https://youtu.be/NHc6OMSu0K4?si=SI_K4goOPEgwo6h2



ನಗೆರಸಭೆ ಅಧ್ಯಕ್ಷರ ಜವಾಬ್ಧಾರಿ ಪುತ್ರನಿಗೆ ಬಿಟ್ಟುಕೊಟ್ಟರಾ? ಜನರ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದ ಅಧ್ಯಕ್ಷರ ಪುತ್ರ
ಹಂಪಿಟೈಮ್ಸ್ ಹೊಸಪೇಟೆ:
ನಗರಸಭೆಯ 6ನೇ ವಾರ್ಡಿನಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ),ರಾಣಿಪೇಟೆ ಘಟಕ, ಎಫ್‌ಕೆಆರ್‌ಡಿಯು ತಾಲೂಕು ಸಮಿತಿ ಮುಖಂಡರು ನಗರಸಭೆ ಎದುರು ಸೋಮವಾರ ಪ್ರತಿಭಿಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಗೆ 100 ವಸಂತ ಕಳೆದರೂ ನಗರದ ಅಭಿವೃದ್ಧಿ ಮಂದಗತಿಯಲ್ಲಿ ಸಾಗಿದೆ. 24/7 ಕುಡಿಯುವ ನೀರಿನ ಯೋಜನೆ ಉದ್ದೇಶ ಸರಿಯಾಗಿದ್ದರೂ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕೋಟ್ಯಾಂತರ ರೂ ವೆಚ್ಚದಲ್ಲಿ ನಡೆದ ಯುಜಿಡಿ ಇನ್ನೂ ಪೂರ್ಣಗೊಂಡಿಲ್ಲ. ತುಂಗಭದ್ರಾ ಜಲಾಶಯದ ಅಂಗಳದಲ್ಲಿರುವ ಸಾಮಾನ್ಯ ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಮಹಿಳೆಯರಿಗಾಗಿ ಶೌಚಾಲಯ ನಿರ್ಮಿಸಬೇಕೆಂಬ ದಶಕಗಳ ಕೂಗನ್ನೂ ಕೇಳುವವರಿಲ್ಲ. ಜನರ ಆರೋಗ್ಯದ ಹಿತದೃಷ್ಟಿಯಿಂದ ನಿತ್ಯ ಸ್ವಚ್ಛಗೊಳ್ಳಬೇಕಾದ ಚರಂಡಿಗಳು ಕಸದಿಂದ ತುಂಬಿ ತುಳುಕಿ ದುರ್ನಾತ ಬೀರುತ್ತಿದೆ. ಜನವಸತಿ ಪ್ರದೇಶ ಗಬ್ಬುನಾರುತ್ತಿರುವುದರಿಂದ ಮಕ್ಕಳು ಮತ್ತು ವಯೋವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ನಗರಸಭೆಯಲ್ಲಿ ಸ್ವಚ್ಛತೆ, ಪರಿಸರ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರತ್ಯೇಕ ಅಧಿಕಾರಿಗಳಿದ್ದರೂ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆಯುತ್ತಿಲ್ಲ. ಕೂಡಲೆ ವಾರ್ಡಿನಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರುವ ಜನರಿಗೆ ಪಟ್ಟ ನೀಡಬೇಕು. ಜನರ ಅಗತ್ಯತೆಗೆ ತಕ್ಕಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಸಂಘಟನೆಯ ಮುಖಂಡರಾದ ಕೆ.ಎಂ.ಸಂತೋಷ, ಬಿಸಾಟಿ ಮಹೇಶ, ಕಲ್ಯಾಣಯ್ಯ, ನಬಿಸಾಬ್, ರಾಮಣ್ಣ, ಅಶೋಕ ಸೇರಿದಂತೆ ವಾರ್ಡಿನ ಮುಖಂಡರು ಒತ್ತಾಯಿಸಿ ಮನವಿ ಸಲ್ಲಿಸಿದರು.
ಅಧ್ಯಕ್ಷರ ಜವಾಬ್ದಾರಿ ಪುತ್ರನಿಗೆ! :

ನಗರಸಭೆ ಅಧ್ಯಕ್ಷೆ ಸುಂಕಮ್ಮ ನಿರ್ವಹಿಸಬೇಕಾದ ಕಾರ್ಯಗಳನ್ನು ಅವರ ಪುತ್ರ ನಿರ್ವಹಿಸುತ್ತಾರೆ ಎಂಬ ಆರೋಪಗಳು ಬಹುದಿನಗಳಿಂದಲೂ ಕೇಳಿಬರುತ್ತಿದ್ದವು. ಈ ಬಗ್ಗೆ ಅನೇಕ ಸದಸ್ಯರು ಅಸಮಧಾನ ಹೊರಹಾಕಿದ್ದರು. 6ನೇವಾರ್ಡಿನ ಸಮಸ್ಯೆಗಳ ಪರಿಹಾರಕ್ಕಾಗಿ ವಾರ್ಡಿನ ಜನರು ಮನವಿ ಸಲ್ಲಿಸಲು ಬಂದಾಗ ಅಧ್ಯಕ್ಷರು ಪಡೆದುಕೊಳ್ಳಬೇಕಾದ ಮನವಿ ಪತ್ರವನ್ನು ಅವರ ಪುತ್ರ ಸ್ವೀಕಾರ ಮಾಡಿರುವುದು ಅನೇಕರ ಹುಬ್ಬೇರಿಸುವಂತೆ ಮಾಡಿದೆ. ನಗರಸಭೆಯಲ್ಲಿ ಅಧ್ಯಕ್ಷರ ಅಧಿಕಾರ ದುರ್ಬಳಕೆಯಾಗುತ್ತಿದೆ ಎಂಬ ಆರೋಪಕ್ಕೆ ಮನವಿ ಸ್ವೀಕಾರ ಪುಷ್ಠಿ ನೀಡಿದಂತಾಗಿದೆ. ನಗರಸಭೆಯಲ್ಲಿ ಅಧ್ಯಕ್ಷರ ಸ್ಥಾನ ಖಾಲಿ ಇದೆಯಾ? ಎಂಬ ಪ್ರಶ್ನೆ ಅನೇಕರನ್ನು ಕಾಡಲಾರಂಭಿಸಿದೆ.
ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ಕಿಸಿ


More Stories
ಸಮಾಜದಲ್ಲಿ ಮಕ್ಕಳನ್ನು ಸುರಕ್ಷಿತವಾಗಿಡುವುದು ಶಿಕ್ಷಕರ ಮೂಲಭೂತ ಕರ್ತವ್ಯ
ಹಣಕಾಸು ಇಲಾಖೆಯಿಂದ ಸಿಎಂಗೆ ಎಚ್ಚರಿಕೆ
ಹಳ್ಳಿ ಮಕ್ಕಳಿಗೆ ಕಿಯೋ ಕಂಪ್ಯೂಟರ್ ಮೂಲಕ ಎಐ ತಂತ್ರಜ್ಞಾನ