November 7, 2024

Hampi times

Kannada News Portal from Vijayanagara

ಈ.ತುಕಾರಾಮ್ ಈ ಬಾರಿ 1200 ಕೋಟಿ ಅನುದಾನವನ್ನು ಸಂಡೂರು ಜನತೆಗಾಗಿ ತಂದಿದ್ದಾರೆ: ಸಿ.ಎಂ.ಸಿದ್ದರಾಮಯ್ಯ

 

https://youtu.be/NHc6OMSu0K4?si=SI_K4goOPEgwo6h2

 

 

ಅಭಿವೃದ್ಧಿ ಅಂದರೆ ತುಕಾರಾಮ್: ಸಿ.ಎಂ ಮೆಚ್ಚುಗೆ

ಸಂಡೂರಿನಲ್ಲಿ 12 ಸಾವಿರ ಮನೆಗಳನ್ನು ಕಟ್ಟಿ ಕ್ಷೇತ್ರದ ಜನರಿಗೆ ಹಂಚಿಕೆ ಮಾಡಿರುವುದರ ಶ್ರೇಯಸ್ಸು ಸಂತೋಷ್ ಲಾಡ್- ಈ.ತುಕಾರಾಮ್ ಜೋಡಿಗೆ ಸಲ್ಲಬೇಕು: ಸಿಎಂ

ನನ್ನ ವಿರುದ್ಧ ಷಡ್ಯಂತ್ರ, ಪಿತೂರಿ ನಡೆಸುತ್ತಿರುವ ಬಿಜೆಪಿಯನ್ನು ಉಪ ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಿ: ಸಿಎಂ ಸಿದ್ದರಾಮಯ್ಯ ಕರೆ

 

ಹಂಪಿ ಟೈಮ್ಸ್ ಸಂಡೂರು :

ಈ.ತುಕಾರಾಮ್ ಅವರು ಈ ಬಾರಿ ಶಾಸಕರಾದ ಬಳಿಕ 1200 ಕೋಟಿ ಅನುದಾನವನ್ನು ಸಂಡೂರು ಜನತೆಗಾಗೆ ತಂದಿದ್ದಾರೆ. ಅಭಿವೃದ್ಧಿ ಎಂದರೆ ತುಕಾರಾಮ್. ತುಕಾರಾಮ್ ಎಂದರೆ ಅಭಿವೃದ್ಧಿ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಡೂರು ತಾಲ್ಲೂಕಿನ ಸಾಧನಾ ಸಮಾವೇಶವನ್ನು ಉದ್ಘಾಟಿಸಿ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸುವುದರ ಜೊತೆಗೆ ಪೂರ್ಣಗೊಂಡಿರುವ ಸುಮಾರು 400 ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಸಂಡೂರು ಜನತೆಗೆ ಅರ್ಪಿಸಿ ಮಾತನಾಡಿದರು. ಸಂಡೂರಿನಲ್ಲಿ 12 ಸಾವಿರ ಮನೆಗಳನ್ನು ಕಟ್ಟಿ ಕ್ಷೇತ್ರದ ಜನರಿಗೆ ಹಂಚಿಕೆ ಮಾಡಿರುವುದರ ಶ್ರೇಯಸ್ಸು ಸಂತೋಷ್ ಲಾಡ್- ಈ.ತುಕಾರಾಮ್ ಜೋಡಿಗೆ ಸಲ್ಲಬೇಕು.
ನನ್ನ ವಿರುದ್ಧ ಷಡ್ಯಂತ್ರ, ಪಿತೂರಿ ನಡೆಸುತ್ತಿರುವ ಬಿಜೆಪಿಯನ್ನು ಉಪ ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಿ ಎಂದು ಸಿಎಂ ಕರೆ ನೀಡಿದರು.

ಈ.ತುಕಾರಾಮ್ ಅವರು ನನ್ನ ಬಲವಂತಕ್ಕೆ, ಪಕ್ಷದ ಮಾತಿಗೆ ಬೆಲೆ ಕೊಟ್ಟು ಲೋಕಸಭೆಗೆ ಸ್ಪರ್ಧಿಸಿದರು. ಈ.ತುಕರಾಮ್ ಅವರು ಸಂಡೂರು ಜನತೆಯ ಮೇಲೆ ಬಹಳ ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದಾರೆ. ಈ.ತುಕಾರಾಮ್ ಅವರಂತಹ ಕಾಯಕ ನಾಯಕ ನಿಮಗೆ ಬೇರೆಲ್ಲೂ ಸಿಗುವುದಿಲ್ಲ. ಹೀಗಾಗಿ ಸಂಡೂರು ಉಪಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನಿಮ್ಮ ಆಶೀರ್ವಾದ ಹೀಗೇ ಮುಂದುವರೆಯಲಿ ಎಂದು ಸಿಎಂ ವಿನಂತಿಸಿದರು.

ಸಂಡೂರಿನ ಜನತೆಯೂ ಸೇರಿ ರಾಜ್ಯದ ಜನತೆಗೆ ಐದೈದು ಗ್ಯಾರಂಟಿಗಳನ್ನು 56000 ಕೋಟಿ ವೆಚ್ಚದಲ್ಲಿ ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಬಿಜೆಪಿ ಯವರು ಸುಳ್ಳುಗಳನ್ನು ಎರಚುತ್ತಾ ಕುಳಿತಿದೆ. ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ಬಿಜೆಪಿಯ ಪೆದ್ದ ಶಿಖಾಮಣಿಗಳು ಸುಳ್ಳುಗಳನ್ನು ಎರಚುತ್ತಾ ಕುಳಿತಿದ್ದಾರೆ. ಹಾಗಿದ್ರೆ ಬರೀ ಸಂಡೂರಿನ ಅಭಿವೃದ್ಧಿಗೆ ಕಳೆದ ಒಂದು ವರ್ಷದಲ್ಲಿ ಈ.ತುಕಾರಾಮ್ ಅವರು 1200 ಕೋಟಿ ರೂಪಾಯಿ ಅನುದಾನ ತರಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.

ಸಂಡೂರಿನ ಜನರ ತೆರಿಗೆ ಹಣಕ್ಕೆ, ರಾಜ್ಯದ ಜನರ ತೆರಿಗೆ ಹಣಕ್ಕೆ ಕೇಂದ್ರ ಸರ್ಕಾರ ನಿರಂರವಾಗಿ ವಂಚಿಸುತ್ತಿದೆ. ನಿಮಗೆ, ನಮಗೆ ಕೇಂದ್ರದಿಂದ ಬರಬೇಕಾದ ಹಣವನ್ನು ಕೊಡಿ ಎಂದು ಮೋದಿಗೆ ಕೇಳುವ ಧೈರ್ಯ ಬಿಜೆಪಿಗೆ ಇಲ್ಲ. ವಿಜಯೇಂದ್ರಗೆ ಇಲ್ಲ. ಇದು ಸಂಡೂರಿನ ಜನತೆಗೆ, ರಾಜ್ಯದ ಜನತೆಗೆ ಬಗೆದ ದ್ರೋಹ ಅಲ್ಲವೇ ಎಂದು ಸಿಎಂ ಪ್ರಶ್ನಿಸಿದರು. ತೆರಿಗೆ ಕಟ್ಟುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆದರೆ ನಮ್ಮ ಪಾಲು ವಾಪಾಸ್ ಕೊಡುವುದರಲ್ಲಿ ಕೇಂದ್ರ ಸರ್ಕಾರ ಕೊನೆ ಸ್ಥಾನದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಖಾನ್, ಕಾರ್ಮಿಕ ಸಚಿವರಾದ ಸಂತೋಷ್ ಲಾಡ್, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಮಾಜಿ ಸಚಿವರೂ-ಸಂಸದರೂ ಆದ ಈ.ತುಕಾರಾಂ, ಶಾಸಕರುಗಳಾದ ಲತಾ ಮಲ್ಲಿಕಾರ್ಜುನ್, ಕಂಪ್ಲಿ ಗಣೇಶ್, ಶ್ರೀನಿವಾಸ್, ನಾಗರಾಜ್, ನಾರಾ ಭರತ್ ರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಧ್ಯಕ್ಷರಾದ ಮೆಹರೂಜ್ ಖಾನ್, ಕೆಎಂಎಫ್ ಅಧ್ಯಕ್ಷರಾದ ಭೀಮಾನಾಯ್ಕ್, ಹಿರಿಯ ನಾಯಕರಾದ ಅಲ್ಲಂ ವೀರಭದ್ರಪ್ಪ, ಲಿಡ್ಕರ್ ಅಧ್ಯಕ್ಷರಾದ ನಾಗರಾಜ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

 

 

ಜಾಹೀರಾತು
error: Content is protected !!