https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ
ತಾಲೂಕಿನ ಬಸವನದುರ್ಗ ಚನ್ನಬಸವೇಶ್ವರ ಸ್ವಾಮಿ ಮತ್ತು ಹೊಸಪೇಟೆಯ ಏಳು ಕೇರಿ ಸೇರಿದಂತೆ ತಾಲೂಕಿನ ವಿವಿಧ ಪ್ರದೇಶಗಳಿಂದ ಪಲ್ಲಕ್ಕಿಯಲ್ಲಿ ಆಗಮಸಿದ್ದ 20ಕ್ಕೂ ಅಧಿಕ ಶಕ್ತಿದೇವತೆಗಳ ಉತ್ಸವ ಮೂರ್ತಿಗಳು ಶುಕ್ರವಾರ ನಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿ ಓಬಳಾಪುರದಲ್ಲಿರುವ ಧರ್ಮದಗುಡ್ಡದಲ್ಲಿ ಸಮ್ಮಿಲನಗೊಂಡು ಗುಡ್ಡದ ಶ್ರೀ ಚನ್ನಬಸವೇಶ್ವರಸ್ವಾಮಿಗೆ ಮತ್ತು ನಿಜಲಿಂಗಮ್ಮ ದೇವಿಗೆ ಪೂಜೆ ಸಲ್ಲಿಸಿ, ಬನ್ನಿ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ದೇವರ ಬನ್ನಿ ಮುಡಿದ ಕ್ಷಣಗಳನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಮಧ್ಯಾಹ್ನ 2 ಗಂಟೆಯಿಂದ ಸುರಿಯುತ್ತಿದ್ದ ಮಳೆಯಲ್ಲೆ ಹೊಸಪೇಟೆ ಏಳು ಕೇರಿ ಮತ್ತು ಕಮಲಾಪುರ, ಕೊಂಡನಾಯಕನಹಳ್ಳಿ, ಚಿತ್ತವಾಡ್ಗಿ, ನರಸಾಪುರ,ಬೆನಕಾಪುರ, ನಾಗೇನಹಳ್ಳಿ ಸೇರಿದಂತೆ ಇತರೆಡೆಗಳಿಂದ ಶಕ್ತಿದೇವತೆಗಳ ಪಲ್ಲಕ್ಕಿಯನ್ನು ಹೊತ್ತ ಭಕ್ತರು ಮಳೆಯನ್ನೂ ಲೆಕ್ಕಿಸದೆ ಧರ್ಮದಗುಡ್ಡದತ್ತ ಓಡುತ್ತಾ ಬಂದರು. ಪಲ್ಲಕ್ಕಿಗಳ ಹಿಂದೆ ಯುವಕರ ತಂಡಗಳು ಬಣ್ಣ ಬಣ್ಣದ ಟೀಶರ್ಟ್ ತೊಟ್ಟು ಹೆಜ್ಜೆ ಹಾಕಿದರು. ಪ್ರಯಾಣಿಕರು ಹೊತ್ತ ನೂರಾರು ವಾಹನಗಳು ಗುಡ್ಡದತ್ತ ಮುಖಮಾಡಿದ್ದವು. 2 ಕಿ.ಮೀಟರ್ ಗೂ ಉದ್ದ ಜನದಟ್ಟಣೆಯಿಂದ ರಸ್ತೆ ತುಂಬಿ ತುಳುಕುತ್ತಿತ್ತು. ಹಂಪಿ ಅಂಗಳದ ಧರ್ಮದಗುಡ್ಡದಲ್ಲಿ ದೇವರ ಬನ್ನಿ ಮುಡಿಯುವ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ಈ ಭಾಗದ ಭಕ್ತರು ತಮ್ಮದಾಗಿಸಿಕೊಂಡರು.
ಬಸವನದುರ್ಗ ಶ್ರೀಚನ್ನಬಸವೇಶ್ವರ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ದೈವ, ನಾಗೇನಹಳ್ಳಿ ಹಿರಿಯ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು, ಯುವಕರು, ಏಳು ಕೇರಿ ದೈವಸ್ಥರು, ಸೇರಿದಂತೆ ಸಾವಿರಾರು ಭಕ್ತರು ಇದ್ದರು. ನಾಗೇನಹಳ್ಳಿ ಗ್ರಾಪಂ ಸದಸ್ಯರು, ಅಧಿಕಾರಿ ಸಿಬ್ಬಂದಿಗಳು ಒಂದು ವಾರದ ಮುಂಚಿನಿಂದ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಶ್ರಮಿಸಿದರು. ವಿಜಯನಗರ ಜಿಲ್ಲಾ ಎಸ್ಪಿ ಶ್ರೀಹರಿಬಾಬು ಬಿ.ಎಲ್. ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಟ್ರಾಫಿಕ್ ಜಾಮ್ ಆಗದಂತೆ ಯೋಜನಾ ಬದ್ಧವಾಗಿ ಪೊಲೀಸರನ್ನು ನಿಯೋಜಿಸಿ, ಪಾರ್ಕಿಂಗ್ ವ್ಯವಸ್ಥೆ ಕೈಗೊಂಡಿದ್ದರಿಂದ ಶಾಂತಿಯುತವಾಗಿ ಸಂಭ್ರಮದಿಂದ ದೇವರ ಬನ್ನಿ ಮಹೋತ್ಸವ ಅದ್ಧೂರಿಯಿಂದ ನಡೆಯಿತು. ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದಗಳನ್ನು ತಿಳಿಸಿದರು.
More Stories
ಪೊಲೀಸರ ಬದುಕಿನ ಬಹುಪಾಲು ಸಮಯ ನಮ್ಮೆಲ್ಲರ ಒಳಿತಿಗಾಗಿ ಮೀಸಲು : ವೀಣಾ ಹೇಮಂತ್ಗೌಡ ಪಾಟೀಲ್
ಮೊದಲ ಉದ್ಯೋಗ ಮೇಳದಲ್ಲಿ 417 ಅಭ್ಯರ್ಥಿಗಳು ಆಯ್ಕೆ, 9 ಲಕ್ಷ ರೂ.ವರೆಗೆ ಪ್ಯಾಕೇಜ್ : ಮೆಟ್ರಿ ಮಲ್ಲಿಕಾರ್ಜುನ
ಐವರು ಸಾಧಕರು ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ : ಸಿಎಂ ಸಿದ್ದರಾಮಯ್ಯ