https://youtu.be/NHc6OMSu0K4?si=SI_K4goOPEgwo6h2

ಮೊಮ್ಮಗನಿಗೊಂದು ಪತ್ರ ಮುದ್ದು ಮೊಮ್ಮಗನೇ.
ಹೇಗಿದ್ದೀಯಾ?. ಇನ್ನೇನು ಪದವಿ ಮುಗಿಸುವ ನೀನು ಜೀವನದ ಬಣ್ಣಬಣ್ಣದ ಚಿತ್ತಾರಗಳ ಸವಿಯನ್ನು ಸವಿಯುತ್ತಿರುವೆ. ಜವಾಬ್ದಾರಿಗಳ ಹಂಗಿಲ್ಲದ ಯಾವುದೇ ಕಿರಿಕಿರಿ ಇಲ್ಲದ ಯೌವನದ ಈ ದಿನಗಳು ಮತ್ತೆ ಬರುವುದಿಲ್ಲ… ಬೊಗಸೆಯಲ್ಲಿನ ನೀರಿನಂತೆ ಸೋರಿ ಹೋಗುವ ನಿನ್ನ ಯೌವ್ವನದ ದಿನಗಳನ್ನು ಸಾಧ್ಯವಾದಷ್ಟು ಸುಂದರವಾಗಿ ಕಾಯ್ದಿಟ್ಟುಕೊಳ್ಳುವ ಜವಾಬ್ದಾರಿ ನಿನ್ನದು. ನಿನ್ನ ಮುಂದಿನ ಬದುಕಿಗೆ ಅಡಿಪಾಯ ಹಾಕುವ ಈ ಯವ್ವನದ ದಿನಗಳು ನಿನ್ನ ವೃದ್ಯಾಪ್ಯದಲ್ಲಿ ಕೆಟ್ಟ ಕನಸಿನಂತೆ ಭಾಸವಾಗಬಾರದು ಎಂಬ ಕಳಕಳಿಯಿಂದ ನಿನಗೆ ಈ ಪತ್ರ ಬರೆಯುತ್ತಿದ್ದೇನೆ.
ಹೆಣ್ಣು ಮಕ್ಕಳ ಹಿಂದೆ ಬೀಳಬೇಡ…. ನಿನ್ನ ಗುರಿಯನ್ನು ಬೆನ್ನಟ್ಟು….. ನಿನ್ನ ಶೈಕ್ಷಣಿಕ ಅರ್ಹತೆಯನ್ನು ಉನ್ನತಗೊಳಿಸು. ಒಳ್ಳೆಯ ಉದ್ಯೋಗವನ್ನು ಸಂಪಾದಿಸಲು, ನಿನ್ನ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವತ್ತ ಲಕ್ಷ ಕೊಡು… ಉತ್ತಮ ಆರ್ಥಿಕ ಪರಿಸ್ಥಿತಿ ನಿನ್ನದಾದಾಗ ಅದರಲ್ಲಿ ತುಸು ಭಾಗ ಅವಶ್ಯಕತೆ ಇರುವವರಿಗೆ ಕೊಡುವಲ್ಲಿ ಹಿಂಜರಿಯಬೇಡ… ಇದು ನಿನ್ನ ಸಾಮಾಜಿಕ ಜವಾಬ್ದಾರಿ.
ನಿನಗೆ ಬೇಕಾದ ಪುಸ್ತಕಗಳನ್ನು ಓದು, ಅರ್ಥಪೂರ್ಣ ಗೋಷ್ಠಿಗಳಲ್ಲಿ ಹಾಜರಾಗಿ ನಿನ್ನ ಜ್ಞಾನವನ್ನು ಹೆಚ್ಚಿಸಿಕೋ ಆದರೆ ಜೊತೆ ಜೊತೆಗೆ ಆತ್ಮಾಭಿಮಾನವನ್ನು ಕೂಡ…. ನಿನ್ನ ಆತ್ಮಾಭಿಮಾನ ನೀನು ತಪ್ಪು ಮಾಡದಂತೆ ತಡೆದು ಒಳ್ಳೆಯ ಕೆಲಸಗಳತ್ತ ದಾರಿ ತೋರಿ ನೀನು ಸಮಾಜದಲ್ಲಿ ತಲೆ ಎತ್ತಿ ನಡೆಯಲು ಸಹಾಯ ಮಾಡುತ್ತದೆ.
ನಿನ್ನ ಒಳ್ಳೆಯ ಓದು ಮತ್ತು ಜಾಣ್ಮೆಗಳು ನಿನಗೆ ಉತ್ತಮ ಕೆಲಸವನ್ನು ಸಂಪಾದಿಸಲು ಸಹಾಯ ಮಾಡಿದರೆ ನಿನ್ನ ಬದ್ಧತೆ ಮತ್ತು ನೈಪುಣ್ಯತೆಗಳು ಆ ಕೆಲಸದಲ್ಲಿ ಔನ್ಯತ್ಯಕ್ಕೇರಲು ನಿನಗೆ ಸಹಾಯವಾಗುತ್ತದೆ. ಚೆನ್ನಾಗಿ ದುಡಿದು ಸಂಪಾದಿಸು ಜೊತೆಗೆ ಸ್ವಲ್ಪ ಉಳಿತಾಯವನ್ನು ಕೂಡ ಮಾಡು. ಸಾಲ ಮಾಡಿ ಐಷಾರಾಮಿ ವಸ್ತುಗಳನ್ನು ಖರೀದಿಸುವ ಆಸೆ ಬೇಡ. ವಸ್ತುಗಳ, ವ್ಯಕ್ತಿಗಳ ಮೌಲ್ಯವನ್ನು ಅರಿ…. ಐಷಾರಾಮಿ ವಸ್ತುಗಳ ಮೌಲ್ಯವನ್ನಲ್ಲ. ನಿಜವಾದ ಐಷಾರಾಮ ಇರುವುದು ನಿನ್ನಮ್ಮನ ತೊಡೆಯ ಮೇಲೆ ಮಲಗಿದಾಗ ನಿನ್ನಲ್ಲಿ ಮೂಡುವ ಸಂತೃಪ್ತಿಯಲ್ಲಿ ಅಡಗಿದೆ. ಅಪ್ಪ ಪ್ರೀತಿಯಿಂದ ತಂದುಕೊಟ್ಟ ವಸ್ತುಗಳಲ್ಲಿ, ಒಡಹುಟ್ಟಿದವರ ಒಡನಾಟದಲ್ಲಿ, ಸ್ನೇಹಿತರ ವಿಶ್ವಾಸದಲ್ಲಿ ಇದೆ ಎಂಬುದು ನೆನಪಿರಲಿ.
ಎಲ್ಲರಿಗಿಂತ ಮುಂದೆ ಇರಬೇಕೆಂದು ಬಯಸುವ ವ್ಯಕ್ತಿ ನೀನಾದರೆ ಸಮಯವನ್ನು ವೃಥಾ ಹಾಳು ಮಾಡಬೇಡ. ನಿನ್ನ ಶಕ್ತಿ ಮತ್ತು ಜಾಣ್ಮೆಯನ್ನು ಹೆಚ್ಚಿಸಿಕೊಳ್ಳಲು ನಿನ್ನ ಸಮಯ ಮೀಸಲಾಗಿರಲಿ. ಯಾವ ಜಾಣ್ಮೆಗಳು ಎಂದು ನೀನು ಕೇಳಬಹುದು… ನಿನಗೆ ದುಡಿಯುವ, ಹಣ ಗಳಿಸುವ, ಖರೀದಿಸುವ, ಮಾರುವ, ಮಾತನಾಡಲು ಕಲಿಸುವ, ಬೇರೊಂದು ಭಾಷೆಯನ್ನು ಕಲಿಯುವ, ಹೊಸ ವಿಷಯಗಳನ್ನು ಅರಿಯುವ ಔದ್ಯೋಗಿಕ ಕೌಶಲ್ಯಗಳನ್ನು ನಿನ್ನದಾಗಿಸಿಕೊಳ್ಳುವಲ್ಲಿ ನಿನ್ನ ಸಮಯದ ವಿನಿಯೋಗವಾಗಲಿ
ಮುಂದೆ ನೀನು ಮದುವೆಯಾದರೆ ಮನೆ ಮತ್ತು ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುವ ವ್ಯಕ್ತಿ ನೀನಾಗು. ನಿನ್ನ ಪತ್ನಿಗೆ ಒಳ್ಳೆಯ ಸಂಗಾತಿಯಾಗು. ನಿನ್ನ ಹೆತ್ತವರು ಪತ್ನಿ ಮತ್ತು ಮಕ್ಕಳ ಜವಾಬ್ದಾರಿಯಿಂದ ನೀನು ತಪ್ಪಿಸಿಕೊಳ್ಳಲಾರೆ. ಇಂತಹ ಸಮಯದಲ್ಲಿ ಅಪ್ಪನಾಗಿ ನೀನು ಅವರ ಅವಶ್ಯಕತೆಗಳನ್ನು ಪೂರೈಸುವ, ಅವರ ರಕ್ಷಕನಾಗಿ ಮಾರ್ಗದರ್ಶಕನಾಗಿ ನಿನ್ನ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸು. ಒಳ್ಳೆಯ ತಂದೆಯಾಗಿ ಪ್ರೇರಕನಾಗಿ ನಿನ್ನ ಮಕ್ಕಳ ಬೆನ್ನ ಹಿಂದೆ ಸದಾ ನೀನಿರುವೆ ಎಂಬ ಭರವಸೆ ನನಗಿದೆ.
ನಿನ್ನ ಭವಿಷ್ಯ ಬೇರೆ ದೇಶಗಳಲ್ಲಿ ಇಲ್ಲ… ಅದಿರುವುದು ನಿನ್ನ ಕೈಗಳಲ್ಲಿ. ಆರ್ಥಿಕ ತೊಂದರೆಗಳಿಗೆ ಅಂಜದೆ ಸವಾಲುಗಳಿಗೆ ಹೆದರದೆ ನಿನ್ನ ವ್ಯಾವಹಾರಿಕ ಜಾಣ್ಮೆಯನ್ನು ಹೆಚ್ಚಿಸಿಕೊಂಡು ಉತ್ತಮ ಅವಕಾಶಗಳನ್ನು ಗಳಿಸಿ ಬದುಕಿನಲ್ಲಿ ಮುಂದೆ ಬಾ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು. ನೀನು ನಂಬಿದ್ದೆಲ್ಲವೂ ನಿಜವಾಗಿರಬೇಕೆಂದಿಲ್ಲ… ಆದ್ದರಿಂದ ಯಾವುದೇ ಕೆಲಸ ಮಾಡುವ ಮುನ್ನ ಎರಡು ಬಾರಿ ಯೋಚಿಸು ನಂತರ ನಿರ್ಧರಿಸು. ಒಮ್ಮೆ ನಿರ್ಧರಿಸಿದ ನಂತರ ಸೋಲೇ ಇರಲಿ ಗೆಲುವೇ ಬರಲಿ.. ಯಾವುದಕ್ಕೂ ಹಿಂಜರಿಯದೆ ಮುಂದುವರೆ.

ನಿನ್ನ ಉದ್ಯೋಗ ನಿಮಿತ್ತ ನೀನು ಬೇರೆ ಊರಿಗೆ ಹೋಗುವ ಪ್ರಸಂಗ ಬಂದಾಗ ಬೇಜವಾಬ್ದಾರಿಯಿಂದ ವರ್ತಿಸಬೇಡ. ಬದುಕಿನ ಸಂತೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಳ್ಳುವುದು ಬೇಡ.
ತಮ್ಮ ಹೈಸ್ಕೂಲು ಶಿಕ್ಷಣ ಮುಗಿದೊಡನೆ ತಾವು ಕಲಿಯುವುದು ಮುಗಿತು ಎಂದು ಕೆಲ ಜನ ಭಾವಿಸಿದರೆ ಮತ್ತೆ ಕೆಲವರು ಕಾಲೇಜು ಯೂನಿವರ್ಸಿಟಿಗಳಲ್ಲಿ ಓದು ಮುಗಿಸಿದಾಗ ತಮ್ಮ ಶೈಕ್ಷಣಿಕ ಜೀವನದ ಅಂತ್ಯವಾಯಿತು ಎಂದುಕೊಳ್ಳುತ್ತಾರೆ. ಕಲಿಕೆ ಒಂದು ನಿರಂತರ ಪ್ರಕ್ರಿಯೆ. ನಿಜವಾದ ಯಶಸ್ವಿ ಮನುಷ್ಯ ಜೀವಿತದ ಕೊನೆಯವರೆಗೂ ಕಲಿಯುತ್ತಲೇ ಸಾಗುತ್ತಾನೆ ಎಂಬುದು ಸರ್ವ ವೇದ್ಯ ಸಂಗತಿ. ಆದ್ದರಿಂದ ನಿನ್ನ ಉಳಿದ ಸಮಯವನ್ನು ತರಬೇತಿ, ಪುಸ್ತಕಗಳು ಸಮಾಲೋಚನೆಗಳಲ್ಲಿ ಸಮರ್ಪಕವಾಗಿ ಬಳಸಿಕೊಂಡು ಬದುಕಿನ ಹೊಸ ಹೊಸ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳಿ
ಹೆಣ್ಣು ಮಕ್ಕಳ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೋ. ಹೆಣ್ಣು ಮಕ್ಕಳಿಗೆ ತಮ್ಮ ಆಸೆ ಆಕಾಂಕ್ಷೆಗಳನ್ನು ಅರಿತುಕೊಳ್ಳುವ, ಪ್ರೀತಿ ಪ್ರೇಮದ ಭಾವಗಳನ್ನು ತೋರುವ, ಜವಾಬ್ದಾರಿಗಳನ್ನು ಸಮನಾಗಿ ಹಂಚಿಕೊಳ್ಳುವ ಆತ್ಮ ಸಂಗಾತಿಯ ಅವಶ್ಯಕತೆ ಇದೆಯೇ ಹೊರತು ತಮ್ಮನ್ನು ಮನೆಯಲ್ಲಿ ಕೊಳೆ ಹಾಕಿ ನಾನು ತಂದು ಹಾಕಿದ್ದನ್ನು ನೀನು ಮಾಡಿ ಹಾಕು ಎಂಬಂತೆ ದರ್ಪ ತೋರುವ ಗಂಡ ಬೇಕಾಗಿಲ್ಲ. ಪುರುಷಾಹಂಕಾರವನ್ನು ಸಹಿಸುವ ಹೆಣ್ಣು ಮಕ್ಕಳು ಮಾನಸಿಕವಾಗಿ ಮುರಿದು ಹೋಗಿರುತ್ತಾರೆ, ಆದ್ದರಿಂದ ನೀನು ಮದುವೆಯಾಗುವ ಹೆಣ್ಣು ಮಗುವಿನ ಕುರಿತು ಬರೀ ಪ್ರೀತಿ, ಪ್ರೇಮದ ಭಾವನೆ ಬೇಡ ಜೊತೆಗೆ ಕಾಳಜಿ, ಅಕ್ಕರೆ, ಆಕೆಯ ತೊಂದರೆಗಳ ಕುರಿತ ಅರಿವು ಹೊಂದುವುದನ್ನು ಕಲಿ. ದೈಹಿಕ ಸೌಂದರ್ಯಕ್ಕಿಂತ ಮಾನಸಿಕ ಸೌಂದರ್ಯ, ಸ್ಥಿರತೆಯನ್ನು ಹೊಂದಿರುವ ಹೆಣ್ಣು ಮಗು ನಿನಗೆ ಸಂಗಾತಿಯಾಗಿ ಬರಲಿ.
ಬಹಳಷ್ಟು ಬಾರಿ ನಿನ್ನ ತಾಳ್ಮೆಯನ್ನು ನಿನ್ನ ವಿಫಲತೆ, ಸೋಲು ಎಂಬಂತೆ ಬಿಂಬಿಸಲಾಗುತ್ತದೆ. ಆದರೆ ನಿಜವಾದ ಸಂಪತ್ತು ಮತ್ತು ಯಶಸ್ಸಿಗೆ ಅತ್ಯಂತ ಅವಶ್ಯಕವಾಗಿರುವುದು ತಾಳ್ಮೆಯೇ ಎಂಬುದನ್ನು ಮರೆಯಬೇಡ. ರೋಮ್ ಸಾಮ್ರಾಜ್ಯವು ಒಂದು ದಿನದಲ್ಲಿ ಕಟ್ಟಲ್ಪಟ್ಟಿಲ್ಲ ಎಂಬ ಮಾತು ಗೊತ್ತಿದೆಯಲ್ಲವೇ. ಎಲ್ಲರೂ ಬದುಕಿನ ನಾಗಾಲೋಟದಲ್ಲಿ ಓಡುತ್ತಿದ್ದಾರೆ ಎಂದು ನೀನು ಓಡಬೇಡ. ನಿನಗೂ ಓಡಬೇಕೆಂಬ ಆಕಾಂಕ್ಷೆ ಬಲವಾಗಿದ್ದರೆ ಮಾತ್ರ ನಿನ್ನ ಓಟವನ್ನು ಮುಂದುವರೆಸು.
ನಿನ್ನ ಯೌವ್ವನದ ದಿನಗಳು ತುಂಬಾ ಚೆನ್ನಾಗಿರುತ್ತವೆ ಎಂಬುದು ನನಗೆ ಗೊತ್ತು…. ಆದರೆ ಮುಂದಿನ ಬದುಕು ಅದಕ್ಕಿಂತಲೂ ಚೆನ್ನಾಗಿರಬೇಕು ಎಂಬ ಕಾಳಜಿಯಿಂದ ನಿನಗೆ ಈ ಪತ್ರ ಬರೆದದ್ದು.
ಇದೇನಪ್ಪಾ ಅಜ್ಜನ ಗೋಳು ಎಂದು ಬೇಸರ ಪಟ್ಟುಕೊಳ್ಳಬೇಡ. ನಾನು ನದಿಯಲ್ಲಿ ಸಾಕಷ್ಟು ನೀರು ಹರಿದಿರುವುದನ್ನು ನೋಡಿದ್ದೇನೆ.ನಿನ್ನಂತೆ ಬಾಲ್ಯ ಯೌವ್ವನಗಳನ್ನು ಅನುಭವಿಸಿದ್ದೇನೆ. ಬದುಕಿನಲ್ಲಿ ಎಲ್ಲವನ್ನು ಕಲಿಯಲು ನೀನೇ ತಪ್ಪು ಮಾಡಬೇಕೆಂದಿಲ್ಲ… ಬೇರೆಯವರು ಮಾಡುವ ತಪ್ಪುಗಳಿಂದ ಪಾಠ ಕಲಿತು ಬದುಕಿನ ಸುಧಾರಣೆಗೆ ಒತ್ತು ಕೊಡಬೇಕಾಗಿರುವ ಕಾಲವಿದು. ನನ್ನ ಬುದ್ಧಿ ಮಾತುಗಳು ನಿನಗೆ ಆಪಥ್ಯವೆನಿಸಿದರೂ ಮುಂದೆ ಈ ಮಾತುಗಳ ಹಿಂದಿರುವ ಮರ್ಮದ ಅರಿವು ನಿನಗಾಗುತ್ತದೆ.ಬದುಕಿನ ಕವಲು ದಾರಿಯಲ್ಲಿ ನಡೆಯುತ್ತಿರುವ ನಿನಗೆ ಸದಾ ಒಳ್ಳೆಯದನ್ನೇ ಬಯಸುವ,
ನಿನ್ನ ಪ್ರೀತಿಯ ಅಜ್ಜ

ಲೇಖಕರು: ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ್.





More Stories
ಒನಕೆ ಓಬವ್ವ.. ಅಸಾಮಾನ್ಯ ಸಾಹಸಿ ಮಹಿಳೆ
ಗುಡೇಕೋಟೆ ಇದು ಬರೀ ಊರಲ್ಲ, ಬದುಕಿನ ನೆನಪಿನ ಬುತ್ತಿಯನ್ನು ಹೊತ್ತೊಯ್ಯುವ ತೇರು
ಗೋವಾದಲ್ಲಿ ಶಿಕ್ಷಕರಿಗೆ ಅಂತರರಾಜ್ಯ ಕಲಾ ತರಬೇತಿ