October 11, 2025

Hampi times

Kannada News Portal from Vijayanagara

ಕಳಚಿ ಬಿತ್ತು ರಾಷ್ಟ್ರಧ್ವಜ, ಈಬಾರಿ ಬಜೆಟ್‌ನಲ್ಲಿ ವಿಜಯನಗರ ಜಿಲ್ಲೆಗೆ ಮೆಡಿಕಲ್‌ ಕಾಲೇಜ್ : ಸಚಿವ ಬಿ.ಜೆಡ್.ಜಮೀರ್‌ ಅಹ್ಮದ್‌ ಖಾನ್‌ ಭರವಸೆ

https://youtu.be/NHc6OMSu0K4?si=SI_K4goOPEgwo6h2

 

76ನೇ ಗಣರಾಜ್ಯೋತ್ಸವ
‌ಸಂವಿಧಾನದಿಂದ ಸಮಾನತೆ ಸಾಧ್ಯವಾಗಿದೆ  | 405 ಅಡಿ ಏರದೇ ಕಳಚಿ ನೆಲಕ್ಕುರುಳಿದ ರಾಷ್ಟ್ರಧ್ವಜ | ನಿರ್ವಹಣೆ  ಹೊಣೆಯನ್ನೆ ಮರೆತ ಆಡಳಿತ |  ಅಸಮಾಧಾನ ವ್ಯಕ್ತಪಡಿಸಿದ ದೇಶಪ್ರೇಮಿಗಳು  | ಶಾಸಕ ಎಚ್.ಆರ್.ಗವಿಯಪ್ಪ ಗೈರು

ಹಂಪಿ ಟೈಮ್ಸ್ ಹೊಸಪೇಟೆ

ವಿಜಯನಗರ ಹೊಸ ಜಿಲ್ಲೆಯಾಗಿದ್ದರಿಂದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕೆಂದು ಸಿಎಂ ಸಿದ್ದರಾಮಯ್ಯನವರ ಬಳಿ ಕೇಳಿದ್ದೇನೆ. ಈ ಬಾರಿಯ ಬಜೆಟ್‌ನಲ್ಲಿ  ವಿಜಯನಗರ ಜಿಲ್ಲೆಗೆ ಮೆಡಿಕಲ್‌ ಕಾಲೇಜ್‌ ಘೋಷಣೆಯಾಗುವಂತೆ ಕ್ರಮವಹಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.

ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 26 ರಂದು ನಡೆದ 76ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಜಯನಗರ ಜಿಲ್ಲೆಗೆ ಗಣಿಗಾರಿಕೆ ಡಿಎಂಎಪ್‌ ಅನುದಾನ ಶೇ.28ರಷ್ಟು ಮಾತ್ರ ಇದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚನ ಅನುದಾನ ಅಗತ್ಯವಿದೆ. ಈ ಭಾಗದ ಬಹುದಿನಗಳ ರೈತರ ಬೇಡಿಕೆಯಾದ ಸಕ್ಕರೆ ಕಾರ್ಖಾನೆಗೆ ಶಾಸಕ ಗವಿಯಪ್ಪನವರು ಸ್ಥಳ ನೋಡಿದ್ದಾರೆ. ಪರಿಶೀಲಿಸಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೂ ಕ್ರಮವಹಿಸಲಾಗುವುದು. ಕಾಂಗ್ರೆಸ್‌ ಸರ್ಕಾರ ಕ್ರೀಡಾಪಟುಗಳಿಗೆ ವಿಶೇಷ ಪ್ರೋತ್ಸಾಹ ನೀಡಿದ್ದಾರೆ. ವಿಜಯನಗರ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಅಗತ್ಯ ಅನುದಾನವನ್ನೂ ನೀಡಲಾಗುತ್ತಿದೆ ಎಂದರು.

ದೇಶದಲ್ಲಿ ಸಂವಿಧಾನ ರಚನೆಯಿಂದಾಗಿ ಸಮಾನತೆ ನಿರ್ಮಾಣ ಸಾಧ್ಯವಾಗಿದೆ. ನಾವೆಲ್ಲ ಸಂವಿಧಾನದ ಆಶಯ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನದ ಮೂಲಕ ಡಾ; ಬಿ.ಆರ್.ಅಂಬೇಡ್ಕರ್‌ರವರ ಕನಸು ನನಸು ಮಾಡಬೇಕಾಗಿದೆ.  ಸಂವಿಧಾನದ ಮೂಲ ಆಶಯ ಸಾಮಾಜಿಕ ನ್ಯಾಯವಾಗಿದೆ. ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ನಮ್ಮ ದೇಶ ಪ್ರಜಾತಂತ್ರ ಗಣತಂತ್ರ ಪ್ರಯೋಗವನ್ನು ಯಶ್ವಸಿಯಾಗಿ ನಡೆಸಿಕೊಂಡು ಬಂದಿದೆ. ಇದಕ್ಕಾಗಿ ಭಾರತದ ಸಂವಿಧಾನ ಶಿಲ್ಪಿ ಮಹಾನ್ ಮಾನವತವಾದಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸಲೇಬೇಕು ಎಂದರು.

ದೇಶದ ಇತಿಹಾಸದಲ್ಲೇ ಜನವರಿ 26 ಅತ್ಯಂತ ಮಹತ್ವದ ದಿನವಾಗಿದ್ದು, ದೇಶಕ್ಕೆ ಪ್ರಜಾಪ್ರಭುತ್ವದ ಆಡಳಿತ ಪದ್ದತಿಯನ್ನು ಅಳವಡಿಸಿಕೊಂಡ ಈ ಸಂಭ್ರಮದ ಐತಿಹಾಸಿಕ ದಿನದಂದು ಗಣತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲಾಗಿದೆ. ರಾಜ್ಯ ಸರ್ಕಾರದಿಂದ ಬಡವರಿಗೆ, ಮಹಿಳೆಯರಿಗೆ, ಯುವಕರ ಹಿತದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಈಗಾಗಲೇ ಯಶಸ್ವಿಯಾಗಿ ಯೋಜನೆಗಳು ಅನುಷ್ಟಾನವಾಗುತ್ತಿದ್ದು ರಾಜ್ಯ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡಿ ಎಲ್ಲಾ ಜಿಲ್ಲೆಗಳಿಗೆ ಹೆಚ್ಚಿನ ಅನುದಾನಗಳನ್ನು ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಸಹಾಯಕ ಆಯುಕ್ತ ವಿವೇಕಾನಂದ, ತಹಸೀಲ್ದಾರ ಎಂ.ಶೃತಿ ಇನ್ನಿತರರು ಉಪಸ್ಥಿತರಿದ್ದರು. ಶಾಸಕ ಎಚ್.ಆರ್.ಗವಿಯಪ್ಪ ಗೈರಾಗಿದ್ದರು.
ಪೊಲೀಸ್ ಇಲಾಖೆ, ಗೃಹಕ ರಕ್ಷಕದಳ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ಪೌರಕಾರ್ಮಿಕರ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ತಹಶೀಲ್ದಾರ್ ಕಚೇರಿಯ ಭೂಮಿ ಕೇಂದ್ರದ ಅತ್ಯುನ್ನತ ಸೇವೆ ಗುರುತಿಸಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು. ಬಳಿಕ ನಗರದ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

405 ಅಡಿ ಏರದೇ ಕಳಚಿ ನೆಲಕ್ಕುರುಳಿದ ರಾಷ್ಟ್ರಧ್ವಜ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು  ವಿವಿಧ ತುಕಡಿಗಳಿಂದ ಧ್ವಜವಂದನೆ ಸ್ವೀಕರಿಸುವ ಸಂದರ್ಭದಲ್ಲೇ ದೇಶದ ಅತ್ಯುನ್ಯತ 405 ಅಡಿ ಎತ್ತರದ ಧ್ವಜಸ್ತಂಭದ ತುದಿ ಏರಬೇಕಿದ್ದ ಧ್ವಜ ತಂತಿ ತುಂಡಾಗಿ ನೆಲಕ್ಕೆ ಕಳಚಿಬಿದ್ದಿತು. ಧ್ವಜಸ್ತಂಭದ ಸುತ್ತಮುತ್ತ ಜನರು ಇಲ್ಲದ್ದರಿಂದ ಪ್ರಾಣಾಪಯಾದಿಂದ ಪಾರಾದರು. ದೇಶಪ್ರೇಮಿಗಳು ಇಂತಹ ಅವಘಡ ನಡೆಯಬಾರದಿತ್ತು. ಸಂಬಂಧಿಸಿದವರ ನಿರ್ವಹಣೆ ನಿರ್ಲಕ್ಷ್ಯವೇ ಇದಕ್ಕೆ ಮುಖ್ಯ ಕಾರಣ ವೆಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ ಘಟನೆ ಕುರಿತು ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮವಹಿಸಲಾಗುವುದು ಎಂದರು.


ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗಣರಾಜ್ಯೋತ್ಸವ
ಹೊಸಪೇಟೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ್ ಅವರು ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ಈ ವೇಳೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಮ್ ಷಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗಣರಾಜ್ಯೋತ್ಸವ ನಿಮಿತ್ತ ಜಿಲ್ಲಾಧಿಕಾರಿಗಳು ಹೊಸಪೇಟೆಯ ಜೋಳದರಾಶಿಯ ಗುಡ್ಡದ ಮೇಲೆ ಇಲಾಖೆಯ ಅಧಿಕಾರಿಗಳೊಂದಿಗೆ ಧ್ವಜಾರೋಹಣ ನೆರವೇರಿಸಿದರು. ಅದೇ ರೀತಿ ಜಿಲ್ಲಾಧಿಕಾರಿಗಳ ಗೃಹ ಕಚೇರಿಯಲ್ಲಿ ಸಹ ಗಣರಾಜ್ಯೋತ್ಸವ ಆಚರಿಸಲಾಯಿತು.

ತಹಶೀಲ್ದಾರ್ ಕಚೇರಿಯಲ್ಲಿ ಗಣರಾಜ್ಯೋತ್ಸವ
ಹೊಸಪೇಟೆಯ ತಾಲೂಕು ಆಡಳಿತದಿಂದ ತಹಶೀಲ್ದಾರ ಕಚೇರಿಯಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ಆಚರಿಸಲಾಯಿತು. ತಹಶೀಲ್ದಾರರಾದ ಎಂ.ಶೃತಿಯವರು ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

ಜಾಹೀರಾತು
error: Content is protected !!