November 11, 2024

Hampi times

Kannada News Portal from Vijayanagara

ಪಿ.ಎಂ-ವಿಶ್ವಕರ್ಮ ಯೋಜನೆ ಅನುಷ್ಠಾನ: ನೋಂದಣಿಗೆ ಸೂಚನೆ

 

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್‌ ಕೊಪ್ಪಳ :
ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರ ಪಿ.ಎಂ-ವಿಶ್ವಕರ್ಮ ಯೋಜನೆ ಅನುಷ್ಠಾನಗೊಳಿಸಲು ಜಿಲ್ಲೆಯ ಅರ್ಹ ಕುಶಲಕರ್ಮಿಗಳು ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಭಾರತ ಸರ್ಕಾರವು ಪಿ.ಎಂ-ವಿಶ್ವಕರ್ಮ (PM-Vishwakarma) ಎಂಬ ಹೊಸ ಯೋಜನೆಯನ್ನು 2023ರ ಸೆಪ್ಟೆಂಬರ್ 17ರಂದು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ಒಟ್ಟು ಹೊಸ 18 ಚಟುವಟಿಕೆಗಳಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ವಿವಿಧ ಸವಲತ್ತುಗಳುದಾದ ಪಿ.ಎಂ. ವಿಶ್ವಕರ್ಮ ಪ್ರಮಾಣ ಪತ್ರ, ಐ.ಡಿ. ಕಾರ್ಡ್, ಕೌಶಲ್ಯಾಭಿವೃದ್ಧಿ, ಉಪಕರಣಗಳಿಗೆ ಪ್ರೋತ್ಸಾಹ, ಕ್ರೇಡಿಟ್ ಸೌಲಭ್ಯ, ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ಮತ್ತು ಮಾರುಕಟ್ಟೆ ಬೆಂಬಲ ಸೌಲಭ್ಯವನ್ನು ನೀಡಲಾಗುವುದು.
ಯೋಜನೆಯಲ್ಲಿರುವ ಚಟುವಟಿಕೆಗಳು: ಬಡಗಿತನ, ದೋಣಿ ತಯಾರಿಕೆ, ಶಸ್ತ್ರಾಸ್ತ್ರ ತಯಾರಿಕೆ, ಕಮ್ಮಾರ, ಸುತ್ತಿಗೆ ಮತ್ತು ಟೂಲ್‌ಕಿಟ್ ತಯಾರಿಕೆ, ಬೀಗ ತಯಾರಕರು. ಶಿಲ್ಪಕಲೆ, ಕಲ್ಲುಪುಡಿ ಮಾಡುವವರು, ಬಂಗಾರದ ಆಭರಣ ತಯಾರಿಕೆ (ಅಕ್ಕಸಾಲಿಗರು), ಕುಂಬಾರಿಕೆ, ಪಾದರಕ್ಷೆ, ಚರ್ಮಗಾರಿಕೆ ತಯಾರಿಕೆ, ಗೌಂಡಿ ಕೆಲಸಗಾರರು, ಕಸಬರಿಗೆ, ಬಾಸ್ಕೆಟ್, ಮ್ಯಾಟ್ ಅಥವಾ ಬಿದಿರಿನ ಉತ್ಪನ್ನ ತಯಾರಿಕೆ, ತೆಂಗಿನ ನಾರಿನ ಉತ್ಪನ್ನ ತಯಾರಕರು, ಗೊಂಬೆ ತಯಾರಕರು, ಕ್ಷೌರಿಕ, ಹೂ-ಮಾಲೆ ತಯಾರಕರು, ಧೋಬಿ, ಟೈಲರ್, ಮೀನಿನ ಬಲೆಗಳನ್ನು ತಯಾರಿಸುವವರು.
ಈ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿರುವ ಸಾಮಾನ್ಯ ಸೇವಾ ಕೇಂದ್ರ (ಸಿಎಸ್ಸಿ) ದಲ್ಲಿ ನೋಂದಣಿಯನ್ನು ಮಾಡಿಕೊಳ್ಳಬೇಕು.
ನೋಂದಣಿಗೆ ಅರ್ಹತೆ: ಕುಶಲಕರ್ಮಿಗಳು ಮೇಲ್ಕಂಡ 18 ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ ಉದ್ಯೋಗಿಯಾಗಿರಬೇಕು. 18 ವರ್ಷ ಮೇಲ್ಪಟ್ಟವರಾಗಿದ್ದು, ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರು ಮಾತ್ರ ನೊಂದಣಿಗೆ ಅರ್ಹರು (ಕುಟುಂಬ ಅಂದರೆ: ಗಂಡ, ಹೆಂಡತಿ ಮತ್ತು ಮದುವೆಯಾಗದ ಮಕ್ಕಳು). ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಕೆಲಸದಲ್ಲಿರಬಾರದು. ಕುಶಲಕರ್ಮಿಗಳು ಮುದ್ರಾ ಮತ್ತು ಸ್ವ-ನಿಧಿ ಸಾಲಗಳನ್ನು ಹೊರತುಪಡಿಸಿ ಬೇರೆ ಯಾವುದೇ ತರಹ ಸಾಲವನ್ನು ಪಡೆದಿರಬಾರದು.
ತರಬೇತಿ ವಿವರ: ಕುಶಲಕರ್ಮಿಗಳಿಗೆ ನೋಂದಣಿಯಾದ ನಂತರ ಜಿಲ್ಲಾ ಮಟ್ಟದ ಸಮಿತಿಯಿಂದ ಕುಶಲಕರ್ಮಿ ಎಂದು ದೃಢೀಕರಿಸಿದ ನಂತರ 5 ರಿಂದ 7 ದಿನಗಳ ಕಾಲ ತರಬೇತಿಯನ್ನು ನೀಡಲಾಗುವುದು. ತರಬೇತಿ ಅವಧಿಯಲ್ಲಿ ಸ್ಟೈಫಂಡ್ ಮತ್ತು ಇತರೆ ಭತ್ಯೆ ನೀಡಲಾಗುವುದು. ತರಬೇತಿಯ ನಂತರ ಪ್ರಮಾಣಪತ್ರದೊಂದಿಗೆ ರೂ. 15000 ಬೆಲೆಬಾಳುವ ಉಪಕರಣವನ್ನು ನೀಡಲಾಗುವುದು. ನಂತರ ಶೇ 5ರ ಬಡ್ಡಿದರದಲ್ಲಿ 1,00,000 ರೂ.ಗಳನ್ನು ಸಾಲವಾಗಿ ನೀಡಲಾಗುವುದು. ತದನಂತರ 15 ದಿವಸಗಳವರೆಗೆ ಉನ್ನತ ಮಟ್ಟದ ತರಬೇತಿಯನ್ನು ನೀಡಿ ಈಗಾಗಲೇ ಪಡೆದ ಒಂದು ಲಕ್ಷ ರೂ. ಸಾಲ ಮರುಪಾವತಿಯಾದ ನಂತರ 2,00,000 ರೂ.ಗಳ ಸಾಲವನ್ನು ಶೇ 5ರ ಬಡ್ಡಿ ದರದಲ್ಲಿ ನೀಡಲಾಗುವುದು ಹಾಗೂ ತಾವು ತಯಾರಿಸಲ್ಪಡುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು, ಜಿಲ್ಲಾಡಳಿತ ಭವನ, ಕೊಪ್ಪಳ ರವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 

 

ಜಾಹೀರಾತು
error: Content is protected !!