https://youtu.be/NHc6OMSu0K4?si=SI_K4goOPEgwo6h2
ಡೆಂಗೀ ಜ್ವರ ತಡೆಗಟ್ಟಲು ಲಸಿಕೆ ಲಭ್ಯವಿರುವುದಿಲ್ಲ | ಸಾವು ನೋವು ತಡೆಗೆ ಮುಂಜಾಗ್ರತೆ ಅತ್ಯಗತ್ಯ
ಹಂಪಿ ಟೈಮ್ಸ್ ಬಳ್ಳಾರಿ
ಡೆಂಗ್ಯು ನಿಯಂತ್ರಣ, ತಡೆಗಟ್ಟುವಿಕೆ ಹಾಗೂ ಅದರ ಮುಂಜಾಗ್ರತಾ ಕ್ರಮಗಳ ಅನುಷ್ಠಾನದಲ್ಲಿ ಸಮುದಾಯದ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ವತಿಯಿಂದ ‘ರಾಷ್ಟ್ರೀಯ ಡೆಂಗಿ ದಿನಾಚರಣೆ’ ಅಂಗವಾಗಿ ‘ಸಮುದಾಯದೊಂದಿಗೆ ಸೇರಿ ಡೆಂಗಿ ಜ್ವರವನ್ನು ನಿಯಂತ್ರಿಸೋಣ’ ಎಂಬ ಘೋಷವಾಕ್ಯದೊಂದಿಗೆ ಸಮುದಾಯದಲ್ಲಿ ಡೆಂಗಿ ಜ್ವರದ ಬಗ್ಗೆ ಅರಿವು ಮೂಡಿಸಲು ಗುರುವಾರದಂದು ನಗರದ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಿಂದ ಹಮ್ಮಿಕೊಂಡಿದ್ದ ಬೈಕ್‍ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಳೆಗಾಲ ಹಾಗೂ ನಂತರದ ದಿನಗಳಲ್ಲಿ ಡೆಂಗೀ ನಿಯಂತ್ರಣ ಕ್ರಮಗಳನ್ನು ಸಮುದಾಯದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕವಿರುವ ಸರ್ಕಾರ-ಸರ್ಕಾರೇತರ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಘಗಳ ಸಹಭಾಗಿತ್ವ ಅನಿವಾರ್ಯವಾಗಿದ್ದು, ಇದರಿಂದ ಡೆಂಗಿ ರೋಗ ಪ್ರಸರಣವನ್ನು ನಿಯಂತ್ರಣ ಮಾಡಬಹುದು ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ ಅವರು ಮಾತನಾಡಿ, ಮುಂಬರುವ ಮುಂಗಾರು ಸಮಯದಲ್ಲಿ ಮನೆಯ ಸುತ್ತಮುತ್ತಲಿನ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆನೀರಿನಲ್ಲಿ ಈಡೀಸ್ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟುವಲ್ಲಿ ಕ್ರಮ ಕೈಗೊಳ್ಳಬೇಕು. ಯಾವುದೇ ಜ್ವರವಿದ್ದರೂ ನಿರ್ಲಕ್ಷ್ಯ ಮಾಡದೇ, ತಕ್ಷಣ ವೈದ್ಯರ ಬಳಿ ಭೇಟಿ ನೀಡಿ, ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಡೆಂಗೀ ಜ್ವರದಿಂದ ಉಂಟಾಗುವ ಸಾವು ನೋವುಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಡೆಂಗೀ ಜ್ವರದ ರೋಗ ಲಕ್ಷಣಗಳು:
ಸೋಂಕಿತ ಈಡೀಸ್ ಈಜಿಪೈ ಸೊಳ್ಳೆ ಕಡಿತದಿಂದ ಹರಡುವ ಡೆಂಗೀ ಜ್ವರವು ವ್ಶೆರಾಣುಗಳಿಂದ ಉಂಟಾಗುತ್ತದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ, ವಾಂತಿ ಆಚಿತರಿಕ ರಕ್ತಸ್ರಾವ, ಒಸಡುಗಳಲ್ಲಿ ರಕ್ತಸ್ರಾವ ಕಂಡುಬರುವುದು. ಡೆಂಗೀ ಜ್ವರ ತಡೆಗಟ್ಟಲು ಲಸಿಕೆ ಲಭ್ಯವಿರುವುದಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆಯಿಂದ ಗುಣಪಡಿಸಬಹುದು. ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದಲ್ಲಿ, ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ರೋಗ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ರಕ್ತ ಪರೀಕ್ಷೆ ಹಾಗೂ ಚಿಕಿತ್ಸೆ ಲಭ್ಯವಿದೆ.
ಡೆಂಗೀ ಜ್ವರ ನಿಯಂತ್ರಣಕ್ಕೆ ಅನುಸರಿಸಬೇಕಾದ ಸರಳ ನಿಯಂತ್ರಣ ಕ್ರಮಗಳು:
ಮನೆಯಲ್ಲಿ ತೊಟ್ಟಿ, ಬ್ಯಾರೆಲ್, ಡ್ರಂಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಉಜ್ಜಿ ತೊಳೆದು ಪುನ: ನೀರು ತುಂಬಿಸಬೇಕು. ತೊಟ್ಟಿ, ಬ್ಯಾರೆಲ್, ಡ್ರಂಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಬೇಕು. ಮನೆಯ ಸುತ್ತ ಮುತ್ತ ಬೀಸಾಡಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಬೇಕು.
ಎಲ್ಲಾ ಸರ್ಕಾರಿ, ಖಾಸಗಿ ಕಚೇರಿ ಹಾಗೂ ಸಂಸ್ಥೆಗಳ ಒಳಾಂಗಣ, ಹೊರಾಂಗಣಗಳಲ್ಲಿ ಈಡೀಸ್ ಸೊಳ್ಳೆಯ ಉತ್ಪತ್ತಿ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈಡೀಸ್ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ, ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವರು. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಸೊಳ್ಳೆ ಪರದೆಯನ್ನು ಬಳಸಬೇಕು. ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಸ್ವಯಂಸೇವಕರು ಮನೆ ಭೇಟಿ ಸಂದರ್ಭದಲ್ಲಿ ಡೆಂಗೀ ನಿಯಂತ್ರಣ ಕುರಿತು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಹಾಗೂ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ವೀರೇಂದ್ರಕುಮಾರ್, ಜಿಲ್ಲಾ ವಿಬಿಡಿಸಿ ಸಮಾಲೋಚಕ ಪ್ರತಾಪ್ ಹೆಚ್., ಜಿಲ್ಲಾ ಆರೋಗ್ಯ ಶಿಕ್ಷ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಕುಂತಲಾ ಮ್ಯಾಳಿ, ನಾಗರಾಜ, ರವೀಂದ್ರ ಜಿನಗ, ಮರಿಬಸವನಗೌಡ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಅಂಭುಜ, ನಂದಿನಿ, ಶಕುಂತಲಾ ಸೇರಿದಂತೆ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು, ವಿಬಿಡಿಸಿ ಸಿಬ್ಬಂದಿ ವರ್ಗದವರು, ತಾಲೂಕು ಆರೋಗ್ಯಾಧಿಕಾರಿಗಳ ಸಿಬ್ಬಂದಿಗಳು ಹಾಗೂ ಮಲೇರಿಯಾ ಲಿಂಕ್ ವಾಲಂಟೀಯರ್ಸ್ ಮತ್ತು ಇತರೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಸಿಬ್ಬಂದಿಗಳು ಭಾಗವಹಿಸಿದ್ದರು. ಜಾಗೃತಿ ಬೈಕ್‍ರ್ಯಾಲಿಯು ನಗರ ಪ್ರದೇಶದ ಎಲ್ಲಾ ಪ್ರಮುಖ ಬೀದಿಗಳಲ್ಲಿ ಹಾಗೂ ಡೆಂಗೀ ಸಮಸ್ಯಾತ್ಮಕ ವಾರ್ಡ್‍ಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಡೆಂಗೀ ರೋಗದ ಕುರಿತು ಮಾಹಿತಿ ನೀಡಲಾಯಿತು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ