೇವೆ ಆದರೆ ಮತ್ತೊಬ್ಬರ ಮಾತನ್ನು ಕೇಳಲು ಸಮಯವಿಲ್ಲ. ಗಣಪತಿಯ ಕಿವಿಗಳು, ಮೊದಲು ಕೇಳು, ನಂತರ ಪ್ರತಿಕ್ರಿಯಿಸು ಎಂಬ ಸರಳ ಬದುಕಿನ ಪಾಠವನ್ನು ಹೇಳುತ್ತವೆ.
ಗಣಪತಿಯ ಸಣ್ಣ ಕಣ್ಣುಗಳು ಏಕಾಗ್ರತೆಯ ಸಂಕೇತ. ಜೀವನದಲ್ಲಿ ಗುರಿ ದೊಡ್ಡದಾಗಿರಬಹುದು ಆದರೆ ಅದನ್ನು ಸಾಧಿಸಲು ಗಮನ ಒಂದೇ ಕಡೆ ಇರಬೇಕು. ದೊಡ್ಡ ಹೊಟ್ಟೆ ಜೀವನದ ಒಳ್ಳೆಯದು-ಕೆಟ್ಟದ್ದು ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಸೂಚಿಸುತ್ತದೆ. ಮೂಷಿಕ ವಾಹನವು ಮತ್ತೊಂದು ಮಹತ್ವದ ಸಂದೇಶ ನೀಡುತ್ತದೆ.ಆಸೆಗಳು ಎಷ್ಟೇ ಚಂಚಲವಾಗಿದ್ದರೂ ಅವುಗಳ ಮೇಲೆ ವಿವೇಕದ ನಿಯಂತ್ರಣ ಇರಬೇಕು.
ಇಂದು ಹಬ್ಬಗಳು ಕೆಲವೊಮ್ಮೆ ಪ್ರದರ್ಶನದ ಸ್ಪರ್ಧೆಯಾಗುತ್ತಿರುವುದು ವಿಷಾದನೀಯ. ಯಾರು ದೊಡ್ಡ ಮೂರ್ತಿ ಮಾಡಿಸಿದರು? ಯಾರ ಮಂಟಪ ಹೆಚ್ಚು ಅಲಂಕಾರಗೊಂಡಿದೆ? ಯಾರ ಕಾರ್ಯಕ್ರಮ ಅದ್ದೂರಿಯಾಗಿದೆ? ಎಂಬ ಪ್ರಶ್ನೆಗಳಿಗಿಂತ, ಯಾರ ಬದುಕಿಗೆ ನಮ್ಮ ಹಬ್ಬ ಬೆಳಕಾಯಿತು? ಎಂಬ ಪ್ರಶ್ನೆ ಮುಖ್ಯವಾಗಬೇಕು. ಹಬ್ಬದ ಹೆಸರಿನಲ್ಲಿ ಅನಗತ್ಯ ಖರ್ಚು ಮಾಡುವ ಬದಲು, ಅದರ ಒಂದು ಭಾಗವನ್ನು ಸಮಾಜದ ಅಗತ್ಯವಿರುವವರಿಗೆ ಬಳಸಿದರೆ ಅದೇ ನಿಜವಾದ ಸಂಭ್ರಮ.
ಪರಿಸರ ಸಂರಕ್ಷಣೆಯ ಜವಾಬ್ದಾರಿಯೂ ಗಣಪತಿ ಹಬ್ಬದೊಂದಿಗೆ ಬೆಸೆದುಕೊಳ್ಳಬೇಕು. ಭಕ್ತಿ ಪ್ರಕೃತಿಗೆ ಹಾನಿಯಾಗಬಾರದು. ಪರಿಸರ ಸ್ನೇಹಿ ಆಚರಣೆ, ಶಬ್ದ ಮಾಲಿನ್ಯ ನಿಯಂತ್ರಣ, ನೀರಿನ ಸಂರಕ್ಷಣೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವುದು ನಮ್ಮೆಲ್ಲರ ಕರ್ತವ್ಯ. ದೇವರನ್ನು ಆರಾಧಿಸುವ ಕೈಗಳೇ ಪ್ರಕೃತಿಯನ್ನು ಕಾಪಾಡುವ ಕೈಗಳಾಗಬೇಕು.
ಗಣಪತಿಯ ಮುಂದೆ ನಿಂತು ವಿಘ್ನಗಳು ದೂರವಾಗಲಿ ಎಂದು ಪ್ರಾರ್ಥಿಸುತ್ತೇವೆ. ಆದರೆ ನಮ್ಮ ಸಮಾಜದ ನಿಜವಾದ ವಿಘ್ನಗಳು ಯಾವುವು ಎಂಬುದನ್ನೂ ಯೋಚಿಸಬೇಕು.ಮೂಢನಂಬಿಕೆ, ಅಸಮಾನತೆ, ದ್ವೇಷ, ಭ್ರಷ್ಟಾಚಾರ, ಅಸೂಯೆ, ಸ್ವಾರ್ಥ ಮತ್ತು ಮಾನವೀಯತೆಯ ಕೊರತೆ. ಇವುಗಳನ್ನು ದೂರ ಮಾಡುವ ಪ್ರಯತ್ನವಿಲ್ಲದೆ ಕೇವಲ ಪೂಜೆ ಮಾಡಿದರೆ ಹಬ್ಬದ ಉದ್ದೇಶ ಅಪೂರ್ಣವಾಗುತ್ತದೆ.
ಈ ಹಬ್ಬ ನಮಗೆ ಒಂದು ಸತ್ಯವನ್ನು ಕಲಿಸುತ್ತದೆ ದೇವರನ್ನು ಮಣ್ಣಿನಲ್ಲಿ ಪ್ರತಿಷ್ಠಾಪಿಸುವುದು ಸುಲಭ ಆದರೆ ದೇವರ ಗುಣಗಳನ್ನು ನಮ್ಮ ಹೃದಯದಲ್ಲಿ ಪ್ರತಿಷ್ಠಾಪಿಸುವುದು ನಿಜವಾದ ಸಾಧನೆ. ಜ್ಞಾನವನ್ನು ಬೆಳೆಸೋಣ, ತಾಳ್ಮೆಯಿಂದ ಕೇಳೋಣ, ಒಗ್ಗಟ್ಟಿನಿಂದ ಬದುಕೋಣ, ಪರಿಸರವನ್ನು ಕಾಪಾಡೋಣ, ಕಷ್ಟದಲ್ಲಿರುವವರ ಕೈಹಿಡಿಯೋಣ. ಹೀಗಾಗಿ ಗಣಪತಿ ಹಬ್ಬ ಮುಗಿದ ನಂತರ ಮಂಟಪ ಖಾಲಿಯಾಗಬಹುದು, ಮೂರ್ತಿ ವಿಸರ್ಜನೆಯಾಗಬಹುದು ಆದರೆ ಗಣಪತಿ ಕಲಿಸಿದ ಮೌಲ್ಯಗಳು ನಮ್ಮ ಬದುಕಿನಲ್ಲಿ ಉಳಿಯಬೇಕು. ಪೂಜೆ ಮುಗಿದರೂ ಪಾಠ ಮುಗಿಯಬಾರದು ಹಬ್ಬ ಮುಗಿದರೂ ಮಾನವೀಯತೆ ಮರೆಯಾಗಬಾರದು.
ಗಣೇಶನ ಮೂರ್ತಿಯನ್ನು ತಂದು ಪೂಜಿಸಿ, ಕೊನೆಗೆ ನೀರಿನಲ್ಲಿ ವಿಸರ್ಜಿಸುವ ಪ್ರಕ್ರಿಯೆಯು ಬದುಕಿನ ಶ್ರೇಷ್ಠ ಸತ್ಯವನ್ನು ಸಾರುತ್ತದೆ. ಸೃಷ್ಟಿಯಾದ ಪ್ರತಿಯೊಂದೂ ಒಂದು ದಿನ ಪ್ರಕೃತಿಯಲ್ಲಿ ಲೀನವಾಗಲೇಬೇಕು ಎಂಬ ನೀತಿ ಪಾಠ ಇಲ್ಲಿದೆ. ಗಣೇಶನ ದೊಡ್ಡ ಕಿವಿಗಳು ತಾಳ್ಮೆಯಿಂದ ಆಲಿಸುವುದನ್ನು, ಸಣ್ಣ ಕಣ್ಣುಗಳು ಸೂಕ್ಷ್ಮ ದೃಷ್ಟಿಯನ್ನು ಮತ್ತು ದೊಡ್ಡ ಹೊಟ್ಟೆಯು ಕಷ್ಟ-ಸುಖಗಳನ್ನು ಜೀರ್ಣಿಸಿಕೊಳ್ಳುವುದನ್ನು ಕಲಿಸುತ್ತವೆ. ಹಬ್ಬ ಮುಗಿದ ಮೇಲೆಯೂ ಈ ಗುಣಗಳು ನಮ್ಮೊಳಗೆ ಜೀವಂತವಾಗಿದ್ದಾಗ ಮಾತ್ರ ಗಣೇಶೋತ್ಸವಕ್ಕೆ ಪೂರ್ಣ ಅರ್ಥ ಸಿಗುತ್ತದೆ.
ಅವಿನಾಶ ಸೆರೆಮನಿ ಬೈಲಹೊಂಗಲ

Please follow and like us:


More Stories
ಸಾಂಸ್ಕೃತಿಕ ಪ್ರಜ್ಞೆಯ ಹರಿಕಾರ ಗಣೇಶ
ಅಂಧ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಸ್ಟೀಲ್ ಬಾಟಲಿ ವಿತರಣೆ : ಜೆಸಿಐ ಅಧ್ಯಕ್ಷೆ ರೇಖಾಶಿವರಾಜ
ಸುಲಭ ಕಂತುಗಳಲ್ಲಿ ನಿವೇಶನ ಲಭ್ಯ: ಶಶಿಧರ್ ಕೊರವಿ