April 11, 2026

Hampi times

Kannada News Portal from Vijayanagara

ರೈತ ಪುತ್ರಿಯರು ರಾಜ್ಯಕ್ಕೆ ಟಾಪರ್: ಪಿಯು ಕಲಾ ವಿಭಾಗದ ಇಬ್ಬರು ವಿದ್ಯಾರ್ಥಿನಿಯರಿಗೆ 598 ಅಂಕ

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್‌ ಕೊಟ್ಟೂರು:

ರಾಜ್ಯ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದು ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸಾಮಾನ್ಯ ರೈತ ಕುಟುಂಬದಿಂದ ಬಂದ ಈ ಹೆಣ್ಣುಮಕ್ಕಳು ಅಸಾಧಾರಣ ಪ್ರತಿಭೆ ಮೆರೆಯುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ.

ಸಂಗೀತ ಮತ್ತು ಅರ್ಚನ ಡಿ.ಎಂ. ರಾಜ್ಯಕ್ಕೆ  ಪ್ರಥಮ ಸ್ಥಾನ.

ಕಡು ಬಡತನ ಹಾಗೂ ಗ್ರಾಮೀಣ ಹಿನ್ನೆಲೆ ಸಾಧನೆಗೆ ಎಂದೂ ಅಡ್ಡಿಯಾಗದು ಎಂಬುದನ್ನು ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಸಾಬೀತುಪಡಿಸಿದ್ದಾರೆ. ಈ ಕಾಲೇಜಿನ ವಿದ್ಯಾರ್ಥಿನಿ ಸಂಗೀತ 600ಕ್ಕೆ 598 ಅಂಕ ಗಳಿಸುವ ಮೂಲಕ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಕೊಪ್ಪಳ ಜಿಲ್ಲೆಯ ಮಂಗಳೂರು ಗ್ರಾಮದ ರೈತ ಕುಟುಂಬದವರಾದ ಇವರು, ಎಸ್ಸೆಸ್ಸೆಲ್ಸಿಯಲ್ಲಿ 502 ಅಂಕ ಗಳಿಸಿದ್ದರು. ಅವರ ತಂದೆ ಶೇಖರಗೌಡ ಪೊಲೀಸ್ ಪಾಟೀಲ್ ರೈತರಾಗಿದ್ದು, ತಾಯಿ ಶ್ವೇತಾ ಅಂಗನವಾಡಿ ಶಿಕ್ಷಕಿಯಾಗಿದ್ದಾರೆ.

 

ಕಲಾ ವಿಭಾಗದಲ್ಲಿ ಕೊಟ್ಟೂರಿನ ಇಂದು ಕಾಲೇಜಿನ ವಿದ್ಯಾರ್ಥಿನಿಯರ ಹವಾ.

ಅದೇ ರೀತಿ, ಇದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ಅರ್ಚನ ಡಿ.ಎಂ. ಕೂಡ 600ಕ್ಕೆ 598 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಹರಪನಹಳ್ಳಿ ತಾಲೂಕಿನ ಬಳಗನೂರು ಗ್ರಾಮದವರಾದ ಇವರ ತಂದೆ ಹನುಮಂತಪ್ಪ ಅವರು ರೈತರಾಗಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ. 78.24ರಷ್ಟು ಅಂಕ ಪಡೆದಿದ್ದ ಅರ್ಚನ, ಪಿಯುಸಿಯಲ್ಲಿ ಪರಿಶ್ರಮ ಹಾಕಿ ಇಂದು ರಾಜ್ಯಕ್ಕೆ ಮಾದರಿಯಾಗಿದ್ದಾರೆ.

ಕಲಾ ವಿಭಾಗದಲ್ಲಿ ಇಂದು ಕಾಲೇಜಿಗೆ ಗರಿ |  ರೈತ ಪುತ್ರಿಯರ ಅಸಾಧಾರಣ ಸಾಧನೆ

ಇಂದು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಕ್ಕೆ  ಇಬ್ಬರು ಪ್ರಥಮ,  ಇಬ್ಬರು 5ನೇ ಸ್ಥಾನ,  ಐವರು 6ನೇ ಸ್ಥಾನ,  ಒಬ್ಬರು ಏಳನೇ ಸ್ಥಾನ,  ಮೂವರು 8ನೇ ಸ್ಥಾನ, ಏಳು ವಿದ್ಯಾರ್ಥಿಗಳು 9ನೇ ಸ್ಥಾನ ಹಾಗೂ  ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ 10ನೇ ಸ್ಥಾನ ತರುವ ಮೂಲಕ ಟಾಪ್‌ ಟೆನ್‌ ಸ್ಥಾನದಲ್ಲಿ 23 ವಿದ್ಯಾರ್ಥಿಗಳಿದ್ದು ಇಂದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ರೈತ ಮಕ್ಕಳ ಈ ಅಮೋಘ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕ ವೃಂದ ಹಾಗೂ ಜಿಲ್ಲೆಯ ಜನರು ಹರ್ಷ ವ್ಯಕ್ತಪಡಿಸಿ, ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Please follow and like us:

 

 

 

 

 

Translate »
[t4b-ticker]
error: Content is protected !!