October 11, 2025

Hampi times

Kannada News Portal from Vijayanagara

ಸೆ.7 ರಂದು ವಿಜಯನಗರಕ್ಕೆ ಬಸವಜ್ಯೋತಿ ರಥಯಾತ್ರೆ

https://youtu.be/NHc6OMSu0K4?si=SI_K4goOPEgwo6h2

 

ರಾಜ್ಯದಾದ್ಯಂತ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಬಸವ ಸಂಸ್ಕೃತಿ ಅಭಿಯಾನ |   ಸೆ-೧ ರಿಂದ ಅ.೧ರವರೆಗೆ
ಸಮಿತಿ ಮುಖಂಡ ಬಸವರಾಜ್ ಟಿ.ಎಚ್.ಹೇಳಿಕೆ | ಅನೇಕ ಶರಣರ ವೇಷದಾರಿ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ

ಹಂಪಿ ಟೈಮ್ಸ್ ಹೊಸಪೇಟೆ
ಸಮಸಮಾಜ ನಿರ್ಮಾಣ, ವ್ಯಸನಮುಕ್ತ ಸಮಾಜ ಹಾಗೂ ಅಂಧಶ್ರದ್ಧೆಗಳನ್ನು ಅಳಿಸಿ ಹಾಕಿ ಸುಜ್ಞಾನ ಬೆಳೆಸುವ ಉದ್ದೇಶದೊಂದಿಗೆ ‘ಬಸವ ಸಂಸ್ಕೃತಿ ಅಭಿಯಾನ’ ಸೆಪ್ಟೆಂಬರ್ ೭ರ ಭಾನುವಾರ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಗೆ ಆಗಮಿಸಲಿದೆ. `ಬಸವಜ್ಯೋತಿ ರಥಯಾತ್ರೆ’ಯನ್ನು ಅಂದು ಬೆಳಗ್ಗೆ ೯ ಗಂಟೆಗೆ ಜಗದ್ಗುರು ಶ್ರೀ ಕೊಟ್ಟೂರು ಸಂಸ್ಥಾನಮಠದಲ್ಲಿ ಸ್ವಾಗತಿಸಲಾಗುವುದು ಎಂದು ಬಸವ ಸಂಸ್ಕೃತಿ ಅಭಿಯಾನ ಉತ್ಸವ ಸಮಿತಿಯ ಮುಖಂಡ ಟಿ.ಎಚ್.ಬಸವರಾಜ ತಿಳಿಸಿದರು.
ನಗರದ ಶ್ರೀ ಕೊಟ್ಟೂರು ಸ್ವಾಮಿ ಮಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಸವಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸಿದ ನಂತರ ಬೆಳಗ್ಗೆ ೧೦:೩೦ಕ್ಕೆ ವಿಜಯನಗರ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಮುಕ್ತ ಸಂವಾದ ನಡೆಯಲಿದೆ.
ಅದೇ ದಿನ ಮಧ್ಯಾಹ್ನ ೩:೩೦ಕ್ಕೆ ಡಾ.ಪುನೀತ್ ರಾಜಕುಮಾರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ `ಸೌಹಾರ್ದ ನಡಿಗೆ’ ಮೂಲಕ ಬಸವಣ್ಣನವರ ವಚನಗಳ ಕಟ್ಟುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಸಾಗಲಿದ್ದಾರೆ. ಸಂಜೆ ೬ ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ಕೊಟ್ಟೂರು ಸ್ವಾಮಿ ಮಠದ ಬಸವಲಿಂಗ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗದಗ ಡಂಬಳ ತೋಂಟದಾರ್ಯ ಮಠದ ತೋಂಟದ ಸಿದ್ದರಾಮಸ್ವಾಮಿಗಳು, ಚಿಕ್ಕಮಗಳೂರು ಬಸವತತ್ವ ಪೀಠದ ಡಾ.ಬಸವ ಮರುಳಸಿದ್ದ ಸ್ವಾಮೀಜಿಗಳು ಮತ್ತು ಹುಬ್ಬಳ್ಳಿಯ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಡಾ.ಮೈತ್ರೇಹಿಣಿ ಗದಿಗೆಪ್ಪಗೌಡರ ಭಾಗವಹಿಸಲಿದ್ದಾರೆ. ರಾತ್ರಿ ೮ ಗಂಟೆಗೆ ಸಾಣೇಹಳ್ಳಿಯ ಶಿವಸಂಚಾರ ಕಲಾ ತಂಡದಿAದ `ಜಂಗಮದೆಡೆಗೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಬಸವಣ್ಣನವರ ಆದರ್ಶ ಪ್ರಚಾರ:
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ರವೀಂದ್ರನಾಥ ಮಾತನಾಡಿ, ಬಸವಣ್ಣನವರು ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಗುಣ ಹೊಂದಿದ್ದರು. ಅದಕ್ಕಾಗಿಯೇ ಸರ್ಕಾರ ಅವರನ್ನು `ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿದೆ. ೧೯೩೯ರಲ್ಲಿ `ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯು, “ಈ ಜಗತ್ತಿನಲ್ಲಿ ಮಹಿಳೆಯರ ಬಗ್ಗೆ ಹೆಚ್ಚು ಒತ್ತು ನೀಡಿದ ನಾಯಕರಿದ್ದರೆ ಅದು ಬಸವಣ್ಣನವರು” ಎಂದು ಬರೆದಿತ್ತು ಎಂದು ಉಲ್ಲೇಖಿಸಿದರು.
ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ, ಶರಣ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲೆಯ ಆರು ತಾಲೂಕುಗಳಲ್ಲಿ ವಚನ ಸಂಸ್ಕೃತಿ ಮತ್ತು ಬಸವಣ್ಣನವರ ಆಶಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ೧೪೦ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಸೆಪ್ಟೆಂಬರ್ ೭ರ ಕಾರ್ಯಕ್ರಮದಲ್ಲಿ ಉತ್ತಮ ಪ್ರಬಂಧಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು ಎಂದರು.
ಬಸವ ಸಂಸ್ಕೃತಿ ಅಭಿಯಾನದ ಮೆರವಣಿಗೆಯಲ್ಲಿ ಶರಣರ ವೇಷಭೂಷಣಗಳನ್ನು ಧರಿಸಿದ ವಿವಿಧ ಸಮುದಾಯದ ಮಕ್ಕಳು ಪಾಲ್ಗೊಳ್ಳುವ ಮೂಲಕ ಧಾರ್ಮಿಕ ಮತ್ತು ಸಾಮಾಜಿಕ ಸಾಮರಸ್ಯವನ್ನು ಬಿಂಬಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಬಸವಕಿರಣ, ಐ. ಸಂಗನಬಸಪ್ಪ, ಬಿ. ಚಿತ್ತಪ್ಪ, ಕೋರಿಶೆಟ್ಟಿ ಲಿಂಗಪ್ಪ, ಡಾ.ಆರ್.ಮಹಾಬಲೇಶ್ವರ ರೆಡ್ಡಿ, ಎಲ್.ಬಸವರಾಜ, ಎಸ್.ಮಾವಿನಹಳ್ಳಿ ಬಸವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

ಜಾಹೀರಾತು
error: Content is protected !!