October 11, 2025

Hampi times

Kannada News Portal from Vijayanagara

ಕೌಟುಂಬಿಕ ಕಿರುಕುಳಕ್ಕೆ ಬೇಸತ್ತು ಶಿಕ್ಷಕಿ ಸೌಮ್ಯ ಆತ್ಮಹತ್ಯೆ.

https://youtu.be/NHc6OMSu0K4?si=SI_K4goOPEgwo6h2

 

ಅತ್ತೆ-ಮಾವ ಮತ್ತು ಗಂಡನ ಕಿರುಕುಳಕ್ಕೆ ಬೇಸತ್ತು ಶಿಕ್ಷಕಿ ನೇಣಿಗೆ ಶರಣು

  • ಗಂಡ, ಅತ್ತೆ, ಮಾವ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ.
  • ತಂದೆ ಬಸವರಾಜ ಅವರಿಂದ ಪೊಲೀಸರಿಗೆ ದೂರು.
  • ಆಭರಣಕ್ಕಾಗಿ ಜಗಳ, ಮಾನಸಿಕ ಹಿಂಸೆಯೇ ಸಾವಿಗೆ ಕಾರಣ.
  • ತಲೆಮರೆಸಿಕೊಂಡಿರುವ ಅತ್ತೆ, ಮಾವ ಬಂಧನಕ್ಕೆ ಆಗ್ರಹಿಸಿ ಠಾಣೆ ಮುಂದೆ ಸಂಬಂಧಿಕರ ಪ್ರತಿಭಟನೆ.

ಹಂಪಿ ಟೈಮ್ಸ್‌ ಕೊಟ್ಟೂರು:

ಗಂಡ ಮತ್ತು ಆತ್ತೆ-ಮಾವನ ನಿರಂತರ ಕಿರುಕುಳಕ್ಕೆ ಬೇಸತ್ತ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಟ್ಟೂರಿನಲ್ಲಿ ನಡೆದಿದ್ದು, ಮೃತರ ಸಂಬಂಧಿಕರು ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಮೃತಳ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಪಟ್ಟಣದ ಬಸವೇಶ್ವರ ನಗರದ ನಿವಾಸಿ, ಶಿಕ್ಷಕಿ ಟಿ. ಸೌಮ್ಯ (೩೦) ಎಂಬುವವರು ಗಂಡ, ಅತ್ತೆ ಮತ್ತು ಮಾವನ ಕಿರುಕುಳಕ್ಕೆ ಬೇಸತ್ತು ಶನಿವಾರ ರಾತ್ರಿ ಫ್ಯಾನ್‌ಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ತಂದೆ ಟಿ. ಬಸವರಾಜ ಅವರು ನೀಡಿದ ದೂರಿನಲ್ಲಿ ಮಗಳ ಸಾವಿಗೆ ಗಂಡ ಕೆ.ಜೆ. ಸಂತೋಷ್ ಕುಮಾರ್, ಮಾವ ಕೆ. ಜಯಣ್ಣ, ಮತ್ತು ಅತ್ತೆ ಉಷಾ ಅವರೇ ಕಾರಣ ಎಂದು ಆರೋಪಿಸಿದ್ದಾರೆ.

ದೂರಿನ ಪ್ರಕಾರ, ಮೂರು ತಿಂಗಳ ಹಿಂದೆ ಮನೆಯ ಕೆಲಸದ ವಿಷಯವಾಗಿ ಸೌಮ್ಯ ಅವರ ಮೇಲೆ ಅವರ ಗಂಡ, ಅತ್ತೆ ಮತ್ತು ಮಾವ ದೈಹಿಕ ಹಲ್ಲೆ ಮಾಡಿದ್ದರು. ಅಲ್ಲದೆ, ಸೆಪ್ಟೆಂಬರ್ ೧೩ರಂದು “ನಿನ್ನ ಕೊರಳಲ್ಲಿರುವ ಮಂಗಳಸೂತ್ರದ ಬಂಗಾರದ ಚೈನ್ ಅನ್ನು ನಾವು ಮಾಡಿಸಿ ಹಾಕಿಸಿದ್ದು, ಅದನ್ನು ನಮಗೆ ಕೊಡು” ಎಂದು ಜಗಳ ಮಾಡಿದ್ದರಿಂದ ಮಾನಸಿಕವಾಗಿ ನೊಂದಿದ್ದ ಸೌಮ್ಯ, ಅಂದೇ ಸಂಜೆ ಆ ಸರವನ್ನು ಬಿಚ್ಚಿ ಅವರಿಗೆ ಕೊಟ್ಟು, ತನ್ನ ಕೊಠಡಿಗೆ ತೆರಳಿ ವೇಲ್‌ನಿಂದ ನೇಣು ಹಾಕಿಕೊಂಡಿದ್ದಾರೆ.

ಸೌಮ್ಯ ಸಾವಿಗೆ ಕಾರಣರಾದ ಗಂಡ ಕೆ.ಜೆ. ಸಂತೋಷ್, ಮಾವ ಜಯಣ್ಣ, ಅತ್ತೆ ಉಷಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಕೆ.ಜೆ. ಸಂತೋಷ್ ಅವರನ್ನು ಬಂಧಿಸಿದ್ದಾರೆ. ಆದರೆ, ಜಯಣ್ಣ ಮತ್ತು ಉಷಾ ನಾಪತ್ತೆಯಾಗಿದ್ದಾರೆ. ಇಬ್ಬರನ್ನು ಬಂಧಿಸುವವರೆಗೂ ಠಾಣೆ ಬಿಟ್ಟು ಕದಲುವುದಿಲ್ಲ ಎಂದು ಸೌಮ್ಯ ಅವರ ತವರೂರಾದ ಹಿರೇಹೆಗಡಾಳ ಗ್ರಾಮದಿಂದ ಬಂದ ನೂರಾರು ಸಂಬಂಧಿಕರು ಪೊಲೀಸ್ ಠಾಣೆ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಪೊಲೀಸರು ನಾಪತ್ತೆಯಾಗಿರುವ ಆರೋಪಿಗಳನ್ನು ಬಂಧಿಸದಿದ್ದರೆ, ಶವವನ್ನು ಗಂಡನ ಮನೆಯಲ್ಲಿಯೇ ಸಮಾಧಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

 

ಜಾಹೀರಾತು
error: Content is protected !!