https://youtu.be/NHc6OMSu0K4?si=SI_K4goOPEgwo6h2
ನಾಗೇನಹಳ್ಳಿ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಶತಮಾನೋತ್ಸವ
ಹಂಪಿ ಟೈಮ್ಸ್ ಹೊಸಪೇಟೆ
ಗಾಮೀಣ ಪ್ರದೇಶದಲ್ಲಿ ನೂರು ವರ್ಷಗಳ ಹಿಂದೆಯೇ ಸಹಕಾರ ತತ್ವವನ್ನು ಅಳವಡಿಸಿಕೊಂಡಿದ್ದ ಗ್ರಾಮದ ಪಾಟಿಲ್ ಅಯ್ಯನಗೌಡರು ಅಂದು ಆರಂಭಿಸಿದ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಉತ್ತಮ ಆಡಳಿತ ನಡೆಸಿ, ಸಂಘವನ್ನು ಆರ್ಥಿಕವಾಗಿಯೂ ಸದೃಢವಾಗಿಸುವುದರ ಜೊತೆ ಜನರ ಪ್ರೀತಿ ಗಳಿಸಿ ಸಂಘದ ಪ್ರಗತಿಗೆ ಸಹಕಾರಿಯಾದ ಎಲ್ಲಾ ಸಹಕಾರಿಗಳಿಗೆ ಮತ್ತು ಪ್ರೋತ್ಸಾಹಿಸಿದ ಜನರಿಗೆ ಅಭಿನಂದನೆಗಳು. ಪಾಟಿಲ್ ಅಯ್ಯನಗೌಡರ ಸ್ಮರಣೆ ಅತ್ಯಂತ ಅವಶ್ಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ.,ಶತಮಾನೋತ್ಸವ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ರೈತರ ಉತ್ಪಾದನೆಗೆ ರೈತರೇ ಬೆಲೆ ನಿಗದಿ ಮಾಡುವವರೆಗೂ ರೈತರ ಉದ್ಧಾರ ಕಷ್ಟಸಾಧ್ಯ.ದೇಶದಲ್ಲಿ ರೈತರಿಂದ ಉತ್ಪಾದಿತ ಪದಾರ್ಥ, ಬೆಳೆಗಳಿಗೆ ಅನ್ಯರು ದರ ನಿಗದಿ ಮಾಡುತ್ತಿರುವುದು ವಿಪರ್ಯಾಸ. ರೈತರಿಗೆ ನಾನಾ ಸಾಲ ಸೌಲಭ್ಯಗಳನ್ನು ಕಲ್ಪಿಸಿ, ಆರ್ಥಿಕವಾಗಿ ಸದೃಢರನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ನಡೆಸಿದೆ. ಈ ಭಾಗದಲ್ಲಿ ಗಣಿಗಾರಿಕೆ ಚಟುವಟಿಕೆಗಳು ಸ್ಥಗಿತ ಮತ್ತು ಸಕ್ಕರೆ ಕಾರ್ಖಾನೆಯೂ ಸೇರಿದಂತೆ ಈ ಭಾಗದಲ್ಲಿದ್ದ ಕೆಲ ಕಾರ್ಖಾನೆಗಳು ಬಂದ್ ಆಗಿದ್ದರಿಂದ ಆರ್ಥಿಕ ಚಟುವಟಿಕೆಗಳ ಇಲ್ಲದಂತಾಗಿದೆ. ಜನರ ಆರ್ಥಿಕ ಸ್ಥಿತಿಗತಿಯ ಮೇಲೂ ಪರಿಣಾಮ ಬೀರಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ನಮ್ಮ ಗಮನಕ್ಕೆ ತಂದಿದ್ದಾರೆ.
ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎಂಬ ಬೇಡಿಕೆಯೂ ಇದೆ. ಶಾಸಕರೆ ಕಾರ್ಖಾನೆ ಆರಂಭಿಸಿದರೆ ಸಂಪೂರ್ಣ ಸಹಕಾರ ನೀಡುತ್ತೇವೆಂದು ತಿಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಖಾಸಗಿಯವರು ಕಾರ್ಖಾನೆ ಆಂಭಿಸಿದರೂ ನಮ್ಮ ಸಹಕಾರವಿದೆ. ಯಾರೂ ಮುಂದೆ ಸಹಕಾರಿಯಿಂದಲಾದರೂ, ಅಥವಾ ಸರ್ಕಾರದಿಂದಲಾದರೂ ಸಕ್ಕರೆ ಕಾರ್ಖಾನೆ ಆರಂಭಿಸಲು ಸರ್ಕಾರ ಸಿದ್ಧವಿದ್ದು, ಅದನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿಯೇ ತೋರಿಸಲಿದೆ. ಸಿಎಂ ಸಿದ್ದರಾಮಯ್ಯ ರೈತಪರವಾಗಿದ್ದಾರೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಸಿಎಂ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದು, ಮೂರು ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರಲ್ಲಿ ಸಾಲ ಪ್ರಾರಂಭಮಾಡಿ ಈಗ 5 ಲಕ್ಷ ರೂವರೆಗೆ ಹೆಚ್ಚಿಸಲಾಗಿದೆ. ಅನೇಕ ರೈತರ ಇದು ಸಾಲುತ್ತಿಲ್ಲ ಇನ್ನಷ್ಟು ಹೆಚ್ಚಿಗೆ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಭವಿಷ್ಯದಲ್ಲಿ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯವನ್ನು ನೀಡಲಾಗುವುದು.
ರೈತರ ಬೇಸಾಯಕ್ಕೆ ಅಗತ್ಯವಿರುವ ಕೃಷಿ ಉಪಕರಣಗಳನ್ನು ಕಡಿಮೆ ಬೆಲೆಗೆ ದೊರೆಯುವಂತೆ ಮತ್ತು ಬೆಳೆಗೆ ನ್ಯಾಯಯುತ ಬೆಲೆ ದೊರೆಕಿಸಿಕೊಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಪರಿವರ್ತಿಸುವ ಅಗತ್ಯವಿದೆ. ಸಹಕಾರಿ ಕ್ಷೇತ್ರವು ಪಕ್ಷ ಮತ್ತು ಜಾತಿಯಿಂದ ಗುರುತಿಸಿಕೊಂಡಿಲ್ಲ. ಸರ್ವರ ಏಳಿಗೆಗಾಗಿ ಸಹಕಾರ ಜನ್ಮತಾಳಿದೆ. ಆಡಳಿತ ಮಂಡಳಿಯ ಜೊತೆಗೆ ಸಿಬ್ಬಂದಿ ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ಮಾಡಿದಾಗ ಜನರ ವಿಶ್ವಾಸ ಗಳಿಸಿಲು ಸಾಧ್ಯ. ಸಿಬ್ಬಂದಿ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ಸಂಪೂರ್ಣವಾಗಿ ತಲುಪಿಸಬೇಕು. ಗ್ರಾಮಕ್ಕೆ ನಮ್ಮನ್ನು ಕುಂಭದೊಂದಿಗೆ ಸ್ವಾಗತಿಸುವ ಮೂಲಕ ಪ್ರೀತಿ ಸಾಬೀತುಪಡಿಸಿದ ತಮಗೆ ಮತ್ತು ಸಂಘವನ್ನು ಕಟ್ಟಿ ಬೆಳೆಸಿದ ಸರ್ವರಿಗೂ ಅಭಿನಂದನೆಗಳು. ಹೊಸಪೇಟೆ. ಕೊಟ್ಟೂರು ಸಂಸ್ಥಾನ ಮಠದ ಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳಿಗೆ ಜನ್ಮ ದಿನದ ಶುಭಾಶಯಗಳು. ಶ್ರೀಗಳಿಗೆ ಬಸವಾದಿ ಶರಣರು ಆಯೂರಾರೋಗ್ಯ, ಕೀರ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ನಾಗೇನಹಳ್ಳಿ ಗ್ರಾಮದ ಜನರಲ್ಲಿ ಉತ್ತಮ ಸಹಕಾರವಿದೆ ಎಂಬುದಕ್ಕೆ ಶತಮಾನೋತ್ಸವ ಸಂಭ್ರಮವೇ ಸಾಕ್ಷಿ. ಸಕ್ಕರೆ ಕಾರ್ಖಾನೆ ಅತ್ಯಂತ ಅಗತ್ಯವಿದ್ದು ಸರ್ಕಾರ ಕಾರ್ಖಾನೆ ಅರಂಭಿಸಲು ಅಗತ್ಯ ಕ್ರಮವಹಿಸಬೇಕು ಎಂದರು.
ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಶ್ರೀ ಜಗದ್ಗುರು ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಶತಮಾನ ಕಂಡಿರುವ ಸಂಘ ಮತ್ತಷ್ಟು ಅಭಿವೃದ್ಧಿ ಹೊಂದಿ, ಜನರ ಪಾಲಿಗೆ ಕಾಮಧೇನುವಾಗಲಿ ಎಂದರು.
ಸಹಕಾರಿ ಸಂಘದ ನಿರ್ದೇಶಕ ಕೆ.ಅಲ್ಲಾಭಕ್ಷಿ ಪ್ರಾಸ್ತಾವಿಕ ಮಾತನಾಡಿ, ನಾಗೇನಹಳ್ಳಿ ಗ್ರಾಮದ ಐತಿಹ್ಯ ತಿಳಿಸಿದರು. ಸಂಘದ ಅಧ್ಯಕ್ಷ ಸಿ.ಹಾಶ್ಯಾಂ, ಮಹ್ಮದ್ ನಗರ ನಗರಗಡ್ಡಿ ಮಠದ ಶ್ರಿ ಮ.ನಿ.ಪ್ರ. ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಬಿ.ಎಲ್.ರಾಣಿ ಸಂಯುಕ್ತ, ಹುಡಾ ಅಧ್ಯಕ್ಷ ಎಚ್.ಎನ್.ಮಹ್ಮದ್ ಇಮಾಮ್ ನಿಯಾಜಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಚೊಕ್ಕಬಸವನಗೌಡ, ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯಸ್ವಾಮಿ, ಸಮಾಜ ಸೇವಕ ಬಿ.ಎಸ್.ದೀಪಕ್‌ಸಿಂಗ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಲ್.ಎಸ್.ಆನಂದ, ಜಿಪಂ ಮಾಜಿ ಸದಸ್ಯ ಎಲ್.ಸಿದ್ದನಗೌಡ, ನಾಗೇನಹಳ್ಳಿ ಗ್ರಾಪಂ ಅಧ್ಯಕ್ಷ ಎಂ.ದುರುಗಪ್ಪ, ಬಿಡಿಸಿಸಿ ಬ್ಯಾಂಕ್ ಮಾಜಿ ನರ್ದೇಶಕ ಬಿ.ಚಂದ್ರಶೇಖರ, ಗ್ರಾಪಂ ಸದಸ್ಯರು, ಸಂಘದ ನಿರ್ದೇಶಕರು ಇತರರು ಇದ್ದರು. ಶಿಕ್ಷಕರು, ಗ್ರಾಮದ ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತರು ಸೇರಿದಂತೆ ಗ್ರಾಮದ ಮಹಿಳೆಯರು ಕುಂಭ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
More Stories
ಪೊಲೀಸರ ಬದುಕಿನ ಬಹುಪಾಲು ಸಮಯ ನಮ್ಮೆಲ್ಲರ ಒಳಿತಿಗಾಗಿ ಮೀಸಲು : ವೀಣಾ ಹೇಮಂತ್ಗೌಡ ಪಾಟೀಲ್
ಮೊದಲ ಉದ್ಯೋಗ ಮೇಳದಲ್ಲಿ 417 ಅಭ್ಯರ್ಥಿಗಳು ಆಯ್ಕೆ, 9 ಲಕ್ಷ ರೂ.ವರೆಗೆ ಪ್ಯಾಕೇಜ್ : ಮೆಟ್ರಿ ಮಲ್ಲಿಕಾರ್ಜುನ
ಐವರು ಸಾಧಕರು ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ : ಸಿಎಂ ಸಿದ್ದರಾಮಯ್ಯ