October 14, 2026

Hampi times

Kannada News Portal from Vijayanagara

ಕೂಡ್ಲಿಗಿ, ಕೊಟ್ಟೂರು ತಾಲೂಕುಗಳನ್ನು ‘ಬರಪೀಡಿತ’ ಎಂದು ಘೋಷಿಸಲು ಶಾಸಕ ಎನ್.ಟಿ.ಶ್ರೀನಿವಾಸ್ ಆಗ್ರಹ

ಹಂಪಿ ಟೈಮ್ಸ್‌ ಕೂಡ್ಲಿಗಿ

ತೀವ್ರ ಮಳೆ ಅಭಾವ ಹಾಗೂ ಭೀಕರ ಬರಗಾಲದಿಂದ ಕಂಗಾಲಾಗಿರುವ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕುಗಳನ್ನು ತಕ್ಷಣವೇ ‘ಬರಪೀಡಿತ ತಾಲೂಕುಗಳು’ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು ಎಂದು ಕೂಡ್ಲಿಗಿ ಶಾಸಕ ಡಾ:ಎನ್.ಟಿ.ಶ್ರೀನಿವಾಸ್ ಒತ್ತಾಯಿಸಿದರು.
​ಪಟ್ಟಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ‘ಪ್ರಜಾಸೇವಾ’ ಇಲಾಖೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕರು ಪ್ರಸ್ತಾವಿಕ ಭಾಷಣದ ವೇಳೆ ಅವರು ತಾಲೂಕಿನ ಬರ ಪರಿಸ್ಥಿತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು.

​ಕ್ಷೇತ್ರದ ಭೀಕರ ಪರಿಸ್ಥಿತಿಯನ್ನು ತೆರೆದಿಟ್ಟ ಶಾಸಕರು, “ಈ ಬಾರಿಯ ತೀವ್ರ ಬರದಿಂದಾಗಿ ತಾಲೂಕಿನ ರೈತರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಬದುಕಿನ ಭರವಸೆಯನ್ನೇ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ತಾಲೂಕಿನ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ಸರ್ವಪಕ್ಷಗಳ ನಾಯಕರು ಒಗ್ಗಟ್ಟಿನಿಂದ ಬರ ಘೋಷಣೆಗೆ ಆಗ್ರಹಿಸುತ್ತಿದ್ದಾರೆ. ರೈತರ ಕಣ್ಣೀರು ಒರೆಸಲು ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಿ, ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ತುರ್ತು ಆರ್ಥಿಕ ನೆರವು ಹಾಗೂ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು” ಎಂದು ವೇದಿಕೆಯಲ್ಲಿದ್ದ ಮುಖ್ಯಮಂತ್ರಿಗಳು, ಸಚಿವರು ಹಾಗೂ ಅಧಿಕಾರಿಗಳಲ್ಲಿ ಮನವಿ ಮಾಡಿದರು.

​ಇದೇ ವೇಳೆ ‘ಪ್ರಜಾಸೇವಾ’ ಯೋಜನೆಯ ಮಹತ್ವವನ್ನು ವಿವರಿಸಿದ ಅವರು, ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಸಾರ್ವಜನಿಕರ, ನಿರುದ್ಯೋಗಿ ಯುವಕರ, ಶಾಲಾ-ಕಾಲೇಜುಗಳ, ಸ್ವಸಹಾಯ ಸಂಘಗಳ ಹಾಗೂ ನಿವೃತ್ತರ ಕುಂದುಕೊರತೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸುವ ಈ ಯೋಜನೆ ಒಂದು ಐತಿಹಾಸಿಕ ಮೈಲಿಗಲ್ಲು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಇಲಾಖೆಗಳನ್ನು ಒಗೂಡಿಸಿ ಜನರ ಮನೆಬಾಗಿಲಿಗೇ ಆಡಳಿತ ತಲುಪಿಸುವ ಕೆಲಸವಾಗುತ್ತಿದೆ ಎಂದರು.

​ತಮ್ಮ ತಂದೆ ಎನ್.ಟಿ. ಬೊಮ್ಮಣ್ಣ ಅವರ ಜನಸೇವೆಯನ್ನು ಸ್ಮರಿಸಿದ ಶಾಸಕರು, “ಮನೆ ಬಾಗಿಲಿಗೆ ಸರ್ಕಾರ” ಎಂಬ ಪರಿಕಲ್ಪನೆ ತಮಗೆ ಹೊಸದಲ್ಲ ಎಂದರಲ್ಲದೆ, ಕಳೆದ ಮೂರು ವರ್ಷಗಳಲ್ಲಿ ತಾಲೂಕಿನ ಆರೋಗ್ಯ, ಕುಡಿಯುವ ನೀರು, ನೂತನ ಆಸ್ಪತ್ರೆ ಹಾಗೂ ರಸ್ತೆ ಸಂಪರ್ಕದಂತಹ ಮೂಲಸೌಕರ್ಯಗಳಿಗೆ ನೀಡಿದ ಆದ್ಯತೆಯನ್ನು ವಿವರಿಸಿದರು. ಕೂಡ್ಲಿಗಿಯಿಂದ ಚಾಲನೆ ಪಡೆದ ಈ ‘ಪ್ರಜಾಸೇವಾ’ ಆಂದೋಲನದ ಮೊದಲ ಫಲವಾಗಿ ಕ್ಷೇತ್ರಕ್ಕೆ ಬರ ಪರಿಹಾರ ಸಿಗಬೇಕೆಂಬುದು ಜನರ ಆಶಯವಾಗಿದೆ ಎಂದು ಹೇಳಿದರು.

Please follow and like us:

 

 

Translate »
[t4b-ticker]
error: Content is protected !!