https://youtu.be/NHc6OMSu0K4?si=SI_K4goOPEgwo6h2

ಭಾರತೀಯ ಪುರಾತತ್ವ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ ಹಾಗೂ ಜನಪ್ರತಿನಿಧಿಗಳ ತಾತ್ಸಾರದಿಂದ ವಿಜಯನಗರ ಅರಸರ ಕಾಲದ ಶಿವಾಲಯ ಅನಾಥ | ಪ್ರಕೃತಿ ಮಡಿಲಿನಲ್ಲಿರುವ ಶಿವಲಿಂಗ ದರ್ಶನ ಪಡೆಯುವುದೇ ಭಾಗ್ಯ | ದೇವಾಲಯ ಜೀರ್ಣೋದ್ಧಾರಕ್ಕಾಗಿ ಭಕ್ತಗಣ ಕಾತರ
ಬಸಾಪುರ ಬಸವರಾಜ್
ಹಂಪಿಟೈಮ್ಸ್ ಹೊಸಪೇಟೆ:
ದೇಶದೆಲ್ಲೆಡೆ ಶನಿವಾರ ಶಿವರಾತ್ರಿಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದರೆ, ಹಂಪಿ ಅಂಗಳದಂತಿರುವ ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ವ್ಯಾಪ್ತಿಯಲ್ಲಿ ವಿಜಯನಗರ ಅರಸರ ಕಾಲದಲ್ಲೆ ಪ್ರತಿಷ್ಠಾಪನೆಗೊಂಡಿರುವ ಬೃಹತ್ ಆಕರ್ಷಕ ಕಾಂತಿಯುತ ಶಿವಲಿಂಗವಿರುವ ಶಿವಾಲಯ ಸರ್ಕಾರ ಹಾಗೂ ಜನಪ್ರತಿನಿಧಿಗಳ ತಾತ್ಸಾರದಿಂದ ಬಣಗುಡುತ್ತಿದೆ.
ಈ ದೇವಾಲಯ ಭಾರತೀಯ ಪುರಾತತ್ವ ಇಲಾಖೆಗೊಳಪಟ್ಟಿದ್ದರೂ, ಗರ್ಭಗುಡಿಯ ಗೋಪುರ ಕುಸಿದು ನೆಲಸಮಗೊಂಡಿದ್ದರೂ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಂಡಿಲ್ಲ. ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಾಲಯವು ಧಾರ್ಮಿಕ ದತ್ತಿ ಇಲಾಖೆಯಿಂದಲೂ ತಾತ್ಸಾರಕ್ಕೊಳಗಾಗಿದೆ. ವಿಜಯನಗರ ಸಾಮ್ರಾಜ್ಯದ ವೈಭವವನ್ನು ನೆನೆಯುವ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರು ದೇವಾಲಯದ ಜೀರ್ಣೋದ್ಧಾರ ಮರೆತರೆ? ಎಂಬ ಪ್ರಶ್ನೆ ಶಿವಭಕ್ತರನ್ನು ಕಾಡುತ್ತಲಿದೆ.

ಹಂಪಿ ಅಂಗಳದಲ್ಲಿ ದೇವರ ಮೂರ್ತಿಗಳೆ ಇಲ್ಲದ ಅನೇಕ ದೇವಾಲಯಗಳಿವೆ. ಆದರೆ ವಿಜಯನಗರ ಅರಸ ಶ್ರೀ ಕೃಷ್ಣದೇವರಾಯನ ತಾಯಿ ನಾಗಲಾಂಬಿಕೆಯ ಒಳಿತಿಗೋಸ್ಕರ ನಿರ್ಮಾಣಗೊಂಡ ಈ ದೇವಸ್ಥಾನದಲ್ಲಿ ಮೂರು ಅಡಿ ಎತ್ತರದ ಆಕರ್ಷಕ ಕಾಂತಿಯುತ ಶಿವಲಿಂಗವಿದೆ. ಗರ್ಭಗುಡಿ ಗೋಪುರ ನೆಲಸಮಗೊಂಡರೂ ಶಿವಲಿಂಗ ಭಿನ್ನಗೊಳ್ಳದೆ ಕಾಲಕಾಲಕ್ಕೆ ಸ್ಥಾನಪಲ್ಲಟಗೊಳಪಟ್ಟಿರುವುದು ಶಿವಲಿಂಗದ ಪವಾಡವೇ ಸರಿ ಎನ್ನಲಾಗುತ್ತಿದೆ.

ಕೆಲ ಪಟ್ಟಭದ್ರಾಹಿತಾಶಕ್ತಿ ಹಾಗೂ ನಿಧಿಚೋರರ ಹಾವಳಿಗೆ ತುತ್ತಾಗಿದ್ದ ಈ ದೇವಾಲಯವನ್ನು ಮುಳ್ಳುಕೊಂಪೆಗಳಿಂದ ಮುಚ್ಚಲ್ಪಟ್ಟಿತ್ತು. ಮಾಧ್ಯಮದ ವರದಿಯ ನಂತರ ಕೆಲ ಭಕ್ತರು ದೇವಸ್ಥಾನದ ಸುತ್ತಲೂ ಹಾಕಲಾಗಿದ್ದ ಮುಳ್ಳುಕೊಂಪೆಗಳನ್ನು ತೆರವುಗೊಳಿಸಿ, ದೇವಾಲಯವನ್ನು ಸ್ವಚ್ಛಗೊಳಿಸಿ ಶಿವಲಿಂಗ ದರ್ಶನಕ್ಕೆ ಅವಕಾಶ ಕಲ್ಪಿಸಿದರು. ಅಂದಿನಿಂದ ವಿಶೇಷ ದಿನಗಳಂದು ಸ್ಥಳೀಯ ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ.
ಪ್ರಕೃತಿಯ ಮಡಿಲಿನಲ್ಲಿರುವ ಈ ಶಿವಲಿಂಗ ದರ್ಶನ ಮಾಡಿದರೆ ರೋಮಾಂಚನವಾಗುತ್ತದೆ. ಕೆಲ ಕ್ಷಣ ಬದುಕಿನ ಬವಣೆ ಮರೆತು ಶಿವಧ್ಯಾನದಲ್ಲಿ ತೊಡಗುತ್ತಾರೆ. ದೇವಾಲಯಕ್ಕೆ ಒಮ್ಮೆ ಬಂದವರು ಮತ್ತೊಮ್ಮೆ ಬರತೊಡಗುತ್ತಾರೆ. ಪ್ರಕೃತಿ ಮಡಿಲಲ್ಲಿರುವ ಈ ಶಿವಲಿಂಗ ಬೇಡಿದವರಿಗೆ ವರ ಕರುಣಿಸುತ್ತಾನೆ ಎಂಬ ನಂಬಿಕೆ ಜನರದ್ದಾಗಿದೆ. ಈ ಶಿವಲಿಂಗವನ್ನು ನಾಗೇಶ್ವರ ಕುಂಬಾರೇಶ್ವರ, ಓಬಳೇಶ್ವರನೆಂತಲೂ ಕರೆಯುತ್ತಾರೆ.

ಐತಿಹ್ಯ: ವಿಜಯನಗರ ಅರಸ ಶ್ರೀಕೃಷ್ಣದೇವರಾಯನ ತಾಯಿ ನಾಗಲಾದೇವಿಯ ಹೆಸರಿನಲ್ಲಿ ನಿರ್ಮಾಣಗೊಂಡ ನಾಗಲಾದೇವಿಪುರ ಗ್ರಾಮ ಇದೀಗ ನಾಗೇನಹಳ್ಳಿ ಎಂಬ ಹೆಸರಿನಿಂದ ಕರೆಯಲ್ಪಟ್ಟಿದೆ. ಶ್ರೀಕೃಷ್ಣದೇವರಾಯನ ಪುರೋಹಿತನಾದ ರಂಗನಾಥ ದೀಕ್ಷಿತ ಎಂಬಾತನು ದೊರೆಯಿಂದ ಗ್ರಾಮವೊಂದನ್ನು ಪಡೆದು ನಾಗಲಾದೇವಿಗೆ ಪುಣ್ಯವಾಗಲೆಂದು ಆಕೆಯ ಹೆಸರಿನಲ್ಲಿ ನಾಗೇಶ್ವರ ಎಂಬ ಶಿವಾಲಯವನ್ನು, ನಾಗೇಂದ್ರಶಯನ ಎಂಬ ವಿಷ್ಣು ಆಲಯವನ್ನು ಹಾಗೂ ನಾಗಸಮುದ್ರವೆಂಬ ಕೆರೆಯನ್ನು ನಿರ್ಮಿಸಲಾಯಿತು ಎಂದು ಕ್ರಿ.ಶ.1516ರ ಶಾಸನ ತಿಳಿಸುತ್ತದೆ.
ನಾಗೇಶ್ವರ ದೇವಾಲಯವು ಪೂರ್ವಾಭಿಮುಖವಾಗಿದ್ದು, ಗರ್ಭಗೃಹ ಅಂತರಾಳ ಮತ್ತು ನವರಂಗಗಳನ್ನು ಹೊಂದಿದೆ. ಗರ್ಭಗೃಹವು ಚೌಕಾಕಾರವಾಗಿದ್ದು, ಮಧ್ಯದಲ್ಲಿ ಶಿವಲಿಂಗವಿದೆ. ಇದರ ದ್ವಾರಗಳು ಸರಳ ಅಲಂಕರಣದವು. ಇಲ್ಲಿನ ಕಂಬಗಳಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ ಹಲವು ಶಿಲ್ಪಗಳು ಕಂಡುಬರುತ್ತವೆ. ಈ ದೇವಾಲಯವು ದೊಡ್ಡ ಗಾತ್ರದ ಚಪ್ಪಡಿ ಕಲ್ಲುಗಳಿಂದ ನಿರ್ಮಿತವಾಗಿದ್ದು, ಸ್ಥಳೀಯರಿಂದ ಪೂಜಿಸಲ್ಪಡುತ್ತಿದೆ. ದೇವಸ್ಥಾನದ ಉತ್ತರ ಈಶಾನ್ಯದಲ್ಲಿ ಸುಂದರವಾದ ಚೌಕಾಕಾರದ ಪುರಾತನ ಬಾವಿಯಿದೆ. ಇದರಲ್ಲಿನ ನೀರನನ್ನೆ ಶಿವಾಲಯದ ಪೂಜಾ ಮಹೋತ್ಸವಕ್ಕೆ ಬಳಕೆ ಮಾಡಲಾಗುತ್ತಿತ್ತು. ಬೋರೆವೆಲ್ ಕೊರೆಸಿದರೂ ನೀರು ದೊರೆಯದ ಈ ಗುಡ್ಡಗಾಡು ಪ್ರದೇಶದಲ್ಲಿ ಸದಾ ನೀರಿರುವುದು ದೇವಾಯಲಯ ಮಹತ್ವವನ್ನು ಸಾರುತ್ತದೆ.

ಶಿವಾಲಯಕ್ಕೆ ಮಾರ್ಗ: ಹೊಸಪೇಟೆ ಕೇಂದ್ರ ಬಸ್ ನಿಲ್ದಾಣದಿಂದ ಹಂಪಿ ಮಾರ್ಗದಲ್ಲಿರುವ ಅನಂತಶಯನಗುಡಿ ರೈಲ್ವೇ ಗೇಟ್ ನಂತರ ಎಡಭಾಗಕ್ಕೆ ತಿರುವು ಹಿಡಿದು ಎರಡು ಕಿ.ಮೀ. ಸಾಗಿರದರೆ ನಾಗೇನಹಳ್ಳಿ ಗ್ರಾಮ ಬರುತ್ತದೆ. ಗ್ರಾಮದ ಹೊರವಲಯದಲ್ಲಿರುವ ಧರ್ಮದಗುಡ್ಡಕ್ಕೆ ತೆರಳುವ ಮುಖ್ಯ ರಸ್ತೆಯ ಪಕ್ಕದಲ್ಲೇ ಶಿವಾಲಯ ಕಾಣುತ್ತದೆ. ಒಮ್ಮೆ ದರ್ಶನ ಪಡೆದರೆ ಮತ್ತೊಮ್ಮೆ ಬರಬೇಕು ಎಂದು ಅನ್ನಿಸದೆ ಇರದು. ಒಮ್ಮೆ ಭೇಟಿ ನೀಡಿ ನಿಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳಿರಿ.



More Stories
ಸೋಷಿಯಲ್ ಮೀಡಿಯಾ: ಕಣ್ಣಿಗೆ ಆಕರ್ಷಕ, ಮನಸ್ಸಿಗೆ ಮಾರಕ!
ಉದ್ಯಮಿ ಕೆ.ರವಿಶಂಕರ್ ಜನ್ಮದಿನದ ಸಾರ್ಥಕ ಸೇವೆ: ಆಸ್ಪತ್ರೆಯ ರೋಗಿಗಳಿಗೆ ಪೌಷ್ಟಿಕಾಹಾರ ವಿತರಣೆ
ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್, ಕೋಟ್ಯಂತರ ರೂಪಾಯಿ ರಾಜಸ್ವ ಸಂಗ್ರಹ : ಅಬಕಾರಿ ನಿರೀಕ್ಷಕಿ ಎಸ್.ಬಿ.ಮಮತಾ