https://youtu.be/NHc6OMSu0K4?si=SI_K4goOPEgwo6h2
ಜೀವನದಲ್ಲಿ ಬೇಸರಗೊಂಡ ಯುವಕನೋರ್ವ ಒಂದು ಪಟ್ಟಣದ ಬೀದಿ ಬೀದಿಗಳಲ್ಲಿ ಅಲೆದಾಡುತ್ತಿದ್ದ. ಅವನಿಗೆ ಇಡೀ ಜಗತ್ತು ಮೋಸದಿಂದ ತುಂಬಿದೆ ಎಂದೆನಿಸಿತ್ತು. ಅದಕ್ಕೆ ಕಾರಣವೂ ಇತ್ತು. ಆಪ್ತರು ಎಂದುಕೊAಡ ಅನೇಕ ಸ್ನೇಹಿತರು ಇವನ ಬಳಿ ಹಣ ಇರುವವರೆಗೆ ಜೊತೆಗಿದ್ದರು. ಹಣವೆಲ್ಲಾ ಖಾಲಿಯಾದ ಬಳಿಕ ಅವನನ್ನು ಬಿಟ್ಟು ದೂರ ಸರಿದರು. ಹಣ ಹಾಗೂ ಸ್ನೇಹಿತರ ಮದದಿಂದ ಜೀವನ ನಡೆಸುತ್ತಿದ್ದ ಈ ಯುವಕನಿಗೆ ಈಗ ಯಾರೂ ಇರಲಿಲ್ಲ. ದಿನದ ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದಂತಾಗಿತ್ತು. ಇದ್ದ ಎಲ್ಲಾ ಹಣ ಕಳೆದುಕೊಂಡು ಪಟ್ಟಣದ ಬೀದಿ ಬೀದಿ ಅಲೆಯುತ್ತಿದ್ದ. ತನ್ನ ಹಳ್ಳಿಗೆ ಮರಳಲು ಸಹ ಕೈಯಲ್ಲಿ ಕಾಸಿಲ್ಲ. ದುಡಿಯಲು ಮನಸ್ಸಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಇಂತಹ ಪರಿಸ್ಥಿತಿಯಲ್ಲಿ ಹಳ್ಳಿಗೆ ಏನು ಮಾಡಬೇಕೆಂಬ ಪ್ರಶ್ನೆ ಭೂತಾಕಾತವಾಗಿತ್ತು. ಅದಕ್ಕಾಗಿ ಅವನು ಸರಳ ಉಪಾಯ ಕಂಡುಕೊAಡಿದ್ದ.
ಪಟ್ಟಣದ ಬೀದಿಗಳಲ್ಲಿ ಸುತ್ತಾಡುತ್ತಾ, ಅಲ್ಲಿ ಇಲ್ಲಿ ಭಿಕ್ಷೆ ಬೇಡಿ ಬಂದ ಹಣದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ರಾತ್ರಿಯಾದೊಡನೆ ಸಮೀಪದ ದೇವಸ್ಥಾನ, ಬಸ್‌ನಿಲ್ದಾಣ ಅಥವಾ ರೈಲು ನಿಲ್ದಾಣದ ಬಳಿ ಮಲಗುತ್ತಿದ್ದ. ಅಲ್ಲಿ ತನ್ನವರೆನ್ನುವವರೂ ಯಾರೂ ಇರಲಿಲ್ಲ. ಎಲ್ಲವನ್ನೂ ಕಳೆದುಕೊಂಡವನಿಗೆ ಬದುಕಿನ ಭರವಸೆಯೂ ನಶಿಸುತ್ತಾ ಬಂದಿತ್ತು. ಹೀಗಿರುವಾಗ ಗಣೇಶನ ಹಬ್ಬ ಬಂದಿತ್ತು. ಗಲ್ಲಿ ಗಲ್ಲಿಗಳಲ್ಲೂ ಗಣೇಶನ ಪ್ರತಿಷ್ಠಾಪನೆ ಆಗಿತ್ತು. ಎಲ್ಲೆಡೆಯೂ ಅನ್ನ ಸಂತರ್ಪಣೆ, ಪ್ರಸಾದ ವ್ಯವಸ್ಥೆಗಳು ಇದ್ದವು. ಊಟಕ್ಕೆ ಯಾವುದೇ ಕೊರತೆ ಇರಲಿಲ್ಲ. ಮದ್ಯಾಹ್ನ ಮತ್ತು ರಾತ್ರಿ ಊಟದ ತಾಪತ್ರಯ ಇರಲಿಲ್ಲ.
ಒಂದು ದಿನ ಸಂಜೆ ಒಂದು ವೇದಿಕೆಯ ಬಳಿ ಪ್ರಸಿದ್ದ ಪಂಡಿತರಿAದ ಉಪನ್ಯಾಸವಿತ್ತು. ಇವನಿಗೆ ಉಪನ್ಯಾಸ ಬೇಕಿರಲಿಲ್ಲ. ಟೈಂಪಾಸ್ ಆಗಬೇಕಿತ್ತು ಮತ್ತು ರಾತ್ರಿ ಊಟದ ವ್ಯವಸ್ಥೆ ಆಗಬೇಕಿತ್ತು. ಹಾಗಾಗಿ ವೇದಿಕೆಯ ಬಳಿ ಇರುವ ಆಸನದಲ್ಲಿ ಕುಳಿತುಕೊಂಡ. ಕಾರ್ಯಕ್ರಮ ಶುರುವಾಯಿತು. ಪಂಡಿತರ ಭಾಷಣವೂ ಶುರುವಾಯಿತು. ಕಣ್ಣುಮುಚ್ಚಿ ಪಂಡಿತರ ಮಾತುಗಳನ್ನು ಆಲಿಸತೊಡಗಿದ. ಕಾರ್ಯಕ್ರಮ ಮುಗಿಯುವ ವೇಳೆಗೆ ಅವನ ಮನಸ್ಥಿತಿ ಸಂಪೂರ್ಣ ಬದಲಾಗಿತ್ತು. ಬದುಕಿನ ಬಗ್ಗೆ ನಶ್ವರತೆ ಆವರಿಸಿದ್ದ ಅವನಲ್ಲಿ ಆಶಾವಾದ ಮೊಳಕೆಯೊಡೆದಿತ್ತು. ಪಂಡಿತರು ಹೇಳಿದ ಮಾತುಗಳು ಅವನ ಜೀವನದ ದಿಕ್ಕನ್ನೇ ಬದಲಿಸಿದ್ದವು. ಅವು ಹೀಗಿವೆ.
ಜೀವನದಲ್ಲಿ ಹೂವು ಎಂದಿಗೂ ಎರಡು ಬಾರಿ ಅರಳುವುದಿಲ್ಲ. ಹಾಗೆಯೇ ಈ ಜನ್ಮ ಮತ್ತೆ ಮತ್ತೆ ಬರುವುದಿಲ್ಲ. ಬದುಕಿನಲ್ಲಿ ಸಾವಿರಾರು ಜನ ಸಿಕ್ಕರೂ ಮನಸ್ಸಿಗೆ ಎಲ್ಲರೂ ಇಷ್ಟವಾಗುವುದಿಲ್ಲ. ಇಷ್ಟವಾದವರನ್ನು ಒಮ್ಮೆ ಕಳೆದುಕೊಂಡರೆ ಅಂತವರು ಮತ್ತೆ ಸಿಗುವುದಿಲ್ಲ. ಸಂತೋಷ ಎನ್ನುವುದು ಹತ್ತು ಸಾವಿರ ರೂಪಾಯಿ ಖರ್ಚು ಮಾಡಿ, ಹತ್ತೂರು ಸುತ್ತಿದರೂ ಬರುವುದಿಲ್ಲ. ನಮ್ಮವರ ಜೊತೆಗೆ ಹತ್ತು ನಿಮಿಷ ಮನಸ್ಸು ಬಿಚ್ಚಿ ಮಾತನಾಡಿದರೆ ಸಾಕು ನಿಜವಾದ ಸಂತೋಷ ಸಿಗುತ್ತದೆ. ಇದ್ದಾಗಲೇ ಸಮಯಕೊಟ್ಟು ಮಾತನಾಡಬೇಕು. ಜೀವನದಲ್ಲಿ ಖಡ್ಗ ಚಿನ್ನದ್ದೇ ಆಗಿರಲಿ, ಕಬ್ಬಿಣದ್ದೇ ಆಗಿರಲಿಮ ಅದರ ಕೆಲಸ ಒಂದೇ ಆಗಿರುತ್ತದೆ. ಹಾಗೆಯೆ ಜೀವನದಲ್ಲಿ ಕೆಲವೊಬ್ಬರಿಗೆ ಎಷ್ಟೇ ಒಳ್ಳೆಯ ಸ್ಥಾನ ನೀಡಿದರೂ ಸಮಯ ಬಂದಾಗ ಅವರ ನಿಜ ಸ್ವರೂಪ ತಿಳಿಯುತ್ತದೆ. ಹಾಗೆಯೇ ಕನಸು ಕಾಣುವುದನ್ನು ಬಿಟ್ಟಾಗ ಬದುಕು ಸಾಯುತ್ತದೆ. ನಂಬುವುದನ್ನು ಬಿಟ್ಟಾಗ ಭರವಸೆಗಳು ಸಾಯುತ್ತವೆ. ಕಾಳಜಿ ವಹಿಸುವುದನ್ನು ಬಿಟ್ಟಾಗ ಪ್ರೀತಿ ಸಾಯುತ್ತದೆ. ಜೀವನದಲ್ಲಿ ಏಳು ಬೀಳುಗಳು ಸ್ವಾಭಾವಿಕ. ಕೆಟ್ಟದ್ದರ ಬಗ್ಗೆ ಸದಾ ಯೋಚಿಸುತ್ತಾ ಕುಳಿತರೆ ಮತ್ತಷ್ಟು ಕೆಳಗಿಳಿಯುತ್ತೇವೆ. ಆಶಾವಾದ ಬಳಸಿಕೊಂಡು ಮುನ್ನುಗ್ಗಿದರೆ ಬದುಕಿನ ಸುಂದರ ಮುಖ ಗೋಚರಿಸುತ್ತದೆ.
- ಜಯಶ್ರೀ.ಎಂ.ಕರ್ಜಗಿ. ಹುಬ್ಬಳ್ಳಿ
More Stories
ಮೊಮ್ಮಗನಿಗೊಂದು ಪತ್ರ ಮುದ್ದು ಮೊಮ್ಮಗನೇ.
ಹಂಪಿ ಪರಿಸರದ ಧರ್ಮರ ಗುಡ್ಡದ ಮಾರ್ನಾಮಿ ಹಬ್ಬ
ಮಾನವ ಮನಶ್ಯಾಸ್ತ್ರ… ಒಂದು ಕಿರುನೋಟ : ವೀಣಾ ಹೇಮಂತ್ ಗೌಡ ಪಾಟೀಲ್