https://youtu.be/NHc6OMSu0K4?si=SI_K4goOPEgwo6h2
ಕಾಯಕಲ್ಪಕ್ಕೆ ಕಾದಿರುವ ಅಳಿಯ ರಾಮರಾಯನ ಸಮಾಧಿ..
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿಗೆ ಹತ್ತಿರದ ಕೋಳೂರು ಎಂಬ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಪ್ರತಿನಿಧಿಯಾಗಿ 23 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದ ನಿಪುಣ ಆಡಳಿತಗಾರ ಅಳಿಯ ರಾಮರಾಯನ ಸಮಾಧಿಯು ಕೇಳುವವರಿಲ್ಲದೆ ಕಸದ ತೊಟ್ಟಿಯಾಗಿ ದುಃಸ್ಥಿತಿಗೆ ತಲುಪಿದೆ.
ಭಾರತದ ಚರಿತ್ರೆಯಲ್ಲಿ ಸುವರ್ಣ ಯುಗದ ಕಾಲವಾಗಿದ್ದ ಶ್ರೀ ಕೃಷ್ಣದೇವರಾಯನ ನಂತರದಲ್ಲಿ ಶಾಹಿ ಸುಲ್ತಾನರ ನಿರ್ಣಾಯಕ ಯುದ್ಧವೆನಿಸಿದ ರಕ್ಕಸ- ತಂಗಡಗಿ (ತಾಳಿಕೋಟೆ)ಯುದ್ಧದಲ್ಲಿ ಶಿರಚ್ಛೇಧನದಿಂದ ವೀರ ಮರಣವನ್ನು ಹೊಂದಿದ ವಯೋವೃದ್ಧನಾಗಿದ್ದ ಅಳಿಯ ರಾಮರಾಯನ ರುಂಡವನ್ನು ಇಲ್ಲಿ ಹೂ ಳಿಡಲಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಇಲ್ಲಿರುವ ರಾಯನಕೆರೆ,ಹತ್ತಿರದಲ್ಲಿಯೇ ರಾಮರಾಯ ಕದನಕ್ಕೆ ಹೋಗುವ ಸಂದರ್ಭದಲ್ಲಿ ನಿಲ್ಲಿಸಿದ್ದ ಮುರಿದು ಬಿದ್ದ ಸ್ತಂಭ,ಬೂದಿಹಾಳ ಗ್ರಾಮದಲ್ಲಿ ರಕ್ಕಸ ತಂಗಡಗಿ ಯುದ್ಧದಲ್ಲಿ ಮಡಿದ ಅಪಾರ ಸೈನಿಕರ ಕಳೇಬರಗಳನ್ನು ಸುಟ್ಟಿರುವ ಕುರುಹುಗಳುಳ್ಳ ಬೂದಿದಿಬ್ಬಗಳು ಇವೆಲ್ಲವೂ ಗತ ಇತಿಹಾಸಕ್ಕೆ ಸಾಕ್ಷಿಯಾಗಿವೆ. ಆದರೆ ಇಂದಿನ ತಲೆಮಾರಿಗೆ ಹಿಂದಿನ ಚರಿತ್ರೆಯ ಪುಟಗಳನ್ನು ತೆರೆದಿಡಬೇಕಾದ ಈ ಸ್ಥಳಗಳು ಇಂದು ಅನಾಥ ಪ್ರಜ್ಞೆಯಿಂದ ಹಾಳಾಗುವ ಹಂತ ತಲುಪಿವೆ. ಸ್ಥಳೀಯ ಜನರ ನಿರಾಸಕ್ತಿ ,ಸರ್ಕಾರದ ನಿರ್ಲಕ್ಷ್ಯ ಮತ್ತು ಅಲ್ಲಿನ ಗ್ರಾಮ ಪಂಚಾಯಿತಿಯ ಇತಿಹಾಸದ ಬಗೆಗಿರುವ ದಿವ್ಯ ಮೌನದಿಂದಾಗಿ ಈ ಎಲ್ಲಾ ಕುರುಹುಗಳು ಮುಂದಿನ ತಲೆಮಾರಿಗೆ ನೋಡಲು ಸಿಗದೆ ನಶಿಸಿಹೋಗುತ್ತಿವೆ. ಈ ಕುರಿತು ಸರ್ಕಾರ ಅಳಿದುಳಿದವುಗಳನ್ನು ರಕ್ಷಿಸಿ ಸ್ಮಾರಕವಾಗಿಸುವ ನಿಟ್ಟಿನಲ್ಲಿ ಯಾವ ಯೋಜನೆ, ರೂಪುರೇಷೆಗಳನ್ನು ಈವರೆಗೂ ಮಾಡದಿರುವದು ವಿಪರ್ಯಾಸ. ಇತಿಹಾಸದ ಪ್ರಜ್ಞೆಯನ್ನ ಬೆಳೆಸುವ ಮತ್ತು ಉಳಿಸುವ ನಿಟ್ಟಿನಲ್ಲಿ ವಿಜಯನಗರದ ಚರಿತ್ರೆಗೆ ಸಾಕ್ಷಿಯಾಗಿರುವ ಈ ಭಾಗದ ಅಮೂಲ್ಯ ಸ್ಮಾರಕಗಳನ್ನು ತಕ್ಷಣ ರಕ್ಷಿಸುವ ಕೆಲಸವಾಗಬೇಕು. ರಾಜ್ಯ ಪುರಾತತ್ವ ಇಲಾಖೆಯು ಕೂಡಲೇ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ವಿಜಯನಗರ ಸಾಮ್ರಾಜ್ಯದ ಗತ ಚರಿತ್ರೆಯನ್ನು ಉಳಿಸಬೇಕು.
ಅಳಿಯ ರಾಮರಾಯ..
ದಕ್ಷಿಣ ಭಾರತದ ಚರಿತ್ರೆಯಲ್ಲಿ ವಿಜಯನಗರ ಸಾಮ್ರಾಜ್ಯದ ಪಾತ್ರ ಅತ್ಯಂತ ಮಹತ್ವವಾದದ್ದು.ಸ್ವಾಭಿಮಾನ ಮತ್ತು ಧರ್ಮಸಮನ್ವಯತೆಯನ್ನು ಹೊಂದಿದ್ದ ವಿಜಯನಗರದ ಅರಸರು ತಮ್ಮ ಸಾಂಸ್ಕೃತಿಕ ಮತ್ತು ಸಾಮಾಜಿಕ ಮೌಲ್ಯಗಳಿಂದಾಗಿ ಚರಿತ್ರೆಯ ಮರೆಯಲಾಗದ ಭಾಗವಾಗಿದ್ದಾರೆ.ಕ್ರಿ.ಶ. 1336 ರಲ್ಲಿ ದೇಶೀಯ ಅಶ್ಮಿತೆಯ ಕಾರಣಕ್ಕಾಗಿ ತುಂಗಭದ್ರ ನದಿಯ ತಟದಲ್ಲಿ ಉದಯಿಸಿದ ಸಾಮ್ರಾಜ್ಯವನ್ನು ಆಳಿದ ಸಂಗಮ, ಸಾಳ್ವ ,ತುಳು ಹಾಗೂ ಅರವೀಡು ವಂಶಗಳ ಅರಸರು ದಕ್ಷಿಣದ ಕನ್ಯಾಕುಮಾರಿಯವರೆಗೆ ರಾಜ್ಯವನ್ನು ಕಟ್ಟಿ ಬೆಳೆಸಿ ಸಮೃದ್ಧಗೊಳಿಸಿದರು.
ವಿಜಯನಗರದ ಅರಸರಲ್ಲಿಯೇ ಮುಕುಟ ಪ್ರಾಯನಾದ ದೊರೆ ಶ್ರೀ ಕೃಷ್ಣದೇವರಾಯ. ಆತ ಕ್ರಿ.ಶ. 1509 ರಿಂದ 1529 ರ ವರೆಗೆ ಆಳ್ವಿಕೆ ನಡೆಸಿದನು. ನಂತರದಲ್ಲಿ ಅಪ್ರಾಪ್ತನಾಗಿದ್ದ ರಾಜ ಸದಾಶಿವರಾಯನ ಹೆಸರಿನಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತಗಾರ, ರಾಜ ಪ್ರತಿನಿಧಿಯಾಗಿ ಕ್ರಿ.ಶ.1542 ರಿಂದ 1565 ರ ರಕ್ಕಸ ತಂಗಡಗಿಯಲ್ಲಿ ಅಂತಿಮ ಯುದ್ಧ ನಡೆಯುವವರೆಗೆ ಅಳಿಯ ರಾಮರಾಯನ ನೇತೃತ್ವದಲ್ಲಿ ಸಾಮ್ರಾಜ್ಯವು ಮುನ್ನಡೆಯಿತು .ಶ್ರೀ ಕೃಷ್ಣದೇವರಾಯನ ಅಳಿಯನಾಗಿದ್ದ ರಾಮರಾಯನು ಅರವೀಡು ವಂಶದ ಮೂಲ ಪುರುಷನಾಗಿದ್ದಾನೆ.
ರಕ್ಕಸ -ತಂಗಡಗಿ ಯುದ್ಧ.. (ತಾಳಿಕೋಟೆ ಕದನ 1565)
ರಕ್ಕಸ ತಂಗಡಗಿ ಎಂಬ ಕೃಷ್ಣಾನದಿಯ ತೀರದ ನೂರಾರು ಎಕರೆಯ ಬಯಲು ಪ್ರದೇಶದಲ್ಲಿ ಯುದ್ಧವು ನಡೆಯಿತು. ಯುದ್ಧದ ಬಗ್ಗೆ ಶಾಸನಾಧಾರಗಳು ಕಡಿಮೆಯಿದ್ದರೂ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ವೇಣುಗೋಪಾಲ ದೇವಾಲಯದ ಕಂಬದ ಮೇಲೆ ಕ್ರಿ.ಶ.1568 ಮೇ 20 ರಂದು ಬರೆಯಲಾದ ಶಾಸನ ದೊರಕಿದ್ದು ಇದರಲ್ಲಿ ತಾಳಿಕೋಟೆ ಯುದ್ಧ ನಡೆದಿರುವ ಬಗ್ಗೆ,ಯುದ್ಧದ ಸ್ಥಳದ ಕುರಿತು ಹಾಗೂ ಅಳಿಯ ರಾಮರಾಯ ಅಸ್ತಮಾನವಾದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.
ರಕ್ಕಸ ತಂಗಡಿಗೆ ಎಂಬ ಅಂದಿನ ಸಾಮ್ರಾಜ್ಯದ ಗಡಿಯಲ್ಲಿ ಜನವರಿ 25 ಶನಿವಾರ ಕ್ರಿ.ಶ.1565 ರಲ್ಲಿ ರಾಮರಾಯ ತನ್ನ ನೇತೃತ್ವದ ಸೈನ್ಯವನ್ನು ಸಜ್ಜುಗೊಳಿಸಿ ಯುದ್ಧಕ್ಕೆ ಅಣಿಯಾದನು. ಬಿಜಾಪುರ, ಅಹ್ಮದ್ ನಗರ ,ಬೀದರ್, ಹಾಗೂ ಗೋಲ್ಕೊಂಡ ಗಳ ಶಾಹಿ ಸುಲ್ತಾನರ ಪ್ರತಿ ದಾಳಿಯಿಂದಾಗಿ ಕೊನೆಯ ನಿರ್ಣಾಯಕವಾದ ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯವು ಸೋತು ಶರಣಾಯಿತು. ಯುದ್ಧದ ನಂತರ ಕೆಲವು ತಿಂಗಳುಗಳ ಕಾಲ ಆಕ್ರಮಣಕಾರರು ವಿಜಯನಗರವನ್ನು ಕೊಳ್ಳೆ ಹೊಡೆದರು. ವಿಜಯನಗರವು ಸಂಪೂರ್ಣವಾಗಿ ಧ್ವಂಸವಾಯಿತು. ಅಲ್ಲಿನ ಪ್ರಜೆಗಳನ್ನು ಕಗ್ಗೊಲೆ ಮಾಡಲಾಯಿತು.ವಿಜಯನಗರ ವಿನಾಶದ ಸಂದರ್ಭದಲ್ಲಿ 13ಲಕ್ಷದಷ್ಟು ಜನರುಳ್ಳ ವಿಜಯನಗರವನ್ನು ರಕ್ಷಿಸಲು ಸೂಕ್ತ ಸೈನಿಕರ ಯಾವ ಪಹರೆಯು ಅಲ್ಲಿರಲಿಲ್ಲ.ಎಲ್ಲೆಲ್ಲಿಯೂ ಆಗ ಅರಾಜಕತೆ ಉಂಟಾಯಿತು. ನಿರಾಯುಧರಾಗಿದ್ದ ನಗರವಾಸಿಗಳು ವಿಜಯನಗರದಿಂದ ಪಲಾಯನ ಮಾಡಿದರು. ವಿಜಯನಗರದಲ್ಲಿ ವಾಸಿಸಿದ್ದ ಜನರಿಗೆ ತಮ್ಮ ಸೈನ್ಯವು ಸೋಲಬಹುದೆಂದು ಅವರು ಕನಸಿನಲ್ಲೂ ಕೂಡ ಅಂದುಕೊಂಡಿರಲಿಲ್ಲ !ಹೀಗೆ ಉಜ್ವಲವಾಗಿ ಪ್ರಕಾಶಿಸಿದ್ದ ವಿಜಯನಗರದ ಸೂರ್ಯ ಅಂದು ಅಸ್ತಮಿಸಿದ.
ಅಳಿಯ ರಾಮರಾಯನ ಶಿರಚ್ಛೇದನ..!!
01 ಲಕ್ಷ ಕಾಲ್ದಳ,50 ಸಾವಿರ ಅಶ್ವದಳ,03 ಸಾವಿರ ರಥದಳ,01ಸಾವಿರ ಗಜದಳ,600 ಫಿರಂಗಿಗಳುಳ್ಳ ಅಪಾರ ಸಂಖ್ಯೆಯ ಸೈನ್ಯವಿತ್ತು.ಶಾಹಿ ಸುಲ್ತಾನರ ಸೈನ್ಯವು ವಿಜಯನಗರ ಸೈನ್ಯಕ್ಕಿಂತ ಕಡಿಮೆಯಿತ್ತು.ಆದರೆ ಅವರಲ್ಲಿ ಹೆಚ್ಚು ಫಿರಂಗಿಗಳಿದ್ದವು,ಅಶ್ವದಳವೂ ಹೆಚ್ಚಿತ್ತು.ಆದರೆ ವಿಜಯನಗರ ಸುಲಭವಾಗಿ ಗೆಲ್ಲಬಹುದಾಗಿದ್ದ ಈ ಯುದ್ಧದಲ್ಲಿ ವಿಜಯನಗರ ಸೈನ್ಯದಲ್ಲಿ ಇದ್ದ “ಗಿಲಾನಿ ಸಹೋದರರು” ಎಂದು ಕರೆಯಲ್ಪಡುವ ಇಬ್ಬರು ಮುಸ್ಲಿಂ ದಂಡನಾಯಕರಾದ ನೂರ್ ಖಾನ್ ಗಿಲಾನಿ ಮತ್ತು ಬಿಜಿ ಖಾನ್ ಗಿಲಾನಿ ಈ ಇಬ್ಬರು ರಾಮರಾಯನನ್ನು ಮೋಸಗೊಳಿಸಿ ಯುದ್ಧದ ಕೊನೆಗಾಲದಲ್ಲಿ ತಮ್ಮ ನಿಷ್ಠೆಯನ್ನು ಆದಿಲ್ ಶಾಹಿಗಳ ಪರವಾಗಿ ಬದಲಾಯಿಸಿದರು. ವೃದ್ಧನಾಗಿದ್ದರೂ ಉತ್ಸಾಹದಿಂದ ಯುದ್ಧದಲ್ಲಿ ಕಾದಾಡಿದ್ದ ಅಳಿಯ ರಾಮರಾಯನು ರಣರಂಗದಲ್ಲಿ ಉಂಟಾದ ಕೆಲ ಗೊಂದಲದಿಂದಾಗಿ ಸೆರೆ ಸಿಕ್ಕನು.ಯುದ್ಧಭೂಮಿಯಲ್ಲಿಯೇ ಆತನನ್ನು ಶಿರಚ್ಛೇದನ ಮಾಡಿದರು.ತುಂಡರಿಸಿದ ರಾಮರಾಯನ ರುಂಡವನ್ನು ಒಂದು ಭರ್ಚಿಗೆ ಸಿಕ್ಕಿಸಿಕೊಂಡು ರಣರಂಗದಲ್ಲಿ ಸುತ್ತಿಸುವ ಮೂಲಕ ಪ್ರದರ್ಶನ ಮಾಡಲಾಯಿತು.ಇದರಿಂದ ಭಯ ಭೀತಗೊಂಡ ವಿಜಯನಗರದ ಸೇನೆಯು ಕಂಗಾಲಾಗಿದ್ದಲ್ಲದೆ ಸೋತು ದಿಕ್ಕುಪಾಲಾಗಿ ಪಲಾಯನ ಮಾಡಿತು.ಅಳಿಯ ರಾಮರಾಯನ ಕೆಲವು ರಾಜಕೀಯ ನಿರ್ಧಾರಗಳು ವಿಜಯನಗರದ ಸೋಲಿಗೆ ಪ್ರಮುಖ ಕಾರಣವಾದವು. ದಕ್ಷಿಣದ ಶಾಹಿ ಸುಲ್ತಾನರು ಅಳಿಯ ರಾಮರಾಯನನ್ನು ಸೋಲಿಸಲು ಒಗ್ಗೂಡಿದರು. 27 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ರಾಮರಾಯನನ್ನು ಷಡ್ಯಂತ್ರದಿಂದ ಹಠಾತ್ ಸೆರೆ ಹಿಡಿಯಲಾಯಿತು. ಆಗಿನ ಸಂದರ್ಭದಲ್ಲಿ ಆತನ ಸಹೋದರರಾದ ತಿರುಮಲರಾಯ ಮತ್ತು ವೆಂಕಟಾದ್ರಿಯರು ಯುದ್ಧ ಭೂಮಿಯನ್ನು ತೊರೆದು ವಿಜಯನಗರಕ್ಕೆ ಹಿಂದಿರುಗಿದ್ದಲ್ಲದೆ ರಾಜಧಾನಿಯ ರಕ್ಷಣೆಗೆ ನಿಂತರು.ಪ್ರತಿರೋಧ ತೋರಿದರೂ ಪ್ರಯೋಜನವಾಗದ ಕಾರಣ ಉಳಿದ ಸಂಪತ್ತನ್ನು ಹೇರಿಕೊಂಡು ಪೆನುಗೊಂಡೆಗೆ ತೆರಳಿದರು.
ವಿಜಯನಗರವು ಯುದ್ಧಾನಂತರ ಭಗ್ನಗೊಂಡ ಹಾಳು ಹಂಪೆಯಾಯಿತು.ತನ್ನದೇ ಆದ ಶಿಲ್ಪ ಕಲೆ,ವಾಸ್ತುಶಿಲ್ಪ,ಸಾಹಿತ್ಯ ಸಂಗೀತ,ಕೃಷಿ,ಆಡಳಿತದಿಂದಾಗಿ ಎರಡು ಶತಮಾನಗಳಿಗೂ ಹೆಚ್ಚುಕಾಲ ಬೆಳಗಿದ ಎಂದೂ ಮರೆಯಲಾಗದ ಸಾಮ್ರಾಜ್ಯವೊಂದು ಕಾಲನ ತೆಕ್ಕೆಯಲ್ಲಿ ಉರುಳಿಹೋಗಿ ಇಂದು ಅವಶೇಷಗಳು ಮಾತ್ರ ಉಳಿದಿವೆ.ಇಂತಹ ರೋಚಕ ಇತಿಹಾಸದ ಸಂಗತಿಗಳ ಈ ಸ್ಥಳಗಳು ಯಾವ ರಕ್ಷಣೆಯ ಬೇಲಿ ಇಲ್ಲದೆ ಕಾಯಕಲ್ಪ ಕ್ಕೆ ಕಾದು ಕೂತಿರುವ ಮೂಕ ಸಾಕ್ಷಿಗಳಂತೆ ಇವೆ.ಪ್ರವಾಸೋದ್ಯಮ ಇಲಾಖೆಯಾದರೂ ಈ ನಿಟ್ಟಿನಲ್ಲಿ ಗಮನಿಸಲಿ .ನಮ್ಮ ಇತಿಹಾಸ ನಮ್ಮ ಹೆಮ್ಮೆಯಾಗಬೇಕು.ಈ ಭಾಗದಲ್ಲಿ ನಡೆದುಹೋದ ಚರಿತ್ರೆಯ ಪುಟಗಳ ಬಗ್ಗೆ ಇಂದಿನ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಅಗತ್ಯವಿದೆ.ನಮ್ಮ ನಾಡಿನ ಭವ್ಯ ಇತಿಹಾಸವನ್ನು ಜತನದಿಂದ ಕಾಪಾಡಿಕೊಳ್ಳಲು ಸರ್ಕಾರ ಇನ್ನಾದರೂ ಮುಂದಾಗ ಬೇಕಿದೆ.
* ಸಿದ್ದರಾಮ ಕಲ್ಮಠ ಲೇಖಕರು,ಬಳ್ಳಾರಿ.
More Stories
ಜಗದ್ಗುರು ಬಸವಲಿಂಗ ಶ್ರೀಗಳಿಗೆ 32ನೇ ವರ್ಷದ ಜನ್ಮದಿನೋತ್ಸವದ ಸಂಭ್ರಮ
ಕೋಟ್ಯಂತರ ವಿಮಾ ಹಣಕ್ಕಾಗಿ ಕೊಲೆ; ಹೊಸಪೇಟೆಯಲ್ಲಿ 6 ಆರೋಪಿಗಳ ಬಂಧನ : ಎಸ್ಪಿ ಎಸ್ ಜಾಹ್ನವಿ
ಸಮೀಕ್ಷೆಯು ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗಲಿದ್ದು, ಸಮೀಕ್ಷೆಯನ್ನು ಮುಂದೂಡುವುದಿಲ್ಲ : ಸಿಎಂ ಸಿದ್ದರಾಮಯ್ಯ