https://youtu.be/NHc6OMSu0K4?si=SI_K4goOPEgwo6h2
ನಮ್ಮ ಜನಪದರು ಹಬ್ಬ – ಹರಿದಿನಗಳ ವೇಳೆ ಭಕ್ತಿ ಭಾವದಿಂದ ಆಚರಣೆ ಜರುಗಿಸುತ್ತಾ ಬರುತ್ತಿದ್ದಾರೆ. ಅವರು ಆಚರಿಸುವ ಆಚರಣೆಗಳಲ್ಲಿ ಮಾರ್ನಾಮಿ(ದಸರಾ) ಹಬ್ಬದ ಆಚರಣೆಯೂ ಒಂದು. ಪ್ರಸ್ತುತ ನಾಡಹಬ್ಬ ದಸರಾ ಎಂಬ ಪದವನ್ನು ನಮ್ಮ ಜನಪದರು ಮಾರ್ನಾಮಿ ಎಂಬ ಪದದಿಂದ ಕರೆಯುತ್ತಿದ್ದರೆಂದು ತಿಳಿದುಬರುತ್ತದೆ. ಮಾರ್ನಾಮಿ (ದಸರಾ) ಅಮಾವಾಸ್ಯೆ ಬಂತೆಂದರೆ ಸಾಕು ಜನರಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಆಗ ಬಹುತೇಕ ಮನೆಗಳಿಗೆ ಸುಣ್ಣ- ಬಣ್ಣ ಹಚ್ಚಿ ಅವರು ವಾಸಿಸುವ ಏರಿಯಾಗಳಲ್ಲಿ ದೀಪಾಲಂಕಾರ ಮಾಡಿ ಜನಾಕರ್ಷಣೆಗೆ ಒಳಗಾಗುವಂತೆ ಮಾಡಿರುತ್ತಾರೆ. ಅಮಾವಾಸ್ಯೆ ಬಳಿಕ ಹಂಪಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿಯ ಸ್ತ್ರೀ ದೇವತೆಗಳ ಉತ್ಸವ ಮೂರ್ತಿಗಳನ್ನು ಪಾಲಕಿ(ಪಲ್ಲಕ್ಕಿ)ಯಲ್ಲಿ ಇರಿಸಿ ಹೊತ್ತು ಕೊಂಡು ಭಕ್ತರಿದ್ದಲ್ಲಿಗೆ ತೆರಳಿ ಅವರಿಂದ ಕಾಣಿಕೆಯನ್ನು ಪಡೆದು ಬರುವುದು ವಾಡಿಕೆ.
ಮೈಸೂರು ಅರಸು ಮನೆತನದವರು ನಾಡಹಬ್ಬ ದಸರಾ ಎಂಬ ಹೆಸರಲ್ಲಿ ಆಚರಿಸುತ್ತಿರುವ ಆಚರಣೆಗೆ ಮೂಲ ಪ್ರೇರಣೆ ಕುಮ್ಮಟ ದುರ್ಗದ ಅರಸರ ಮಾರ್ನಾಮಿ ಹಬ್ಬ ಎಂದರೆ ತಪ್ಪಾಗಲಾರದು. ಈ ಹಿನ್ನೆಲೆಯಲ್ಲಿ ಇಂದಿಗೂ ಕುಮ್ಮಟದ ದೇವರ ಗುಡ್ಡದ ಬಳಿ ಹಲವಾರು ವರುಷದಿಂದಲೂ ಮೈಸೂರಲ್ಲಿ ಜರುಗುವ ಆನೆ ಅಂಬಾರಿ ತರ ಮೆರವಣಿಗೆಯನ್ನು ಕೈಗೊಳ್ಳುವರು. ಅಂದಿನ ಮೂಲ ದಸರಾವನ್ನು ಮರುಕಳಿಸುವಂತೆ ಮಾಡಲಾಗುತ್ತಿದೆ. ಇಂದು ಜರುಗುವ ಆನೆ ಮೇಲೆ ಇರಿಸುವ ಭುವನೇಶ್ವರಿಯ ಅಂಬಾರಿಯು ಕುಮ್ಮಟ ದುರ್ಗದ ಕಂಪಿಲರಾಯ ಅರಸನ ಕಾಲಾವಧಿಯದು ಎಂಬುದು ಚರಿತ್ರೆಯಿಂದ ತಿಳಿದುಬರುತ್ತದೆ. ಇದು ಕುಮ್ಮಟ ದುರ್ಗದ ಬಳಿಕ ಹಂಪಿಯ ಮಹಾನವಮಿ ದಿಬ್ಬದ ಬಳಿ ವಿಜೃಂಭಣೆಯ ಮಾರ್ನಾಮಿ(ದಸರಾ)ಹಬ್ಬ ವನ್ನು ಆಚರಿಸುತ್ತಿದ್ದರೆನ್ನಲು ಅಳಿದುಳಿದ ಸ್ಮಾರಕಗಳು ಮತ್ತು ಶಾಸನಗಳು, ಕೈಪಿಯತ್ತುಗಳು ಹಾಗೂ ಅಂದು ಹಂಪಿಗೆ ಆಗಮಿಸಿದ್ದ ವಿದೇಶಿ ಪ್ರವಾಸಿಗರ ಬರಹಗಳಿಂದ ತಿಳಿದುಬರುತ್ತದೆ. ಹಂಪಿ ಅವನತಿ ಹೊಂದಿದ ಬಳಿಕ ಮಾರ್ನಾಮಿ ಹಬ್ಬವು ಮೈಸೂರು ಅರಸರ ಆಳ್ವಿಕೆಯಲ್ಲಿ ನಾಡಹಬ್ಬ ದಸರಾ ಹೆಸರಲ್ಲಿ ನಾಡಹಬ್ಬವಾಗಿ ಸಡಗರ ಸಂಭ್ರಮದಿಂದ ಹಿಂದಿನ ಅರಸರುಗಳ ಆಚರಣೆಯು ಮರುಕಳಿಸಲು ಪ್ರತಿವರ್ಷವೂ 9 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಮಾರ್ನಾಮಿ(ಮಹಾನವಮಿ) ದಿಬ್ಬ : ಮಹಾನವಮಿ ದಿಬ್ಬವು ಉತ್ತರಾಭಿಮುಖವಾಗಿ ನಿರ್ಮಿಸಲಾಗಿದೆ. ಈ ದಿಬ್ಬವು 12 ಮೀಟರ್ ಎತ್ತರವಾಗಿದ್ದು, ಪಶ್ಚಿಮ ಭಾಗದಿಂದ ರಾಜ ಆತನ ಪರಿವಾರದವರು ದಿಬ್ಬವನ್ನು ಹತ್ತಿ ಹೋಗುತ್ತಿದ್ದರಂತೆ. ಈ ಮಹಾನವಮಿ ದಿಬ್ಬ(ದಿಣ್ಣೆ)ವನ್ನು ಕೃಷ್ಣದೇವರಾಯ ಒರಿಸ್ಸಾ ದಿಗ್ವಿಜಯದ ನೆನಪಿಗಾಗಿ ನಿರ್ಮಿಸಿದನೆಂಬುದು ಗಮನಾರ್ಹ ಸಂಗತಿಯೇ ಸರಿ. ಹಂಪಿಯ ವಿಜಯನಗರ ಸಾಮ್ರಾಜ್ಯದ ರಾಜರು ಮಹಾನವಮಿ ದಿಬ್ಬದ ಮೇಲೆ ಕುಳಿತು ಮಾರ್ನಾಮಿ (ದಸರಾ) ಮೆರವಣಿಗೆಯನ್ನು ವೀಕ್ಷಿಸುತ್ತಿದ್ದರೆಂದು ಆಗ ಆಗಮಿಸಿದ ವಿದೇಶಿ ಪ್ರವಾಸಿಗರಾದ ಪರ್ಷಿಯಾದ ರಾಯಭಾರಿ ಅಬ್ದುಲ್ ರಜಾಕ್, ಡೊಮಿoಗೋ ಫೇಸ್ ಅವರುಗಳ ಬರಹಗಳಿಂದ ತಿಳಿದುಬರುತ್ತದೆ. ಫೇಸ್ ನು ಕೃಷ್ಣದೇವರಾಯನ ಆಳ್ವಿಕೆ ವೇಳೆ ಬಂದಾಗ ಮಹಾನವಮಿ ದಿಬ್ಬದ ಮೇಲೆ ಅದರಲ್ಲೂ ಸಪ್ಟೆಂಬರ್ ತಿಂಗಳಲ್ಲಿ 9 ದಿನಗಳ ಕಾಲ ಉತ್ಸವವು ಜರುಗಿಜಿಸಲಾಗಿತ್ತು. ಅಲ್ಲದೇ ದಿಬ್ಬದ ಮೇಲೆ ಕುಳಿತು ರಾಜನು ಮಾರ್ನಾಮಿ ಹಬ್ಬದ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದನು ಎಂದು ತಿಳಿಸಿದ್ದಾರೆ. ಆದರೆ ಹಂಪಿ ಅವನತಿ ಬಳಿಕ ಕೆಲವು ವರ್ಷ ಶ್ರೀರಂಗಪಟ್ಟಣದಲ್ಲಿ ಜರುಗಿಸಲಾಯಿತು. ಆ ಬಳಿಕ ಒಡೆಯರ ಕಾಲಾವಧಿಯಲ್ಲಿ ಮೈಸೂರಿಗೆ ಹೋದ ಉತ್ಸವವು ಅಲ್ಲಿ ವಿಜೃಂಭಣೆಯಿಂದ ಜರುಗಿಸಿದರೆ ಹಂಪಿಯ ಮಹಾನವಮಿ ದಿಬ್ಬ ಮಾತ್ರ ಮೌನವಾಗಿ ತನ್ನ ಕತೆಯನ್ನು ಹೇಳತೊಡಗಿದೆ. ಕಥೆ ಅಳಿಸಿದವರು ಸಹ ಮೌನಕ್ಕೆ ಶರಣಾಗಿದ್ದಾರೆ.
ಧರ್ಮರ ಗುಡ್ಡದ ಮಾರ್ನಾಮಿ ಹಬ್ಬ : ಧರ್ಮರ ಗುಡ್ಡಕ್ಕೆ ನಾಗೇನಹಳ್ಳಿ ಮತ್ತು ಬಸವನ ದುರ್ಗ ಗ್ರಾಮದ ಮೂಲಕ ತೆರಳಬಹುದು. ಹಾಗೇನೆ ಕಾಳಘಟ್ಟ ಮಾಗಣಿ ಮಾರ್ಗದ ಮೂಲಕ ಹಾದು ಹೋಗುವ ಪಶ್ಚಿಮ ದಿಕ್ಕಿಗೆ ಇರುವ ಗುಡ್ಡವೇ ಧರ್ಮರಗುಡ್ಡ. ಇದು ಹೊಸಪೇಟೆಯಿಂದ 5 ಕಿ ಮೀ, ಹಂಪಿಯಿಂದ 10 ಕಿ ಮೀ ದೂರದಲ್ಲಿದೆ. ಈ ಗುಡ್ಡವು ಹಂಪಿಯ ಪಶ್ಚಿಮಾಭಿಮುಖವಾಗಿದೆ. ಧರ್ಮರ ಗುಡ್ಡವು ತನ್ನದೇ ಆದ ಹಿನ್ನೆಲೆಯನ್ನು ಹೊಂದಿದೆ. ಅಲ್ಲದೇ ಹಸಿರು ಸಿರಿಯ ಸೊಬಗಿನಿಂದ ನಿಸರ್ಗ ರಮಣೀಯ ತಾಣವಾಗಿದೆ. ಗುಡ್ಡದ ಎಡಗಡೆಗೆ ಮೂರು ಗುಂಡುಕಲ್ಲುಗಳು ಹಾಗೂ ಬಲಗಡೆ ಐದುಬ್ರಹತ್ ಗಾತ್ರದ ಗುಂಡುಕಲ್ಲುಗಳನ್ನು ಹಂತ ಹಂತವಾಗಿ ಪೇರಿಸಿಡಲಾಗಿದೆ ಎಂಬಂತೆ ಕಾಣಿಸುತ್ತದೆ. ಈ ಸ್ಥಳವು ಪ್ರಶಾಂತವು ಹಾಗೂ ಏಕಾಂತದಿಂದ ಕೂಡಿರುವುದರಿಂದ ಸಾಧು ಸಂತರು, ಯೋಗಿಗಳು ಈ ಸ್ಥಳಕ್ಕೆ ಬಂದು ಧ್ಯಾನ ಮಾಡುತ್ತಾರೆಂದು ತಿಳಿದುಬಂದಿದೆ. ಈ ಗುಡ್ಡವನ್ನು ಅದಿಮಾನವ ತನ್ನ ಹಾಗೂ ತನ್ನವರ ಆಸರೆಯಾಗಿ ಬಳಕೆ ಮಾಡಿರಬೇಕೆಂದು ಅವರು ಬಳಸಿದ ಕೊಡಲಿ, ಅವುಗಳನ್ನು ಮಸೆಯಲು ಗುಂಡುಕಲ್ಲಿಗೆ ಮಾಡಿದ ಚಿತ್ತಾರವು ಹಾಗೂ ಬೂದಿ ದಿಬ್ಬಗಳು ಮತ್ತು ಅವರು ಬಿಡಿಸಿದ ರೇಖಾಚಿತ್ರಗಳ ಕುರುಹುಗಳು ಗುಡ್ದದ ಹಿಂಬದಿ ಹಾಗೂ ಈ ಗುಡ್ಡದ ಪೂರ್ವಕ್ಕೆ ಇರುವ ಗುಡ್ಡದಲ್ಲಿ ದೊರಕಿವೆ. ಅವುಗಳನ್ನು ವಿಜಯನಗರ ತಿರುಗಾಟ ಸಂಶೋಧನ ತಂಡವು ಶೋಧಿಸಿದೆ. ಧರ್ಮರ ಗುಡ್ಡವು ಧಾರ್ಮಿಕವಾಗಿಯೂ,ಐತಿಹಾಸಿಕವಾಗಿಯೂ ಹಾಗೂ ಸ್ಥಳ ಪುರಾಣದ ಮಹತ್ವ ಹೊಂದಿದೆಯಾದರೂ ಮಾರ್ನಾಮಿ(ದಸರಾ) ಹಬ್ಬದ ಆಚರಣೆಯು ತುಂಬಾ ಪ್ರಮುಖ ಹಾಗೂ ವಿಶೇಷವಾಗಿದೆ.
ಅಂದು ಕುಮ್ಮಟದುರ್ಗ ಹಾಗೂ ವಿಜಯನಗರದ ಅರಸರು ಆಚರಿಸುತ್ತಿದ್ದ ವೈಭವದ ಮಾರ್ನಾಮಿ(ದಸರಾ)ಸಂಭ್ರಮಾಚರಣೆಯನ್ನು ಮನದುಂಬಿಕೊಳ್ಳಬೇಕಾದರೆ, ಕುಮ್ಮಟ ದುರ್ಗದ ಹೇಮಗುಡ್ಡದ ಜಂಬೂಸವಾರಿಯನ್ನು ಮನಗಾಣಬಹುದು. ಹಾಗೇನೆ ಇಂದಿನ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದ ಧರ್ಮರ ಗುಡ್ಡ(ಗುಡಿಓಬಳಾಪುರ)ಬಳಿಯ ಗುಡ್ಡದ ಬನ್ನಿ ಆಚರಣೆಯನ್ನು ಹಾಗೇನೆ ಪಾಲಕಿಗಳ ಮೆರವಣಿಗೆಯನ್ನು ಅಂದಿನ ದಿನದ ರಾತ್ರಿ ಏಳುಕೇರಿಗಳಲ್ಲಿ ಜರುಗುವ ಪಲ್ಲಕಿಗಳ ಮೆರವಣಿಗೆಯನ್ನು ಗಮನಿಸಿದರೆ ಸಾಕು ಅಂದಿನ ಭವ್ಯ ಸಾಮ್ರಾಜ್ಯದ ದಸರಾ ಸಂಭ್ರಮ ಹೀಗೂ ನಡೆದಿರಬೇಕೆನಿಸುತ್ತದೆ.
ದೇಗುಲದ ರಚನೆ : ಧರ್ಮರ ಗುಡ್ಡದ ಬಳಿ ಇರುವ ದೇಗುಲದ ವಾಸ್ತು ರಚನೆಯನ್ನು ಗಮನಿಸುವುದಾದರೆ ಪೂರ್ವಾಭಿಮುಖವಾಗಿ ನಿರ್ಮಾಣಗೊಂಡಿರುವಂತೆ ಕಾಣಿಸುತ್ತದೆ. ಎರಡು ಬೃಹತ್ ಗಾತ್ರದ ಬಂಡೆಕಲ್ಲುಗಳ ಮದ್ಯೆ ಕಪ್ಪುಕಲ್ಲಿನ ಮೂರ್ತಿಗಳನ್ನು ಜೋಡಿಸಿರುವುದು ಕಾಣಸಿಗುತ್ತದೆ. ಗರ್ಭಗುಡಿಯಂತೆ ಕಾಣಿಸುವ ಇದಕ್ಕೆ ಯಾವುದೇ ರೀತಿಯ ಮುಖಮಂಟಪಗಳಿಲ್ಲದಿದ್ದರೂ ಬಾಗಿಲ ರೀತಿಯ ಕಲ್ಲಿನ ಮಂಟಪವಿದೆ. ಆ ಬಾಗಿಲಿನ ಮೇಲೆ ಗಜಲಕ್ಷ್ಮಿಯ ಉಬ್ಬುಶಿಲ್ಪಿವಿದೆ. ಗರ್ಭಗುಡಿಯ ಜೋಡಿಸಿಟ್ಟ ಮೂರ್ತಿಗಳಲ್ಲಿಯ ಮದ್ಯೆ ಭಾಗದಲ್ಲಿ ಬಸವನ ಮೂರ್ತಿ ಇದೆ. ಇದರ ಎಡಬದಿಗೆ ವೀರಭದ್ರ, ಸ್ಕಂಧ(ಷಣ್ಮುಖ), ನಾಗಿಣಿ, ಚೌಡೇಶ್ವರ(ಗುಂಡುಕಲ್ಲು)ಮೂರ್ತಿಗಳಿವೆ. ಇದರ ಬಲಬದಿಗೆ ಗಣೇಶ, ಶಿವಲಿಂಗ, ಹಾಗೂ ನಾಗಮೂರ್ತಿಗಳಿವೆ. ಹಾಗೇನೆ ಗುಡಿಯ ಎಡಬದಿಯ ಗುಹೆಯಲ್ಲಿ ನಿಜಲಿಂಗಮ್ಮ ಹೆಸರಿನ ನಾಗಶಿಲ್ಪವಿದೆ. ಆ ಶಿಲ್ಪದಿಂದ ಅಲ್ಲಿ ಮೊದಲಿಗೆ ನಾಗರಾಧನೆಯು ಇತ್ತೆoದು ಸೂಚಿಸುತ್ತದೆ. ಏಕೆಂದರೆ ಸ್ತ್ರೀ ಮುಖವಿದ್ದು ಉಳಿದ ಭಾಗವು ಹಾವಿನಂತೆ ಇದೆ. ಈ ಎಲ್ಲಾ ಮೂರ್ತಿಗಳು ಕಪ್ಪುಶಿಲೆಯಲ್ಲಿ ರಚನೆಗೊಂಡಿವೆ. ಮದ್ಯೆದ ಬಸವನ ಮೂರ್ತಿಗೆ ಇರುವ ಪಾಣಿಪೀಠವು 3 ಅಡಿ ಎತ್ತರವಾಗಿದೆ. ಈ ಪೀಠಕ್ಕೆ ಗರುಡನ ಚಿತ್ರವಿರುವುದರಿಂದ,ಈ ಪೀಠವು ಸಹ ವೈಷ್ಣವ ದೇಗುಲದ ಪೀಠವಾಗಿರಬೇಕೆನಿಸುತ್ತದೆ. ಉಳಿದ ಮೂರ್ತಿಗಳು ಶೈವ ಧರ್ಮವನ್ನು ಪ್ರತಿಬಿಂಬಿಸುತ್ತವೆ. ಇವು ಬಹುತೇಖವಾಗಿ ಅನತಿ ದೂರದಲ್ಲೇ ಇರುವ ಶಿವ ಮತ್ತು ವಿಷ್ಣು ದೇವಾಲಯದ ಮೂರ್ತಿಗಳಾಗಿರಬೇಕು. ಏಕೆಂದರೆ ಆ ದೇಗುಲದ ಗರ್ಭಗುಡಿಯಲ್ಲಿ ಮೂರ್ತಿಗಳಿಲ್ಲದಿರುವುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ . ದೇಗುಲದ ಎದುರಿಗೆ ನಾಗಸಮುದ್ರ ಕೆರೆಯನ್ನು ಹಾಗೂ ಶಿವದೇವಾಲಯ ಮತ್ತು ವಿಷ್ಣು ದೇವಾಲಯವನ್ನು ನಿರ್ಮಿಸಿದ ಬಗ್ಗೆ ನಾಗೇನಹಳ್ಳಿಯ ರಂಗನಾಥ ದೇವಸ್ಥಾನದಲ್ಲಿರುವ ಶಾಸನದಿಂದ ತಿಳಿದುಬರುತ್ತದೆ. ಅಲ್ಲದೇ ವಿಜಯನಗರ ಕಾಲಾವಧಿಯಲ್ಲಿ ಕೃಷ್ಣದೇವರಾಯನು ಕ್ರಿ. ಶ 1516 ರಲ್ಲಿ ಬರೆಸಿದ ದಾನಶಾಸನದಲ್ಲಿ ತನ್ನ ತಾಯಿ ನಾಗಲಾoಬಿಕೆಯ ಸ್ಮರಣೆಗಾಗಿ ನಾಗಲಾಪುರ ಹೆಸರಲ್ಲಿ ನಂಜನಾಥ ಭಟ್ಟರ ಮಗ ರಂಗನಾಥ ದೀಕ್ಷಿತನಿಗೆ ಅಗ್ರಹಾರವಾಗಿಸಿ ಕೊಟ್ಟಿದ್ದನೆಂದು ತಿಳಿದುಬರುತ್ತದೆ. ರಾಯನು ಇಂದಿನ ಹೊಸಪೇಟೆ ಮತ್ತು ನಾಗಲಾಪುರದಲ್ಲಿ ಹೆಚ್ಚು ವಾಸವಾಗಿರುತ್ತಿದ್ದನೆಂದು ಡೊಮಿಂಗೊ ಫೇಸ್ ಅವರು ತಮ್ಮ ಬರಹಗಳಲ್ಲಿ ತಿಳಿಸಿದ್ದಾರೆ. ಅಲ್ಲದೇ ಪ್ರವಾಸಿ ಕಂಡ ಇಂಡಿಯಾ ಕೃತಿಯಲ್ಲಿ ವಿಜಯನಗರ ಅರಮನೆಯಂತೆ ಮತ್ತೊಂದು ಅರಮನೆಯನ್ನು ಕೃಷ್ಣದೇವರಾಯನು ನಿರ್ಮಿಸಿಕೊಂಡಿದ್ದನೆಂದು ಆದರ ಕುರಿತಾದ ಮಾಹಿತಿಯನ್ನು ನಮ್ಮ ತಂಡವು ಮಾಹಿತಿ ಒದಗಿಸಲಿದೆ.
ಸ್ಥಳ ಪುರಾಣ : ಮಾರ್ನಾಮಿಯ 9 ನೆಯ ದಿನದಂದು ಇಲ್ಲಿ ವಿಶೇಷವಾಗಿ ಧರ್ಮರ ಗುಡ್ಡದ ಧರ್ಮರ ಬನ್ನಿ ಎಂದು ಆಚರಿಸಲಾಗುತ್ತದೆ. 10ನೇ ದಿನವನ್ನು ಹಂಪಿಯ ಸುತ್ತಮುತ್ತಲಿನಲ್ಲಿ ಊರಬನ್ನಿ ಎಂದು ಕರೆದು ಪರಸ್ಪರವಾಗಿ ಬನ್ನಿಯನ್ನು ನೀಡಿ ಶುಭಾಶಯ ಕೋರಲಾಗುತ್ತದೆ. ಧರ್ಮರ ಗುಡ್ಡವು ಧರ್ಮ ಕ್ಷೇತ್ರವಾಗಿತ್ತು ಎನ್ನಲಿಕ್ಕೆ ಎರಡು ಸ್ಥಳಪುರಾಣಗಳಿವೆ. ಈ ಭಾಗದಲ್ಲಿ ಅದರಲ್ಲೂ ಹಂಪಿಯ ಕಿಶ್ಕಿಂದ ಬಳಿಗೆ ರಾಮ ಲಕ್ಷ್ಮಣರು ಸೀತಾನ್ವೇಷಣೆಗಾಗಿ ಬಂದ ಬಗ್ಗೆ ರಾಮಾಯಣದ ಕಿಶ್ಕಿಂದ ದ ಕಾಂಡದಲ್ಲಿ ಉಲ್ಲೇಖವಾಗಿದೆ. ಆದರೆ ಧರ್ಮರ ಗುಡ್ಡದ ಬಳಿಗೆ ಪಂಚಪಾಂಡವರು ವನವಾಸ ಕಾಲಕ್ಕೆ ಬಂದು ಕೆಲ ಕಾಲ ತಂಗಿದ್ದರoತೆ. ಅವರು ಬಂದು ಕೆಲ ದಿನಗಳ ಕಾಲ ಈ ಗುಡ್ಡದಲ್ಲಿ ವಾಸವಾಗಿದ್ದರಂತೆ ಅವರು ತಂಗಿದ್ದರಿಂದಲೇ ಧರ್ಮರ ಗುಡ್ಡ ಎಂಬ ಹೆಸರು ಬಂದಿರಬೇಕೆಂಬುದು ಸ್ಥಳ ಪುರಾಣಗಲ್ಲೊಂದಾಗಿದೆ. ವಿರಾಟನಗರಕ್ಕೆ ತೆರಳುವ ಮುನ್ನಾ ಗುಡ್ಡದ ಎದುರಿಗೆ ಇರುವ ಬನ್ನಿಯ ಮರದಲ್ಲಿ ಆಯುಧಗಳನ್ನು ಇರಿಸಿದ ಬಗ್ಗೆ ಜನಪದ ತ್ರಿಪದಿಯಲ್ಲಿ ಹೀಗೆ ಉಲ್ಲೇಖಗೊಂಡಿದೆ.
ಬನ್ನಿ ಗಿಡದಾಗ ಬಾಣ ಇಟ್ಟೀವಿ ತಾಯಿ |
ಯಾರು ಬಂದರೂ ಕೊಡಬ್ಯಾಡ | ಬನ್ನಿತಾಯಿ |
ಅರ್ಜುನ ಬಂದರೆ ಕೊಡಬೇಕು ಎಂದು ಬನ್ನಿ ಮರಕ್ಕೆ ವಿನಂತಿಸಿ ವಿರಾಟನಗರಕ್ಕೆ ತೆರಳಿದರೆಂದು ತಿಳಿದುಬರುತ್ತದೆ. ಇದಾದ ಬಳಿಕ ವಿರಾಟ ರಾಜ್ಯದಲ್ಲಿ ಗೋಗ್ರಹಣದ ವೇಳೆ ಬೃಹನ್ನಳೆ ವೇಷ ಧರಿಸಿದ ಅರ್ಜುನನು ಉತ್ತರಕುಮಾರನನ್ನು ಕರೆದುಕೊಂಡು ಬನ್ನಿಮರದಲ್ಲಿ ಇರಿಸಿದ್ದ ಅಯುಧಗಳನ್ನು ತೆಗೆದುಕೊಂಡು ಕೌರವರೊಂದಿಗೆ ಕಾದಾಡಿ ಅವರನ್ನು ಸೋಲಿಸಿದ ಅರ್ಜುನನು ಗೋವುಗಳನ್ನು ಬಿಡಿಸಿಕೊಂಡು ತರುತ್ತಾನೆ ಅಂದು ಜಯ ದೊರಕಿದ ಕಾರಣಕ್ಕೆ ವಿಜಯದಶಮಿ ಎಂದು ಆಚರಿಸುವರು. ಈಗಲೂ ಹಂಪಿಯ ಸುತ್ತಮುತ್ತಲಿನ ಜನರು ಬನ್ನಿ ಗಿಡದ ಬಳಿಗೆ ಬಂದು ಬನ್ನಿ ವಿನಿಮಯಿಸಿಕೊಳ್ಳುತ್ತಾರೆ. ಇದಕ್ಕೆ ಗುಡ್ಡದ ಬನ್ನಿ ಎಂತಲೂ ಕರೆಯಲಾಗುತ್ತಿದೆ. ಈ ಗುಡ್ಡದ ಬಳಿಯಲ್ಲೇ ಪಾಂಡವರು ವಾಸಕ್ಕೆ ಇದ್ದರು ಎನ್ನಲಿಕ್ಕೆ ಆಗ ಈ ಗುಡ್ಡದ ಬಳಿಯ ನಿಜಲಿಂಗಮ್ಮ ಮೂರ್ತಿಯ ಎದುರಿಗೆ ರಾತ್ರಿ ಇಡೀ ಭಜನೆ ಮಾಡುತ್ತಿದ್ದರಂತೆ. ಹಾಲಮ್ಮ ಎಂಬ ಗೃಹಿಣಿಯು ಆಗ ಪಾಂಡವರಿಗೆ ಹಾಲು ನೀಡಿ ಬರುತ್ತಿದ್ದಳು. ಪಾಂಡವರ ಇರುವಿಕೆಯ ಸುಳಿವನ್ನು ಯಾರಿಗೂ ತಿಳಿಸಬೇಡ ಎಂದಿರುತ್ತಾರೆ. ಆದರೂ ಆಕಸ್ಮಿಕವಾಗಿ ಪಾಂಡವರ ಇರುವಿಕೆಯು ಗೊತ್ತಾಗಿ ಗುಡ್ಡದ ಬಳಿಗೆ ಜನರು ಬರುವುದರೊಳಗಾಗಿ ಅವರು ಗುಹೆಯ ಒಳಗಡೆ ಹೋಗಿರಬಹುದೆಂದು ಜನರು ಪಂಜನ್ನು ಹಿಡಿದುಕೊಂಡು ಒಳ ಹೋಗುತ್ತಾರೆ. ಒಳಹೋದ ಪಾಂಡವರ ಸುಳಿವು ಸಿಗದೇ, ಅವರನ್ನು ನೋಡಲು ಹೋದವರು ಮರಳಿ ಬರಲಿಲ್ಲ. ಇದರಿಂದ ಭೀತಿಗೊಂಡ ಜನರು ಗುಹೆಯ ಮದ್ಯೆ ಭಾಗದಲ್ಲಿ ಅಡ್ಡಗೋಡೆಯಂತೆ ದೊಡ್ಡದಾದ ಗುಂಡುಕಲ್ಲು ಇಟ್ಟರಂತೆ ಈಗಲೂ ಈ ಗುಹೆಗೆ ಗುಂಡುಕಲ್ಲು ಇರುವುದು ಕಾಣಸಿಗುತ್ತದೆ. ಅಲ್ಲದೇ ಅವರು ಗುಡ್ಡದಲ್ಲಿ ವಾಸವಿದ್ದಾಗ ಬಂಡೆಯ ಮೇಲೆ ಕೃಷಿಗಾರಿಕೆ ಮಾಡಿದ್ದರು ಎನ್ನಲಿಕ್ಕೆ ಬಂಡೆಗಲ್ಲಿನ ಮೇಲೆ ಗೆರೆಗಳು ಕಾಣಸಿಗುತ್ತವೆ. ಹಾಗೇನೆ ಗುಡ್ಡದ ಮೇಲುಭಾಗದಲ್ಲಿ ಭೀಮನ ಡೋಣಿ ಇದೆ. ಅಲ್ಲದೇ ಗುಡಿಯ ಕೆಳ ಭಾಗದಲ್ಲಿ ಅರ್ಜುನನ ಕಲ್ಲು ಬಂಡೆ ಇದೆ. ಆ ಕಲ್ಲು ಬಂಡೆಗೆ ಬಾಣ ಬಿಟ್ಟು ನೀರು ತರಿಸಿರುವುದನ್ನು ಈಗಲೂ ಬಂಡೆಯ ನಡುವೆ ಸದಾ ನೀರು ಜಿನುಗುತ್ತಿರುವುದು ಕಂಡುಬರುತ್ತದೆ. ಮತ್ತೊಂದು ಸ್ಥಳ ಪುರಾಣವು ಐತಿಹಾಸಿಕ ಮಾಹಿತಿಯನ್ನು ನೀಡುತ್ತದೆ ಈಗ ಇರುವ ಗುಂಡುಕಲ್ಲುಗಳ ಬಳಿಯ ದೈವದ ಮೂರ್ತಿಗಳ ಹಿಂಬದಿಗೆ ಇಟ್ಟಿದ್ದ ಹಣವನ್ನು ಆಗಿನ ಅರಸ ತಂದು ಬಡವರಿಗೆ, ನಿರ್ಗತಿಕರಿಗೆ ದಾನ ಮಾಡುತ್ತಿದ್ದನಂತೆ ಇದರಿಂದಲೂ ಧರ್ಮದ ಗುಡ್ಡ ಎಂದು ಹೆಸರು ಬಂದಿದೆ ಎಂದು ಪೂಜಾರಿ ತಿಳಿಸಿದರು.
ಆಚರಣೆ : ಅಮವಾಸೆಯ ನಂತರದ ದಿನದಿಂದಲೇ ಈ ಭಾಗದ ಮಹಿಳೆಯರು ಬನ್ನಿ ಮರದ ಬಳಿಗೆ ತೆರಳಿ ಪೂಜಾ ಕೈಂಕರ್ಯ ಪೂರೈಸುವುದು ವಾಡಿಕೆಯಾಗಿದೆ. ಆದರೆ ಅಮವಾಸೆಗಿಂತ ಮುಂಚೆ ವಿಶೇಷವಾಗಿ ಏಳು ಕೇರಿಗಳಲ್ಲಿಯ ಸಹ ಆಯಾ ದೇಗುಲದ ಸ್ತ್ರೀ ದೈವದ ಉತ್ಸವ ಮೂರ್ತಿಗಳನ್ನು ಇರಿಸಿಕೊಂಡು ದೂರದ ಗ್ರಾಮಗಳಿಗೂ ತೆರಳಿ ಭಕ್ತರಿಂದ ಕಾಣಿಕೆ ಪಡೆದು ಬರುತ್ತಾರೆ. ಇದಕ್ಕೆ ಈ ಭಾಗದಲ್ಲಿ ಊರಾಡುವುದು ಎನ್ನುವರು. ಇದೇ ವೇಳೆ ಏಳುಕೇರಿಗಳ ದೇವಿಯರ ದೇಗುಲ ಹಾಗೂ ಬೀದಿಗಳಲ್ಲಿ ಜಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಿರುತ್ತಾರೆ. ಊರುಬನ್ನಿಗೂ ಮುನ್ನಾ ದಿನ ಎಲ್ಲೂ ಇರದ ಗುಡ್ಡದ ಬನ್ನಿ ಆಚರಣೆಯು ಈ ಭಾಗದಲ್ಲಿಯ ತುಂಬಾ ವಿಶೇಷವಾದ ಆಚರಣೆಯಾಗಿದೆ. ಆ ದಿನ ಮದ್ಯಾಹ್ನದಷ್ಟೊತ್ತಿಗೆ ಏಳುಕೇರಿಯಲ್ಲಿಯ ತಳವಾರ ಕೇರಿ ರಾಂಪುರ ದುರುಗಮ್ಮ, ಮ್ಯಾಸಕೇರಿ ಹುಲಿಗೆಮ್ಮ -ಕೊಂಗಮ್ಮ, ಜಂಬಾನಹಳ್ಳಿ ಕೇರಿ ಕಲ್ಲಮ್ಮ, ಕೊಂಗಮ್ಮ-ಮಾಯಮ್ಮ,ಉಕ್ಕಡಕೇರಿಯ ಜಲದುರುಗಮ್ಮ, ಬಾಣದ ಕೇರಿಯ ನಿಜಲಿಂಗಮ್ಮ ದೇವಿಯ ಪಾಲಕಿಗಳು ಧರ್ಮದ ಗುಡ್ಡದ ಬನ್ನಿ ಮುಡಿದು ಬರಲು ಹೋಗುತ್ತವೆ. ಹೀಗೆ ಪಲ್ಲಕಿಗಳನ್ನು ಹೊತ್ತುಕೊಂಡು ಹೋಗುವಾಗ ಓಡಿಕೊಂಡು ಹೋಗುವುದು ವಿಶೇಷ. ಇದನ್ನು ನೋಡಲು ಆಯಾ ಊರಿನ ಜನರು ರಸ್ತೆಗೆ ಬದಿಗೆ ಬಂದು ಕಾದು ನಿಂತಿರುತ್ತಾರೆ. ಗುಡ್ಡದ ಬಳಿಗೆ ಹೋದ ಪಲ್ಲಕ್ಕಿಗಳು ಬಸವನ ದುರ್ಗದ(ಗುಡಿ ಓಬಳಾಪುರದ)ಚನ್ನಬಸವೇಶ್ವರ ಪಾಲಕಿಯು ಬಂದ ಬಳಿಕ ಬಾಜಾ ಭಜಂತ್ರಿ ವಾದ್ಯಮೇಳದೊಂದಿಗೆ ಗುಡ್ಡದ ಎದುರಿಗೆ ಇರುವ ಬನ್ನಿ ಮರದ ಬಳಿಗೆ ಸಾಗುತ್ತಾರೆ. ಬನ್ನಿ ಮರದ ಸುತ್ತಲೂ ಚನ್ನಬಸವೇಶ್ವರ ಪಲ್ಲಕಿಯ ಹಿಂದೆ ಪಲ್ಲಕಿಗಳು ಸಾಗಿದರೆ ಬಾಣದ ಕೇರಿಯ ನಿಜಲಿಂಗಮ್ಮ ಪಲ್ಲಕ್ಕಿ ಮಾತ್ರ ಚನ್ನಬಸವಣ್ಣನ ಎಡ ಬದಿಗೆ ಸಾಗುತ್ತದೆ. ನಿಜಲಿಂಗಮ್ಮ ಚನ್ನಬಸವೇಶ್ವರನಿಗ ಹೆಂಡತಿ ಎಂದರೆ ಇನ್ನು ಕೆಲವರುಚನ್ನಬಸವೇಶ್ವರನು ಸಹೋದರ ಸಂಬಂಧಿ ಎಂತಲೂ ಭಾವಿಸುತ್ತಾರೆ. ಆದರೆ ಕುರುಗೋಡಿನ ಚನ್ನಬಸವಣ್ಣನಿಗೆ ಲಿಂಗಮ್ಮ ಪತ್ನಿ ಎಂಬುದು ಜನಪದ ಕಾವ್ಯದಿಂದ ತಿಳಿದುಬರುತ್ತದೆ. ಅಲ್ಲಿನ ಲಿಂಗಮ್ಮ ಇಲ್ಲಿಯ ನಿಜಲಿಂಗಮ್ಮ ಆಗಿರಬೇಕೆನಿಸುತ್ತದೆ. ಕುರುಗೋಡು ಚನ್ನಬಸವಣ್ಣ ಇಲ್ಲಿ ಚನ್ನಬಸವೇಶ್ವರ ಆಗಿರಬೇಕು ಈ ಹಿನ್ನೆಲೆಯಲ್ಲಿ ನಿಜಲಿಂಗಮ್ಮ ಪತ್ನಿ ಎಂದು ಭಾವಿಸಲಾಗಿದೆ. ಬನ್ನಿ ಮುಡಿಯುವ ಆಚರಣೆ ಮುಗಿಯುತ್ತಿದ್ದಂತೆ ಆಯಾ ಏರಿಯಾದಿಂದ ಬಂದ ಪಾಲಕಿಗಳು ತೆರಳುವುದನ್ನು ಭಕ್ತರು ನೋಡಿ ಕಣ್ತುoಬಿಕೊಳ್ಳುತ್ತಾರೆ.
ಹೊಸಪೇಟೆಯ ಪ್ರಮುಖ ಸ್ಥಳದಲ್ಲಿ ಗುಡ್ಡಕ್ಕೆ ಹೋಗಿದ್ದ ಪಲ್ಲಕ್ಕಿಗಳು ಸಾಲಾಗಿ ನಿಗದಿತ ಸ್ಥಳದ ಹತ್ತಿರ ಕೂಡಿಸಲಾಗುತ್ತದೆ. ಇವುಗಳೊಂದಿಗೆ ಇತರೆ ಪಲ್ಲಕ್ಕಿಗಳನ್ನು ತಂದು ಅಂದು ರಾತ್ರಿ ಇಡೀ ಬಾಜಾ ಭಜಂತ್ರಿ ಮೆರವಣಿಗೆಯೊಂದಿಗೆ ಸಾಗುತ್ತಾರೆ. ಹೀಗೆ ಮೆರವಣಿಗೆಯೂ ಬೆಳಗು ಜಾವದವರೆಗೂ ಸಾಗುತ್ತದೆ. ಈ ಮೆರವಣಿಗೆಯಲ್ಲಿ ವಿಶೇಷವಾಗಿ ಭಕ್ತಿ ಭಾವದಿಂದ ಭಜನೆ ಮೇಳದವರು ಪಾಲ್ಗೊಂಡು ಭಜನೆ ಪದಗಳನ್ನು ಹಾಡುತ್ತಾ ಸಾಗುತ್ತಾರೆ. ಈ ಮೆರವಣಿಗೆಯಲ್ಲಿ ಅಸಂಖ್ಯಾತ ಜನರು ಭಾಗಿಯಾಗುತ್ತಾರೆ. ಇದೇ ವೇಳೆ ಯುವಕರು ಕೋಲಾಟದ ಹಾಡುಗಳನ್ನು ಹೇಳುತ್ತಾ ಕೋಲು ಹಾಕುತ್ತಾ ತೆರಳುತ್ತಾರೆ. ಅಲ್ಲದೇ ಇನ್ನುಳಿದವರು ಸಾಹಸ ಪ್ರದರ್ಶನಗಳನ್ನು ಮಾಡಿ ಜನಾಕರ್ಷಣೆಗೆ ಒಳಗಾಗುತ್ತಾರೆ. ಇದರಲ್ಲಿ ಬೊಂಬನ್ನು ತಿರುಗಿಸುವ ಸಾಹಸವೂ ಮನಮೋಹಕವಾಗಿರುತ್ತದೆ. ಹಾಗೇನೆ ಬಾಯಿಯಲ್ಲಿ ಸೀಮೆಎಣ್ಣೆ ಹೀರಿ ಚಾಣಾಕ್ಷತನದಿಂದ ಪಂಜಿಗೆ ಅದನ್ನು ಉಗಿದು ಬೆಂಕಿಯ ಜ್ವಾಲೆ ಬರುವಂತೆ ಮಾಡುತ್ತಾರೆ. ಇದನ್ನು ನೋಡಲು ಜನರು ಜಮಾಯಿಸುತ್ತಾರೆ. ಇದು ನೋಡುವಾಗ ಮೈ ಜುಮ್ಮೆನ್ನುತ್ತದೆ. ಅಲ್ಲದೇ ಕೆಲ ಯುವಕರು ಜೊತೆಗೆ ಹಿರಿಯರು ಸಹ ವಿಶೇಷವಾಗಿ ಎತ್ತಿನ ಬಂಡಿಯ ಗಾಲಿಯನ್ನು ಬಿಚ್ಚಿ ಪುನಃ ಜೋಡಿಸುವ ದೃಶ್ಯವು ರೋಮಾಂಚನವಾಗಿರುತ್ತದೆ. ಇದರಲ್ಲಿ ಕೆಲವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಂಡಿ ಗಾಲಿಯನ್ನು ಬಿಚ್ಚಿ ಜೋಡಿಸುತ್ತಾರೆ. ಇದನ್ನು ರಾತ್ರಿ ಇಡೀ ಒಬ್ಬರಾದ ಮೇಲೆ ಒಬ್ಬರು ಪೈಪೋಟಿಯಂತೆ ಪ್ರದರ್ಶನ ನೀಡುತ್ತಾರೆ. ಇದೇ ಮೆರವಣಿಗೆಯಲ್ಲಿ ಜನಪದ ಗಾಯಕಿಯರು ದೇವಿಯ ಗುಣಗಾನದ ಗೀತೆಗಳನ್ನು ಹಾಡುತ್ತಾರೆ. ಇದನ್ನು ನೋಡುವುದೇ ಸಂಭ್ರಮ. ಬಹುಷಃ ಗತ ಕಾಲದ ವೈಭವವು ಮರುಕಳಿಸಿದಂತೆ ದರ್ಶನವಾಗುತ್ತದೆ. ಶಿವರಾತ್ರೀಲಿ ಶಿವನ ಜಾಗರಣೆ ಮಾಡಿದಂತೆ ದೇವಿಯ ಜಾಗರಣೆಯನ್ನು ರಾತ್ರಿಯಿಡಿ ಎಚ್ಚರವಿದ್ದು ಧರ್ಮರ ಬನ್ನಿ ಮುಡಿದು ಬಂದ ದೇವಿ ಪಾಲಕಿಗಳನ್ನು ಊರ ಒಳಗೆ ಕರೆಸಿಕೊಳ್ಳುತ್ತಾರೆ. ಇದೆಲ್ಲಾ ನೋಡಿದರೆ ಇಂದೊಮ್ಮೆ ಮಹಾನವಮಿ ದಿಬ್ಬದ ಬಳಿ ಇದೇ ರೀತಿ ಮೆರವಣಿಗೆ ಮಾಡುತ್ತಿದ್ದರೆಂದು ತಿಳಿದುಬರುತ್ತದೆ. ಏಕೆಂದರೆ ಆಗ ಇದೇ ನಾಯಕರ ಪಡೆಯು ಸೈನ್ಯದಲ್ಲಿ ಉತ್ತಮ ಸ್ಥಾನ ಪಡೆದಿರಬೇಕೆನಿಸುತ್ತದೆ. ಇದಾದ ಬಳಿಕ ಮೆರವಣಿಗೆಯೂ ಕೇರಿಯ ಕೊನೆಯ ಸ್ಥಳದ ಹತ್ತಿರ ಬಂದ ಮೇಲೆ ಮಾಂಸಹಾರಿ ದೇವತೆಗಳ ಗುಡಿಯ ಎದುರಿಗೆ ಕುರಿ ಬಳಿಯನ್ನು ನೀಡಲಾಗುತ್ತದೆ. ನಂತರ ದಿನದಂದು ಊರಬನ್ನಿಯನ್ನು ಜರುಗಿಸುವರು.
ಹೊಸಪೇಟೆಯ ಕೆಲವು ಏರಿಯಾಗಳಾದ ಸುಣ್ಣದ ಬಟ್ಟೆಯ ಬಳಿಯ ಎಲ್ಲಮ್ಮ, ಗೌಳೇರು ಹಟ್ಟಿಯ ಎಲ್ಲಮ್ಮ, ಜಂಬಾನಹಳ್ಳಿಯ ಕಲ್ಲಮ್ಮ, ಊರ ಬನ್ನಿಗೂ ಮುಂಚೆ ಕೊಂಡಪವಾಡ ನಡೆಸಿದರೆ, ಬಳ್ಳಾರಿ ದುರುಗಮ್ಮ, ಮುದ್ದಾಪುರ ತಾಯಮ್ಮ ಮಾತ್ರ ಊರಬನ್ನಿಯ ದಿನದಂದು ರಾತ್ರಿ ಕೊಂಡ ಪವಾಡ ನಡೆಸಿಕೊಡುವರು. ಇಷ್ಟೇ ಅಲ್ಲದೇ ಹೊಸಪೇಟೆಯ ಸುಗ್ಗೇನಹಳ್ಳಿ ಗ್ರಾಮದ ದುರುಗಮ್ಮ ದೇವಿಯ ಕೊಂಡ ಪವಾಡದ ವೇಳೆ ವಿಶೇಷವಾಗಿ ಕಾರಣಿಕವನ್ನು ದೇವಿಯ ಪೂಜಾರಿ ಹೇಳುತ್ತಾನೆ. ಧರ್ಮರ ಗುಡ್ಡದ ಬನ್ನಿ ಆಚರಣೆಯು ಬೇರೆಲ್ಲೂ ಕಾಣಸಿಗಲಾರದು. ಒಟ್ಟಿನಲ್ಲಿ ಈ ಆಚರಣೆಯು ಶಕ್ತಿ ದೇವತೆಯರ ಆರಾಧನಾ ಪ್ರತೀಕವಾಗಿದೆ ಎನಿಸುತ್ತದೆ. ಬಹುತೇಕವಾಗಿ ಮಾರ್ನಾಮಿ ಎಂದರೆ ಮಾರಿ ದೇವತೆ, ಉಗ್ರ ದೇವತೆಗಳ ಆರಾಧನೆ ಎನ್ನಬಹುದು. ಇದರಿಂದಲೇ ಮಾರ್ನಾಮಿ ಪದ ಬಳಕೆಗೆ ಬಂದಿರಬೇಕೇನಿಸುತ್ತದೆ. ಮಾರಿ ಮಾರೆಮ್ಮ ದೇವಿಯ ಪಂಥವು ನೆಲೆಸಿದ್ಧಿರಬೇಕು. ಅವರ ಆಚರಣೆಯು ಇಂದಿಗೂ ಚಾಚು ತಪ್ಪದೇ ಆಚರಿಸುತ್ತಿರಬೇಕೆಂಬುದು ಅಧ್ಯಯನದಿಂದ ತಿಳಿದು ಬಂದ ಅಂಶವಾಗಿದೆ.
ಡಾ. ಗೋವಿಂದ
ಸಹಾಯಕ ಪ್ರಾದ್ಯಾಪಕ, ಕನ್ನಡ ವಿಶ್ವವಿದ್ಯಾಲಯ
More Stories
ಜನರು ಧಂಗೆ ಏಳುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಿ , ಸುಳ್ಳು ದೂರು ನೀಡಿದಲ್ಲಿ 3 ವರ್ಷ ಜೈಲು: ಉಪ ಲೋಕಾಯುಕ್ತ ಬಿ.ವೀರಪ್ಪ
ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ….ಜಯ ನಿಮ್ಮದೇ….
ದಾಖಲೆ ವಹಿವಾಟು ನಡೆಸಿದ ಕೊಪ್ಪಳ ಹಣ್ಣು ಮತ್ತು ಜೇನು ಮೇಳ