https://youtu.be/NHc6OMSu0K4?si=SI_K4goOPEgwo6h2
ಸಂಡೂರು ವಿಧಾನಸಭೆ ಉಪಚುನಾವಣೆ-2024 ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು
ಹಂಪಿ ಟೈಮ್ಸ್ ಬಳ್ಳಾರಿ
95-ಸಂಡೂರು (ಪ.ಪಂ) ವಿಧಾನಸಭೆ ಉಪಚುನಾವಣೆಯ ಫಲಿತಾಂಶವು ಶನಿವಾರ ಹೊರಬಿದ್ದಿದ್ದು, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ಅನ್ನಪೂರ್ಣ ಅವರು 93,616 ಮತಗಳನ್ನು ಪಡೆದು, 9,649 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ಅನ್ನಪೂರ್ಣ ಅವರ ಪ್ರತಿಸ್ಪರ್ಧಿಯಾದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಬಂಗಾರ ಹನುಮಂತ ಅವರು 83,967 ಮತಗಳನ್ನು ಪಡೆದಿದ್ದಾರೆ. ಉಳಿದಂತೆ, ಕರ್ನಾಟಕ ಜನತಾ ಪಕ್ಷದ ಅಂಜಿನಪ್ಪ.ಎನ್ ಅವರು 632 ಮತ ಗಳಿಸಿದರೆ, ಪಕ್ಷೇತರ ಅಭ್ಯರ್ಥಿಗಳಾದ ಟಿ.ಎಂ.ಮಾರುತಿ ಅವರು 211, ಟಿ.ರ‍್ರಿಸ್ವಾಮಿ ಅವರು ಅವರು 271 ಮತ್ತು ಎನ್.ವೆಂಕಣ್ಣ ಅವರು 461 ಮತ ಗಳಿಸಿದ್ದಾರೆ. ನೋಟಾಗೆ ಒಟ್ಟು 1,040 ಮತಗಳು ದಾಖಲಾಗಿವೆ.
ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ಒಟ್ಟು 20 ಮತಗಳು ಚಲಾಯಿಸಲಾಗಿದ್ದು, ಈ ಪೈಕಿ ಕಾಂಗ್ರೆಸ್‌ನ ಈ.ಅನ್ನಪೂರ್ಣ ಅವರಿಗೆ 10 ಅಂಚೆ ಮತಗಳು ಬಂದಿವೆ. ಬಿಜೆಪಿ ಅಭ್ಯರ್ಥಿ ಬಂಗಾರ ಹನುಮಂತ ಅವರಿಗೆ 06 ಮತಗಳು ಬಂದಿದ್ದು, 04 ಅಂಚೆ ಮತಗಳು ವಿವಿಧ ಕಾರಣಗಳಿಗಾಗಿ ತಿರಸ್ಕೃತಗೊಂಡವು. 253 ಮತಗಟ್ಟೆಗಳಲ್ಲಿನ ಮತಯಂತ್ರಗಳಲ್ಲಿ ದಾಖಲಾದ ಮತಗಳನ್ನು ಎಣಿಕೆ ಮಾಡಲು ಒಟ್ಟು 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಒಟ್ಟು 19 ಸುತ್ತುಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಿತು.
ಮತ ಎಣಿಕೆ ಕೇಂದ್ರಕ್ಕೆ ಬಿಗಿ-ಬಂದೋಬಸ್ತ್:
ಮತ ಎಣಿಕೆಗಾಗಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆಯೂ ಕೈಗೊಂಡು, ಮತ ಎಣಿಕಾ ಕೇಂದ್ರಕ್ಕೆ ಆಗಮಿಸುವವರನ್ನು ಎರಡು ಹಂತಗಳಲ್ಲಿ ತಪಾಸಣೆ ನಡೆಸಿ, ಕೇಂದ್ರಕ್ಕೆ ಪ್ರವೇಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿತ್ತು.
ಪೂರ್ವ ನಿಗದಿಯಂತೆ ಶನಿವಾರದಂದು ಬೆಳಿಗ್ಗೆ 7.30 ಕ್ಕೆ ಚುನಾವಣಾ ಸಾಮಾನ್ಯ ವೀಕ್ಷಕರಾದ ಡಾ.ದಿವ್ಯಾ ಎಸ್.ಅಯ್ಯರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿಜೆ., ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಂಡೂರು ತಹಶೀಲ್ದಾರ ಅನಿಲ್ ಕುಮಾರ್ ಸೇರಿದಂತೆ ಚುನಾವಣಾ ಏಜೆಂಟರುಗಳ ಹಾಗೂ ಭದ್ರತಾ ಸಿಬ್ಬಂದಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂನ್ನು ತೆರೆಯಲಾಯಿತು. ಬಳಿಕ ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆಯನ್ನು ಪ್ರಾರಂಭಿಸಲಾಯಿತು. ನಂತರ ಭದ್ರತಾ ಕೋಣೆಯಲ್ಲಿದ್ದ ವಿದ್ಯುನ್ಮಾನ ಮತಯಂತ್ರಗಳನ್ನು ಮತ ಎಣಿಕಾ ಕೊಠಡಿಗಳಿಗೆ ಆಯಾ ಸುತ್ತು ಮತ ಎಣಿಕೆಯ ಸಂದರ್ಭದಲ್ಲಿ ಒಯ್ಯಲಾಯಿತು. ಮತ ಎಣಿಕೆ ಪ್ರಾರಂಭವಾದ ಮೊದಲ ಸುತ್ತಿನಿಂದ ಆರು ಸುತ್ತಿನವರೆಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ಅನ್ನಪೂರ್ಣ ಅವರು ಸಮೀಪದ ಸ್ಪರ್ಧಿ ಬಿಜೆಪಿ ಪಕ್ಷದ ಬಂಗಾರ ಹನುಮಂತ ಅವರಿಗಿಂತಲೂ ಮತ ಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು.
ಆರು ಮತ್ತು ಏಳನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ:
ಬಿಜೆಪಿ ಪಕ್ಷದ ಬಂಗಾರ ಹನುಮಂತ ಅವರು ಆರನೇ ಸುತ್ತಿನಲ್ಲಿ 253 ಮತ ಮತ್ತು ಏಳನೇ ಸುತ್ತಿನಲ್ಲಿ 867 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ಅನ್ನಪೂರ್ಣ ಅವರಿಗಿಂತ ಮುನ್ನಡೆ ಕಾಯ್ದುಕೊಂಡಿದ್ದರು. ನಂತರ ಉಳಿದ ಎಲ್ಲ ಸುತ್ತುಗಳಲ್ಲಿ ಈ.ಅನ್ನಪೂರ್ಣ ಅವರೇ ಮುನ್ನಡೆ ಪಡೆದರು. ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ಕೈಗೊಳ್ಳಲು 14+1 ಟೇಬಲ್ ಕಾಯ್ದಿರಿಸಲಾಗಿತ್ತು. ಪ್ರತಿ ಟೇಬಲ್‌ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು, ಒಬ್ಬರು ಎಣಿಕಾ ಸಹಾಯಕರು, ಒಬ್ಬರು ಮೈಕ್ರೋ ಅಬ್ಸವರ‍್ಸ್ಗಳನ್ನು ನಿಯೋಜಿಸಲಾಗಿತ್ತು. ಸಂಡೂರು ವಿಧಾನಸಭೆ ಉಪಚುನಾವಣೆಯ ಮತ ಎಣಿಕಾ ಕಾರ್ಯಕ್ಕೆ 19 ಎಣಿಕಾ ಮೇಲ್ವಿಚಾರಕರು, 21 ಎಣಿಕಾ ಸಹಾಯಕರು ಮತ್ತು 20 ಎಣಿಕಾ ಮೈಕ್ರೋ ಅಬ್ಸವರ‍್ಸ್ಗಳನ್ನು ನೇಮಿಸಿದ್ದು, ಸಂಡೂರು ಕ್ಷೇತ್ರದ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಮತ ಎಣಿಕೆ ಸಿಬ್ಬಂದಿ ಮತ್ತು ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರುಗಳು ಮತ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.
ಮತ ಎಣಿಕಾ ಕೇಂದ್ರಕ್ಕೆ ಸಿ.ಸಿ ಕ್ಯಾಮರಾ ಅಳವಡಿಸಿ ಮತ್ತು ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಅಗತ್ಯ ಭದ್ರತೆ ನೀಡಲಾಗಿತ್ತು. ಮಾಧ್ಯಮ ಕೇಂದ್ರದ ಮೂಲಕ ಮತ ಎಣಿಕೆಯ ಪ್ರತಿ ಸುತ್ತಿನ ಮಾಹಿತಿಯನ್ನು ಜನತೆಗೆ ತಲುಪಿಸಲು ಧ್ವನಿವರ್ಧಕದ ವ್ಯವಸ್ಥೆ ಮಾಡಲಾಗಿತ್ತು. ಮತ ಎಣಿಕೆಯ ಹಿನ್ನೆಲೆಯಲ್ಲಿ ಮತ ಎಣಿಕಾ ಕೇಂದ್ರದ ಹೊರಗಡೆ ಮತ್ತು ಒಳಗಡೆ ಸೂಕ್ತವಾದ ಪೊಲೀಸ್ ಬಂದೋಬಸ್ತ್ ವ್ಯವಸ್ತೆ ಮಾಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಮುಕ್ತಾಯಗೊಂಡ ನಂತರ ಸಂಡೂರು ವಿಧಾನಸಭೆಯ ಉಪಚುನಾವಣೆಯ ಚುನಾವಣಾಧಿಕಾರಿ ಅವರು ಫಲಿತಾಂಶ ಪ್ರಕಟಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ಅನ್ನಪೂರ್ಣ ಅವರಿಗೆ ಪ್ರಮಾಣ ಪತ್ರ ವಿತರಿಸಿದರು.
More Stories
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ
ಕಾಂಗ್ರೆಸ್ ಅನ್ನಪೂರ್ಣಮ್ಮಗೆ ಗೆಲುವು ನಿಶ್ಚಿತ : ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ ಅಭಿಮತ