https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ:
ಆಯಾ ಕ್ಷೇತ್ರದ ನಿತ್ಯದ ಆಗುಹೋಗುಗಳನ್ನು ತಿಳಿದುಕೊಂಡು ಪರಿಣಿತಿ ಹೊಂದಿದಾಗ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ. ಕಲಿಕೆ ಎಂಬುದು ನಿಂತ ನೀರಾಗಬಾರದು, ಹರಿಯುವ ನದಿಯಾಗಬೇಕು ಎಂದು ಸಣ್ಣ ಕೈಗಾರಿಕೆ ಸಚಿವ ಶರಣ ಬಸಪ್ಪ ದರ್ಶನಾಪೂರ್ ಹೇಳಿದರು.

ನಗರದ ಭಟ್ರಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪದ ಖಾಸಗಿ ಮೈದಾನದಲ್ಲಿ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ (ಐಸಿಎಐ) ದಕ್ಷಿಣ ಭಾರತ ಪ್ರಾಂತೀಯ ಪರಿಷತ್ (ಎಐಆರ್‌ಸಿ)ವತಿಯಿಂದ ಹಮ್ಮಿಕೊಂಡಿದ್ದ 55ನೇ ದಕ್ಷಿಣ ಭಾರತ ಮಟ್ಟದ ಸನ್ನದು ಮತ್ತು ಲಕ್ಕಪರಿಶೋಧಕರ(ಸಿಎ) ಸಮ್ಮೇಳನದಲ್ಲಿ ಗುರುವಾರ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯನವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು. ಅವರಜೊತೆಗೆ ಬರಬೇಕಿದ್ದ ಮಂತ್ರಿಗಳು ಸಹ ಬರಲಾಗಲಿಲ್ಲ. ನಾನು ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಇರಲಿ ಎಂದು ಮಾತು ಆರಂಭಿಸಿದ ಅವರು, ಜಗತ್ಪ್ರಸಿದ್ದ ಹಂಪಿ ಇರುವ ಐತಿಹಾಸಿಕ ಸ್ಥಳದಲ್ಲಿ ಎರಡು ದಿನದ ಜ್ಞಾನ ಸಂಪನ್ನ ಕಾರ್ಯಾಗಾರ ಹಮ್ಮಿಕೊಂಡಿರುವುದು ಶ್ಲಾಘನೀಯ. ಹಣಕಾಸು ವ್ಯವಸ್ಥೆಯಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು. ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯತ್ತ ಸಾಗಿದ್ದು, ತನ್ನದೇ ಆದ ಛಾಪು ಮೂಡಿಸಿದೆ. ಇಂದು ಇಡೀ ವಿಶ್ವವೇ ಕರ್ನಾಟಕದತ್ತ ನೋಡುತ್ತಿದೆ. ಕರ್ನಾಟಕ ಶಾಂತಿಯುತ ನಾಡಾಗಿರುವುದರಿಂದ ಅನೇಕ ಉದ್ಯಮಿಗಳು ತಮ್ಮ ಯೋಜನೆಗಳನ್ನು ಕರ್ನಾಟದಲ್ಲಿ ಅನುಷ್ಠಾನಗೊಳಿಸಬೇಕೆಂಬ ಹಂಬಲ ಹೊಂದಿದ್ದಾರೆ. ಉದ್ಯಮಿಗಳಿಗೆ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಾಗಾರ ಇದಾಗಿದೆ. ಎಷ್ಟೇ ಕಲಿತರೂ ಕಡಿಮೆ ಎಂಬಂತಾಗಿದೆ. ನಿತ್ಯವೂ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಿದೆ. ಎಂಒಬಿ ಜಾರಿಗೆ ತರಲಾಗುವುದು. ಲೆಕ್ಕ ಪರಿಶೋಧಕರ ಜ್ಞಾನ ಅಪಾರವಾದದ್ದು. ಸಾಮಾನ್ಯರಿಗೂ ಅರಿವು ಮಾಡಿಸುವ ಕಾರ್ಯ ನಡೆಯಲಿ. ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಸಂಘಟನೆ 4 ಲಕ್ಷ ಸದಸ್ಯರನ್ನು ಹೊಂದಿದ್ದು, 1.5 ಲಕ್ಷ ಸದಸ್ಯರು ವೃತ್ತಿಯ ತುದಿ ಹಂತದಲ್ಲಿದ್ದಾರೆ. 8 ಲಕ್ಷ ವಿದ್ಯಾರ್ಥಿಗಳು ಶೈಕ್ಷಣಿಕ ತರಬೇತಿಯಲ್ಲಿದ್ದಾರೆ ಎಂಬುದು ಮೆಚ್ಚುಗೆಯ ಸಂಗತಿ. ಸಿಎಗಳ ಸಮಾಜವನ್ನು ಶ್ರೀಮಂತ ಸೊಸೈಟಿ ಎಂದರೂ ತಪ್ಪಾಗಲಾರದು ಎಂದರು.
ಐಸಿಎಐ ಅಧ್ಯಕ್ಷ ಅನಿಕೇತ್ ಸುನೀಲ್ ತಲಾಟಿ ಮಾತನಾಡಿ, ಯುವ ಸಮೂಹ ಡಿಜಿಟಲೀಕರಣದತ್ತ ಮುಖಮಾಡಿದ್ದಾರೆ. ಭಾರತದಲ್ಲಿ ಸಾಕಷ್ಟು ಸಂಪನ್ಮೂಲವಿದೆ. ಅದಕ್ಕೆ ತಕ್ಕದಾದ ಯುವಶಕ್ತಿಯೂ ಇದೆ. ಆದರೆ ಅದರ ಬಳೆಕೆಯಲ್ಲಿ ಹಿಂದಿದ್ದೇವೆ. ಪ್ರತಿಭಾವಂತರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳು ಕೈಬೀಸಿ ಕರೆಯುತ್ತವೆ. ಉತ್ತಮ ಮಾರ್ಗದರ್ಶನ ಪಡೆದು ಯುವಶಕ್ತಿಗೂ ಅವಕಾಶ ಕಲ್ಪಿಸಿ ಬೆಳೆಸಬೇಕು ಎಂದರು.
ಎರಡು ದಿನದ ಜ್ಞಾನ ಸಂಪನ್ನ ಕಾರ್ಯಾಗಾರದಲ್ಲಿ ಐಸಿಎಐ ಅಧ್ಯಕ್ಷ ಅನಿಕೇತ್ ಸುನೀಲ್ ತಲಾಟಿ, ಉಪಾಧ್ಯಕ್ಷ ರಂಜಿತ್ ಕುಮಾರ್ ಅಗರವಾಲ್, ಸಿಎಗಳಾದ ನಾಗನಗೌಡ, ಸುನೀಲ್ ಕುಮಾರ್, ಅರುಣ ಐ.ಎಂ., ಗೀತಾ.ಎ.ಬಿ, ಪನ್ನರಾಜ ಎಸ್ ಇತರರು ಉಪಸ್ಥಿತರಿದ್ದರು.



More Stories
ಬ್ರಿಡ್ಜ್ ಟು ಬೆಂಗಳೂರು’ ಮೂಲಕ ನವಶಕ್ತಿಯ ಅನಾವರಣ
ಅಮಂಡಾ ನವೇನ್ ಧೀಮಂತ ಹೋರಾಟ
ಜಗ ಮೆಚ್ಚಿದ ಪೊಲೀಸ್