https://youtu.be/NHc6OMSu0K4?si=SI_K4goOPEgwo6h2

ಡಿ.21 ರಂದು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ
ಹಂಪಿಟೈಮ್ಸ್ ಹೊಸಪೇಟೆ :
ಕಾರ್ಪೋರೇಟ್ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ ನೀಡುವ ಸರ್ಕಾರ, ಸರ್ಕಾರದ ಯೋಜನೆಗಳ ಅನುಷ್ಠಾನಕ್ಕಾಗಿ ಹಗಲಿರಳು ಜೀವದ ಹಂಗುತೊರೆದು ದುಡಿಯುತ್ತಿರುವ ಆಶಾ ಕಾರ್ಯಕರ್ತರನ್ನು ಕಡೆಗಣಿಸುತ್ತಿದೆ. ಆಶಾ ಕಾರ್ಯಕರ್ತರು ಸೇರಿದಂತೆ ಸಮಸ್ತ ಕಾರ್ಮಿಕರು ಸಂಘಟಿತರಾಗಿ ಕಾರ್ಮಿಕ ವಿರೋಧಿಯಾಗಿರುವ ವ್ಯವಸ್ಥೆಯನ್ನು ಬದಲಾಯಿಸಲು ಪಣ ತೊಡಬೇಕು ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷರಾದ ಕಾ.ದೇವದಾಸ್ ಹೇಳಿದರು.

ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಎಐಯುಟಿಯುಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರ ವಿಜಯನಗರ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಡು ಕಾರ್ಮಿಕ ವಿರೋಧಿಯಾಗಿವೆ. ಜನರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುವ, ಕೋವಿಡ್ ಸಂದರ್ಭದಲ್ಲಿ ಪ್ರಾಣ ಪಣಕ್ಕಿಟ್ಟು ದುಡಿದ ಆಶಾ ಕಾರ್ಯಕರ್ತೆಯರನ್ನು ಅತ್ಯಂತ ನಿರ್ಲಕ್ಷö್ಯತೆಯಿಂದ ಕಾಣುತ್ತಿವೆ. ಕಾರ್ಪೋರೇಟ್ ಉದ್ಯಮಿಗಳ ಸಾಲಗಳನ್ನ ಮನ್ನಾ ಮಾಡುತ್ತಿರುವುದರಿಂದ, ಲಕ್ಷ ಕೋಟಿಯಷ್ಟು ಜನರ ತೆರಿಗೆ ಹಣ ಲೂಟಿಯಾಗುತ್ತಿದೆ. ಆಶಾ ಕಾರ್ಯಕರ್ತೆಯರ ಜೀವನಕ್ಕೆ ಯೋಗ್ಯ ವೇತನ ನೀಡುತ್ತಿಲ್ಲ. ವ್ಯವಸ್ಥೆಯನ್ನೆ ಬದಲಾಯಿಸಬೇಕಾದರೆ ಆಶಾ ಕಾರ್ಯಕರ್ತೆಯರು ಸೇರಿದಂತೆ ದುಡಿಯುವ ಜನತೆ ಮತ್ತಷ್ಟು ಸಂಘಟಿತರಾಗಿ ಪ್ರಬಲ ಹೋರಾಟ ರೂಪಿಸಿದರೆ ವ್ಯವಸ್ಥೆ ಬದಲಾಯಿಸಲು ಸಾಧ್ಯ ಎಂದರು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿ, ಆಶಾ ಕಾರ್ಯಕರ್ತೆಯರ ಸೇವೆಯನ್ನ ಶ್ಲಾಘಿಸಿ, ಸನ್ಮಾನಿಸಿದ ಮಾತ್ರಕ್ಕೆ ಬದುಕು ಬದಲಾಗದು. ಆಶಾ ಕಾರ್ಯಕರ್ತೆಯರ ಗಂಭೀರ ಸಮಸ್ಯೆಗಳನ್ನು ಬಗೆಹರಿಸಬೇಕು. ಆಶಾ ಸಾಫ್ಟ್ನ (ಆರ್‌ಸಿಹೆಚ್ ಪೋರ್ಟಲ್) ದೋಷದಿಂದ ಪ್ರತಿ ತಿಂಗಳು ಸಾವಿರಾ ರೂಪಾಯಿ ಆಶಾಗಳಿಗೆ ನಷ್ಟವಾಗುತ್ತಿದೆ. ಕಳೆದ 8 ವರ್ಷಗಳಿಂದ ಈ ಸಮಸ್ಯೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆರ್‌ಸಿಹೆಚ್ ಪೋರ್ಟಲ್ ರದ್ದುಗೊಳಿಸಲು ಆರೋಗ್ಯ ಇಲಾಖೆ ಮತ್ತು ಸರ್ಕಾರ ಮೀನಮೇಷ ಎಣಿಸುತ್ತಿದೆ. ಕನಿಷ್ಟ ವೇತನ ರೂ.12000 ನಿಗದಿ, ಹೆಚ್ಚುವರಿ ಕೆಲಸಗಳಿಂದ ಬಿಡುಗಡೆಗೊಳಿಸಲು ಒತ್ತಾಯಿಸಿ ಡಿ.21 ರಂದು ನಡೆಯುವ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುಲಾಗುವುದು ಎಂದರು.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಮಾತನಾಡಿದರು. ಸಂಘದ ಜಿಲ್ಲಾ ಗೌರವಧ್ಯಕ್ಷೆ ಎ.ಶಾಂತಾ ಅಧ್ಯಕ್ಷತೆ ವಹಿಸಿದ್ದರು. ವಿವಿಧ ತಾಲ್ಲೂಕು ಮುಖಂಡರಾದ ಗೀತಾ, ಗೌರಮ್ಮ, ವೀರಮ್ಮ, ನೇತ್ರಾ, ಮಾರೆಕ್ಕ, ನಾಗಮ್ಮ, ಶಾಂತಮ್ಮ ಇತರರು ಉಪಸ್ಥಿತರಿದ್ದರು.


ಸಮಾವೇಶ ರ‍್ಯಾಲಿ: ಸಮಾವೇಶದ ಮುನ್ನ ಹೊಸಪೇಟೆ ಬಸ್ ನಿಲ್ದಾಣದಿಂದ ಬೃಹತ್ ಮೆರವಣಿಗೆಯನ್ನು ಸಂಘಟಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಆಶಾ ಸಾಫ್ಟ್ ರದ್ದುಗೊಳಿಸಿ, ಪ್ರೋತ್ಸಾಹ ಧನವಿಲ್ಲದ ಹೆಚ್ಚುವರಿ ಕೆಲಸ ಬೇಡವೇ ಬೇಡ, ಕನಿಷ್ಠ ವೇತನ ರೂ12,000 ನಿಗದಿ ಮಾಡಿ, ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಪುಕ್ಸಟ್ಟೆ ದುಡಿಸಿಕೊಳ್ಳುವ ಸರ್ಕಾರಕ್ಕೆ ಧಿಕ್ಕಾರ ಸೇರಿದಂತೆ ಇತರ ಘೋಷಣೆಗಳನ್ನು ಮೆರವಣಿಗೆಯುದ್ದಕ್ಕೂ ಕೂಗಿದರು.
ಪದಾಧಿಕಾರಿಗಳ ಆಯ್ಕೆ: ಆಶಾ ಸಂಘದ ವಿಜಯನಗರ ಜಿಲ್ಲಾ ಸಮಿತಿ ರಚನೆಯಾಯಿತು. ಅಧ್ಯಕ್ಷರಾಗಿ ಡಾ.ಪ್ರಮೋದ್. ಕಾರ್ಯದರ್ಶಿಯಾಗಿ ಗೌರಮ್ಮ, 7 ಉಪಾಧ್ಯಕ್ಷರು, 5 ಜಂಟಿ ಕಾರ್ಯದರ್ಶಿಯುಳ್ಳ 173 ಮುಖಂಡರ ಕಾರ್ಯಕಾರಿ ಸಮಿತಿ ಚುನಾಯಿಸಲಾಯಿತು.





More Stories
ಹೊಸಪೇಟೆಯಲ್ಲಿ ಫೆ. ೨೭ಕ್ಕೆ ‘ಸರ್ವಧರ್ಮ ಸಮನ್ವಯ’ ಮಹಾರಥೋತ್ಸವದ ವೈಭವ!
ಯುವ ಕವಿಗಳು ಜನಸಾಮಾನ್ಯರ ಬದುಕು-ಬವಣೆಗಳಿಗೆ ಧ್ವನಿಯಾಗಿ
ಮೂರು ದಿನ ಸಾಂಸ್ಕೃತಿಕ ಹಬ್ಬಕ್ಕೆ ಸಜ್ಜಾದ ವಿಜಯನಗರ ಸಾಮ್ರಾಜ್ಯ